ಮಹಾದೇವ ಬಸರಕೋಡ
ನಮ್ಮ ಜತೆ ಸಂಪರ್ಕ ಹೊಂದಿದವರ ಒಳ್ಳೆಯ ಗುಣವನ್ನು ಮಾತ್ರ ನಾವು ಗುರುತಿಸಬೇಕು, ಅವರ ಕೊರತೆಗಳನ್ನು ನಿರ್ಲಕ್ಷಿಸ ಬೇಕು. ಇತರರು ತಪ್ಪು ಮಾಡಿದಾಗ ಕ್ಷಮಿಸಬೇಕು. ಇದರಿಂದ ಅವರಿಗೆ ಲಾಭವಾಗದಿದ್ದರೂ, ನಮಗೆ ಲಾಭವಾಗುತ್ತದೆ. ಅದರಿಂದ ಅಪಾರ ನೆಮ್ಮದಿ ದೊರಕುತ್ತದೆ.
ನಮ್ಮ ಸ್ವಭಾವವೇ ಹಾಗೆ. ಕೆಡುಕಿನ ಕಡೆ ಬೆನ್ನು ಮಾಡಿ ಬದುಕಬೇಕು ಎಂಬು ಹಿರಿಯರ ಮಾತು ಸ್ಪಷ್ಟವಾಗಿದ್ದರೂ, ಒಮ್ಮೊಮ್ಮೆ ಮನಸ್ಸು ಅದರ ಡೆಗೆ ಮುಖ ಮಾಡಲು ಹಾತೊರೆಯುತ್ತದೆ. ಹಾಗಾಗಿಯೇ ನಮಗೆ ಬೇರೆಯವರ ತಪ್ಪುಗಳೇ ಎದ್ದು ಕಾಣುತ್ತಿರು ತ್ತವೆ. ಭೂತಗನ್ನಡಿ ಹಾಕಿಕೊಂಡು ಬೇರೆಯವರ ತಪ್ಪುಗಳನ್ನು ಹುಡುಕುವುದು, ಅವುಗಳನ್ನೇ ದೊಡ್ಡದಾಗಿ ಆಡಿಕೊಳ್ಳುವುದು, ಬಿಂಬಿಸುವುದು ನಮ್ಮ ಜಾಯಮಾನವನ್ನಾಗಿಸಿಕೊಂಡಿರುತ್ತೇವೆ.
ಅನಗತ್ಯವಾಗಿ ಬೇರೆಯರ ತಪ್ಪುಗಳನ್ನು ಹುಡುಕುತ್ತೇವೆ. ಕೆಲವು ಬಾರಿ ಅವರಿಗೆ ಮುಜುಗರ ಉಂಟಾಗುವಂತೆ ಮಾಡಲು ಮುಂದಾಗುತ್ತೇವೆ. ಅವರಿಗೆ ಸುಮ್ಮ ಸುಮ್ಮನೆ ಬುದ್ಧಿವಾದ ಹೇಳುತ್ತೇವೆ. ಇಂತಹ ನಮ್ಮ ಪ್ರಯತ್ನಗಳು ಹೊಳೆಯಲ್ಲಿ ಹುಣಸೀ ಹಣ್ಣು ತೊಳೆದಂತೆಯೇ ಎಂಬ ಅರಿವಿನ ನಡುವೆಯೂ ನಮ್ಮ ಮನಶಾಂತಿಗೆ ಭಂಗ ತರುತ್ತವೆ. ಬೇರೆಯವರ ದೃಷ್ಟಿಯಲ್ಲಿ ಕೆಟ್ಟವರಾಗಿ ಅವರ ಜತೆಗಿನ ಉತ್ತಮ ಸಂಬಂಧಗಳನ್ನು ಹಾಳು ಮಾಡಿಕೊಳ್ಳುತ್ತೇವೆ. ಮಾತ್ರವಲ್ಲದೇ ಅವರ ಕೆಂಗಣ್ಣಿಗೆ ಗುರಿ ಯಾಗಬೇಕಾಗುತ್ತೇವೆ.
ಬಹುಕಾಲದಿಂದ ಆಶ್ರಮವನ್ನು ನಡೆಸಿಕೊಂಡು ಬರುತ್ತಿದ್ದ ಗುರುಗಳೊಬ್ಬರು ಅಪಾರ ಅನುಯಾಯಿಗಳನ್ನು ಹೊಂದಿದ್ದರು.
ಅವರು ತಮ್ಮ ಬದುಕಿನ ತುಂಬ ಒಂದು ಬಾರಿಯೂ ಕೋಪಿಸಿಕೊಂಡಿರಲಿಲ್ಲ. ಜತೆಗೆ ಅವರನ್ನು ಯಾರಾದರೂ ಒಮ್ಮೆಯೂ
ನಿಂದಿಸಿದ ಉದಾಹರಣೆಗಳಾಗಲಿ ಇರಲೇ ಇಲ್ಲ. ಎಲ್ಲರಿಗೂ ಅವರಿಗೆ ಅದು ಸಾಧ್ಯವಾಗಿದ್ದು ಹೇಗೆ ಎಂಬ ಪ್ರಶ್ನೆ ಕಾಡುತ್ತಲೇ
ಇತ್ತು. ಅದರ ರಹಸ್ಯವನ್ನು ಅವರನ್ನು ಯಾರೂ ಕೇಳುವ ಧೈರ್ಯವನ್ನು ಮಾಡಿರಲಿಲ್ಲ. ಎಂತಹ ಕೋಪಿಷ್ಟ ವ್ಯಕ್ತಿ, ದುಷ್ಟ ವ್ಯಕ್ತಿ ಬಂದರೂ ಅವರೊಂದಿಗೆ ಗುರುಗಳು ನಗುನಗುತ್ತಲೇ ಪ್ರೀತಿಯಿಂದ ಮಾತನಾಡುತ್ತಿದ್ದರು. ಬಂದವರು ಕೂಡ ಅಲ್ಲಿಂದ ಮರಳು ವಾಗ ತುಂಬ ನಗುಮೊಗದಿಂದ, ಪ್ರಸನ್ನ ಭಾವದಿಂದ ಆಶ್ರಮದಿಂದ ಮರಳಿ ಹೋಗುತ್ತಿರುವುದನ್ನು ಹಲವು ವರ್ಷಗಳಿಂದ ಗಮನಿಸಿದ್ದರೂ ಅದರ ಹಿಂದಿನ ಗುಟ್ಟನ್ನು ಅರಿಯುವಲ್ಲಿ ಎಲ್ಲರೂ ವಿಫಲರಾಗಿದ್ದರು.
ತಾಳೆಗರಿಯ ರಹಸ್ಯ
ಗುರುಗಳು ಯಾರೇ ವ್ಯಕ್ತಿಗಳು ಬಂದರು ಅವರನ್ನು ಮಾತನಾಡಿಸುವ ಮುನ್ನ ಅವರು ತಮ್ಮ ಕೈಯಲ್ಲಿದ್ದ ತಾಳೆಗರೆಯ ಮೇಲೆ ದೃಷ್ಟಿಸಿ, ಕ್ಷಣಕಾಲ ಕಣ್ಣು ಮುಚ್ಚಿ ಎನನ್ನೋ ಧ್ಯಾನಿಸಿ ಬಂದವರ ಜೊತೆಗೆ ಮಾತನಾಡಲು ಪ್ರಾರಂಭಿಸುವುದು ಅವರ ನಿತ್ಯದ ರೂಢಿಯಾಗಿತ್ತು. ಅದನ್ನು ಗಮನಿಸುತ್ತಿದ್ದ ಶಿಷ್ಯಬಳಗ ಅದರಲ್ಲಿಯೇ ಏನೋ ರಹಸ್ಯವಿದೆ ಎಂದು ಭಾವಿಸಿ, ಅದೆಂತಹ
ರಹಸ್ಯ ವೇನಿರಬಹುದು ಎಂದು ತಮ್ಮ ತಮ್ಮಲ್ಲಿಯೇ ಚರ್ಚಿಸುತ್ತಿದ್ದರೇ ವಿನಃ ಗುರುಗಳನ್ನು ಕೇಳುವ ಮನಸ್ಸು ಮಾಡಿರಲಿಲ್ಲ.
ವಯೋಸಹಜತೆಯಿಂದ ಗುರುಗಳು ಇನ್ನೇನು ಕೊನೆಯುಸಿರೆಳೆಯುವ ಸಂದರ್ಭದಲ್ಲಿ ಅವರ ಶಿಷ್ಯನೊಬ್ಬ ‘ಗುರುಗಳೇ
ನಮ್ಮೆಲ್ಲರನ್ನೂ ಬಹುದಿನಗಳಿಂದ ಒಂದು ಪ್ರಶ್ನೆ ಕಾಡುತ್ತಿದೆ. ದಯವಿಟ್ಟು ಕೇಳಲು ಅನುಮತಿ ನೀಡಿ’ ಎಂದು ವಿನಂತಿಸಿದ.
ಗುರುಗಳು ಕ್ಷೀಣವಾಗಿದ್ದರೂ, ಎಂದಿನಂತೆ ತುಂಬ ಪ್ರಸ್ನತೆಯಿಂದಲೇ ‘ಅದೇನು ಕೇಳು?’ ಎಂದರು.
‘ಪ್ರತಿ ಬಾರಿ ಯಾರಾದರೂ ಭೇಟಿಯಾದಾಗ ನಿಮ್ಮಲ್ಲಿರುವ ತಾಳೆಗೆರೆಯನ್ನು ನೋಡಿ ಏನನ್ನೋ ಧ್ಯಾನಿಸಿ ಮಾತನಾಡಲು
ಪ್ರಾರಂಭಿಸುತ್ತೀದ್ದಿರಿ. ಆ ತಾಳೆಗೆರೆಯಲ್ಲಿರುವ ರಹಸ್ಯವಾದರೂ ಏನು?’ ಎಂದು ಶಿಷ್ಯ ಕೇಳಿದ. ಆಗ ಗುರುಗಳು ತಾಳೆಗೆರೆಯಲ್ಲಿ ರುವುದನ್ನು ತೆರೆದು ತೋರಿಸಿದರು. ‘ದೇವರೇ, ನನ್ನ ಬಳಿ ಈಗ ಬಂದಿರುವ ವ್ಯಕ್ತಿಯಲ್ಲಿನ ಯಾವುದೇ ಕೆಡಕುಗಳು ಕಾಣಿಸದಂತೆ, ಒಳ್ಳೆಯದನ್ನು ಮಾತ್ರ ನೋಡುವಂತೆ ಮಾಡು’ ಎಂದು ಆ ತಾಳೆಗರಿಯಲ್ಲಿ ಬರೆಯಲಾಗಿತ್ತು.
ಗುರುಗಳು ಎಂದಿಗೂ ಕೋಪಿಸಿಕೊಳ್ಳದೇ ಇರಲು, ಎಲ್ಲರ ಪ್ರೀತಿಗೆ ಪಾತ್ರವಾಗಲು ಕಾರಣವಾದ ಸತ್ಯ ಮತ್ತು ರಹಸ್ಯ ಅದೇ ಆಗಿತ್ತು.
ಸೃಷ್ಟಿಯಲ್ಲಿರುವ ಎಲ್ಲ ಜೀವಿಗಳಲ್ಲಿಯೂ ಯಾವುದಾದರೊಂದು ಗುಣಾವಗುಣಗಳು ಇರುವುದು ಸಹಜವೇ. ಯಾರೂ
ಪರಿಪೂರ್ಣರಲ್ಲ. ನಾವು ಇತರರಲ್ಲಿಯ ತಪ್ಪುಗಳನ್ನು ಹುಡುಕುವುದರ ಬದಲಾಗಿ ಒಳ್ಳೆಯ ಗುಣಗಳನ್ನು ಮಾತ್ರ ಹುಡುಕಲು
ಪ್ರಯತ್ನಿಸಬೇಕು. ನಮ್ಮ ಮನಸ್ಸನ್ನು ಇಂತಹ ದಿಸೆಯಲ್ಲಿ ಸಿದ್ಧಗೊಳಿಸಬೇಕು, ತರಬೇತುಗೊಳಿಸಬೇಕು. ಎಲ್ಲರಲ್ಲಿಯೂ ಕೆಲವು
ಕೆಟ್ಟ ಗುಣಗಳು ಇರುವಂತೆ ಒಳ್ಳೆಯ ನಡತೆಗಳು ಕೂಡ ಇರುತ್ತವೆ ಎಂಬುದನ್ನು ನಾವು ಅರ್ಥೈಯಿಸಿಕೊಳ್ಳಬೇಕು.
ಕೆಟ್ಟ ಸಂಗತಿಗಳಿಗೆ ಮನಸ್ಸು ಒಗ್ಗತೊಡಗಿದರೆ ನಂತರದಲ್ಲಿ ಅಂತಹ ಧೋರಣೆಯನ್ನು ಬದಲಾಯಿಸುವುದು ಕಷ್ಟಸಾಧ್ಯ. ಕೆಟ್ಟ ಗುಣಗಳನ್ನು ಕ್ಷಣಕಾಲ ಮರೆತು ಬಿಡಬೇಕು. ಕೆಲವು ಬಾರಿ ನಮ್ಮ ಆಪ್ತರು, ಕುಟುಂಬದವರು, ಸ್ನೇಹಿತರು, ಬಂಧುಗಳು ತಪ್ಪು ಮಾಡಿದ್ದರೂ ನಾವು ಹೃದಯ ವೈಶ್ಯಾಲತೆ ಮರೆಯಬೇಕು. ಅವರನ್ನು ಕ್ಷಮಿಸುವುದನ್ನು ರೂಢಿಸಿಕೊಳ್ಳಬೇಕು. ಅವರನ್ನು ಕ್ಷಮಿಸುವುದರಿಂದ ಅವರಿಗೆ ಲಾಭವಾಗದಿದ್ದರೂ, ಆ ಕಾರ್ಯವು ನಮ್ಮ ಮನಸ್ಸಿಗೆ ಖುಷಿ ಕೊಡುತ್ತದೆ. ಅದರಿಂದ ಮನಃಶಾಂತಿ ಇಮ್ಮಡಿಗೊಳ್ಳುತ್ತದೆ.
ಹೆಚ್ಚು ಹೆಚ್ಚು ಜನರಲ್ಲಿ ಉತ್ತಮ ಗುಣಗಳನ್ನು ಗುರುತಿಸುವದರಿಂದ, ಅವುಗಳನ್ನು ಪ್ರಶಂಶಿಸುವುದರಿಂದ ನಮಗೆ ಹೆಚ್ಚು ಹೆಚ್ಚು ಜನ ಹತ್ತಿರವಾಗುತ್ತಾರೆ. ಇದರಿಂದ ನಮಗೆ ಮಾನಸಿಕ ನೆಮ್ಮದಿ ಸಿಗುತ್ತದೆ. ಪರೋಕ್ಷವಾಗಿ ನಮ್ಮ ಗೌರವ ನಮಗರಿವಿಲ್ಲದಂತೆ ಹೆಚ್ಚುತ್ತಲೇ ಇರುತ್ತದೆ.