ಬಾಲಕೃಷ್ಣ ಎನ್ ಬೆಂಗಳೂರು
ಹಸಿರು ಎಲ್ಲ ಮನಸ್ಸಿನಲ್ಲಿ ಉಲ್ಲಾಸ ತರುತ್ತದೆ. ಆಸ್ಪತ್ರೆಯಲ್ಲಿ ಇರುವ ಗಿಡಮರಗಳು ರೋಗಿಗಳ ಮನಸ್ಸಿಗೆ ಪ್ರಫುಲ್ಲತೆ ತುಂಬಿ, ಪರೋಕ್ಷವಾಗಿ ಅವರ ಪ್ರತಿರೋಧ ಶಕ್ತಿಯನ್ನು ಹೆಚ್ಚಳಗೊಳಿಸುತ್ತವೆ.
ಅಲ್ಲೊಂದು ಹಸಿರವನ, ಬಣ್ಣ ಬಣ್ಣದ ಚಿಟ್ಟೆಗಳ ತಾಣ, ಎತ್ತ ನೋಡಿದರೂ ಹಣ್ಣಿನ ಗಿಡಗಳ ಉದ್ಯಾನವನ. ಸಿಲಿಕಾನ್ ಸಿಟಿಯೊಂದರಲ್ಲಿ ಇಂತಹ ಸೊಬಗು ಹೊಂದಿರುವುದು ಸರಕಾರಿ ಆಸ್ಪತ್ರೆ ಎಂದರೆ ಪ್ರತಿಯೊಬ್ಬರಿಗೂ ಅಚ್ಚರಿ. ವಿಶ್ವದರ್ಜೆಯ ಚಿಕಿತ್ಸೆ ನೀಡುವ ಮೂಲಕ ವಿದೇಶದಲ್ಲೂ ಪ್ರಖ್ಯಾತಿ ಪಡೆದಿರುವ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ರಾಜ್ಯಕ್ಕೆ ಕೀರ್ತಿ ತರುವಲ್ಲಿ ಸಾಕಷ್ಟು ಶ್ರಮಿಸಿದೆ. ಕಳೆದ ಎರಡು ದಶಕಗಳಿಂದ ಸಂಸ್ಥೆ ಸ್ವರೂಪ ಬದಲಾಗಿದ್ದು, ಹೈಟೆಕ್ ಆಗಿ ಪರಿವರ್ತನೆಗೊಂಡಿದೆ. ಹಸಿರೀಕರಣಕ್ಕೆ ಹೆಚ್ಚು ಒತ್ತು ನೀಡಿ, ಸುಮಾರು ೩೨ ಸಾವಿರ ಗಿಡಗಳಿಂದ ಕಂಗೊಳಿಸುತ್ತಿರುವ ಈ ಸಂಸ್ಥೆ ರೋಗಿಗಳ ಹಿತ ಕಾಪಾಡು ವಲ್ಲಿ ಮುಂಚೂಣಿಯಲ್ಲಿದೆ.
ಆಸ್ಪತ್ರೆಯ ಆವರಣದಲ್ಲಿ ಖಾಲಿ ಜಾಗ (ಅಂದಾಜು ೮ ಎಕರೆ) ಸದ್ಭಳಕೆ ಮಾಡಿಕೊಂಡು ವಿವಿಧ ಜಾತಿಯ ಗಿಡಗಳನ್ನು ನೆಡಲಾಗಿದೆ. ರಾಜ್ಯಾದ್ಯಂತ ಲಭ್ಯವಿರುವ ಅನೇಕ ಸಸಿಗಳನ್ನು ಇಲ್ಲಿ ನೋಡಬಹುದಾಗಿದೆ. ಆಸ್ಪತ್ರೆಯ ಆವರಣದ ಯಾವ ಭಾಗದಲ್ಲಿ ಯಾವ ಸಸಿಗಳನ್ನು ನೆಟ್ಟರೆ ರೋಗಿಗಳಿಗೆ ಅನುಕೂಲವಾಗಲಿದೆ ಎಂದು ಪರಿಸರ ತಜ್ಞರು ಮೂರು ತಿಂಗಳು ಅಧ್ಯಯನ ನಡೆಸಿದ್ದಾರೆ. ಸಾಮಾನ್ಯವಾಗಿ ಕ್ಯಾನ್ಸರ್ ರೋಗಿಗಳಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಜತೆಗೆ ಮಾನಸಿಕ ಮತ್ತು ದೈಹಿಕವಾಗಿ ಕುಗ್ಗಿರುತ್ತಾರೆ. ಸುತ್ತಮುತ್ತಲ ಪರಿಸರ ಹಾಗೂ ಸೇವಿಸುವ ಗಾಳಿ ಸಹ ಉತ್ತಮ ವಾಗಿದ್ದರೆ ಆರೋಗ್ಯ ಸುಧಾರಣೆಗೆ ಸಹಕಾರಿ ಯಾಗುತ್ತದೆ. ಇದೇ ಉದ್ದೇಶದಿಂದ ಕ್ಯಾನ್ಸರ್ ರೋಗಿಗಳ ಮನಸ್ಸು ಮತ್ತು ದೇಹಕ್ಕೆ ಚೈತನ್ಯ ನೀಡುವಂತ ಸಸಿ ಗಳನ್ನು ಬೆಳೆಸಲಾಗಿದೆ. ಇದಕ್ಕೆ ಎನ್ವಿರಾನ್ ಮೆಂಟ್ ಟ್ರಸ್ಟ್ ಹಾಗೂ ಇಂಡಸ್ ಹರ್ಬ್ಸ್ ಪ್ರೋತ್ಸಾಹ ನೀಡಿದೆ.
ಚಿಟ್ಟೆವನ
ಪ್ರತಿ ಗಿಡಗಳಿಗೂ ಮಾಹಿತಿ ಫಲಕಗಳನ್ನು ಅಳವಡಿಸುವ ಮೂಲಕ ಗಿಡದ ಮಹತ್ವ ಹಾಗೂ ಅದೆ ಉಪಯೋಗಗಳ ಬಗ್ಗೆ ಮಾಹಿತಿ ಒದಲಾಗಿಸುತ್ತದೆ. ಜತೆಗೆ
ರೋಗಿಗಳು ಕುಳಿತು ವಿಶ್ರಮಿಸಲು ಹಾಗೂ ವಾಯುವಿಹಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ಇದ್ಯಾನ ನಿರ್ಮಿಸಲಾಗಿದೆ. ಆಧುನಿಕತೆಗೆ ತಕ್ಕಂತೆ ಆಸ್ಪತ್ರೆಯ ಚಿತ್ರಣ ಬದಲಾಗಿದ್ದು, ಸಂಪೂರ್ಣವಾಗಿ ಹಸಿರಿನಿಂದ ಕಂಗೊಳಿಸುತ್ತದೆ. ಕ್ಯಾನ್ಸರ್ ರೋಗಕ್ಕೆ ತುತ್ತಾದ ಮಕ್ಕಳು ಮಾನಸಿಕವಾಗಿ ಸದೃಢರಾಗಲು ಚಿಟ್ಟೆ ವನ ತಲೆ ಎತ್ತಿದೆ. ಇಲ್ಲಿ ನಾನಾ ಬಗೆಯ ಚಿಟ್ಟೆಗಳ ತಾಣವಾಗಿದೆ.
ಹಸಿರೀಕರಣ ಹಾಗೂ ಪಕ್ಷಿಗಳ ಕಲರವ ಹೊಂದಿರುವ ಏಕೈಕ ಸರಕಾರಿ ಆಸ್ಪತ್ರೆ ಇದಾಗಿದ್ದು, ಖಾಸಗಿ ಆಸ್ಪತ್ರೆಗಳಿಗೆ ಸೆಡ್ಡು ಹೊಡಿದಿವೆ. ಆಸ್ಪತ್ರೆಯ ಸ್ಥಾಪನೆ ಯಾದಾಗಿನಿಂದಲು ಇಲ್ಲಿ ಆಸ್ಪತ್ರೆಯ ವಾತಾವರಣ ವಿಭಿನ್ನವಾಗಿತ್ತು. ಕಳೆದ ಎರಡು ವರ್ಷಗಳಿಂದ ಆಸ್ಪತ್ರೆಯ ಸ್ವರೂಪವೇ ಬದಲಾಗಿದ್ದು, ತ್ಯಾಜ್ಯಮುಕ್ತ, ಹಸಿರು ಯುಕ್ತ ಎಂಬಂತಾಗಿದೆ. ಕಿದ್ವಾಯಿ ಆಸ್ಪತ್ರೆಯಲ್ಲಿ ರೋಗಿಗಳ ಹಿತ ಕಾಪಾಡುವುದರ ಜತೆಗೆ ಪರಿಸರಸ್ನೇಹಿಯಾಗಿ ಮಾರ್ಪಡಿಸಲಾಗಿದೆ. ರೋಗಿಗಳ ಜೀವ ಉಳಿಸುವುದು ಎಷ್ಟು ಮುಖ್ಯವೋ, ಪರಿಸರ ಕಾಪಾಡುವುದು ಅಷ್ಟೆ ಮುಖ್ಯ. ರೋಗಿಗಳ ಮನಸು ಚಂಚಲತೆಗೆ ಒಳಗಾಗುವ ಸಾಧ್ಯತೆ ಹೆಚ್ಚಿದ್ದು. ಇದಕ್ಕೆ ಪರಿಹಾರ ವಾಗಿ ಆಸ್ಪತ್ರೆಯ ಆವರಣದಲ್ಲಿ ಖಾಲಿ ಜಾಗವನ್ನು ಹಸಿರುಮಯವಾಗಿಸಲಾಗಿದೆ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕರಾದ ಡಾ.ಸಿ.ರಾಮಚಂದ್ರ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ರೋಗಾಣು ನಿಯಂತ್ರಿಸಲಿವೆ ಸಸ್ಯಗಳು
ಕ್ಯಾನ್ಸರ್ ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿ ಕುಗ್ಗುವುದರಿಂದ ಇನ್‌ಪ್ಲೊಯೆಂಜಾ ಸೇರಿದಂತೆ ನಾನಾ ವೈರಾಣುಗಳು ಅವರ ದೇಹವನ್ನು ಸುಲಭವಾಗಿ
ಸೇರಿಕೊಂಡು, ಅನಾರೋಗ್ಯ ಉಂಟು ಮಾಡುತ್ತದೆ. ಉಸಿರಾಟದಿಂದ ಅವರ ದೇಹದಲ್ಲಿರುವ ವೈರಾಣು ಗಾಳಿ ಮೂಲಕ ಮತ್ತೊಬ್ಬರನ್ನು ಸೇರಿ ಅವರ ಆರೋಗ್ಯವೂ ಕೆಡುತ್ತದೆ. ಹೀಗಾಗಿ ಇಂತಹ ವೈರಾಣು ಹಾಗೂ ವೈದ್ಯಕೀಯ ತ್ಯಾಜ್ಯಗಳಿಂದ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುವಂತಹ ಸಸ್ಯಗಳನ್ನಯು ನೆಡಲಾಗಿದೆ. ದೇವಕಣಗೆಲೆ, ಮೇರಿಯಮ್, ಚಂಪಕ, ಪಾರಿಜಾತ,ಕನಕ ಚಂಪಕ, ಬೇವು, ಹೊಂಗೆ, ರವಿಪ್ರಿಯ ಮುಂತಾದ ಸಸ್ಯಗಳು ವೈರಾಣು ಹಾಗೂ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಅಜಾಡಿರಾಕ್ವಿನ್ ಎಂಬ ರಾಸಾಯನಿಕವನ್ನು ಹೊರ ಸೂಸುತ್ತವೆ.
ಮಾತ್ರವಲ್ಲ ನಾನಾ ಹಂತಗಳಲ್ಲಿ ಗಾಳಿಯನ್ನು ಶುದ್ಧಗೊಳಿಸುತ್ತವೆ. ರೋಗಾಣುಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿರುವ ತುಳಸಿ ಗಿಡ, ಕ್ಯಾನ್ಸರ್ ನಿಯಂತ್ರಣಕ್ಕೆ ಪೂರಕವಾದ ಸೀತಾಫಲ, ರಾಮಫಲ. ಲಕ್ಷ್ಮಣಫಲ, ಹನುಮಫಲ,ಕಾಡುಗೇರು ಸೇರಿದಂತೆ ನಾನಾ ಬಗೆಯ ಹಣ್ಣುಗಳ ಸಸಿಗಳನ್ನು ಇಲ್ಲಿ ಕಾಣಬಹುದಾಗಿದೆ.
***
ಆಸ್ಪತ್ರೆಯ ಖಾಲಿ ಜಾಗವನ್ನು ಸದುಪಯೋಗ ಪಡಿಸಿಕೊಳ್ಳಲಾಗುತ್ತಿದ್ದು, ಹಸಿರುಮಯವಾಗಿಸಲಾಗಿದೆ. ಇನ್ನೂ ಹೆಚ್ಚಿನದಾಗಿ ಸಸಿಗಳನ್ನು ನೆಡಲಾಗುತ್ತದೆ.
ಈಗಾಗಲೇಕಿದ್ವಾಯಿ ಆಸ್ಪತ್ರೆಯು ಶೇ.೯೦ ರಷ್ಟು ತ್ಯಾಜ್ಯಮುಕ್ತಗೊಳಿಸಲಾಗಿದೆ. ರೋಗಿಗಳ ಆರೋಗ್ಯ ಸುಧಾರಣೆಗೆ ಅನುಕೂಲವಾಗುವಂತಹ ಸಸಿಗಳನ್ನು ಇಲ್ಲಿವೆ.
-ಡಾ.ಎ.ಎನ್.ಯಲ್ಲಪ್ಪರೆಡ್ಡಿ ಪರಿಸರ ತಜ್ಞರು