Tuesday, 13th May 2025

ಹೈಟೆಕ್‌ ದೋಟಿ

ರವಿ ಮಡೋಡಿ ಬೆಂಗಳೂರು

ಅಡಿಕೆ ಕೃಷಿಕರಿಗೆ ಇಂದು ಇರುವ ದೊಡ್ಡ ಸಮಸ್ಯೆ ಎಂದರೆ ಕೆಲಸಗಾರರನ್ನು ಹುಡುಕುವುದು. ಅಡಿಕೆ ಬೆಳೆಯನ್ನು ಕೊಯ್ಲು ಮಾಡಲು ಅಥವಾ ಅದಕ್ಕೆ ಮದ್ದು ಸಿಂಪಡಣೆ ಮಾಡಲು ಬೇಕಾಗುವ ಕೆಲಸಗಾರರು ಸಕಾಲಕ್ಕೆ ಸಿಗುವುದಿಲ್ಲ. ಇದರಿಂದಾಗಿ ನಷ್ಟ ಅನುಭವಿಸುತ್ತಿದ್ದಾರೆ.

ಇಂತಹ ಸಮಸ್ಯೆಗೆ ಪರಿಹಾರವೆಂಬಂತೆ ಹಾಸನ ಜಿಯ ಅರಕಲಗೂಡಿನ ಬಾಲಸುಬ್ರಮಣ್ಯ ಅವರು ಹೈಟೆಕ್ ಟೆಲಿಸ್ಕೋಪಿಕ್ ದೋಟಿಯೊಂದನ್ನು ಸಂಶೋಧಿಸಿದ್ದಾರೆ. ಈ ದೋಟಿಯ ಸಹಾಯದಿಂದ ನೆಲದಲ್ಲಿಯೇ ನಿಂತು 75-80 ಅಡಿ ಎತ್ತರದ ಅಡಿಕೆ ಮರದಿಂದ ಕೊನೆಯನ್ನು ಸುಲಭವಾಗಿ ಕೊಯ್ಲು ಮಾಡಬಹುದು. ಜತೆಗೆ ಮರಕ್ಕೆ ಮದ್ದನ್ನು ಸಿಂಪಡಿಸಬಹುದು. ಮೂಲತಃ ಮೆಕಾನಿಕಲ್ ಇಂಜಿನಿಯರ್ ಆದ ಬಾಲಸುಬ್ರಮಣ್ಯ ಅವರು ಅಮೆರಿಕಾದಲ್ಲಿ ಕೆಲಕಾಲ ಉದ್ಯೋಗಿಯಾಗಿ ನೆಲೆಸಿದ್ದರು.

ಕಾರಣಾಂತರಗಳಿಂದ ತಾಯ್ನಡಿಗೆ ಮರಳಿ ತಮ್ಮ ಊರಿನಲ್ಲಿ ಅಡಿಕೆ ತೋಟವನ್ನು ನಿರ್ವಹಿಸುವುದಕ್ಕೆ ಪ್ರಾರಂಭಿಸಿದರು. ಅವರು ಸಹ ಅಡಿಕೆ ಕೊಯ್ಲು ಹಾಗೂ ಮದ್ದನ್ನು ಸಿಂಪಡಿಸಲು ಕೂಲಿ ಕಾರ್ಮಿಕರ ಕೊರತೆಯನ್ನು ಎದುರಿಸಬೇಕಾಯಿತು. ಇದಕ್ಕೆ ಪರಿಹಾರವಾಗಿ, ಅಡಿಕೆ ಮರವನ್ನು ಏರದೇ ಫಸಲನ್ನು ಕೊಯ್ಲು ಮಾಡುವ ಸಾಧನವನ್ನು ಕಂಡು ಹಿಡಿದು, ಪರಾವಲಂಬನೆ ಯಿಂದ ಮುಕ್ತವಾಗುವುದಕ್ಕೆ ಹಂಬಲಿಸಿದರು.

ಈ ನಿಟ್ಟಿನಲ್ಲಿ ಹಲವು ಪ್ರಯೋಗಗಳನ್ನು ನಡೆಸಿದರು. ಅದಕ್ಕಾಗಿ ಹಣವನ್ನೂ ವ್ಯಯಿಸಿದರು. ಸತತ ಐದು ವರುಷಗಳ ಪರಿಶ್ರಮ, ಆಸಕ್ತಿ, ಸಂಶೋಧನೆಯ ಫಲವಾಗಿ ಹೈಟೆಕ್ ಟೆಲಿಸ್ಕೋಪಿಕ್ ದೋಟಿಯೊಂದನ್ನು ಕಂಡುಹಿಡಿದರು. ಫೈಬರ್‌ನಿಂದ ತಯಾರಿ
ಈ ದೋಟಿಯ ಬಗ್ಗೆ ಹೇಳುವುದಾದರೆ ಇಲ್ಲಿ ಇದಕ್ಕೆ ಯಾವುದೇ ಯಂತ್ರವನ್ನು ಅಳವಡಿಸಿಲ್ಲ.

ಇಂಧನವೂ ಬೇಕಿಲ್ಲ. ಕಾರ್ಬನ್ ಫೈಬರ್‌ನಿಂದ ತಯಾರಿಸಲಾಗಿರುವ ಇದು ನಾಲ್ಕರಿಂದ ಐದು ಕೆಜಿ ತೂಕವನ್ನು ಹೊಂದಿದೆ. ನೆಲದಿಂದಲೇ ಹಿಡಿದು ಬೇಕಾದ ಕಡೆಗೆ ತಿರುಗಿಸಿ, 6 ರಿಂದ 80 ಅಡಿಯ ಎತ್ತರದ ಅಡಿಕೆಯ/ತೆಂಗಿನ ಫಸಲನ್ನು ಕೊಯ್ಲು
ಮಾಡ ಬಹುದು ಮತ್ತು ಔಷಧಿಯನ್ನು ಸಿಂಪಡಿಸಬಹುದಾಗಿದೆ. ಅಡಿಕೆಯ ಮರದ ಎತ್ತರಕ್ಕೆ ದೋಟಿ ಯನ್ನು ಚಾಚಿದರೂ ಇದು ಬಾಗುವುದಿಲ್ಲ.

ಬಳಕುವುದಿಲ್ಲ. ಕುತ್ತಿಗೆ, ಬೆನ್ನು ನೋವು ಬರದಂತೆ ದೋಟಿಯನ್ನು ವಿನ್ಯಾಸವನ್ನು ಮಾಡಲಾಗಿದೆ. ಇಲ್ಲಿಯವರೆಗೆ ಕೊಯ್ಲು ಮಾಡಲು ಪಡುತ್ತಿದ್ದ ಕಷ್ಟ, ಈ ಸಲಕರಣೆಯಿಂದ ನಿವಾರಣೆಯಾಗುತ್ತದೆ ಎಂಬುದು ಬಾಲಸುಬ್ರಮಣ್ಯ ಅವರು ಅಭಿಮತ.
ಅಡಿಕೆ ಮರಕ್ಕೆ ಹಬ್ಬಿಸಿದ ಕಾಳು ಮೆಣಸಿನ ಬಳ್ಳಿಗೂ ಯಾವುದೇ ತೊಂದರೆಯಾಗದಂತೆ ಕೆಲಸವನ್ನು ಮಾಡಬಹುದು. ಇದರ ಜೊತೆಗೆ ಕೊಯ್ಲು ಮಾಡಿದಾಗ ಕೊನೆ ನೆಲಕ್ಕೆ ಬಿದ್ದು ಚೆಪಿಲ್ಲಿಯಾಗದಂತೆ ಹಿಡಿಯುವ ವಿಧಾನವೂ ಬಹಳ ಸಹಕಾರಿ.

ಇಂತಹ ಉಪಯೋಗಿ ಸಲಕರಣೆಯನ್ನು ಕಂಡುಹಿಡಿದಿರುವ ಬಾಲಸುಬ್ರಮಣ್ಯ ಅವರು ರೈತರಿಗೆ ಇದನ್ನು ತಲುಪಿಸುವುದಕ್ಕೆ InnoMech Technologies ಎಂಬ ಸಂಸ್ಥೆಯನ್ನು ತೆರೆದಿದ್ದಾರೆ. ಈ ವರೆಗೆ ಸುಮಾರು ಸಾವಿರಕ್ಕೂ ಅಧಿಕ ದೋಟಿಗಳನ್ನು ಗ್ರಾಹಕರಿಗೆ ನೀಡಿದ್ದಾರೆ. ಹಳ್ಳಿಗಳಲ್ಲಿ ಇದರ ಪ್ರಾತ್ಯಕ್ಷಿಕೆಯನ್ನು ನೀಡಿದ್ದಾರೆ.

ಕೆಲಸಗಾರರ ಕೊರತೆಯ ಸಮಸ್ಯೆಯನ್ನು ಪರಿಹರಿಸುವ ಈ ದೋಟಿಯ ವಿವರ ತಿಳಿಯಲು ಬಾಲಸುಬ್ರಹ್ಮಣ್ಯ 9606142520 ಅವರನ್ನು ಸಂಪರ್ಕಿಸಬಹುದು.

Leave a Reply

Your email address will not be published. Required fields are marked *