ಹಲವು ಔಷಧಿಯ ಗುಣಗಳನ್ನು ಹೊಂದಿರುವ ಅರಿಸಿನದ ಮಹತ್ವ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಬೆಳಕಿಗೆ ಬರುತ್ತಿದೆ.
ಮುಖ್ಯವಾಗಿ ಅರಿಸಿನದಲ್ಲಿರುವ ಕರ್ಕ್ಯುಮಿನ್ ಎಂಬ ರಾಸಾಯನಿಕವು ಹಲವು ಔಷಽಯ ಗುಣಗಳ ಆಗರ.
ನೆಗಡಿ, ಜ್ವರ ಮೊದಲಾದ ಸಮಸ್ಯೆಗಳಿಗೆ ಅರಿಸಿನದ ಸೇವನೆ ಉತ್ತಮ ಎಂಬುದು ನಮ್ಮ ದೇಶವು ಪುರಾತನ ಕಾಲದಿಂದಲೂ ಕಂಡುಕೊಂಡ ಸತ್ಯ. ಅರಿಸಿನದ ತೂಕದ ಶೇ.3 ರಷ್ಟು ಇರುವ ಕರ್ಕ್ಯುಮಿನ್ ನಮ್ಮ ದೇಹಕ್ಕೆ ಸೇರಲು, ಮೆಣಸಿನ ಕಾಳಿನ ಪುಡಿ ಸಹಾಯ ಮಾಡುತ್ತದೆ ಎಂಬುದು ಒಂದು ಅಚ್ಚರಿ. ನೇರವಾಗಿ ಸೇವಿಸಿದಾಗ ನಮ್ಮ ದೇಹ ಹೀರಿಕೊಳ್ಳುವ ಶೇ.2000 ಹೆಚ್ಚು ಕರ್ಕ್ಯುಮಿನ್‌ನ್ನು, ಮೆಣಸಿನ ಕಾಳಿನ ಪುಡಿಯ ಜತೆ ಸೇವಿಸಿದಾಗ ಹೀರಿಕೊಳ್ಳುತ್ತದೆ.
ಅದಕ್ಕೇ ಇರಬೇಕು, ನಮ್ಮ ದೇಶದಲ್ಲಿ ಅನಾದಿಕಾಲದಿಂದಲೂ ಅರಿಸಿನ ಮತ್ತು ಮೆಣಸಿನ ಕಾಳಿನ ಪುಡಿಯನ್ನು ಮಿಶ್ರಣ ಮಾಡಿ ಕಷಾಯದ ರೂಪದಲ್ಲೋ, ಬೇರಾವುದೋ ರೂಪದಲ್ಲೋಸೇವಿಸುವ ಅಭ್ಯಾಸ ರೂಢಿಯಲ್ಲಿದೆ.
*ಅರಿಸಿನ ಪುಡಿಯನ್ನು ಹಾಲಿನೊಂದಿಗೆ ಕುದಿಸಿ, ಸಣ್ಣ ಪ್ರಮಾಣದ ಮೆಣಸಿನ ಕಾಳಿನ ಪುಡಿ ಮತ್ತು ಬೆಲ್ಲ ಸೇರಿಸಿ ಸೇವಿಸುವುದು ಒಂದು ಉತ್ತಮ ವಿಧಾನ. ಇದನ್ನು ಪ್ರತಿದಿನ ಸೇವಿಸುವುದು ವಿಹಿತ.
*ಅರಿಸಿನದ ಪ್ರಮುಖ ಗುಣವೆಂದರೆ ಅದು ಒಂದು ಉತ್ತಮ ಉರಿಯೂತ ಶಮನಕಾರಿ. ಉರಿಯೂತಕ್ಕೆ ಬಳಸುವ ಮಾತ್ರೆಗಳಷ್ಟೇ ಸಮರ್ಥವಾಗಿ ಕೆಲಸಮಾಡುವ ಅರಿಸಿನ, ಅಡ್ಡಪರಿಣಾಮಗಳಿಲ್ಲದ ಔಷಧ ಎಂದೇ ಹೇಳಬಹುದು. ಆದ್ದರಿಂದಲೇ, ಅರಿಸಿನ ಸೇವನೆಯಿಂದ ನಮ್ಮ ದೇಹದ ಪ್ರತಿರೋಧ ಶಕ್ತಿ ವೃದ್ಧಿಗೊಳ್ಳುತ್ತದೆ.
*ನಮ್ಮ ದೇಹದಲ್ಲಿ ನಡೆಯುವ ಆಕ್ಸಿಡೇಷನ್ ಎಂಬ ಕ್ರಿಯೆಯನ್ನು ನಿಧಾನಗೊಳಿಸುವಲ್ಲಿ ಅರಿಸಿನ ಮಹತ್ವದ ಪಾತ್ರ ವಹಿಸು ತ್ತದೆ. ಫ್ರೀ ರ‍್ಯಾಡಿಕಲ್ಸ್‌ನಿಂದಾಗಿ ಆಕ್ಸಿಡೇಷನ್ ನಡೆಯುತ್ತದೆ. ಆಂಟಿಆಕ್ಸಿಡೆಂಟ್‌ಗಳ ಸೇವನೆಯಿಂದ ದೇಹದ ಶಕ್ತಿ ಹೆಚ್ಚುತ್ತದೆ. ಅರಿಸಿನವು ಪ್ರಬಲವಾದ ಆಂಟಿಆಕ್ಸಿಡೆಂಟ್ ಪ್ರಚೋದನಕಾರಿ ಎಂದು ಗುರುತಿಸಲ್ಪಟ್ಟಿದೆ.
*ಅರಿಸಿನದಲ್ಲಿರುವ ನೈಸರ್ಗಿಕ ರಾಸಾಯನಿಕಗಳು ಮಿದುಳು ಮತ್ತು ನರಗಳ ಆರೋಗ್ಯವನ್ನು ಕಾಪಾಡುವುದರ ಮೂಲಕ, ಅಲ್ಜೈಮರ್ ಕಾಯಿಲೆಯನ್ನು ದೂರವಿಡಲು ಸಹಕರಿಸಬಲ್ಲವು. ಅರಿಸಿನದ ಸೇವನೆಯು ನೆನಪಿನ ಶಕ್ತಿಯನ್ನು ಸಹ ಉತ್ತಮ ಗೊಳಿಸಬಲ್ಲದು ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
*ರಕ್ತನಾಳಗಳ ಆರೋಗ್ಯವನ್ನು ಕಾಪಾಡುವ ಮೂಲಕ, ಅರಿಸಿನವು ಹೃದಯಾಘಾತದ ಸಾಧ್ಯತೆಯನ್ನು ಕಡಿಮೆ ಮಾಡಬಲ್ಲದು.
*ಅನ್ನನಾಳದ ಕ್ಯಾನ್ಸರ್‌ನ್ನು ತಡೆಯಲು ಅರಿಸಿನದ ಸೇವನೆ ಸಹಕಾರಿ ಎಂದು ಕೆಲವು ತಜ್ಞರು ಗುರುತಿಸಿದ್ದಾರೆ.
*ಖಿನ್ನತೆಯನ್ನು ದೂರ ಮಾಡಲು ಅರಿಸಿನ ಸಹಕಾರಿ ಎಂಬುದನ್ನು ಕೆಲವು ಅಧ್ಯಯನಗಳು ತೋರಿಸಿಕೊಟ್ಟಿವೆ.