Sunday, 11th May 2025

ತಾಯಿ-ತಂದೆಯರೇ ಆದರ್ಶ

ಡಾ. ರಾಮಮೂರ್ತಿ ಟಿ.ವಿ.

ತನ್ನ ತಾಯಿ ಮತ್ತು ತಂದೆಯರಿಗೆ ಮೂರು ಸುತ್ತು ಬಂದು, ಆ ಕಾರ್ಯವು ತ್ರಿಲೋಕ ಪ್ರದಕ್ಷಿಣೆಗೆ ಸಮನಾದುದು ಎಂದು ತೋರಿಸಿಕೊಟ್ಟವನು ಗಣೇಶ. ತಾಯಿ ಮತ್ತು ತಂದೆಯರ ಸ್ಥಾನ ನಮ್ಮ ಸಮಾಜದಲ್ಲಿ ಅತ್ಯುನ್ನತ ಎನಿಸಿದೆ.

ಲೋಕದಲ್ಲಿ ಸಂತಾನಪಾಲನೆ ಎಲ್ಲಾ ಪ್ರಾಣಿಗಳಲ್ಲಿಯೂ ಇರುವಾಗ, ಭಾರತೀಯರು ಮಾತ್ರ ತಾಯಿ ತಂದೆಯರನ್ನು ಮಾತೃ ದೇವೋ ಭವ, ಪಿತೃದೇವೋಭವ (ತೈತ್ತಿರೀಯ ಉಪನಿಷದ್ವಾಣಿ) ಎಂದೆಲ್ಲಾ ಗೌರವಿಸುವುದು ತುಸು ಅತಿಶಯೋಕ್ತಿಯಲ್ಲವೆ ಎನ್ನಿಸುವುದುಂಟು. ಈ ವಿಶೇಷ ಋಷಿವಾಣಿಯು ವಿವೇಚನಾರ್ಹ.

ಪ್ರಾಣಿಗಳಲ್ಲಿ ದುರ್ಲಭವಾದ ಮತ್ತು ಆತ್ಮಸಾಧನೆಗೆ ಬೇಕಾದ ಶರೀರವನ್ನು ಕೊಟ್ಟ ಮತ್ತು ಯಾವ ನಿರೀಕ್ಷೆಯನ್ನೂ ಇಟ್ಟು ಕೊಳ್ಳದೆ, ಮಕ್ಕಳನ್ನು ಬೆಳೆಸುವ ತಾಯಿ ತಂದೆಯರು ಪೂಜನೀಯರಾಗುತ್ತಾರೆ ಎಂಬುದು ಭಾರತೀಯರ ಚಿಂತನೆ. ತಾಯಿ ಯಾದವಳು ಗರ್ಭಸ್ಥ ಶಿಶುವಿನ ದೆಸೆಯಿಂದ ಪಡುವ ಕಷ್ಟವನ್ನು ಶಂಕರಭಗವತ್ಪಾದರು ಮಾತೃಪಂಚಕದಲ್ಲಿ ಸ್ತೋತ್ರ ಮಾಡುತ್ತಾರೆ. ಭಗವಂತ-ಭಗವತಿಯರಿಂದ ಜೀವದ ಕಡೆಗೆ ಏನು ಹರಿದು ಬರುತ್ತದೆಯೋ ಅದನ್ನರಿತು ತರುವವನೇ ತಂದೆ.

‘ತಂದೆ, ಏನು ತಂದೆ?’ ಎಂದರೆ, ‘ಜ್ಞಾನವನ್ನು ತಂದೆ’ ಎನ್ನುವವನೇ ತಂದೆ. ಅವನ ಜ್ಞಾನವು ತಾನಾಗಿಯೇ ಬೆಳೆದು ವಿಸ್ತಾರ ಗೊಳ್ಳಲು ಬಯಸಿದಾಗ ಅದನ್ನು ಪೋಷಿಸಿ, ಮೊದಲ ಗುರುವಾಗಿ ತಿಳಿಹೇಳಿ, ಬೆಳೆಸುವವಳೇ ತಾಯಿ. ಜ್ಞಾನಬೀಜವನ್ನೇ
ಮುಂದೆ ನೀಡುವ ತಂದೆಯಾಗಬೇಕು ಎಂಬುದೇ ಸಹಜವಾದ ಅಪೇಕ್ಷೆ.

ತಾಯಿಯು ಅಂತಹ ಬೀಜವನ್ನು ತನ್ನ ಗರ್ಭದಲ್ಲಿ ಪೋಷಿಸಿ ಸತ್ಸಂತಾನವನ್ನು ಬೆಳೆಸುವ ಪರಾ ಪ್ರಕೃತಿಯ ಪ್ರತಿನಿಧಿ ಯಾಗಬೇಕು. ತಾಯಿ-ತಂದೆಯರು ಅಜ್ಞಾನವೆಂಬ ಕತ್ತಲೆಯನ್ನು ನಿವಾರಿಸುವಂತಹ ಹರಿಸದೃಶ ಗುರುವನ್ನು ತೋರಿಸುವಂತಹ ವರಾಗಬೇಕು. ಅದಕ್ಕೇ ಮಾತೃದೇವೋ ಭವ, ಪಿತೃದೇವೋಭವ, ಆಚಾರ್ಯ ದೇವೋಭವ ಎಂಬ ಸಂಸ್ಕಾರ ನಮ್ಮ ದೇಶದಲ್ಲಿ
ಬಾಲ್ಯದಲ್ಲೇ ಆಗುತ್ತಿತ್ತು.

ಜನ್ಮ ನೀಡಿದ, ಮಾರ್ಗ ದರ್ಶನ ತೊರಿದ ತಾಯಿ ತಂದೆಯರನ್ನು ಪೂಜ್ಯಭಾವದಿಂದ ಆದರಿಸುವುದನ್ನು ನಮ್ಮ ಸಂಸ್ಕೃತಿಯಲ್ಲಿ ಯಜ್ಞವೆಂದೇ ಪರಿಗಣಿಸುತ್ತಾರೆ. ಕುಟುಂಬದ ಯಾವುದೇ ಶುಭ ಸಮಾರಂಭವಾಗಲೀ ತಂದೆತಾಯಿಯರ ಪಾದಪೂಜೆ ಮಾಡಿ ಅನುಮತಿ ಪಡೆದು, ಕಾರ್ಯಕ್ರಮವನ್ನು ಪ್ರಾರಂಭಿಸುವುದು ಸತ್ಸಂಪ್ರದಾಯ. ಮಾತಾಪಿತೃಗಳ ಮತ್ತು ಆಚಾರ್ಯನ ಸೇವೆಯೇ ಪರಮ ತಪಸ್ಸು ಮತ್ತು ಅವರ ಅನುಮತಿ ಯಿಲ್ಲದೇ ಬೇರೆ ಯಾವ ಧರ್ಮವನ್ನೂ ಆಚರಿಸಲಾಗದು.

ಮಾತಾಪಿತೃಗಳು ಮತ್ತು ಆಚಾರ್ಯರು ಮೂರು ಲೋಕಗಳನ್ನು ಪಡೆಯಲು ಕಾರಣಭೂತರಾದವರು. ಪುರಾಣ ಪ್ರಸಿದ್ಧವಾದ ಕಥೆಯೊಂದರಲ್ಲಿ ಗಣೇಶನು ತನ್ನ ಜನನೀ-ಜನಕರನ್ನು ಮೂರು ಸುತ್ತು ಪ್ರದಕ್ಷಿಣೆ ಮಾಡಿದಾಗ, ಉಮಾಮಹೇಶ್ವರರು ಇದು ತ್ರಿಲೋಕ ಪ್ರದಕ್ಷಿಣೆಗೆ ಸಮ ಎಂಬ ತೀರ್ಮಾನಕ್ಕೆ ಬಂದು ಗಣೇಶನಿಗೆ ಬಹುಮಾನಕೊಡುತ್ತಾರೆ. ಪಂಡರೀನಾಥನು ಪುಂಡರೀಕನ ಮಾತಾಪಿತೃಗಳ ಸೇವೆಯನ್ನು ಮೆಚ್ಚಿ ಇಟ್ಟಿಗೆಯ ಮೇಲೆ ತನ್ನ ಭಕ್ತನಿಗಾಗಿ ಕಾದಿರುವ ಕಥೆ ಲೋಕಪ್ರಸಿದ್ಧವಲ್ಲವೇ! ಹೀಗಾಗಿ ಪುಂಡರೀಕನು ಭಾಗವತೋತ್ತಮರಲ್ಲಿ ಒಬ್ಬನಾಗಿದ್ದಾನೆ.

ಪಿತೃವಾಕ್ಯಪರಿಪಾಲಕ ಶ್ರೀರಾಮ, ತನ್ನ ತಂದೆಯ ಮಾತನ್ನುಳಿಸಲಿಕ್ಕಾಗಿ, ರಾಜ್ಯವನ್ನು ತೊರೆದು 14 ವರ್ಷ ವನವಾಸ ಮಾಡುತ್ತಾನೆ. ಮಹಾಭಾರತದ ಪ್ರಖ್ಯಾತ ಪ್ರಸಂಗವಾದ ಯಕ್ಷನ ಪ್ರಶ್ನೆಯೊಂದಕ್ಕೆ ಯುಧಿಷ್ಠಿರನು ಕೊಟ್ಟ ಉತ್ತರ – ತಾಯಿಯು ಭೂಮಿಗಿಂತಲೂ ಭಾರ. ತಂದೆಯು ಆಕಾಶಕ್ಕಿಂತಲೂ ಎತ್ತರ. ಜ್ಞಾನಕ್ಕೆ ಮಿಗಿಲಾದದ್ದು ಮತ್ತು ಜ್ಞಾನಕ್ಕೆ ಸಮಾನ ಹಾಗೂ ಪವಿತ್ರವಾದದ್ದು ಇಲ್ಲ, ತಂದೆಯಾದವನು ಇಂತಹ ಜ್ಞಾನವನ್ನು ಪಡೆಯುವುದಕ್ಕೆ ದಿಗ್ದರ್ಶನ ಮಾಡುವವನಾದ್ದರಿಂದ
ಅವನು ಆಕಾಶಕ್ಕಿಂತಲೂ ಎತ್ತರ.

ತಾಯಿಯ ಬಗ್ಗೆ ಕೃತಜ್ಞತಾ ಭಾವ ತುಂಬಿದಾಗ ಅದು ಇಳಿಸಲಾರದ ಭಾರವಾಗುತ್ತದೆ. ತಾಯಿಯ ಕೃತಜ್ಞತೆಯನ್ನು ತೀರಿಸು ವುದು ಅಸಾಧ್ಯವಾದ್ದರಿಂದ ಅವಳು ಭೂಮಿಗಿಂತ ಭಾರವಾಗುತ್ತಾಳೆ. ಇಂತಹ ಜ್ಞಾನದ ಮಾರ್ಗವನ್ನು ತೋರಿಸುವ ನಮ್ಮ ದೇಶದ ತಾಯಿ-ತಂದೆಯರು ಆದರ್ಶ. ತಾಯಿ-ತಂದೆಯರಲ್ಲಿ ಪೂಜ್ಯ ಭಾವ ಕಾಣಬೇಕಾದುದು ಮಕ್ಕಳ ಆದರ್ಶ. ಭಾರತೀಯ ರಾಗಿ ಈ ಆದರ್ಶಗಳನ್ನು ನಾವೆಲ್ಲರೂ ಪಾಲಿಸೋಣ.

Leave a Reply

Your email address will not be published. Required fields are marked *