Wednesday, 14th May 2025

ಹೆಣ್ಣಿನ ಭವಿಷ್ಯಕ್ಕೆ ಹಸಿರಿನ ಸಿರಿ

ಸುರೇಶ ಗುದಗನವರ

ಈ ಹಳ್ಳಿಯಲ್ಲಿ ಹೆಣ್ಣು ಮಗು ಜನಿಸಿದಾಗ, ಆಕೆಯ ಭವಿಷ್ಯಕ್ಕಾಗಿ ನೂರ ಹನ್ನೊಂದು ಗಿಡಗಳನ್ನು ಊರಿನ ಜನರು ನೆಡುತ್ತಾರೆ!

ಹೆಣ್ಣು ಮಕ್ಕಳು ಹುಟ್ಟಿದರೆ, ಮಗು ಜನಿಸಿದ ಸಂಭ್ರಮವನ್ನು ಆಚರಿಸಲು ನೂರಾ ಹನ್ನೊಂದು ಗಿಡ ನೆಡುವ ಸಂಪ್ರದಾಯ ವನ್ನು ಉಳಿಸಿ, ನಡೆಸಿ ಕೊಂಡು ಹೋಗುತ್ತಿರುವುದು ತುಸು ಸಂಭ್ರಮದ ವಿಷಯ ಅಲ್ಲವೆ!

ಇದರ ಜತೆಗೆ ಹಳ್ಳಿಯ ಜನರೆಲ್ಲ ಸೇರಿ ಹಣ ಒಗ್ಗೂಡಿಸಿ, ಮಗುವಿನ ಹೆಸರಿನಲ್ಲಿ ಭವಿಷ್ಯ ನಿಧಿ ಕೂಡಿಸುವ ಪದ್ಧತಿಯೂ ಇದೆ. ಇಂಥದೊಂದು ಸಂಪ್ರದಾಯ ಹುಟ್ಟು ಹಾಕಿದವರು ಗ್ರಾಮ ಪಂಚಾಯಿತಿ ಸದಸ್ಯರಾದ ಶ್ಯಾಮ ಸುಂದರ್ ಪಲಿವಾಲ್‌ರವರು. ಮೂಲತಃ ರಾಜಸ್ತಾನದ ರಾಜ್ಸಮಂಡ್ ಜಿಲ್ಲೆಯ ಪಿಪ್ಲಾಂತ್ರಿ ಗ್ರಾಮದವರಾದ ಶ್ಯಾಮಸುಂದರ ಅವರು ಆರು ವರ್ಷದವರಿದ್ದಾಗ, ತಾಯಿಗೆ ಹಾವು ಕಚ್ಚಿದರ ಪರಿಣಾಮವಾಗಿ ತಾಯಿಯವರನ್ನು ಕಳೆದುಕೊಂಡರು.

ಶ್ಯಾಮಸುಂದರ ಹತ್ತನೆಯ ತರಗತಿಯವರೆಗೆ ಓದಿದರು. ಕುಟುಂಬದ ಬಡತನದ ಸ್ಥಿತಿಯಲ್ಲಿ ಓದನ್ನು ಮುಂದುವರೆಸದೆ ಶ್ಯಾಮ ಸುಂದರ ಮಾರ್ಬಲ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದರು. ಅವರು ಕೆಲವು ವರ್ಷಗಳ ನಂತರ ಸ್ವಂತ ಮಾರ್ಬಲ್ ಮಾರಾಟದ ಕೇಂದ್ರವನ್ನು ಆರಂಭಿಸಿದರು.

ಅಗಲಿದ ಮಗಳ ನೆನಪಿನಲ್ಲಿ
ಅವರ ಮುದ್ದಿನ ಮಗಳು ಕಿರಣ ಹದಿನಾರು ವರ್ಷ ದವಳಿದ್ದಾಗ ಶಾಲೆಯಿಂದ ಹೊಟ್ಟೆ ನೋವೆಂದು ಮನೆಗೆ ಬಂದಳು. ತಕ್ಷಣವೇ ಕಿರಣಳಿಗೆ ವೈದ್ಯಕೀಯ ಚಿಕಿತ್ಸೆ ನೀಡಿದರೂ ಗುಣಮುಖರಾಗದೇ ಅಸುನೀಗಿದಳು. ಶ್ಯಾಮಸುಂದರ್ ಅವರ ಇಡೀ ಕುಟುಂಬ ದುಃಖ ಸಾಗರದಲ್ಲಿ ಮುಳುಗಿತು.

ಶ್ಯಾಮಸುಂದರ ಅವರು ತಮ್ಮ ಮಗಳು ಕಿರಣ ಹೆಸರನ್ನು ಚಿರಸ್ಥಾಯಿ ಮಾಡಲು ನಿರ್ಧರಿಸಿದರು. ಅದರಂತೆ ಅವರು ಮಗಳ ನೆನಪಲ್ಲಿ ಗಿಡಗಳನ್ನು ನೆಟ್ಟರು. ಗಿಡಗಳನ್ನು ಜಾಗರೂಕತೆಯಿಂದ ಜೋಪಾನ ಮಾಡಿದರು. ಆರಂಭದಲ್ಲಿ ಅವರು ಇದಕ್ಕಾಗಿ ಹಲವು ಸಂದಿಗ್ಧಗಳನ್ನು, ಪ್ರತಿರೋಧವನ್ನು ಎದುರಿಸಿದರು. ಆದರೆ, ಗಿಡ ನೆಡುವ ಕುರಿತು ಜನರನ್ನು ಮನವೊಲಿಸಿದರು. ಈ ವಿಚಾರವನ್ನು ಇಡೀ ಗ್ರಾಮವೇ ಮಾಡುವಂತೆ ಗ್ರಾಮಸ್ಥರನ್ನು ಪ್ರೇರೇಪಿಸಿದರು. ಅಲ್ಲದೇ ಕಿರಣ್ ನಿಧಿ ಯೋಜನೆಯನ್ನು ಅನುಷ್ಠಾನಗೊಳಿಸಿದರು.

ಒಂದು ಕಾಲದಲ್ಲಿ ಬರದಿಂದ ಕಂಗೆಟ್ಟಿದ್ದ ಗ್ರಾಮ ಇಂದು ಹೆಣ್ಣುಮಕ್ಕಳ ಜನನದಿಂದಲೇ ಅಭಿವೃದ್ಧಿಯಾಗಿ ಭಾರತವಷ್ಟೇ ಅಲ್ಲ, ಏಷ್ಯಾ ಖಂಡದಾಚೆಗೂ ಪ್ರಸಿದ್ಧಿಯಾಗಿದೆ. ಗ್ರಾಮ ಪಂಚಾಯಿತಿಯ ಸದಸ್ಯರಾದ ಶ್ಯಾಮಸುಂದರ್ ಪಲಿವಾಲ್‌ರವರು ಕಿರಣ ನಿಧಿ
ಯೋಜನೆಯ ವ್ಯಾಪ್ತಿಯಲ್ಲಿ, ಗ್ರಾಮದಲ್ಲಿ ಹೆಣ್ಣುಮಗಳು ಜನಿಸಿದರೆ ನೂರಾ ಹನ್ನೊಂದು ಗಿಡಗಳನ್ನು ನೆಟ್ಟು ಅಲ್ಲದೇ ಮೂವತ್ತೊಂದು ಸಾವಿರ ರೂಪಾಯಿಗಳನ್ನು ಮಗುವಿನ ಹೆಸರಿನಲ್ಲಿ ಠೇವಣಿ ಇಡುತ್ತಾರೆ.

ಇದರಲ್ಲಿ ಕುಟುಂಬದ ಪಾಲು ಹತ್ತು ಸಾವಿರ. ಬಾಕಿ ಹಣವನ್ನು ಗ್ರಾಮದವರು ಸಂಗ್ರಹಿಸುತ್ತಾರೆ. ಆ ನೂರಾ ಹನ್ನೊಂದು ಮರಗಳು ಗ್ರಾಮದ ಆಸ್ತಿ. ಊರಿನ ಎಲ್ಲರೂ ಸೇರಿ ಎಲ್ಲಾ ಮರಗಳನ್ನು ತುಂಬಾ ಜಾಗೂರಕವಾಗಿ ಜೋಪಾನ ಮಾಡುತ್ತಾರೆ. ಠೇವಣಿ ಅವಧಿ ಪೂರ್ಣವಾದಾಗ ಮಗುವಿನ ಶಿಕ್ಷಣ ಅಥವಾ ಮದುವೆಗೆ ಬಳಸಲಾಗುತ್ತಿದೆ.

ಹೆಣ್ಣು ಮಗುವೇ ಆಸ್ತಿ
ಹೆಣ್ಣುಮಗು ಜನಿಸಿದ ಸಂದರ್ಭದಲ್ಲಿ ಮಗುವಿನ ಹೆಸರಿನಲ್ಲಿ ಠೇವಣಿ ಇಡುವಾಗಲೇ ಕಠಿಣ ಷರತ್ತುಗಳನ್ನು ವಿಧಿಸುತ್ತಾರೆ. ಆ ಕುಟುಂಬ ಭ್ರೂಣಹತ್ಯೆ ಮಾಡಬಾರದು. ಎಲ್ಲಾ ಸಸಿಗಳನ್ನು ಸೂಕ್ತ ರೀತಿಯಲ್ಲಿ ಪೋಷಿಸಬೇಕು. ಸಸಿಗಳು ಗ್ರಾಮದ ಆಸ್ತಿಯಾಗ ಬೇಕು. ಆಕೆಗೆ ಸಂಪೂರ್ಣ ಶಿಕ್ಷಣ ಕೊಡಿಸುವ, ಹದಿನೆಂಟು ವರ್ಷ ತುಂಬುವವರೆಗೆ ಮದುವೆ ಮಾಡದಂತೆ ನೋಡಿಕೊಳ್ಳುವುದಾಗಿ ಹಾಗೂ ಮಗುವಿಗೆ ಮುಂದೆ ಹಣ ದೊರಕುವಂತೆ ಸ್ಟಾಂಪ್ ಕಾಗದದಲ್ಲಿ ಪಾಲಕರಿಂದ ಬರೆಸಿಕೊಳ್ಳುತ್ತಾರೆ. ಆಕೆಗೆ 20 ವರ್ಷ ಗಳಾಗುವ ಹೊತ್ತಿಗೆ ಇದು ಕೆಲವು ಲಕ್ಷ ದಾಟಿರುತ್ತದೆ. ಇದರ ಹೊಣೆಯನ್ನು ಗ್ರಾಮ ಪಂಚಾಯಿತಿಯೇ ನೋಡಿಕೊಳ್ಳುತ್ತದೆ.

ಶ್ಯಾಮಸುಂದರ್ ಪಲಿವಾಲ್‌ರವರು ಈ ಯೋಜನೆಯನ್ನು ಸರ್ಕಾರದ ಸಹಕಾರದೊಂದಿಗೆ ಆರಂಭಿಸಿದರು. ಈ ಯೋಜನೆಯಿಂದ ಗ್ರಾಮದಲ್ಲಿ ಮಹಿಳಾ ಸಬಲೀಕರಣವಾಯಿತು. ಹೆಣ್ಣುಮಕ್ಕಳ ಪೋಷಕರು ನಿಶ್ಚಿಂತರಾದರು. ಪರಿಸರದ ಉಳಿವೂ ಆಯಿತು. ಕಳೆದ ಕೆಲ ವರ್ಷಗಳಲ್ಲೇ ಗ್ರಾಮಸ್ಥರು ಅಂದಾಜು ನಾಲ್ಕು ಲಕ್ಷ ಗಿಡಗಳನ್ನು ಬೆಳೆಸುವಲ್ಲಿ ಸಫಲರಾಗಿದ್ದಾರೆ.

ಇವುಗಳಲ್ಲಿ ಬೇವು, ಮಾವು, ತೇಗ, ನೆಲ್ಲಿ ಇತ್ಯಾದಿ ಬೃಹತ್ ಮರಗಳಿವೆ. ಈ ಮರ ಗಳಿಗೆ ಹುಳ ಹತ್ತದಂತೆ ಗ್ರಾಮಸ್ಥರು ಅವುಗಳ ಸುತ್ತ ಅಲೋವೆರಾ ಗಿಡ ಗಳನ್ನು ನೆಟ್ಟಿದ್ದಾರೆ. ಈಗ ಅಲೋವೆರಾ ಗಿಡಗಳು ಕೂಡಾ ಗ್ರಾಮಸ್ಥರಿಗೆ ದುಡ್ಡಿನ ಮೂಲ ಗಳಾಗಿವೆ. ಅಲ್ಲದೇ ಈ ಗಿಡನೆಡುವ ಕಾರ್ಯಕ್ರಮದಿಂದಾಗಿ ಗ್ರಾಮದಲ್ಲಿ ಅಂತ ರ್ಜಲ ಮಟ್ಟವು ಹೆಚ್ಚಾಗಿದೆ.

ಚೆಕ್ಡ್ಯಾಂ ನಿರ್ಮಾಣ

ಗಿಡ ನೆಟ್ಟು ಹೆಣ್ಣುಮಗುವಿನ ಜನನ ಸಂಭ್ರಮಿಸುವ ಶ್ಯಾಮಸುಂದರ ಅವರ ಯೋಚನೆ ಕ್ರಾಂತಿಕಾರಿಯಾಗಿದೆ. ಪಿಪ್ಲಾಂತ್ರಿ ಹಳ್ಳಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರಿಗೆ ಬರವಿದೆ. ಆದರೆ ಶ್ಯಾಮಸುಂದರ್ ಪಲಿವಾಲ್ ಅವರು ಮಾಡಿದ ಯೋಜನೆ ಯಿಂದಾಗಿ ಗ್ರಾಮಸ್ಥರು ಕೈತುಂಬಾ ಕೆಲಸ, ಹಣ, ನೀರು, ನೆರಳಿನಿಂದ ಸಮೃದ್ಧರಾಗಿ ಜೀವಿಸುತ್ತಿದ್ದಾರೆ. ಅವರು ಸ್ವಜಲಧಾರಾ ಯೋಜನೆಯನ್ನು ಗ್ರಾಮದಲ್ಲಿ ಆರಂಭಿಸಿದರು. ಈ ಯೋಜನೆಯಿಂದ ಗ್ರಾಮದಲ್ಲಿ 1800 ಚೆಕ್ ಡ್ಯಾಮ್ ಗಳನ್ನು ನಿರ್ಮಿಸಿದ್ದಾರೆ.

ಅವರ ಸಾಧನೆಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಅವರು ಇತ್ತೀಚಿಗೆ ದೇಶದ ಅತ್ಯುನ್ನತ ಪ್ರಶಸ್ತಿ ಪದ್ಮಶ್ರೀಗೆ
ಭಾಜನರಾಗಿದ್ದಾರೆ. ಶ್ಯಾಮ್‌ಸುಂದರ ಅವರು ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಂದ ನಿರ್ಮಲ್ ಗ್ರಾಮ ಪ್ರಶಸ್ತಿ, ನಟ ಅಕ್ಷಯ ಕುಮಾರ ಅವರಿಂದ ಪ್ರಶಸ್ತಿ ಹೀಗೆ ಸಂಘ-ಸಂಸ್ಥೆಗಳು ನೀಡಿದ ಹಲವಾರು ಪ್ರಶಸ್ತಿ-ಪುರಸ್ಕಾರಗಳನ್ನು ಸ್ವೀಕರಿಸಿದ್ದಾರೆ.

ವಿದೇಶಗಳಿಗೆ ಹಬ್ಬಿದ ಕೀರ್ತಿ

ಪಿಪ್ಲಾಂತ್ರಿ ಹಳ್ಳಿಯ ಯಶಸ್ಸಿನ ಕಥೆಯನ್ನು ರಾಜಸ್ಥಾನ ಹಾಗೂ ಡೆನ್ಮಾರ್ಕ್‌ನ ಶಾಲೆಗಳಲ್ಲಿ ಮಕ್ಕಳು ಅಭ್ಯಸಿಸುತ್ತಿದ್ದಾರೆ. ಅಲ್ಲದೇ 2017ರಲ್ಲಿ ಪಿಪ್ಲಾಂತ್ರಿ ಹಳ್ಳಿಯ ಕುರಿತು ಹಿಂದಿ ಮತ್ತು ಮಲೆಯಾಳಂನಲ್ಲಿ ಚಲನಚಿತ್ರವಾಗಿ ಮೂಡಿಬಂದಿರುವುದು ವಿಶೇಷ. ಅರ್ಜೆಂಟೈನಾದಲ್ಲಿ ಶ್ಯಾಮಸುಂದರ ಸಾಧನೆಯ ಕುರಿತ ಸಿಸ್ಟರ್ ಆಫ್ ದಿ ಟ್ರೀಸ್ ಎಂಬ ಚಲನಚಿತ್ರವು ಮೂಡಿಬಂದು ಪ್ರಸಿದ್ಧಿ ಪಡೆದಿದೆ.

ರಾಜಸ್ಥಾನದ ಪಿಪ್ಲಾಂತ್ರಿ ಹಳ್ಳಿಗರ ಈ ಆಚಾರ, ಪದ್ಧತಿ ಹೆಣ್ಣುಮಕ್ಕಳಿಗಷ್ಟೇ ಅಲ್ಲ, ಅವರನ್ನು ಹೆತ್ತವರಿಗೆ, ಜೊತೆಗೆ ಗ್ರಾಮದ
ಪ್ರತಿಯೊಬ್ಬರಿಗೂ ನೆಮ್ಮದಿಯನ್ನು ತಂದು ಕೊಟ್ಟಿದೆ. ಇದೆಲ್ಲದರ ಕಾರಣಿಕರ್ತರು ಶ್ಯಾಮಸುಂದರ ಪಲಿವಾಲ್‌ರವರು.
ಈ ಅಪರೂಪದ ಗ್ರಾಮದ ಅಧ್ಯಯನಕ್ಕಾಗಿ ದೇಶ ವಿದೇಶಗಳಿಂದ ವಿದ್ಯಾರ್ಥಿಗಳು, ಸಂಶೋಧಕರು ಭೇಟಿ ನೀಡುತ್ತಿದ್ದಾರೆ. ಪಲಿವಾಲ್‌ರವರಿಂದ ಪಿಪ್ಲಾಂತ್ರಿ ಗ್ರಾಮವು ಇಡೀ ದೇಶಕ್ಕೆ ಮಾದರಿ ಹಳ್ಳಿಯಾಗಿ ಗಮನ ಸೆಳೆಯುತ್ತಿದೆ. ಮರಗಿಡಗಳನ್ನು ನೆಡುವ ಕಾಯಕವೇ ಊರಿಗೂ ಶುಭ ತಂದಿದ್ದರ ಜತೆ, ಅಂತರ್ಜಲವನ್ನೂ ಹೆಚ್ಚಿಸಿದ್ದು ಗಮನಾರ್ಹ.

Leave a Reply

Your email address will not be published. Required fields are marked *