ಮಹಾದೇವ ಬಸರಕೋಡ
ನಮ್ಮಲ್ಲಿ ಹಲವರಲ್ಲಿ ಶಕ್ತಿ ಇರುತ್ತದೆ, ಸಾಮರ್ಥ್ಯ ಇರುತ್ತದೆ, ಬುದ್ಧಿಮತ್ತೆ ಇರುತ್ತದೆ. ಆದರೆ, ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಹಿಂದೇಟು ಹಾಕುವುದರಿಂದ, ಸೋಮಾರಿತನ ತೋರುವುದರಿಂದ, ಹಲವು ಅವಕಾಶಗಳು ಕೈತಪ್ಪುತ್ತದೆ. ನಿರ್ಣಯ ತೆಗೆದುಕೊಂಡು ಮುನ್ನುಗ್ಗಿದಾಗ, ಬದುಕು ಹಸನಾಗುತ್ತದೆ, ಬಾಳು
ಬೆಳಗುತ್ತದೆ.
ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಒಂದಷ್ಟು ಕಾಲಾವಕಾಶ ಬೇಕಲ್ಲವೇ? ನೋಡೋಣ, ಯೋಚಿಸೋಣ, ನನ್ನ ನಿರ್ಧಾರವನ್ನು ನಂತರದ
ದಿನಗಳಲ್ಲಿ ತಿಳಿಸುತ್ತೇನೆ ಎಂಬ ಮಾತುಗಳನ್ನು ನಾವು ಆಗಾಗ ಹೇಳುತ್ತಲೇ ಇರುತ್ತೇವೆ. ಸುರಕ್ಷತೆಯನ್ನು ಹುಡುಕುವ ನೆಪದಲ್ಲಿ ವ್ಯರ್ಥ ಕಾಲಹರಣ ಮಾಡುವುದು ನಮ್ಮ ಬಹುತೇಕರ ಸ್ವಭಾವ. ಈ ಕ್ಷಣವೇ ಮಾಡಬಹುದಾದ ಕೆಲಸವನ್ನು ಮುಂದಿನ ಕ್ಷಣಕ್ಕೆ, ಇಂದು ಮಾಡಬಹುದಾದ ಕೆಲಸವನ್ನು ನಾಳೆಗೆ ಮುಂದೂಡುತ್ತೇವೆ.
ಅಗತ್ಯವಿಲ್ಲದೇ ಇದ್ದಾಗಲೂ ವಿಳಂಬ ನೀತಿಯನ್ನು ಅನುರಿಸುತ್ತೇವೆ. ಇಂತಹ ನಮ್ಮ ನಡುವಳಿಕೆ ನಮ್ಮ ಅಸಾಮರ್ಥ್ಯ, ಮಾತ್ರವಲ್ಲ, ಆ ಹೊತ್ತಿನ ಸೋಲು ಅದು. ನಾವಾಗಿಯೇ ನಮ್ಮ ಬದುಕಿನ ಹಿನ್ನಡೆಗೆ ಭಾಷ್ಯ ಬರೆಯುವ ಸಲ್ಲದ ನಮ್ಮ ಪ್ರವೃತ್ತಿ ಇದು. ವಿಳಂಬ ಪ್ರವೃತ್ತಿ ಬದುಕಿನಲ್ಲಿ ಬಂದ ಬಹುದೊಡ್ಡ ಸದಾವಕಾಶಗಳಿಂದ ವಂಚಿತ ಮಾಡಿಬಿಡಬಲ್ಲದು.
ದೊಡ್ಡ ಉದ್ಯಮಿಯೊಬ್ಬ ಅತ್ಯಂತ ತಾಜಾ ಮೀನುಗಳ ಸರಬುರಾಜು ಮಾಡುವುದಕ್ಕೆ ಬಹುದಿನಗಳಿಂದ ಮೀನು ಗಾರಿಕೆಯಲ್ಲಿ ಅನುಭವ ಹೊಂದಿದ ಪ್ರತಿಷ್ಠಿತ ಮೀನುಗಾರರ ಮುಖ್ಯಸ್ಥನೊಬ್ಬನಿಗೆ ಆಹ್ವಾನ ನೀಡಿದನು. ಅಂತಹ ಕಾರ್ಯಕ್ಕೆ ಬಹುದೊಡ್ಡ ಮೊತ್ತವನ್ನು ಕೊಡುವುದಾಗಿ ಹೇಳಿದ. ಆಗ ಮೀನುಗಾರರ ಮುಖ್ಯಸ್ಥ ‘ಸಮುದ್ರದ ದಡದಲ್ಲಿ ತಾಜಾ ಮೀನುಗಳು ದೊರಕುವುದು ಕಷ್ಟ. ಅವುಗಳನ್ನು ಹಿಡಿಯಲು ಸಮುದ್ರದಾಳಕ್ಕೆ ಹೋಗಬೇಕು. ಅಲ್ಲಿಂದ ಮರಳಿ ಬರುವುದರೊಳಗಾಗಿ ಅವುಗಳು ಹಳತಾಗಿರುತ್ತವೆ.
ಹಾಗಾಗಿ ಇದು ಕಷ್ಟದ ಕೆಲಸ. ನನ್ನ ನಿರ್ಧಾರ ತಿಳಿಸಲು ಒಂದಷ್ಟು ಕಾಲಾವಕಾಶ ಕೊಡಿ’ ಎಂದ. ಉದ್ಯಮಿ ಅವನ ಮಾತಿಗೆ ಒಪ್ಪಿಕೊಂಡ. ಇವರ ಮಾತುಕತೆ ಯನ್ನು ದೂರದಿಂದ ಆಲಿಸುತ್ತಿದ್ದ ಯುವಕನೊಬ್ಬ ಹತ್ತಿರ ಬಂದು, ತಮ್ಮ ಕೆಲಸವನ್ನು ಮಾಡಿ ಕೊಡುವುದಾಗಿ ಉದ್ಯಮಿಗೆ ತಿಳಿಸಿದ. ಉದ್ಯಮಿ ಅವನ ಉತ್ಸಾಹ ವನ್ನು ನೋಡಿ ತಕ್ಷಣಕ್ಕೆ ಒಪ್ಪಿಕೊಂಡ. ಯುವಕ ತನ್ನ ಕಾರ್ಯ ಪ್ರಾರಂಭಿಸಿದ. ಮೊದಮೊದಲು ಅನುಭವಿಕ ಮೀನುಗಾರ ಹೇಳಿದ ಮಾತು ಸತ್ಯವೆಂದು ತಿಳಿಯಿತು. ಸಮುದ್ರದ ಆಳಕ್ಕೆ ಹೋಗಿ ಮೀನುಗಳನ್ನು ಹಿಡಿದು ದಡಕ್ಕೆ ತರುವಷ್ಟರಲ್ಲಿ ಅವು ಹಳತಾಗಿರುತ್ತಿದ್ದವು.
ಆದರೆ ಯುವಕ ಮೀನುಗಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಅದಕ್ಕೆ ಪರಿಹಾರ ಕಂಡು ಹಿಡಿಯುವ ದಿಸೆಯಲ್ಲಿ ಯೋಚಿಸಿದ. ಯಾವುದೇ ಸಮಸ್ಯೆಯ ಕುರಿತು ಯೋಚಿಸುತ್ತಾ ಹೋದರೆ, ಒಂದು ಪರಿಹಾರ ದೊರಕುತ್ತದೆ ಎಂದು ಆತ ನಂಬಿದ್ದ. ತಕ್ಷಣಕ್ಕೆ ಅವನು ತನ್ನ ಹಡಗಿನಲ್ಲಿ ಮೀನಿನ ತೊಟ್ಟಿಗಳನ್ನು ಅಳವಡಿ ಸಿದ. ಅದರಲ್ಲಿ ಮೀನುಗಳನ್ನು ಹಾಕಿ, ಅವು ತಾಜಾ ಇರಬಹುದೆ ಎಂದು ಪರಿಶೀಲಿಸಿ, ಅವುಗಳನ್ನು ಸರಬರಾಜು ಮಾಡಲು ಪ್ರಯತ್ನಿಸಿದ. ತೊಟ್ಟಿಯಲ್ಲಿ ಮೀನು ಗಳು ಮೊದಮೊದಲು ಅಲ್ಲಲ್ಲಿ ಓಡಾಡಿ, ನಂತರ ಅದೇ ತೊಟ್ಟಿಯ ಒಂದು ಮೂಲೆಯಲ್ಲಿ ನಿಸ್ತೇಜವಾಗಿ ತೇಲುತ್ತಿದ್ದವು. ಮೇಲ್ನೋಟಕ್ಕೆ ಅವುಗಳನ್ನು ನೋಡಿದವ ರಿಗೆ ಅವು ತಾಜಾ ಮೀನುಗಳಂತೆ ಕಾಣುತ್ತಿರಲಿಲ್ಲ.
ಯುವಕ ಈ ಬಾರಿ ಅದೇ ತೊಟ್ಟಿಗಳಲ್ಲಿ ಒಂದು ಸಣ್ಣ ಶಾರ್ಕ್ ಮೀನನ್ನು ಹಾಕಿದ. ಆ ಶಾರ್ಕ್ ಮೀನು ತೊಟ್ಟಿಯಲ್ಲಿನ ಕೆಲವು ಮೀನುಗಳನ್ನು ಅಟ್ಟಿಸಿಕೊಂಡು,
ಸಾಧ್ಯವಾದಷ್ಟು ಹಿಡಿದು ತಿನ್ನುತ್ತಿದ್ದರೂ, ಮಿಕ್ಕುಳಿದ ಹೆಚ್ಚಿನ ಸಂಖ್ಯೆ ಮೀನುಗಳು ತಮ್ಮ ಜೀವ ಉಳಿಸಿಕೊಳ್ಳಲು, ಶಾರ್ಕ್ ಮೀನಿನಿಂದ ದೂರವಾಗಿರಲು ಸದಾ ಕಾಲ ಅತ್ತಿತ್ತ ಓಡಾಡುತ್ತಿದ್ದವು. ಅಪಾಯ ದಿಂದ ಪಾರಾಗಲು ಸದಾ ಚಟುವಟಿಕೆಯಿಂದಲೇ ಇರುತ್ತಿದ್ದವು. ಇದೇ ಕಾರಣಕ್ಕಾಗಿ ಹಡಗು ದಡಕ್ಕೆ ಬರುವತನಕವೂ ಕ್ರಿಯಾಶೀಲವಾಗಿಯೂ, ಆರೋಗ್ಯವಂತವಾಗಿಯೂ ಇರುತ್ತಿದ್ದವು. ಯುವಕನ ಪ್ರಯತ್ನ ಫಲ ನೀಡಿತ್ತು.
ಅವನು ತನ್ನ ಕಾರ್ಯದಲ್ಲಿ ಯಶಸ್ವಿಯಾಗಿದ್ದ. ಅನುಭವಿ ಮೀನುಗಾರ ತನಗೊದಗಿ ಬಂದ ಸದಾವಕಾಶದಿಂದ ತನ್ನ ವಿಳಂಬ ನೀತಿಯಿಂದಾಗಿ ಅವಕಾಶ ವಂಚಿತ ನಾಗಿ ಪರಿತಪಿಸಿದರೆ, ಯುವಕ ತನ್ನ ತಕ್ಷಣದ ನಿರ್ಧಾರದಿಂದ ಪ್ರಾರಂಭದಲ್ಲಿ ಸೋತಂತೆ ಕಂಡರೂ, ಅವನ ಹೊಸ ರೀತಿಯ ಯೋಚನೆಯು ಹೊಸ ಅನುಭವಕ್ಕೆ, ಹೊಸ ಅನ್ವೇಷಣೆಗೆ ಕಾರಣವಾಗಿತ್ತು.
ನಾವು ತೆಗೆದುಕೊಳ್ಳುವ ತೀರ್ಮಾನಗಳು ನಮ್ಮ ಅನುಭವ, ವಿವೇಚನೆ ತಳಹದಿಯ ಮೇಲೆ ರೂಪಗೊಂಡಿರುತ್ತವೆ. ಹಾಗಾಗಿಯೇ ಅವುಗಳು ಬಹುತೇಕ ಸಂದರ್ಭ ಗಳಲ್ಲಿ ಸರಿಯಾಗಿಯೇ ಇರುತ್ತವೆ. ಮತ್ತು ಸರಿಯಾಗಿಯೇ ಇರುತ್ತವೆ ಎಂಬ ದೃಢ ನಂಬಿಕೆ ನಮ್ಮದಾಗಿರಬೇಕು. ಒಂದೊಮ್ಮೆ ನಮ್ಮ ನಿರ್ಧಾಗಳು ತಪ್ಪಾಗುವ ಸಾಧ್ಯತೆ ಇರಬಹುದಾದರೂ ಅವುಗಳೂ ಕೂಡ ತಮ್ಮ ಮಡಿಲಿನಲ್ಲಿ ಮುಂದಿನ ದಿನಗಳಲ್ಲಿ ನಾವು ತೆಗೆದುಕೊಳ್ಳುವ ತೀರ್ಮಾನಗಳಿಗೆ ಸರಿಯಾದ ದಿಸೆಯನ್ನು ತೋರಿಸುವ ದಿಕ್ಸೂಚಿಯಾಗಿರುತ್ತವೆ ಎಂಬ ಸಂಗತಿ ಸುಳ್ಳಲ್ಲ. ಚುರುಕಾದ, ಯೋಚನಾಬದ್ಧವಾದ ತೀರ್ಮಾನಗಳಿಲ್ಲದ ಪ್ರಪಂಚ ಸ್ತಬ್ಧಗೊಳ್ಳುತ್ತದೆ. ಬದುಕು ಜಡಗೊಳ್ಳುತ್ತದೆ.
ಹಾಗಾಗಿ ನಾವು ತಿರ್ಮಾನಗಳನ್ನು ತೆಗೆದುಕೊಳ್ಳದೇ ಸುಮ್ಮನೆ ಕಾಲಹರಣ ಮಾಡುವ ಪ್ರವೃತ್ತಿಯನ್ನು ಅನುಸರಿಸುತ್ತಾ ಹೋದರೆ, ಅದೇ ನಮ್ಮ ಬದುಕಿನ ಬಹುದೊಡ್ಡ ಹಿನ್ನಡೆಯೇ ಸರಿ. ದಿನಚರಿಯ ಹಿತಾನುಭವದ ವಲಯದಿಂದ ಹೊರಬಂದು ಕೆಲವು ಬಾರಿ ಅಕಸ್ಮಿಕವಾಗಿ ಬದುಕು ತಂದೊಡ್ಡುವ ಸಮಸ್ಯೆ ಸವಾಲು ಗಳನ್ನೆಲ್ಲ ಸ್ವೀಕರಿಸಬೇಕು. ಸಣ್ಣಪುಟ್ಟ ತೊಡಕುಗಳು ಎದುರಾದಾಗ, ಅನುಭವದಿಂದ, ಇತರರಿಂದ ಕೇಳಿ ತಿಳಿದು ಅಥವಾ ಸ್ವಂತವಾಗಿ ಹೊಸರೀತಿಯಲ್ಲಿ ಯೋಚಿಸಬೇಕು. ಅವೆಲ್ಲವುಗಳನ್ನು ಸಮರ್ಥವಾಗಿ ಎದುರಿಸಿ ಜೀವನವನ್ನು ಸುಂದರವಾಗಿಸಿಕೊಳ್ಳುವುದು ನಮ್ಮ ಧ್ಯೇಯವಾಗಬೇಕು.