Wednesday, 14th May 2025

ಸಮುದ್ರದ ನೀರನ್ನು ಕುಡಿಯಬಹುದೆ ?

ಟೆಕ್ ಫ್ಯೂಚರ್‌

ವಸಂತ ಗ ಭಟ್‌

ನೀರಿಗಾಗಿ ಹಾಹಾಕಾರ ಉಂಟಾದಾಗ ಸಮುದ್ರದ ನೀರನ್ನೇ ಶುದ್ಧೀಕರಿಸಿ ಕುಡಿಯುವ ಅನಿವಾರ್ಯತೆ ಎದುರಾಗ ಬಹುದು. ಅದರಲ್ಲಿರುವ ಸವಾಲುಗಳು ಯಾವುವು?

2018ರಲ್ಲಿ ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ಉಂಟಾದ ಭೀಕರ ಬರಗಾಲದಿಂದ ಅಲ್ಲಿಯ ಎಲ್ಲ ನೀರಿನ ಮೂಲಗಳು ಬತ್ತಿ ಹೋಗಿದ್ದವು. ಊರಿನ ಯಾವುದೇ ನಲ್ಲಿಯಲ್ಲೂ ನೀರಿರದೆ, ಸರಕಾರ ಕೊಡುವ ನಿಗದಿತ ನೀರಿನ ಖೋಟಾಕ್ಕೋಸ್ಕರ ಜನರು ಸರತಿ ಸಾಲಿನಲ್ಲಿ ನಿಲ್ಲುವಂತಾಗಿತ್ತು. ಇದನ್ನು ಆಂಗ್ಲ ಭಾಷೆಯಲ್ಲಿ ಡೇ ಜೆರೋ ಎಂದು ಕರೆಯುತ್ತಾರೆ. ಈ ಡೇ ಜೆರೋ ಕೇವಲ ಕೇಪ್ ಟೌನ್ ಗೆ ಮೀಸಲಾಗಿಲ್ಲ, ಇಂಡೋನೇಷಿಯಾದ ಜಕಾರ್ತಾ, ಜಪಾನ್ ನ ಟೋಕಿಯೊ, ಚೈನ ದ ಬೀಜಿಂಗ್ ಮತ್ತು ಭಾರತದ ಚೆನೈ ಅನುಯಾಗಿ ಜಗತ್ತಿನ ಹಲವಾರು ಮಹಾನಗರಗಳು ಭವಿಷ್ಯದಲ್ಲಿ ಡೇ ಜೆರೋ ಎದುರಿಸ ಬೇಕಾಗಬಹುದು ಎಂದು ಹೇಳುತ್ತಿವೆ ಸಮೀಕ್ಷೆಗಳು.

ಭೂಮಿಯ ಒಟ್ಟು ವಿಸ್ತೀರ್ಣದ ಶೇ.71 ರಷ್ಟು ಸಮುದ್ರವಿದೆ. ಜಗತ್ತಿನ ಒಟ್ಟು ನೀರಿನ ಮೂಲದ 97% ಇದೇ ಸಮುದ್ರದ ಉಪ್ಪು ನೀರಾದರೆ, ಇನ್ನುಳಿದ 3 ಪ್ರತಿಶತದಲ್ಲಿ ಎರಡು ಪ್ರತಿಶತ ಹಿಮದ ರೂಪದಲ್ಲಿದ್ದು ಉಳಿದ ಕೇವಲ ಒಂದು ಪ್ರತಿಶತ ಮಾತ್ರ ಜೀವಚರಗಳ ಬಳಕೆಗೆ ನದಿ, ಕೆರೆ, ಹೊಳೆ ಇತ್ಯಾದಿಗಳಲ್ಲಿ ಲಭ್ಯ. ಮುಂಬರುವ ದಿನಗಳಲ್ಲಿ ಡೇ ಜೇರೋ ಅನ್ನು ತಪ್ಪಿಸಬೇಕೆಂದರೆ ಎಡೆ ಮಳೆಯಾಗಿ ಲಭ್ಯವಿರುವ ಎಲ್ಲ ನೀರಿನ ಮೂಲಗಳು ಸದಾ ಕಾಲ ತುಂಬಿರಬೇಕು. ಇನ್ನೊಂದು ಉಪಾಯವೆಂದರೆ ಸಮುದ್ರದ ನೀರನ್ನು ಬಳಕೆಗೆ ಯೋಗ್ಯ ಎನಿಸುವಂತೆ ಮಾಡಿ ಕುಡಿಯುವುದು.

ಉಪ್ಪನ್ನು ಹೇಗೆ ತೆಗೆಯುವುದು ?

ಸಮುದ್ರದ ಉಪ್ಪು ನೀರಿನಿಂದ ಶುದ್ಧ ಕುಡಿಯುವ ತಯಾರಿಸುವ ವಿಧಾನ ಪುರಾತನ ಕಾಲದ್ದು. ಉಪ್ಪು ನೀರನ್ನು ಕಾಯಿಸಿ ಆವಿಯನ್ನು ತಣಿಸಿದರೆ ಅವಶ್ಯವಾದ ಕುಡಿಯುವ ನೀರು ಲಭ್ಯವಾಗುತ್ತದೆ. ಬಹಳ ಹಿಂದಿನಿಂದಲೂ ಖಂಡಾಂತರ ಚಲಿಸುತ್ತಿದ್ದ ನಾವಿಕರು ಇದೇ ವಿಧಾನದ ಮೂಲಕ ಕುಡಿಯುವ ನೀರನ್ನು ಸಿದ್ಧಪಡಿಸಿಕೊಳ್ಳುತ್ತಿದ್ದರು. ಇನ್ನೊಂದು ವಿಧಾನ ವಿದೆ, ಅದು ಒತ್ತಡದ ಮೂಲಕ ಉಪ್ಪು ನೀರಿನಿಂದ ಕೇವಲ ಶುದ್ಧ ನೀರನ್ನು ತೆಗೆಯುವಂತಹುದು.

ಜಗತ್ತಿನಲ್ಲಿ ಸದ್ಯ 16000ಕ್ಕೂ ಹೆಚ್ಚು ಉಪ್ಪು ನೀರಿನಿಂದ ಶುದ್ಧ ಕುಡಿಯುವ ನೀರನ್ನು ಬೇರ್ಪಡಿಸುವ ಕೇಂದ್ರಗಳಿವೆ. ಅವು ಪ್ರತಿ ದಿನ ಸುಮಾರು 100 ಮಿಲಿಯನ್ ಘನ ಕ್ಯೂಬ್ ನಷ್ಟು ಕುಡಿಯುವ ನೀರನ್ನು ಉತ್ಪಾದಿಸುತ್ತವೆ. ಈ 16000 ಕೇಂದ್ರದಲ್ಲಿ 71 ಪ್ರತಿಶತ ಕೇಂದ್ರಗಳು ಅಭಿವೃದ್ಧಿ ಹೊಂದಿದ ದೇಶಗಳಲ್ಲಿವೆ. ಉಪ್ಪು ನೀರಿನಿಂದ ಶುದ್ಧ ನೀರನ್ನು ಬೇರ್ಪಡಿಸುವ ಪ್ರಕ್ರಿಯೆ
ಅತ್ಯಂತ ದುಬಾರಿ. ನೀರನ್ನು 100 ಡಿಗ್ರಿ ಸೇಲ್ಸಿಯಸ್ ನಷ್ಟು ಕಾಯಿಸಲು ಸಾಕಷ್ಟು ಪ್ರಮಾಣದ ಶಕ್ತಿಯ ಅವಶ್ಯಕತೆಯಿರುತ್ತದೆ.

ಪೆಟ್ರೋಲಿಯಂ ಹೇರಳವಾಗಿ ಲಭ್ಯವಿರುವ ಮಧ್ಯ ಏಷಿಯ ದೇಶಗಳಲ್ಲಿ ಈ ಪ್ರಕ್ರಿಯೆ ಕಡಿಮೆ ಹಣದಲ್ಲಿ ಸಾಧ್ಯವಾಗಬಹುದು. ಬೇರೆ ದೇಶಗಳಿಗೆ ಇದು ದುಬಾರಿ ತಂತ್ರಜ್ಞಾನ. ಉಪ್ಪು ನೀರಿನಿಂದ ಶುದ್ಧ ನೀರನ್ನು ಹೊರತೆಗೆಯಲು ಇರುವ ಇನ್ನೊಂದು ಮುಖ್ಯ ಸವಾಲೆಂದರೆ ಅದು ಬ್ರೈನ್. ಉಪ್ಪು ನೀರನ್ನು ಕುದಿಸಿದ ನಂತರ ಕುಡಿಯುವ ನೀರು ಆವಿಯಾಗಿ ಉಳಿಯುವ ಉಪ್ಪು ನೀರನ್ನು ಬ್ರೈನ್ ಎಂದು ಕರೆಯುತ್ತಾರೆ.

ಇದರಲ್ಲಿ ಮೂಲ ನೀರಿಗಿಂತ 100 ಪಟ್ಟು ಹೆಚ್ಚಿನ ಲವಣಾಂಶ ಇರುತ್ತದೆ ಮತ್ತು ಹಲವು ಬಾರಿ ಇದರಲ್ಲಿ ಒಂದಿಷ್ಟು ರಾಸಾ ಯನಿಕಗಳು ಸೇರುವ ಸಂಧರ್ಭಗಳಿರುತ್ತವೆ. ಹೆಚ್ಚಿನ ಸಂಸ್ಕರಣ ಕೇಂದ್ರಗಳು ಸಮುದ್ರದ ಹತ್ತಿರದಲ್ಲಿರುವುದರಿಂದ ಅವು ಗಳು ಶುದ್ಧ ನೀರನ್ನು ಪಡೆದ ನಂತರ ಬ್ರೈನ್ ಅನ್ನು ನೇರವಾಗಿ ಸಮುದ್ರಕ್ಕೆ ಬಿಡುತ್ತವೆ. ಇದು ಸಮುದ್ರದ ಜಲಚರಗಳಿಗೆ ಉಸಿರಾಟದ ತೊಂದರೆಯನ್ನು ಉಂಟುಮಾಡಬಹುದು ಮತ್ತು ಜಲಚರಗಳು ಸಾಯಲೂಬಹುದು.

ಸಮಸ್ಯೆಗಳಿಗೆ ಪರಿಹಾರವೇನು
ಮೊದಲ ಮುಖ್ಯ ಸಮಸ್ಯೆಯಾದ ನೀರನ್ನು ಕಾಯಿಸಲು ಅವಶ್ಯಕವಾದ ಇಂಧನವನ್ನು ನವೀಕರಿಸಬಹುದಾದಂತಹ ಮೂಲ ಗಳಿಂದ ಬಳಸಿದರೆ, ಪೆಟ್ರೋಲಿಯಂನಂತಹ ನವೀಕರಿಸಲಾಗದಂತಹ ಮೂಲಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಅದಾಗಲೇ ಹಲವಾರು ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಕೀನ್ಯಾ ಸೇರಿದಂತೆ ಆಫ್ರಿಕಾದ ಹಲವಾರು ದೇಶ ಗಳಲ್ಲಿ ಈ ರೀತಿಯ ಕೇಂದ್ರಗಳು ಸದ್ಯ ಚಾಲನೆಯಲ್ಲಿವೆ.

ಇನ್ನೊಂದು ಮುಖ್ಯ ವಿಧಾನವೆಂದರೆ ಯಾವುದೇ ಇಂಧನವನ್ನು ಬಳಸದೆ ಕೇವಲ ಒತ್ತಡದ ಮೂಲಕ ಉಪ್ಪು ನೀರಿನಿಂದ ಶುದ್ಧ ನೀರನ್ನು ಸಂಸ್ಕರಿಸುವ ವಿಧಾನ ಹೆಚ್ಚಾಗಿ ಬಳಕೆಯಾಗುವಂತೆ ನೋಡಿಕೊಳ್ಳಬೇಕು. ಬ್ರೈನ್ ನ ಸಮಸ್ಯೆಗೆ ಸರಿಯಾದ ಪರಿಹಾರ ಇಲ್ಲದಿದ್ದರೂ ವಿಜ್ಞಾನಿಗಳು ಹೆಚ್ಚು ಸಾಂದ್ರತೆಯಿರುವ ಉಪ್ಪು ನೀರಿನಲ್ಲಿ ಬದುಕುವ ಕೆಲವು ಮೀನುಗಳನ್ನು ಸಾಕುವ ಮೂಲಕ ಈ ಬ್ರೈನ್ ಅನ್ನು ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಹೇಳಿದ್ದಾರೆ. 2018 ರ ನಂತರ ಕೇಪ್ ಟೌನ್ ಬದಲಾಗಿದೆ.

ಅಲ್ಲಿಯ ಸರಕಾರ ಸಮುದ್ರದ ನೀರಿನಿಂದ ಕುಡಿಯುವ ನೀರನ್ನು ಉತ್ಪಾದಿಸುವ ಬದಲು, ಇರುವ ನೀರನ್ನು ಮಿತವಾಗಿ ಬಳಸು ವಂತೆ ಜನರನ್ನು ಪ್ರೇರೇಪಿಸುತ್ತಿದೆ. ವಾರಕ್ಕೆ ಎರಡು ಬಾರಿ ಮಾತ್ರ ಸ್ನಾನ ಮಾಡುವಂತೆ, ಅವಶ್ಯಕವಿದ್ದಾಗ ಮಾತ್ರ ಟಾಯ್ಲೆಟ್‌ ಗಳಲ್ಲಿ ಫ್ಲಷ್ ಮಾಡುವಂತೆ, ನೀರನ್ನು ಬಳಸದೆ ಇತರ ಜೆಲ್‌ಗಳ ಮೂಲಕ ವಾಹನಗಳನ್ನು ತೊಳೆಯುವಂತೆ ಸಲಹೆ ನೀಡುತ್ತಿದೆ. ಸದ್ಯ ಕೇಪ್ ಟೌನ್ ನ ಡ್ಯಾಮ್ ತುಂಬಿದ್ದು ಜನ ಆರಾಮವಾಗಿದ್ದಾರೆ.

ಮುಂಬರುವ ದಿನಗಳಲ್ಲಿ ನಾವು ಸಹ ಸಮುದ್ರದ ನೀರನ್ನು ಶುದ್ಧೀಕರಿಸುವ ಬದಲು ಇರುವ ನೀರನ್ನು ಸದ್ವಿನಿಯೋಗ ಮಾಡುವ ಪದ್ಧತಿ ಬೆಳೆಸಿಕೊಳ್ಳುವುದು ಉತ್ತಮ.

Leave a Reply

Your email address will not be published. Required fields are marked *