App ಲೋಕ
ವಿರಾಜ್ ಕೆ ಅಣಜಿ
ಮೈ ಆಡಿಯೋ ಬಿಟ್ಸ್ ಬಗ್ಗೆ ಒಂದೇ ಮಾತಲ್ಲಿ ಹೇಳಬೇಕಂದ್ರೆ ಇದು ‘ಜಾಗತಿಕ ಧ್ವನಿ ಪುಸ್ತಕಗಳ ಗ್ರಂಥಾಲಯ’. ನಿಮ್ಮಿಷ್ಟದ ಪುಸಕ್ತವನ್ನು ಕಿವಿ ಮೂಲಕ ಮನ ತುಂಬಿಸಿಕೊಳ್ಳುವ ತಾಣ. ಪುಸ್ತಕಗಳನ್ನು ಎಲ್ಲಿ ಬೇಕೆಂದರಲ್ಲಿ ಕೇಳಿಸಿ ಕೊಳ್ಳುತ್ತಾ, ಮನನ ಮಾಡಿಕೊಳ್ಳುವ ಅಪರೂಪದ ಅವಕಾಶ!
ಒಳ್ಳೊಳ್ಳೆಯ ಪುಸ್ತಕ ಓದ್ಬೇಕು ಅಂತ ಅಂದ್ಕೋತೀನಿ, ಆದ್ರೆ ಈ ಟ್ರಾಫಿಕ್ಕು, ಆಫೀಸು, ಬಾಸ್ ಕಿರಿಕ್ಕು ಮಧ್ಯೆ ಅದ್ಕೆಲ್ಲ ಟೈಮೇ ಆಗ್ತಿಲ್ಲ ಅಂತ ನಾವೇ ಹೇಳಿರ್ತೀವಿ, ಅಥವಾ ನಮ್ಮ ಗೆಳೆಯರು ಹೇಳಿದ್ದನ್ನು ಕೇಳಿರ್ತೀವಿ.
ಓದೋಕೆ ಮನಸಿದ್ರೂ ಟೈಂ ಸಿಗ್ತಿಲ್ಲ ಅನ್ನೋ ಬೇಸರ, ತುಡಿತ ನೀಗಿಸೋಕೆ ಅಂಥಾನೇ ‘ಮೈ ಆಡಿಯೋ ಬಿಟ್ಸ್‘ ಅನ್ನೋ ಹೊಸದೊಂದು ಆ್ಯಪ್ ಬಂದಿದೆ. ನಿಮಗೇ ಗೊತ್ತು, ಇದು ಓಡುವ ಕಾಲ. ಆದರೆ, ಕಾಲವನ್ನು ತಡೆಯೋರು ಯಾರೂ ಇಲ್ಲ ಅನ್ನೋ ಮಾತಿದೆ.
ಕಾಲಕ್ಕೆ ತಕ್ಕಂತೆ ಜೀವಿಗಳೂ ಕೂಡ ತಮ್ಮನ್ನ ತಾವು ಹೊಂದಾಣಿಕೆ ಮಾಡಿಕೊಂಡಿವೆ. ಇದಕ್ಕೆ ನಾವೂ ಕೂಡ ಹೊರತಲ್ಲ
ಅಲ್ವಾ? ದುಡಿಬೇಕು ನಿಜ ಆದ್ರೆ ಎಷ್ಟು ದಿನ ಅಂತ ಅದ್ರಲ್ಲೇ ಮುಳಗಿ ಹೋಗೋಕೆ ಸಾಧ್ಯ? ಜೀವಕ್ಕೆ ಬೇಸರ ಆದಾಗ ಬೇರೆ
ಬೇರೆ ಆಸಕ್ತಿ, ಹವ್ಯಾಸಗಳು ನಮ್ಮನ್ನು ಆಲಂಗಿಸಿಕೊಂಡರೆ ಜೀವಕ್ಕೊಂದಷ್ಟು ನೆಮ್ಮದಿ. ಅಂತಹ ಹವ್ಯಾಸಗಳಲ್ಲಿ ಪುಸ್ತಕ
ಓದೋದು ಬಹಳಷ್ಟು ಜನರಿಗೆ ಫೇವರಿಟ್.
ಆದರೆ, ‘ರಿಟೈರ್ ಆದ್ಮೇಲೂ ಮನೆಯಲ್ಲಿ ಅರಾಮವಾಗಿ ಕುತ್ಕೋಳೊಕೆ ಆಗ್ದೇ ಇರೋ ಬದಲಾದ ಕಾಲಮಾನ ಇದು. ಇನ್ನೆಲ್ಲಿ ಕುಳಿತು ಪುಸ್ತಕ ಓದೋಕ್ ಟೈಂ ಇದೆ’ ಅನ್ನೋರಿಗಾಗಿಯೇ ಈಗೊಂದು ತಾಣ ಸಿದ್ಧವಾಗಿದೆ. ಓದ್ತೀನಿ ಅಂದ್ರೂ ಆಗ್ಲಿಲ್ಲ ಅಂದ್ರೆ, ಓದೋದನ್ನ ಕೇಳಿಸ್ಕೊಳ್ಳಿ, ಅದಕ್ಕೆ ನಿಮಗೆ ಸುಲಭವಾಗಿ ವ್ಯವಸ್ಥೆಯನ್ನ ಆಸ್ಥೆಯಿಂದ ನಾವು ಮಾಡಿಕೊಡ್ತೀವಿ ಅಂತ ಕನಸು ಹೊತ್ತು ಬಂದಿರೋರು ಕನ್ನಡಿಗರೇ ಆದ, ಸೋಮಶೇಖರ್ ಮುನಿಯಪ್ಪ.
ಮೈ ಆಡಿಯೋ ಬಿಟ್ಸ್ ಅವರದ್ದೇ ಕನಸಿನ ಕೂಸು. ಸೋಮಶೇಖರ್ ಅವರ ಬಗ್ಗೆ ಹೇಳಬೇಕಂದ್ರೆ, ಅವ್ರು ನಮ್ಮ ನಿಮ್ಮಂತೆಯೇ ಕಾಯಕ ಅರಸಿ ಹೋದವರು. ಅಮೆರಿಕದಲ್ಲಿ ದೊಡ್ಡ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ರು. ಕೆಲಸ, ಕಾರ್ಯಗಳೇನೇ ಇದ್ದರೂ ಅವರೊಳಗಿದ್ದ ಸಾಹಿತ್ಯ ಪ್ರೇಮಿ ಮತ್ತು ಓದುಗ, ಪುಸ್ತಕಗಳಿಗಾಗಿ ಭಾರಿ ಹುಟುಕಾಟ ನಡೆಸುತ್ತಿದ್ದ. ಆದರೆ, ಅಮೆರಿಕದಲ್ಲಿ ಎಲ್ಲಿ ಸಿಗಬೇಕು ಕೇಳಿದ ತಕ್ಷಣ ಕನ್ನಡ ಪುಸ್ತಕ? ಸಪ್ತ ಸಾಗರವನ್ನು ದಾಟಿ ಕನ್ನಡ ಪುಸ್ತಕ ಅಲ್ಲಿಗೆ ತಲುಪಬೇಕಾದರೆ ಸಾಕಷ್ಟು ಸಮಯಾವಕಾಶ ಬೇಕು. ಅಲ್ಲಿಯ ತನಕ ಓದುವ ತವಕ, ತುಡಿತವನ್ನು ತಡೆಯುವುದಾದರೂ ಹೇಗೆ! ಹೇಗೋ ಮಾಡಿ ಪುಸ್ತಕ ಕೈಗೆ ಅಪ್ಪಿಕೊಂಡ್ರೂ, ಶಾಂತವಾಗಿ ಕುಳಿತು ಓದಲು ಸಮಯ ಆಗ್ತಿರಲಿಲ್ಲ. ಡ್ರೈವ್ ಮಾಡಬೇಕು ಅಥವಾ
ಟ್ರಾವೆಲ್ ಮಾಡಬೇಕು, ಇನ್ನೇನೋ ಕೆಲಸಗಳು ಬರ್ತಾನೆ ಇರುತ್ತಿದ್ವು.
ಅಜ್ಜಿ ಹೇಳಿದ ಕಥೆಯ ನೆನಪು
ಆಗ ಅವರಿಗೆ ಅನಿಸಿದ್ದು, ಹಿಂದೆ ನಾಗ್ ಚಿಕ್ಕವರಿದ್ದಾಗ ನಮಗೆ ಅಜ್ಜ-ಅಜ್ಜಿ ಕತೆ ಹೇಳ್ತಿದ್ರಲ್ಲ ಹಾಗೆನೇ ಈಗಲೂ ಯಾರಾದ್ರೂ
ಪುಸ್ತಕ ಓದ್ತಾ ಇದ್ರೆ, ನಮ್ಮ ಕೆಲಸದ ಜತೆ ನಾವು ಪುಸ್ತಕ ಓದಿದಂತೆ ಕೂಡ ಆಗತ್ತಲ್ವಾ ಅಂತ ಮಸ್ತಾದ ಐಡಿಯಾ ಒಂದು ಹೊಳೆದಿದೆ. ಎಂಥ ವಂಡರ್ಫುಲ್ ಆಲೋಚನೆ ಅಲ್ವಾ? ಐಡಿಯಾಗಳು ಬಂದಾಗ ಅದನ್ನು ಹಿಡಿದು ನಿಲ್ಲಿಸಿ, ಮತ್ತಷ್ಟು ಯೋಚನೆ ಮಾಡಿ ಹೆಜ್ಜೆ ಇಟ್ರೆ, ಅದೇ ಮುಂದೆ ದೊಡ್ಡ ಹೆಮ್ಮರವಾಗಿ ಬೆಳೆಯುತ್ತೆ.
ಹಾಗೆಯೇ, ತಮಗೆ ಬಂದ ಐಡಿಯಾ ಹಿಂದೆ ಬಿದ್ದ ಸೋಮಶೇಖರ್ ಅವರಿಗೆ, ಅಂತಿಮವಾಗಿ ಅನಿಸಿದ್ದು, ನಾವು ಈವರೆಗೂ ಓದುತ್ತಿದ್ದ ಪುಸ್ತಕಗಳನ್ನು ಇನ್ಮುಂದೆ, ಮಾತನಾಡುವ ಪುಸ್ತಕ ಮಾಡಬೇಕು ಎಂಬ ಆಸೆ, ಕನಸು ಮತ್ತು ಛಲ. ಅದರ ಫಲವೇ ‘ಮೈ
ಆಡಿಯೋ ಬಿಟ್ಸ್’.
ಪುಸ್ತಕ ಕೇಳುವ ಫೀಲ್
ನಿಮಗಿಲ್ಲಿ ವಿಶೇಷ ಅಂದ್ರೆ, ಆಡಿಯೋ ಪುಸ್ತಕಗಳನ್ನು ನೀವು ಕೇಳುವ ದನಿಗಳ ವಿಶೇಷತೆ. ನಿಮಗೆ ಇಷ್ಟವಾಗುವಂಥ, ಸ್ಪಷ್ಟ ಉಚ್ಛಾರಣೆ, ಸಾಲುಗಳಲ್ಲಿನ ಭಾವಾರ್ಥ, ಅದರಲ್ಲಿ ಬೇಕಾದ ಏರಿಳಿತಗಳನ್ನು ಕಂಚಿನ ಕಂಠದಲ್ಲಿ ಕೇಳಿದರೆ, ನೀವೇ ಪುಸ್ತಕ
ಓದಿದಷ್ಟು, ಅದಕ್ಕೂ ಮಿಗಿಲಾಗಿ ನೀವೇ ಪುಸ್ತಕದೊಳಗಿನ ಭಾವದೊಳಗೆ ಬೆರೆತಷ್ಟು ಫೀಲ್ ಖಂಡಿತ ಕೊಡುತ್ತದೆ. ಇದರಲ್ಲಿ ಈಗ ಕನ್ನಡದ ಅನೇಕ ಶ್ರೇಷ್ಠ ಸಾಹಿತ್ಯಗಳು, ಆಡಿಯೋ ಪುಸ್ತಕಗಳು ಮತ್ತು ಹಲವಾರು ಕೇಂದ್ರ ಸಾಹಿತ್ಯ ಅಕಾಡೆಮಿ ವಿಜೇತ ಪುಸ್ತಕಗಳೂ ಲಭ್ಯವಿದೆ.
ಅನಿವಾಸಿ ಭಾರತೀಯರಿಗೂ ಆಡಿಯೋ ಬಿಟ್ಸ್ ಈಗ ಅಚ್ಚುಮೆಚ್ಚು, ಈಗ ಕನ್ನಡ, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳ
ಪುಸ್ತಕಗಳ ಆಡಿಯೋಗಳು ಲಭ್ಯವಿದೆ. ಕ್ರಮೇಣ ಹಿಂದಿ, ತೆಲುಗು, ತಮಿಳು ಮುಂತಾದ ಭಾರತದ ಹಲವು ಭಾಷೆಗಳಲ್ಲಿ ಆಡಿಯೋ ಪುಸ್ತಕಗಳನ್ನು ತರುವ ಯೋಚನೆಯಿದೆ ಎಂಬುದು ಮೈ ಆಡಿಯೋ ಬಿಟ್ಸ್ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸೋಮಶೇಖರ್ ಮುನಿಯಪ್ಪ ಅವರ ವಿಶ್ವಾಸ ತುಂಬಿದ ಮಾತು.
ಅವರ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹವೂ ಜತೆಯಾಗಲಿ. ಪುಸ್ತಕ ಓದುವ, ಕೇಳುವ ಸಂತತಿ ಸಮೃದ್ಧಿಯಾಗಲಿ. ಪುಸ್ತಕವನ್ನು ಓದುವ ಅನುಭವ ಚಂದವೇ, ಎರಡು ಮಾತಿಲ್ಲ. ಅದರ ಜತೆಯಲ್ಲೇ, ಪುಸ್ತಕವನ್ನು ಸೊಗಸಾದ ಧ್ವನಿಯಲ್ಲಿ ಕೇಳುವ ಅನುಭವದ ಸವಿಯನ್ನು ಸಹ ಸವಿಯುವ ಅವಕಾಶ ನಿಮ್ಮದಾಗಲಿ.
ಕೇಳಿ ಪುಸ್ತಕ ಪ್ರೇಮಿಗಳೇ…
*ರಿಜಿಸ್ಟರ್ ಆದ ಗ್ರಾಹಕರಿಗೆ ಮೊದಲ ಏಳು ದಿನ ಎಲ್ಲ ಆಡಿಯೋ ಪುಸ್ತಕಗಳನ್ನು ಪೂರ್ತಿ ಉಚಿತವಾಗಿ ಕೇಳುವ ಅವಕಾಶ.
*ಮೈ ಆಡಿಯೋ ಬಿಟ್ಸ್ನಲ್ಲಿ ಚಂದಾದಾರರು ನೀವಾಗ್ಬೇಕು, ಇನ್ನಷ್ಟು ವಿಷಯ ತಿಳೀಬೇಕು ಅನಿಸಿದ್ರೆ web.myaudiobits.com ವಿಸಿಟ್ ಮಾಡಿ.
*ಮೈ ಆಡಿಯೋ ಬಿಟ್ಸ್ ನಿಮಗೆ ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಆ್ಯಪ್ ಸ್ಟೋರ್ನಲ್ಲೂ ಲಭ್ಯ.