ಬೇಲೂರು ರಾಮಮೂರ್ತಿ
ಅಂದು ಗುರುಕುಲದಲ್ಲಿ ಗುರುಗಳ ಹುಟ್ಟಿದ ಹಬ್ಬದ ವಿಶೇಷವಾಗಿ ಶಿಷ್ಯರಿಗೆ ಊಟದ ವ್ಯವಸ್ಥೆ ಇತ್ತು. ಗುರುಗಳಿಂದ ವಿಶೇಷ
ಪೂಜೆ, ಉಪನ್ಯಾಸ ಇದ್ದವು. ಉಪನ್ಯಾಸ ಕೇಳುತ್ತ ಕುಳಿತಿದ್ದ ಶಿಷ್ಯರಿಗೆ ಅಡಿಗೆ ಮನೆಯಿಂದ ಬರುತ್ತಿದ್ದ ಘಮ ಘಮ ವಾಸನೆ ಬಹಳ
ಹಿತಕರವಾಗಿತ್ತು. ಶಿಷ್ಯರ ಈ ಮನೋಭಾವ ಗುರುಗಳಿಗೂ ಗೊತ್ತಾಗಿತ್ತು.
ಅಂದು ಗುರುಗಳೇ ಎಲ್ಲ ಶಿಷ್ಯರಿಗೂ ಆದರದಿಂದ ಊಟ ಬಡಿಸಿ ‘ನಿಮ್ಮ ಹೊಟ್ಟೆ ತೃಪ್ತಿ ಪಡುವುದಕ್ಕಿಂತ ನಿಮ್ಮ ಮನಸ್ಸು ಸಂತೃಪ್ತಿ ಪಡುವುದು ಮುಖ್ಯ’ ಎಂದರು. ನಮ್ಮ ಊಟ ಹೇಗಿರಬೇಕು ಎನ್ನುವುದಕ್ಕೆ ಗುರುಗಳು ಶಿಷ್ಯರಿಗೆ ಒಂದು ಕಥೆಯನ್ನು ಹೇಳಿದರು. ಒಂದೂರಿನಲ್ಲಿ ಒಬ್ಬ ಮಧ್ಯಮ ವರ್ಗದ ಮನುಷ್ಯ ಇದ್ದನು.
ಅವನು ಬಹಳ ಕಷ್ಟಪಟ್ಟು ಜೀವನ ನಡೆಸುತ್ತಿದ್ದ. ಆತನಿಗೆ ಇಬ್ಬರು ಮಕ್ಕಳು. ಅವನು ಊಟಕ್ಕೆ ಕೂತಾಗ, ಹೆಂಡತಿ ತಟ್ಟೆಗೆ ಬಡಿಸಿದ ಅನ್ನವನ್ನು ಇನ್ನೊಂದು ತಟ್ಟೆಗೆ ತೆಗೆದಿಟ್ಟು ‘ಇದು ನನ್ನ ನಾಳೆಯ ಊಟಕ್ಕೆ’ ಅಂದನಂತೆ. ಹೆಂಡತಿಗೆ ಅಚ್ಚರಿಯಾಗಿತ್ತು. ‘ಇದೇನ್ರೀ ಇವತ್ತಿನ ಊಟ ನಾಳೆ ಅಂತೀರ’ ಅಂತ ಕೇಳಿದಳು. ಅದಕ್ಕೆ ಗೃಹಸ್ಥ ‘ನಾನು ಇವತ್ತಿನ ಊಟ ಮಾಡುವ ಮೊದಲು
ನಾಳೆಯ ಊಟವನ್ನು ಮಾಡುತ್ತೇನೆ ಎಂದು ತಟ್ಟೆಯಲ್ಲಿ ತೆಗೆದಿಟ್ಟಿದ್ದ ಅನ್ನವನ್ನು ಹೊರಗೆ ತೆಗೆದುಕೊಂಡು ಹೋಗಿ ದಾರಿಯಲ್ಲಿ ಬರುತ್ತಿದ್ದ ಭಿಕ್ಷುಕನಿಗೆ ನೀಡಿದ.
ಭಿಕ್ಷುಕ ಬಾರದ ದಿನ ನಾಯಿಗಳನ್ನು ಕರೆದು ಅನ್ನ ಹಾಕುತ್ತಿದ್ದ. ನಂತರ ಒಳಗೆ ಬಂದು ‘ಹಾ. ಈಗ ನನಗೆ ಇವತ್ತಿನ ಊಟ ಬಡಿಸು’ ಎನ್ನುತ್ತಿದ್ದ. ನಂತರ ಅವನು ‘ನೋಡು ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಎನ್ನುವ ಗಾದೆ ಮಾತಿದೆ. ನಾವು ಇವತ್ತು ಯಾರಿಗೆ ಏನನ್ನು ಕೊಡುತ್ತೇವೋ ಅದು ನಾಳೆ ನಮಗೆ ಸಿಗುತ್ತದೆ. ಇದು ಒಳ್ಳೆಯ ದಾಗಿರಬಹುದು, ಕೆಟ್ಟದಾಗಿರಬಹುದು, ಅನ್ನವಾಗಿರ ಬಹುದು, ಹಣವಾಗಿರಬಹುದು. ಆದ್ದರಿಂದ ನಮ್ಮ ನಾಳಿನ ಬದುಕು ಸುಂದರವಾಗಿ, ಸುಖವಾಗಿ, ಸಂತೋಷವಾಗಿ ಇರಬೇಕೆಂದರೆ ನಾವು ಇತರರನ್ನೂ ಚೆನ್ನಾಗಿರಲು ಬಿಡಬೇಕು.
ಇವತ್ತು ನಾನು ತಿಂದು ಹೊಟ್ಟೆ ತುಂಬಿಸಿಕೊಂಡರೆ ನನ್ನ ಹೊಟ್ಟೆಯ ಚಿಂತೆ ಮುಗೀತು. ಆದರೆ ಇನ್ನೊಂದು ಹೊಟ್ಟೆಯ ಚಿಂತೆ ಯನ್ನು ಹಂಚಿಕೊಳ್ಳುವಂತಾದರೆ ಎಷ್ಟು ಚೆನ್ನ. ಪ್ರಪಂಚದಲ್ಲಿ ಒಂದು ತುಂಬಿದ ಹೊಟ್ಟೆ ಇನ್ನೊಂದು ಹಸಿದ ಹೊಟ್ಟೆಯನ್ನು ನೋಡಿಕೊಂಡರೆ ಪ್ರಪಂಚದಲ್ಲಿ ಹಸಿವು ಎನ್ನುವುದೇ ಇರೋದಿಲ್ಲ’ ಅಂದನಂತೆ. ಅಂದಿನಿಂದ ಆ ಮನೆಯಲ್ಲಿ ಎಲ್ಲರೂ ತಮ್ಮ
ಊಟದ ಮೊದಲು ಒಂದಿಷ್ಟು ಅನ್ನವನ್ನು ತೆಗೆದಿಟ್ಟು ಅದನ್ನು ಭಿಕ್ಷುಕರಿಗೋ ನಾಯಿಗೋ ಹಾಕಿ ಬಂದು ನಂತರ ತಮ್ಮ ಊಟ
ಮಾಡುತ್ತಿದ್ದರಂತೆ.
ಕಥೆ ಮುಗಿಸಿದ ಗುರುಗಳು ‘ನಮ್ಮ ಇಂದಿನ ಊಟ ಚೆನ್ನಾಗಿದೆ ಎಂದರೆ ನೆನ್ನೆಯ ಊಟವೂ ಚೆನ್ನಾಗಿದ್ದಿರಬೇಕು. ಹಾಗೆ ನಮ್ಮ ನಾಳೆಯ ಊಟ ಚೆನ್ನಾಗಿರಬೇಕು ಎಂದರೆ ಇವತ್ತಿನ ಊಟವೂ ಚೆನ್ನಾಗಿರಬೇಕು. ಹೀಗಾಗಿ ನೀವು ನಿಮ್ಮ ಹೊಟ್ಟೆಯ ಹಸಿವನ್ನು ನೋಡಿಕೊಳ್ಳುವುದರ ಜತೆ, ಇನ್ನೊಂದು ಹೊಟ್ಟೆಯ ಹಸಿವನ್ನೂ ಇಂದೇ ಇಂಗಿಸುವ ಮನಸ್ಸು ಮಾಡಬೇಕು. ಆಗ ನಮ್ಮ ನಾಳಿನ ಊಟ ನಿಜಕ್ಕೂ ಸಂತೃಪ್ತಿಯಿಂದ ಕೂಡಿರುತ್ತದೆ’ ಎಂದರು.