ಸುರೇಶ ಗುದಗನವರ
ನಮ್ಮ ದೇಶದ ಹೆಮ್ಮೆ ಎನಿಸಿದ ರೈಲುಗಳನ್ನು ಮಹಿಳೆಯೊಬ್ಬರು ಚಲಾಯಿಸಲು 1988ರ ತನಕ ಕಾಯಬೇಕಾಯಿತು!
ಭಾರತೀಯ ರೈಲ್ವೆಯಲ್ಲಿ ಹಲವು ದಾಖಲೆಗಳಿವೆ. ಆದರೆ, ರೈಲು ಚಾಲನೆಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಅಲ್ಲಿ ಪ್ರವೇಶ
ದೊರೆತದ್ದು ಬಹು ವಿಳಂಬವಾಗಿ. ಬ್ರಿಟಿಷರ ಕಾಲದಲ್ಲಿ ಮಹಿಳೆ ಯರು ರೈಲು ಚಾಲನೆ ಮಾಡುವಂತಿರಲಿಲ್ಲ.
ಭಾರತೀಯ ರೇಲ್ವೆಯಲ್ಲಿ ಮೊದಲ ಮಹಿಳಾ ರೈಲು ಚಾಲಕರಾಗಿ ಗುರುತಿಸಿ ಕೊಂಡವರು ಸುರೇಖಾ ಶಂಕರ ಯಾದವ. ಅವರು 1988ರಲ್ಲಿ ಮೊದಲ ರೈಲು ಚಾಲನೆಯನ್ನು ನಡೆಸಿ ಪುರುಷರಿಗೆ ಮೀಸಿಲಿದ್ದ ಈ ಕ್ಷೇತ್ರದಲ್ಲಿ ತಮ್ಮ ಹೆಜ್ಜೆ ಗುರುತನ್ನು ದಾಖಲಿಸಿದರು. ಮಹಾರಾಷ್ಟ್ರದ ಸತಾರಾ ರೈತ ಕುಟುಂಬ ವೊಂದರಲ್ಲಿ ಸೆಪ್ಟೆಂಬರ್ 2, 1965ರಂದು ಸುರೇಖಾ ಜನಿಸಿದರು. ಅವರ ತಂದೆ ರಾಮಚಂದ್ರ ಭೋಸಲೆ, ತಾಯಿ ಸೋನಾಬಾಯಿ.
ಸುರೇಖಾ ಐದು ಮಕ್ಕಳಲ್ಲಿ ಹಿರಿಯರು. ಅವರು ಸೇಂಟ್ ಪಾಲ್ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಮುಗಿಸಿ ಕರಾಡದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎಲೆಕ್ಟಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ಪಡೆದರು. ಸುರೇಖಾ ಭಾರತೀಯ ರೇಲ್ವೆ ಇಲಾಖೆಯ ಸಹಾಯಕ ಚಾಲಕ ಹುದ್ದೆಗಾಗಿ, 1986ರಲ್ಲಿ ಲಿಖಿತ ಪರೀಕ್ಷೆಗೆ ಹಾಜರಾ ದರು. ಅಂದಿನ ಲಿಖಿತ ಮತ್ತು ಸಂದರ್ಶನ ಪರೀಕ್ಷೆಗಳಲ್ಲಿ ಇವರೊಬ್ಬರೇ ಮಹಿಳೆಯಾಗಿದ್ದರು.
ಸುರೇಖಾ ಚಾಲಕರಾಗಿ ಆಯ್ಕೆಯಾದರು. ಆದರೆ ರೇಲ್ವೆ ಇಲಾಖೆಯ ಕೆಲವು ಅಽಕಾರಿಗಳು ಇವರ ಆಯ್ಕೆ ಮಾಡಲು ತುಸು ಹಿಂಜರಿದರು. ಮಹಿಳೆಯು ಇಂತಹ ಜವಾಬ್ದಾರಿ ಹೊರಲು ಸಾಧ್ಯವೆ ಎಂಬ ಪುರುಷಪ್ರಧಾನ ಚಿಂತನೆಯೇ ಇದಕ್ಕೆ ಕಾರಣ ಎನಿಸಿತ್ತು. ಆದರೆ ಸುರೇಖಾ ಆಯ್ಕೆಯಾದರು. ಸುರೇಖಾ ಕಲ್ಯಾಣದ ತರಬೇತಿ ಶಾಲೆಯಿಂದ ರೈಲು ಚಾಲನೆಯಲ್ಲಿ ಆರು ತಿಂಗಳ ವರೆಗೆ ತರಬೇತಿ ಪೂರ್ಣಗೊಳಿಸಿದರು. 1989ರಲ್ಲಿ ಅವರು ಪೂರ್ಣ ಪ್ರಮಾಣದ ರೈಲು ಚಾಲಕಿಯಾಗಿ ಹೊರಹೊಮ್ಮಿದರು. ಮೊದಲು ಸುರೇಖಾರವರಿಗೆ ಗೂಡ್ಸ್ ರೈಲು ಓಡಿಸಲು ಅನುಮತಿ ನೀಡಲಾಯಿತು.
1998ರಲ್ಲಿ ಅವರು ಪೂರ್ಣಪ್ರಮಾಣದ ಸರಕು ರೈಲು ಚಾಲಕಿಯಾದರು. 2000ರಲ್ಲಿ ಸುರೇಖಾರವರು ಮುಂಬೈಯಲ್ಲಿ
ಮೊದಲ ‘ಮಹಿಳಾ ವಿಶೇಷ’ ರೈಲನ್ನು ಓಡಿಸಿದರು. ಅವರು ಮಾರ್ಚ್ 8, 2011 ರಂದು, ಅಂದರೆ ಮಹಿಳಾ ದಿನದಂದು, ಪ್ರತಿಷ್ಠಿತ ಪ್ರಯಾಣಿಕರ ರೈಲು ಎನಿಸಿರುವ ಡೆಕ್ಕನ್ ರಾಣಿಯನ್ನು ಪುಣೆಯಿಂದ ಸಿಎಸ್ಟಿ ಮುಂಬೈವರೆಗೂ ಓಡಿಸಿ, ದಾಖಲೆ ಬರೆದರು. ಅಂದು ಅವರನ್ನು ಮುಂಬಯಿಯ ಮೇಯರ್ ರೈಲು ನಿಲ್ದಾಣಕ್ಕೆ ಬಂದು ಅಭಿನಂದಿಸಿದ್ದರು! 2011ರಿಂದ ಅವರು ಮೈಲ್, ಎಕ್ಸ್‌ಪ್ರೆಸ್ ರೈಲು ಓಡಿಸುವ ದರ್ಜೆಗೆ ಪದೋನ್ನತಿ ಹೊಂದಿದರು. ಅಲ್ಲದೇ ಅವರು ಪಶ್ಚಿಮ ಘಟ್ಟದ ದಾರಿಗಳಲ್ಲಿ ರೈಲು ಚಲಾಯಿಸಿ ಪುರುಷರಿಗೆ ಸಮಾನ ವಾಗಿ ವೃತ್ತಿನಿರ್ವಹಿಸಿದ್ದಾರೆ.
ಲೋಕಲ್ ಹೀರೋ
ಮಹಿಳೆಯೊಬ್ಬರು ಈ ರೀತಿ ಪ್ರಯಾಣಿಕರ ರೈಲುಗಳನ್ನು ಓಡಿಸುವುದನ್ನು ಕಂಡು ಜನರಿಗೆ ಬಹು ಸಂತಸ, ಅಭಿಮಾನ! ಇವರು ರೈಲು ಚಲಿಸಿಕೊಂಡು ಬಂದು ಇಳಿದಾಗ, ಅಭಿಮಾನ ದಿಂದ ಇವರ ಹಸ್ತಾಕ್ಷರವನ್ನು ಪಡೆಯುತ್ತಿದ್ದರು. ಸುರೇಖಾರವರು ನಿರಂತರವಾಗಿ ಮುಂಬಯಿ ಉಪನಗರ ರೈಲುಗಳು, ಮೇಲ್ ಎಕ್ಸ್‌ಪ್ರೇಸ್ ರೈಲುಗಳನ್ನು ಓಡಿಸಿದ್ದಾರೆ.
ಅವರು ದಿನಕ್ಕೆ ಹತ್ತು ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಅವರು ಚಲಿಸಿದ ಯಾವುದೇ ರೈಲು ಅಪಘಾತಕ್ಕೆ ಒಳಗಾಗದೇ ಇರುವುದರಿಂದ, ಆ ವೈಯಕ್ತಿಕ ದಾಖಲೆಯನ್ನು ಸಹ ಹೊಂದಿದ್ದಾರೆ. ಸಧ್ಯ ಸುರೇಖಾರವರು ಕಲ್ಯಾಣದ ಚಾಲಕರ ತರಬೇತಿ
ಕೇಂದ್ರದಲ್ಲಿ ಹಿರಿಯ ಬೋಧಕರಾಗಿ ತರಬೇತಿ ನೀಡುತ್ತಿದ್ದಾರೆ. ಅವರ ಪತಿ ಶಂಕರ ಯಾದವ ಮಹಾರಾಷ್ಟ್ರ ಪೋಲಿಸ್ ಇಲಾಖೆ ಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ರೇಲ್ವೆ ಇಲಾಖೆಯಲ್ಲಿ 1500ಕ್ಕೂ ಹೆಚ್ಚು ಮಹಿಳೆಯರು ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ರೈಲು ಚಾಲಕಿಯಾದ ಸುರೇಖಾರವರು, ಇಷ್ಟೊಂದು ಮಹಿಳೆಯರಿಗೆ ಸ್ಫೂರ್ತಿ ತುಂಬಿದರು ಎಂದರೆ ಅತಿಶಯೋಕ್ತಿಯಲ್ಲ.
***
ನೀವು ಯಾವುದಾದರೂ ವಿಷಯದ ಬಗ್ಗೆ ಆಸಕ್ತಿ ಹೊಂದಿದ್ದರೆ, ಹಿಂಜರಿಯಬೇಡಿ, ಧೈರ್ಯವಾಗಿ ಮುನ್ನುಗ್ಗಿ. ನಿಮ್ಮ ಸಾಮರ್ಥ್ಯ, ಜ್ಞಾನ, ಪ್ರಯತ್ನಗಳಿಂದ ನೀವು ಏನು ಬೇಕಾದರೂ ಸಾಧಿಸಬಹುದು. ನಾಚಿಕೆ ಸ್ವಭಾವದ ಮಹಿಳೆಯರನ್ನು ಜಗತ್ತು ಪ್ರೋತ್ಸಾಹಿ ಸುವುದಿಲ್ಲ.
– ಸುರೇಖಾ ಯಾದವ್