Wednesday, 14th May 2025

ಕೋವಿಡ್‌ ಲಸಿಕೆ ನೋಂದಣಿಗೆ App ಸಮಸ್ಯೆ

ಅಜಯ್ ಅಂಚೆಪಾಳ್ಯ

ಕೋವಿಡ್ 19 ತಡೆಯಲು ಆ್ಯಪ್ ಮೂಲಕ ಲಸಿಕೆಗಾಗಿ ನೋಂದಣಿಯ ಕಾರ್ಯ ಎಲ್ಲೆಡೆ ನಡೆಯುತ್ತಿದೆ.

ವ್ಯಕ್ತಿಯ ವಯಸ್ಸು, ಈಗಾಗಲೇ ಇರುವ ಆರೋಗ್ಯ ಸಮಸ್ಯೆೆ ಮೊದಲಾದವುಗಳನ್ನು ಅವಲಂಬಿಸಿ, ಎಷ್ಟು ಬೇಗ ಲಸಿಕೆ
ದೊರೆಯುವುದು ಎಂಬ ಕಾತರ ಜನರದ್ದು. ಈ ನಡುವೆ ಹೆಸರನ್ನು ನೋಂದಾಯಿಸಲು ಹೊರಟ ಕೆಲವರಿಗೆ ಆ್ಯಪ್‌ನಲ್ಲಿ ದೋಷಗಳು, ವಿಳಂಬ ಅಥವಾ ‘ಕೇಳಿದ ಸೌಲಭ್ಯ ಇನ್ನೂ ಲಭ್ಯವಿಲ್ಲ’ ಎಂಬ ಸಂದೇಶಗಳೂ ಬಂದಿದ್ದು, ಸಣ್ಣ ಮಟ್ಟದ ಆತಂಕವೂ ಸೃಷ್ಟಿಯಾಗಿದೆ.

ದೂರದ ಅಮೆರಿಕಾದಲ್ಲೂ ಇಂತಹ ಆ್ಯಪ್ ಸಾಕಷ್ಟು ಗೊಂದಲು ಹುಟ್ಟಿಸಿದೆ. ತಂತ್ರಜ್ಞಾನದಲ್ಲಿ ಮುಂದುವರಿದಿರುವ ಅಮೆರಿಕ ದಲ್ಲಿ ಇಂತಹ ಗೊಂದಲ ಹುಟ್ಟಿದ್ದು ಅಲ್ಲಿನವರಿಗೆ ಮುಜುಗರದ ವಿಷಯವಾದರೆ, ಅಲ್ಲಿನ ಮೈಕ್ರೊಸಾಫ್ಟ್‌ ಸಂಸ್ಥೆಗೆ ಇಕ್ಕಟ್ಟಿನ ಸನ್ನಿವೇಶವನ್ನು ಸೃಷ್ಟಿಸಿದೆ. ಏಕೆಂದರೆ, ಕಳೆದ ಕೆಲವು ವರ್ಷಗಳಿಂದ ಆರೋಗ್ಯ ಸೇವೆಗಳಲ್ಲಿ ತೊಡಗಿಸಿಕೊಂಡಿರುವ  ಮೈಕ್ರೊ ಸಾಫ್ಟ್‌ ಅಭಿವೃದ್ಧಿಪಡಿಸಿರುವ ಆ್ಯಪ್ ಈಗ ಸರಿಯಾಗಿ ಕೆಲಸ ಮಾಡುತ್ತಿಲ್ಲ!

ಅಮೆರಿಕದ ಕೊಲಂಬಿಯಾದಲ್ಲಿ ಲಸಿಕೆ ಪಡೆಯಲು ಆನ್‌ಲೈನ್ ನೋಂದಣಿ ಕಾರ್ಯಕ್ರಮ ಕಳೆದ ನಾಲ್ಕು ದಿನಗಳಿಂದ ಭರ ದಿಂದ ಸಾಗಿದೆ. ಹಲವರಿಗೆ ಆ್ಯಪ್ ಸಮಸ್ಯೆ ಎನಿಸಿದೆ. ಉದಾಹರಣೆಗೆ, ಆಡಮ್ ಎಂಬುವವರು ನಲವತ್ತು ನಿಮಿಷಗಳ ಕಾಲ ಆ ಆ್ಯಪ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಲು ಪ್ರಯತ್ನ ನಡೆಸಿದರು. ನಾನಾ ರೀತಿಯ ತೊಡಕು, ವಿಳಂಬಗಳ ನಂತರ, ಆ್ಯಪ್ ಕ್ರಾಶ್ ಆಯಿತು. ಆ ವ್ಯಕ್ತಿಗೆ ಅಸ್ತಮಾ ಇದೆ. ಇಂತಹ ಸಮಸ್ಯೆ ಇರುವವರಿಗೆ ಬೇಗ ಲಸಿಕೆ ಸಿಗುತ್ತದೆ ಎಂಬ ವಿಷಯ ತಿಳಿದ ಅವರು, ವೆಬ್‌ಸೈಟ್‌ನಲ್ಲಿ ತಮ್ಮ ವಿವರಗಳನ್ನು ದಾಖಲಿಸಲು ತೊಡಗಿದಾಗ ಕ್ಯಾಪ್‌ಚಾ ಸಮಸ್ಯೆಗಳೆ ಮೊದಲಾದ ಹಲವು ಸಮಸ್ಯೆಗಳು ತೋರಿ, ಹೆಸರನ್ನು ನೋಂದಾಯಿಸಲು ಅವರಿಂದ ಸಾಧ್ಯವಾಗಿಲ್ಲ.

ಈ ಸಮಸ್ಯೆಯನ್ನು ಅಧಿಕೃತವಾಗಿ ಗುರುತಿಸಿರುವ ಅಮೆರಿಕದ ಸರಕಾರಿ ಇಲಾಖೆಗಳು ವಿಷಾದ ವ್ಯಕ್ತಪಡಿಸಿವೆ. ‘ವೆಬ್‌ಸೈಟ್‌ನಲ್ಲಿ ಲಸಿಕೆ ಪಡೆಯಲು ತಮ್ಮ ಹೆಸರನ್ನು ನೋಂದಾಯಿಸಲು ಪ್ರಯತ್ನಿಸುತ್ತಿರುವ ವ್ಯಕ್ತಿಗಳು ಸಕಾಲದಲ್ಲಿ ನೋಂದಾಯಿಸಲು ಆಗುತ್ತಿಲ್ಲ. ತಾಂತ್ರಿಕ ದೋಷಗಳ ಕುರಿತು ಮೈಕ್ರೊಸಾಫ್ಟ್‌ ಸಂಸ್ಥೆಯ ಜತೆ ನಾವು ಸಂಪರ್ಕದಲ್ಲಿದ್ದು, ಯಾಕೆ ಈ ರೀತಿಯ
ತೊಂದರೆ ಉಂಟಾಗಿದೆ ಎಂದು ಪರಿಶೀಲಿಸುತ್ತಿದ್ದೇವೆ’ ಎಂದು ಅಲ್ಲಿನ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.

ಯುಎಸ್‌ಎ ನಂತಹ ಮುಂದುವರಿದ ದೇಶದಲ್ಲಿ ಇಂತಹ ಸಮಸ್ಯೆಗಳಾ ಎಂಬ ಅಚ್ಚರಿ ಇತರ ದೇಶಗಳದ್ದು! ಮೈಕ್ರೊಸಾಫ್ಟ್‌ ಸಂಸ್ಥೆಗೆ ಇದರಿಂದ ಮುಜುಗರ ಮಾತ್ರವಲ್ಲ, ಸಣ್ಣಮಟ್ಟದ ಹಿನ್ನಡೆಯೂ ಆಗಿದೆ. ಅಮೆರಿಕದ ಅಯೋವಾದ ಗವರ್ನರ್ ಹೇಳಿಕೆ ನೀಡಿ, ಮೈಕ್ರೊಸಾಫ್ಟ್‌ ಜತೆಗಿನ ತಮ್ಮ ರಾಜ್ಯದ ಒಪ್ಪಂದವನ್ನು ರದ್ದು ಮಾಡಲಾಗಿದ್ದು, ಇದಕ್ಕೆ ಸಾಫ್ಟ್ ‌‌ವೇರ್‌ನಲ್ಲಿರುವ ತೊಡಕು ಗಳೇ ಕಾರಣ ಎಂದಿದ್ದಾರೆ.

ಕಳೆದ ವಾರ ನೋಂದಣಿ ಮಾಡಲು ಯತ್ನಿಸಿದ ನ್ಯೂಜೆರ್ಸಿಯ ಕೆಲವು ನಾಗರಿಕರಿಗೂ ಇಂತಹದ್ದೇ ಸಮಸ್ಯೆಗಳು ಉಂಟಾಗಿವೆ ಎಂಬ ವರದಿಗಳಿವೆ.

Leave a Reply

Your email address will not be published. Required fields are marked *