Friday, 16th May 2025

ವಿದೇಶದಲ್ಲೂ ಅಬ್ಬರಿಸಲಿದೆ ವಿಕ್ರಾಂತ್ ರೋಣ

ವಿಕ್ರಾಂತ್ ರೋಣ ಥ್ರಿಲ್ಲರ್ ಮಿಸ್ಟರಿ, ಸಸ್ಪೆನ್ಸ್, ಸಾಹಸ ಪ್ರಧಾನ ಕಥೆಯ ಚಿತ್ರ. ಅದಕ್ಕೂ ಮಿಗಿಲಾಗಿ ಕಿಚ್ಚ ಸುದೀಪ್ ಚಿತ್ರದಲ್ಲಿ ನಟಿಸಿದ್ದಾರೆ ಎಂಬುದೇ ವಿಕ್ರಾಂತ್ ರೋಣನ ಬಗ್ಗೆ ಕುತೂಹಲ ಇಮ್ಮಡಿಗೊಳ್ಳಲು ಮತ್ತೊಂದು ಕಾರಣ. ಜತೆಗೆ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ ಕಿಚ್ಚನನ್ನು ಕಣ್ತುಂಬಿಕೊಳ್ಳಲು ಸಿನಿಪ್ರಿಯರು
ಕಾದು ಕುಳಿತಿದ್ದಾರೆ.

ಕಿಚ್ಚ ಸುದೀಪ್ ನಟಿಸಿರುವ ವಿಕ್ರಾಂತ್ ರೋಣ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಗಳು ಭರದಿಂದ ಸಾಗಿವೆ. ಈ ಹಿಂದೆಯೇ ಬಹುತೇಕ ಶೂಟಿಂಗ್ ಮುಗಿಸಿದ್ದ ಚಿತ್ರತಂಡ, ಒಂದು ಹಾಡಿನ ಚಿತ್ರೀಕರಣ ವನ್ನು ಮಾತ್ರ ಬಾಕಿ ಉಳಿಸಿಕೊಂಡಿತ್ತು.

ಜಾಕ್ವೆಲಿನ್ ಫೆರ್ನಾಂಡಿಸ್ ಈ ಹಾಡಿಗೆ ಹೆಜ್ಜೆ ಹಾಕುವುದು ಈ ಹಿಂದೆಯೇ ನಿರ್ಧಾರವಾಗಿತ್ತು. ಅಷ್ಟೊತ್ತಿಗೆ ಲಾಕ್ ಡೌನ್ ಆದ್ದರಿಂದ ಜಾಕ್ವೆಲಿನ್‌ಗಾಗಿ ಚಿತ್ರತಂಡ ಕಾದುಕುಳಿತಿತ್ತು. ಅಂತು ಎಲ್ಲವೂ ಸಹಜ ಸ್ಥಿತಿಗೆ ಬಂದ ಬಳಿಕ ಚಿತ್ರೀಕರಣಕ್ಕೆ ಅನುಮತಿ ದೊರೆತಿದ್ದು, ಜಾಕ್ವೆಲಿನ್ ಕೂಡ ಚಿತ್ರತಂಡ ಸೇರಿದರು. ಈಗ ಹಾಡಿನ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದೆ ಚಿತ್ರತಂಡ. ವಿಕ್ರಾಂತ್ ರೋಣ ಯಾವಾಗ ತೆರೆಗೆ ಬರಲಿದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿದೆ. ಇದಕ್ಕೆ ಶೀಘ್ರ ದಲ್ಲಿಯೇ ಉತ್ತರವೂ ಸಿಗಲಿದೆ.

ಬಹುಭಾಷೆಗಳಲ್ಲಿ ವಿಕ್ರಾಂತ್ ರೋಣ

ವಿಕ್ರಾಂತ್ ರೋಣ ಪ್ಯಾನ್ ಇಂಡಿಯಾ ಸಿನಿಮಾ. ಹಾಗಂತ ಐದು ಭಾಷೆಗಳಿಗೆ ಸೀಮಿತವಾಗಿಲ್ಲ ಸುಮಾರು 15 ಭಾರತೀಯ ಭಾಷೆಗಳು ಸೇರಿದಂತೆ ವಿದೇಶಿ ಭಾಷೆಗಳಲ್ಲೂ ಚಿತ್ರ ಮೂಡಿಬರಲಿದೆ. ಹಾಗಾಗಿ ವಿಕ್ರಾಂತ್ ರೋಣ ವಿದೇಶದಲ್ಲೂ ಅಬ್ಬರಿಸಲು ಸಿದ್ಧವಾಗುತ್ತಿದೆ. ಮಾತಿನ ಮನೆಯಲ್ಲಿರುವ ವಿಕ್ರಾಂತ್ ರೋಣ ಕನ್ನಡದ ಡಬ್ಬಿಂಗ್ ಕೆಲಸಗಳನ್ನು ಮುಗಿಸಿದ್ದು, ವಿಎಫ್ಎಕ್ಸ್ ಕೆಲಸಗಳಲ್ಲಿ ಬ್ಯುಸಿಯಾಗಿದೆ. ಬಳಿಕ ಬೇರೆ ಭಾಷೆಗಳ ಡಬ್ಬಿಂಗ್ ಕಾರ್ಯ ಆರಂಭಿಸಲಿದೆ.

ಈ ವರ್ಷವೇ ತೆರೆಗೆ 
ಫಸ್ಟ್‌ಲುಕ್, ಪೋಸ್ಟರ್ ಮೂಲಕವೇ ಕುತೂಹಲ ಕೆರಳಿಸಿದ್ದ ವಿಕ್ರಾಂತ್ ರೋಣನನ್ನು, ಆಗಸ್ಟ್ 19ಕ್ಕೆ ತೆರೆಗೆ ತರಲು ಚಿತ್ರತಂಡ ನಿರ್ಧರಿಸಿತ್ತು. ಆದರೆ ಈಗ
ಪರಿಸ್ಥಿತಿ ಭಿನ್ನವಾಗಿರುವುದರಿಂದ ಚಿತ್ರದ ಬಿಡುಗಡೆಯ ದಿನಾಂಕ ಮೊದಲೇ ನಿರ್ಧರಿಸುವುದು ಕಷ್ಟ ಎನ್ನುತ್ತಿದೆ ಚಿತ್ರತಂಡ. ಸಾಲು ಸಾಲು ಸ್ಟಾರ್ ಚಿತ್ರಗಳು ಕೂಡ ತೆರೆಗೆ ಬರಲು ಸಿದ್ಧವಾಗಿವೆ. ಆ ಚಿತ್ರಗಳ ಬಿಡುಗಡೆ ದಿನಾಂಕಗಳನ್ನು ಗಮನದಲ್ಲಿರಿಸಿಕೊಂಡು ಬಳಿಕ ವಿಕ್ರಾಂತ್ ರೋಣನ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗುವುದು ಎನ್ನುತ್ತಾರೆ ನಿರ್ದೇಶಕರು.

ಪ್ರಮುಖ ಪಾತ್ರದಲ್ಲಿ ಜಾಕ್ವೆಲಿನ್
ಈ ಮೊದಲು ಚಿತ್ರದ ಹಾಡೊಂದರಲ್ಲಿ ಮಾತ್ರ ಜಾಕ್ವೆಲಿನ್ ಹೆಜ್ಜೆ ಹಾಕಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಈಗ ಪ್ರಮುಖ ಪಾತ್ರದಲ್ಲಿಯೂ ಜಾಕ್ವೆಲಿನ್ ನಟಿಸಿರು ವುದು ಖಚಿತವಾಗಿದೆ. ವಿಕ್ರಾಂತ್ ರೋಣ ಚಿತ್ರದಲ್ಲಿ ಜಾಕ್ವೆಲಿನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಜಾಕ್ವೆಲಿನ್ ಪಾತ್ರ ಯಾವುದು ಎಂಬ ಗುಟ್ಟನ್ನು ಚಿತ್ರತಂಡ ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ಜಾಕ್ವೆಲಿನ್ ಪಾತ್ರವನ್ನು ಬಹಿರಂಗ ಪಡಿಸುವುದಾಗಿ ನಿರ್ದೇಶಕರು ಹೇಳು ತ್ತಾರೆ.

ಪ್ರಪಂಚದ ಎತ್ತರದ ಕಟ್ಟಡ ದುಬೈನ ಬುರ್ಜಾ ಖಲೀ-ದಲ್ಲಿ ವಿಕ್ರಾಂತ್ ರೋಣನ ಫಸ್ಟ್ ಲುಕ್ ಹಾಗೂ ಟೀಸರ್ ರಿಲೀಸ್ ಮಾಡಿದ್ದ ತಂಡ, ಮುಂದೆ ಮತ್ತಷ್ಟು ಅಚ್ಚರಿ ನೀಡಲಿದೆ ಎಂಬ ನಿರೀಕ್ಷೆಯೂ ಪ್ರೇಕ್ಷಕರಲ್ಲಿದೆ.

ನಟಿ ಜಾಕ್ವೆಲಿನ್ ಅವರಿಗೆ ಚಿತ್ರದಲ್ಲಿನ ಪಾತ್ರದ ಬಗ್ಗೆ ದೂರವಾಣಿಯ ಮೂಲಕವೇ ವಿವರಿಸಿದ್ದೆ. ಡೈಲಾಗ್‌ಗಳನ್ನು ಹೇಳಿದ್ದೆ. ಹಾಗಾಗಿ ಅವರು ಚಿತ್ರೀಕರಣಕ್ಕೆ ಬರುವ ಮುನ್ನವೇ ತಮ್ಮ ಪಾತ್ರಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡು ಬಂದಿದ್ದರು. ಮೆಚ್ಚುವಂತೆ ನಟಿಸಿದರು. ಒಂದು ಸನ್ನಿವೇಶದಲ್ಲಿ ಜಾಕ್ವೆಲಿನ್ ರೀಟೇಕ್ ತೆಗೆದುಕೊಳ್ಳದೆ ನಟಿಸಿದರು. ಕನ್ನಡದಲ್ಲಿಯೇ ಡೈಲಾಗ್ ಹೊಡೆದರು. ಇದನ್ನು ಗಮನಿಸಿದ ನಾನು, ನಿಮ್ಮ ಪಾತ್ರವನ್ನು ನೀವೇ ಯಾಕೆ ಡಬ್ ಮಾಡಬಾರದು
ಎಂದೆ. ಅದಕ್ಕೆ ಜಾಕ್ವೆಲಿನ್ ಒಪ್ಪಿದರು, ಅದಕ್ಕಾಗಿ ಭಾಷಾ ತರಬೇತುದಾರರ ಬಳಿ ಕನ್ನಡವನ್ನು ಕಲಿತರು, ಅವರ ಕನ್ನಡ ಪ್ರೀತಿ ಮೆಚ್ಚಬೇಕು ಎನ್ನುತ್ತಾರೆ ಅನೂಪ್ ಭಂಡಾರಿ.

***

ವಿಕ್ರಾಂತ್ ರೋಣ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲವು ಮುಗಿದಿದ್ದು, ಬಿಡುಗಡೆಗೂ ಸಿದ್ಧವಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಚಿತ್ರದ ಬಿಡುಗಡೆಯ ದಿನಾಂಕ ಘೋಷಿಸುವುದು ಕಷ್ಟ. ಈ ವರ್ಷವೇ ಚಿತ್ರವನ್ನು ತೆರೆಗೆ ತರಬೇಕು ಎಂಬ ಆಸೆ ನಮ್ಮದು, ಆದರೆ ಪರಿಸ್ಥಿತಿ ಪೂರಕವಾಗಿಲ್ಲ. ಮುಂದೆ ಪರಿಸ್ಥಿತಿಯನ್ನು ಗಮನಿಸಿ ಬಿಡುಗಡೆಯ ದಿನಾಂಕವನ್ನು ಘೋಷಿಸುತ್ತೇವೆ.
-ಅನೂಪ್ ಭಂಡಾರಿ ನಿರ್ದೇಶಕ.

Leave a Reply

Your email address will not be published. Required fields are marked *