Saturday, 17th May 2025

ಕಿಚ್ಚನ ಬರ್ತ್‌‌ಡೇಗೆ ಸ್ಪೆಷಲ್‌ ಗಿಫ್ಟ್ – ವಿಕ್ರಾಂತ್‌ ರೋಣನ ಫಸ್ಟ್ ಗ್ಲಿಂಪ್ಸ್

ಪ್ರಶಾಂತ್‌ ಟಿ.ಆರ್‌.

ಅಭಿನಯ ಚಕ್ರವರ್ತಿಯ ಸುದೀಪ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಹಲವು ಉಡುಗೊರೆಗಳು ಸಿಗುವ ನಿರೀಕ್ಷೆಯಿತ್ತು. ಅದರಂತೆ, ಸುದೀಪ್ ಅಭಿನಯದ
ಚಿತ್ರಗಳಿಂದ ಭರ್ಜರಿ ಉಡುಗೊರೆಗಳು ಸಿಕ್ಕಿವೆ. ಸುದೀಪ್ ಅಭಿನಯದ ಸಿನಿಮಾಗಳ ಪೋಸ್ಟರ್ ಬಿಡಗಡೆಯಾಗಿವೆ. ಇದರ ಜತೆಗೆ ಬಹುನಿರೀಕ್ಷೆಯ ಕೋಟಿ ಗೊಬ್ಬ ೩ ಚಿತ್ರವನ್ನು ದಸರಾ ಹಬ್ಬಕ್ಕೆ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಹಾಗಾಗಿ ದಸರಾಗೆ ಕೋಟಿ ಗೊಬ್ಬನ ದರ್ಬಾರ್ ಆರಂಭವಾಗುವುದು ಖಚಿತವಾಗಿದೆ.

ದಿ ಡೆಡ್ ಮ್ಯಾನ್ ಆಂಥಮ್
ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ವಿಕ್ರಾಂತ್ ರೋಣ ಚಿತ್ರತಂಡ ಭರ್ಜರಿ ಗಿಫ್ಟ್ ನೀಡಿದೆ. ಚಿತ್ರದ ಡೆಡ್ ಮ್ಯಾನ್ ಆಂಥಮ್ ಬಿಡುಗಡೆ ಮಾಡಿದೆ. ದಿ ಡೆಡ್ ಮ್ಯಾನ್ ಆಂಥಮ್, ನಿರೂಪಕನ ಧ್ವನಿಯನ್ನು ಹಿಂಬಾಲಿಸುತ್ತ ಕಗ್ಗತ್ತಲೆಯ ಲೋಕದಿಂದ ಎದ್ದು ಬರುವ ಫ್ಯಾಂಟಮ್, ಶತ್ರುಗಳಿಗೆ ಭಯ ಹುಟ್ಟಿಸುವ ಸನ್ನಿವೇಶದೊಂದಿಗೆ ಶುರುವಾಗುತ್ತದೆ. ಮೈ ಜುಂ ಎನ್ನಿಸುವ ದೃಶ್ಯಗಳು, ವಿಸ್ಮಯಗೊಳಿಸುವ ಹಿನ್ನೆಲೆ ಸಂಗೀತ, ಸುದೀಪ್ ಅವರ ಖದರ್‌ಗೆ ಮತ್ತಷ್ಟು ಇಂಬು ನೀಡುತ್ತದೆ. ದಿ ಡೆಡ್ ಮ್ಯಾನ್ ಆಂಥಮ್ ವಿಕ್ರಾಂತ್ ರೋಣನ ಬಗೆಗಿನ ನಿರೀಕ್ಷೆಯನ್ನು ದುಪ್ಪಟ್ಟು ಗೊಳಿಸಿದೆ.

ತ್ರಿಡಿಯಲ್ಲಿ ವಿಕ್ರಾಂತ್ ರೋಣ
ವಿಕ್ರಾಂತ್ ರೋಣ ಬಹುಭಾಷಾ ಆಕ್ಷನ್ ಅಡ್ವೆಂಚರ್ ಚಿತ್ರವಾಗಿದೆ. ೧೪ ಭಾಷೆಗಳಲ್ಲಿ, ಸುಮಾರು ೫೫ ದೇಶಗಳಲ್ಲಿ ವಿಕ್ರಾಂತ್ ರೋಣನ ಅಬ್ಬರ ಆರಂಭ ವಾಗಲಿದೆ. ಅದು ೩ಡಿಯಲ್ಲಿ ಅನ್ನುವುದು ಮತ್ತಷ್ಟು ವಿಶೇಷ. ಪೋಸ್ಟರ್ ಮೂಲಕವೇ ಕುತೂಹಲ ಕೆರಳಿಸುತ್ತಿರುವ ವಿಕ್ರಾಂತ್ ರೋಣ, ಜಗತ್ತಿನ ಅತಿ ಎತ್ತರದ ಕಟ್ಟಡ ಬುರ್ಜಾ ಖಲೀಫಾದಲ್ಲಿ ಟೀಸರ್ ಅನಾವರಣಗೊಳಿಸಿತ್ತು.

ಅನೂಪ್ ಭಂಡಾರಿ ನಿರ್ದೇಶನ, ಜಾಕ್ ಮಂಜುನಾಥ್ ನಿರ್ಮಾಣದಲ್ಲಿ ಮೂಡಿಬಂದಿರುವ ವಿಕ್ರಾಂತ್ ರೋಣ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ನಿರೂಪ್
ಭಂಡಾರಿ, ನೀತಾ ಅಶೋಕ್, ಜಾಕ್ವೆಲಿನ್ ಫೆರ್ನಾಂಡಿಸ್ ಹೀಗೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ. ಬಿ.ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.  ಶಿವ ಕುಮಾರ್ ಕಲಾ ನಿರ್ದೇಶನ, ವಿಲಿಯಮ್ ಡೇವಿಡ್ ಛಾಯಾಗ್ರಾಹಣ ಚಿತ್ರಕ್ಕಿದೆ.

ಕಿಚ್ಚನಿಗೆ ಪ್ರೀತಿಯ ಉಡುಗೊರೆ
ಸುದೀಪ್ ಕ್ರಿಕೆಟ್‌ನಲ್ಲೂ ಆಸಕ್ತಿ ಹೊಂದಿದ್ದಾರೆ. ಸಿಸಿಎಲ್‌ನಲ್ಲಿ ತಮ್ಮ ತಂಡವನ್ನು ಮುನ್ನಡಿಸಿ, ಗೆಲುವಿನ ನಗೆ ಬೀರಿದ್ದಾರೆ. ಹೀಗೆ ಕ್ರಿಕೆಟ್ ಕ್ರೇಜ್ ಇರುವ ಕಿಚ್ಚನ
ಹುಟ್ಟುಹಬ್ಬಕ್ಕೆ ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ರಾಜಸ್ಥಾನ್ ರಾಯಲ್ಸ್ ತಂಡದಿಂದ ಸ್ಪೆಷಲ್ ಉಡುಗೊರೆ ಸಿಕ್ಕಿದೆ. ಕಿಚ್ಚ ಸುದೀಪ್‌ಗೆ ಜನ್ಮದಿನದ ಶುಭಾಷಯಗಳನ್ನು ಕೋರಿರುವ ರಾಜಸ್ಥಾನ ರಾಯಲ್ಸ್ ತಂಡ, ೭ನೇ ನಂಬರ್ ಜೆರ್ಸಿಯನ್ನು ಸುದೀಪ್‌ಗೆ ಉಡುಗೊರೆಯಾಗಿ ಕಳುಹಿಸಿಕೊಟ್ಟಿದೆ. ಜೆರ್ಸಿಯೊಂದಿಗೆ ಶುಭ ಹಾರೈಕೆಯ ಪತವೂ ಇದ್ದು, ಅದರಲ್ಲಿ, ಸತ್ಯ ಮತ್ತು ಶಿವನಿಂದ ತಳಪತಿ ಜಲತರಂಗನ್‌ವರೆಗೆ ಜನ್ಮದಿನದ ಶುಭಾಶಯಗಳು. ನಿಮಗೆ ಉತ್ತಮ ಆರೋಗ್ಯ ಲಭಿಸಲಿ ಎಂದು ಬರೆಯಲಾಗಿದೆ. ಜತೆಗೆ ನೀವು ಸ್ಟಂಪ್‌ಗಳ ಹಿಂದೆ ನಿಲ್ಲುವುದನ್ನು ನೋಡುವುದು ನಮಗೆ ಇಷ್ಟ ಎಂಬದನ್ನು ಶುಭಾಷಯ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

***

ದಿ ಡೆಡ್ ಮ್ಯಾನ್ ಆಂಥಮ್ ಅನ್ನು ಸುದೀಪ್ ಅವರ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡಲಾಗಿದೆ. ವಿಕ್ರಾಂತ್ ರೋಣ ಪಾತ್ರದ ನಿಗೂಢತೆಯನ್ನು ಫಸ್ಟ್
ಗ್ಲಿಂಪ್ಸ್ ಅದ್ಭುತವಾಗಿ ಸೆರೆ ಹಿಡಿದಿದೆ. ಚಿತ್ರೀಕರಣದ ಸಮಯದಲ್ಲೇ ಆ ದೃಶ್ಯದ ಬಗ್ಗೆ ನನಗೆ ಅಪಾರ ನಿರೀಕ್ಷೆಯಿತ್ತು. ಇದು ಸುದೀಪ್ ಅವರಿಗಾಗಿಯೇ ಸೃಷ್ಟಿಸಿದ ಸನ್ನಿವೇಶ.
-ಅನೂಪ್ ಭಂಡಾರಿ ನಿರ್ದೇಶಕ

ವಿಕ್ರಾಂತ್ ರೋಣನ ಫಸ್ಟ್ ಗ್ಲಿಂಪ್ಸ್‌ನೊಂದಿಗೆ ಸುದೀಪ್ ಅವರ ಜನುಮದಿನಕ್ಕೆ ಶುಭ ಕೋರಿದ್ದೇವೆ. ಎಲ್ಲರ ಕೈ ಕಟ್ಟುವಂತಹ ಕರೋನಾ ಸಂದರ್ಭದಲ್ಲಿ ನಾವು
ಇಷ್ಟು ಸಕಾರಾತ್ಮಕವಾಗಿ ಮುನ್ನಡೆಯುತ್ತಿರುವುದೇ ಸಂತೋಷದ ವಿಷಯ. ಫಸ್ಟ್ ಗ್ಲಿಂಫ್ಸ್ ವಿಕ್ರಾಂತ್ ರೋಣ ಚಿತ್ರದ ಬಗ್ಗೆ ನಿರೀಕ್ಷೆಯನ್ನು ಹೆಚ್ಚಿಸಿದೆ. ಕಿಚ್ಚ ಅವರ ಖದರ್ ಕಂಡು ನಾನು ಸಂತಸಗೊಂಡಿದ್ದೇನೆ.
-ಜಾಕ್ ಮಂಜುನಾಥ್ ನಿರ್ಮಾಪಕ

Leave a Reply

Your email address will not be published. Required fields are marked *