Saturday, 17th May 2025

ಸುಕನ್ಯ ದ್ವೀಪದಲ್ಲಿ ಕೌಟುಂಬಿಕ ಸ್ಟೋರಿ

ಎಂ.ಡಿ.ಅಫ್ಜಲ್ ನಿರ್ದೇಶನದ ಸುಕನ್ಯ ದ್ವೀಪ ಮೊದಲ ಹಂತದ ಚಿತ್ರೀಕರಣ ಮುಗಿಸಿದೆ. ಎರಡನೇ ಹಂತದ ಚಿತ್ರೀಕರಣಕ್ಕೆ ಸಿದ್ಧತೆ ನಡೆಯುತ್ತಿದೆ. ಇದಕ್ಕೂ ಮುನ್ನ ಚಿತ್ರತಂಡ ಮೇಕಿಂಗ್ ಸಾಂಗ್‌ವೊಂದನ್ನು ಬಿಡುಗಡೆ ಮಾಡಿದೆ.

ಟೈಟಲ್ ಕೇಳಿದರೆ ಇದು ಸಸ್ಪೆನ್ಸ್ ಚಿತ್ರವಿರಬಹುದು ಎನಿಸುತ್ತದೆ. ಆದರೆ ಸುಕನ್ಯ ದ್ವೀಪ ಕೌಟುಂಬಿಕ ಕಥೆಯ, ನವಿರಾದ ಪ್ರೇಮಕಥೆಯನ್ನು ಒಳಗೊಂಡಿದೆ. ಜತೆಗೆ ಒಂದಷ್ಟು ಹಾಸ್ಯದ ಟಚ್ ಕೂಡ ಕಥೆಯಲ್ಲಿದೆ. ಮೂವರು ಅಕ್ಕ-ತಂಗಿಯರ ಸುತ್ತ ನಡೆಯುವ ಕಥಾಹಂದರ ಈ ಚಿತ್ರದಲ್ಲಿದೆ. ಕೌಟುಂಬಿಕ ಕಥೆಯಲ್ಲಿ ಪ್ರೇಮಕಥೆಯೂ ಮಿಳಿತವಾಗಿದೆ. ಕಾಮಿಡಿಗೆ ಹೆಚ್ಚು ಒತ್ತು ನೀಡಿದ್ದೇವೆ. ಸುಕನ್ಯ ಎಂದರೆ ಹೆಣ್ಣು, ದ್ವೀಪ ಎಂದರೆ ಅವರಿರುವ ಮನೆಗೆ ಹೋಲಿಸಿದ್ದೇವೆ. ಆ ಮೂವರು ಹೆಣ್ಣುಮಕ್ಕಳು ಪ್ರೇಮದ ಬಲೆಗೆ ಬಿದ್ದಾಗ ಕುಟುಂಬದ ಹಿರಿಯರಿಂದ ವಿರೋಧ ವ್ಯಕ್ತವಾಗುತ್ತದೆ.

ಬಳಿಕ ಚಿತ್ರ ಟ್ವಿಸ್ಟ್ ಪಡೆದುಕೊಳ್ಳುತ್ತಾ ಸಾಗುತ್ತದೆ. ಈಗಾಗಲೇ ಬೆಂಗಳೂರು ಸುತ್ತಮುತ್ತ ಒಂದು ಹಂತದ ಶೂಟಿಂಗ್ ಮುಗಿಸಿದ್ದು, ಮುಂದಿನ ಹಂತದಲ್ಲಿ ಹಾಸನ, ಕಳಸ, ಬೇಲೂರಿನ ಸುತ್ತಮುತ್ತ ಚಿತ್ರೀಕರಿಸುವ ಯೋಜನೆಯಿದೆ ಎಂದರು ನಿರ್ದೇಶಕ ಅಫ್ಜಲ್. ತಮಿಳಿನ ಹಾಸ್ಯನಟ ದಿ. ವಿವೇಕ್ ಅವರಿಂದ ಇನ್ ಸ್ಪೈರ್ ಆಗಿ ಈ ಕಥೆಯನ್ನು ಮಾಡಿಕೊಂಡಿದ್ದೇವೆ. ಚಿತ್ರದಲ್ಲಿ ನನ್ನ ಪಾತ್ರ ಸೆಕೆಂಡ್ ಹಾಫ್ ನಲ್ಲಿ ಬರುತ್ತೆ, ಅದರಲ್ಲಿ ಒಂದಷ್ಟು ಕುತೂಹಲವೂ ಇದೆ ಎಂದು  ತಮ್ಮ ಪಾತ್ರದ ಬಗ್ಗೆ ಹೇಳಿದರು ರಾಜ್‌ಪ್ರಭು.

ಮಚ್ಚು, ಲಾಂಗು ಅಬ್ಬರ ಇಲ್ಲದ ಕೌಟುಂಬಿಕ ಕಥೆಯ ಚಿತ್ರವಿದು. ಹಾಗಾಗಿಯೇ ಸಿನಿಮಾ ನಿರ್ಮಾಣ ಮಾಡಲು ಒಪ್ಪಿದೆ. ಖಂಡಿತವಾಗಿಯೂ ಪ್ರೇಕ್ಷಕರು ನಮ್ಮ ಚಿತ್ರವನ್ನು ಮೆಚ್ಚುತ್ತಾರೆ ಎಂದರು ನಿರ್ಮಾಪಕ ವೀರಬಾಹು. ಸಚಿನ್ ಪುರೋಹಿತ್ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ನಾಯಕಿಯಾಗಿ ಶ್ರೇಯಾ ವಸಂತ್ ಕಾಣಿಸಿಕೊಂಡಿದ್ದಾರೆ. ಅಕ್ಷಿತಾ ನಾಗರಾಜ್, ಚುಂಬಿತಾ ಹಿರಿಯ ನಟ ಎಂ.ಡಿ.ಕೌಶಿಕ್ ಮತತ್ತಿರರು ಚಿತ್ರದಲ್ಲಿ ನಟಿಸಿದ್ದಾರೆ.

Leave a Reply

Your email address will not be published. Required fields are marked *