Wednesday, 14th May 2025

ರಿಷಬ್‌ ಶೆಟ್ಟಿ ಹೇಳಿದ ಹೀರೋ ಕಥೆ

ಪ್ರಶಾಂತ್ ಟಿ.ಆರ್‌

ಸಣ್ಣ ಎಳೆಯನ್ನು ಇಟ್ಟುಕೊಂಡು ಅದಕ್ಕೆ ಅಚ್ಚುಕಟ್ಟಾದ ಕಥೆ ಹೆಣೆದು, ಪ್ರೇಕ್ಷಕರು ಮೆಚ್ಚುವಂತೆ ಸಿನಿಮಾ ಮಾಡಿ ತೋರಿಸಿ ಕೊಟ್ಟ ನಿರ್ದೇಶಕ ರಿಷಬ್ ಶೆಟ್ಟಿ, ಈಗ ಅಂತಹದ್ದೇ ಮತ್ತೊಂದು ಪ್ರಯತ್ನ ಮಾಡಿದ್ದಾರೆ. ಈ ಬಾರಿ ನಿರ್ದೇಶಕನ ಸ್ಥಾನ ಬಿಟ್ಟು , ನಾಯಕನ ಜವಾಬ್ಧಾರಿ ಹೊತ್ತು ‘ಹಿರೋ’ವಾಗಿ ಮಿಂಚುತ್ತಿದ್ದಾರೆ.

ಮನರಂಜನೇ ಮುಖ್ಯವಾಗಿರುವ ‘ಹೀರೋ’, ಟ್ರೇಲರ್ ಮೂಲಕವೇ ಗಮನ ಸೆಳೆಯುತ್ತಿದೆ. ಕಥೆಗೆ ತಕ್ಕಂತೆ ಮಧುರವಾದ ಹಾಡು ಈಗಾಗಲೇ ರಿಂಗಣಿಸಿದೆ. ‘ಹಿರೋ’ವಾಗಿ ಬಣ್ಣಹಚ್ಚಿರುವ ರಿಷಬ್, ಇಲ್ಲಿಯೂ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು. ಸ್ಟೈಲಿಶ್ ಲುಕ್‌ನಲ್ಲಿ ಕಂಗೊಳಿಸಿದ್ದಾರೆ. ‘ಹಿರೋ’ವಾಗಿ ಬರುತ್ತಿರುವ ರಿಷಬ್, ಹೀರೋ ಹಿಂದಿನ ಕಥೆ – ವ್ಯಥೆಯ ಬಗ್ಗೆ ಒಂದಷ್ಟು ಹೊತ್ತು ‘ವಿ.ಸಿನಿಮಾಸ್ ’ನೊಂದಿಗೆ ಮಾತನಾಡಿದರು. ಚಿತ್ರದ ಕುರಿತು ಹಲವು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡರು.

ವಿ.ಸಿನಿಮಾಸ್ : ‘ಹಿರೋ’, ಶೀರ್ಷಿಕೆಯಲ್ಲಿಯೇ ನಾಯಕನಿದ್ದಾನೆ? ನಾಯಕನ ಯಶೋಗಾಥೆಯೇ ಚಿತ್ರದ ಕಥೆಯೇ?
ರಿಷಬ್ : ಚಿತ್ರದ ಕಥೆಗೆ ಪೂರಕವಾಗಿ ಟೈಟಲ್ ಇಟ್ಟಿದ್ದೇವೆ. ಇಲ್ಲಿ ನಾಯಕನ ಯಶೋಗಾಥೆ ಎನ್ನುವುದಕ್ಕಿಂತ, ನಿಜ ಜೀವನದಲ್ಲಿ ಹೇಡಿಯಾದ ಒಬ್ಬ ಯುವಕ, ಸಮಯ, ಸಂದರ್ಭಕ್ಕೆ ತಕ್ಕಂತೆ ಹೇಗೆ ನಾಯಕ ನಾಗಿ ಬದಲಾಗುತ್ತಾನೆ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಚಿತ್ರದ ನಾಯಕ ಅಂಜುಬುರುಕ. ಚಿಕ್ಕ ಪುಟ್ಟ ಬೆದರಿಕೆಗೂ ಹೆದರುವ ಆತನಿಗೆ ಕ್ಷೌರಿಕ ವೃತ್ತಿಯೇ ಜೀವಾಳ. ವೃತ್ತಿಯ ಜತೆಗೆ ಬದುಕು ಅರಸಿ ಹೊರಟ ನಾಯಕನಿಗೆ ಮುಂದೆ ಯಾವೆಲ್ಲಾ ಸಮಸ್ಯೆಗಳು ಎದುರಾಗುತ್ತವೆ. ಅವೆಲ್ಲವನ್ನು ಎದುರಿಸಿ ಹೇಗೆ ಆತ ಜೀವನದಲ್ಲಿ ‘ಹೀರೋ’ ಆಗಿ ಹೊರಹೊಮ್ಮುತ್ತಾನೆ ಎಂಬುದು ಚಿತ್ರದ ಕಥೆ.

ವಿ.ಸಿ : ನಿಮ್ಮ ಹಿಂದಿನ ಸಿನಿಮಾಗಳಂತೆ, ಈ ಸಿನಿಮಾದಲ್ಲೂ ವಿಶೇಷತೆ ಕಾಣಬಹುದೆ? 
ರಿಷಬ್ : ಖಂಡಿತ. ಪ್ರೇಕ್ಷಕರಿಗೆ ಮೆಚ್ಚುಗೆಯಾಗುವ ಚಿತ್ರವಿದು. ಇಲ್ಲಿ ಕಾಮಿಡಿ ಇದೆ, ಥ್ರಿಲ್ಲರ್ ಇದೆ, ಎಲ್ಲಕ್ಕೂ ಮಿಗಿಲಾಗಿ ಆ್ಯಕ್ಷನ್
ಇದೆ. ಆ್ಯಕ್ಷನ್ ಅಂದಾಕ್ಷಣ ಹೊಡಿಬಡಿ ದೃಶ್ಯಗಳಿಗೆ ಸೀಮಿತವಾಗಿಲ್ಲ. ನೈಜವಾದ ಸಾಹಸ ದೃಶ್ಯಗಳಿವೆ. ಚಿತ್ರದ ಪ್ರತಿ ಸನ್ನಿವೇಶವೂ ಕಣ್ಣಮುಂದೆಯೇ ನಡೆಯುತ್ತಿವೆಯೇನೋ ಎನ್ನುವಂತೆ ಭಾಸವಾಗುತ್ತದೆ. ಕೌಟುಂಬಿಕ ಆಯಾಮದ ಸುತ್ತ ಚಿತ್ರದ ಕಥೆ ಸಾಗಿದರು, ಫ್ಯಾಮಿಲಿ ಡ್ರಾಮಾ ಇಲ್ಲ. ಪ್ರೀತಿ,  ಪ್ರೇಮ, ರೊಮ್ಯಾನ್ಸ್‌ ಹೀಗೆ ಇಂದಿನ ಕಾಲಘಟ್ಟಕ್ಕೆ ಮೆಚ್ಚುಗೆಯಾಗುವ ಎಲ್ಲಾ ಅಂಶಗಳು ಕಥೆಯಲ್ಲಿ ಮಿಳಿತವಾಗಿವೆ. ಪ್ರೇಮಿಯ ಅಂತರಂಗವೂ ಇಲ್ಲಿ ಅನಾವರಣವಾಗುತ್ತದೆ. ಅದಕ್ಕೆ ಪೂರಕವಾಗಿಯೇ ‘ನೆನಪಿನ ಹುಡುಗಿಯೇ…? ಹಾಡು ಮೂಡಿಬಂದಿದೆ.

ವಿ.ಸಿ: ಚಿತ್ರದ ಕಥೆ ಹುಟ್ಟಿದ್ದು ಹೇಗೆ ?
ರಿಷಬ್ : ಬಿಡದಂತೆ ಕಾಡಿದ ಕರೋನಾ ಕಾಲದಲ್ಲಿ ಮನೆಯಲ್ಲಿಯೇ ಉಳಿದಿದ್ದೆವು. ಯಾಕೆ ಹೀಗೆ  ಸಮಯ ವ್ಯರ್ಥ ಮಾಡಬೇಕು. ಈ ಹೊತ್ತಿನಲ್ಲಿ ಏನಾದರು ಹೊಸತನ್ನು ಮಾಡಬೇಕು ಅನ್ನಿಸಿತು. ಆಗ ನನ್ನ ತಂಡದೊಂದಿಗೆ ಚರ್ಚಿಸಿದೆ. ಅಂದೇ ಒನ್ ಲೈನ್ ಸ್ಟೋರಿ ಹೊಳೆಯಿತು. ಅದಕ್ಕೆ ತಕ್ಕಂತೆ ಒಂದು ದಿನದಲ್ಲೇ ಕಥೆ ರೆಡಿಯಾಯಿತು. 15 ದಿನಗಳಲ್ಲಿ ಕಥೆಗೆ ತಕ್ಕಂತೆ ರೂಪು ರೇಷಗಳನ್ನು ಸಿದ್ಧಪಡಿಸಿಕೊಂಡು ಚಿತ್ರೀಕರಣಕ್ಕೆ ಅಣಿಯಾದೆವು. ಚಿತ್ರದ ಕಲಾವಿದರನ್ನು ಒಂದೆಡೆ ಕಲೆ ಹಾಕಿ. ಕರೋನಾ ಮಾರ್ಗಸೂಚಿಯಂತೆ , ಹೋಂ ಕ್ವಾರಂಟೇನ್‌ನಲ್ಲಿದ್ದು, ಬಳಿಕ ಚಿತ್ರೀಕರಣ ಆರಂಭಿಸಿದೆವು. ಚಿಕ್ಕಮಗಳೂರು ಸುತ್ತಮುತ್ತ
ಒಟ್ಟು 45 ದಿನಗಳ ಕಾಲ ಒಂದೇ ಶೆಡ್ಯೂಲ್‌ನಲ್ಲಿ ಶೂಟಿಂಗ್ ಮುಗಿಸಿದೆವು. ಅಚ್ಚರಿ ಎಂದರೆ ನೂರು ಜನ ಮಾಡಬೇಕಾದ ಕೆಲಸವನ್ನು ಕೇವಲ ಇಪ್ಪತ್ತನಾಲ್ಕು ಜನ ಮಾಡಿ ಮುಗಿಸಿದ್ದೇವೆ. ಕಡಿಮೆ ಜನರಿದ್ದರೂ, ಪ್ರೇಕ್ಷಕರು ಮೆಚ್ಚುವ ಗಣಮಟ್ಟ ಚಿತ್ರದಲ್ಲಿದೆ.

ವಿ.ಸಿ: ಆ್ಯಕ್ಷನ್ ದೃಶ್ಯಗಳಿಗೆ ತಯಾರಿ ಹೇಗಿತ್ತು?
ರಿಷಬ್ : ಇದಕ್ಕೆ ತಯಾರಿ ಅಂತ ಏನು ಇಲ್ಲ. ನಾನು ಗ್ರಾಮೀಣ ಭಾಗದಿಂದ ಬಂದವನು. ಹಾಗಾಗಿ ಜಿಗಿತ, ಓಡಾಟ ಇವೆಲ್ಲವು ಕರಗತವಾಗಿತ್ತು. ಎಲ್ಲಿಯೂ ಡ್ಯೂಪ್ ಬಳಸದೆ ನೈಜವಾಗಿಯೇ ಆ್ಯಕ್ಷನ್ ಸನ್ನಿವೇಶದಲ್ಲಿ ಪಾಲ್ಗೊಳ್ಳುವುದು ಸಾಧ್ಯವಾಯಿತು. ವಿಕ್ರಮ್‌ಮೋರ್ ಹಾಗೂ ನಾನು ಇಬ್ಬರು ಸೇರಿ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲು ಪ್ಲಾನ್ ಮಾಡಿದೆವು. ಒಂದು ಸನ್ನಿವೇಶದಲ್ಲಿ ನಮ್ಮನ್ನು ದುರುಳರ ಗುಂಪು ಬೆನ್ನಟ್ಟಿರುತ್ತದೆ, ಅವರಿಂದ ನಾಯಕಿಯನ್ನು ರಕ್ಷಿಸಬೇಕಿತ್ತು. ಈ ವೇಳೆ ಪೆಟ್ರೋಲ್ ಬಾಂಬ್ ಸ್ಪೋಟವಾಗುತ್ತದೆ. ಅದರಿಂದಲೂ ತಪ್ಪಿಸಿಕೊಂಡು ಓಡುಬೇಕಿತ್ತು. ಹೀಗೆ ಸಾಗುವ ದಾರಿಯಲ್ಲಿ ಕೆಸರಿತ್ತು, ಹಾಗಾಗಿ ವೇಗವಾಗಿ ಓಡಲು ಸಾಧ್ಯವಾಗ ಲಿಲ್ಲ. ನಾನು ಕೊಂಚ ಹಿಂದೆ ಉಳಿದಿದ್ದರಿಂದ ನನ್ನ ತಲೆ ಹಾಗೂ ಬೆನ್ನಿಗೆ ಬೆಂಕಿ ತಗುಲಿತು. ಅಧೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಲಿಲ್ಲ.ಒಟ್ಟಾರೆ ಚಿತ್ರ ಅಂದುಕೊಂಡಂತೆ ಮೂಡಿಬಂದಿದೆ. ಪ್ರೇಕ್ಷಕರು ಬಯಸುವ ಮನರಂಜನೆ ಚಿತ್ರದಲ್ಲಿದೆ. ನಾವು ಹೆಚ್ಚು ಸಮಯವನ್ನು ವ್ಯರ್ಥ ಮಾಡದೆ, ಎರಡು ಗಂಟೆ, ಐದು ನಿಮಿಷಗಳಲ್ಲಿ ತೆರೆಯಲ್ಲಿ ಚಿತ್ರದ ಕಥೆ ಯನ್ನು ಹೇಳಿದ್ದೇವೆ. ಪ್ರೇಕ್ಷಕರು ನೀಡುವ ಹಣಕ್ಕೆ ಯಾವುದೇ ಮೋಸವಿಲ್ಲ ಎಂದು ಮಾತು ಮುಗಿಸಿದರು ರಿಷಬ್ ಶೆಟ್ಟಿ.

Leave a Reply

Your email address will not be published. Required fields are marked *