Saturday, 17th May 2025

ಲಂಕೆಗೆ ಕಾಲಿಟ್ಟ ಕಾವ್ಯಾ ಶೆಟ್ಟಿ

ಟೀಸರ್ ಮೂಲಕವೇ ಧೂಳೆಬ್ಬಿಸುತ್ತಿರುವ ಲಂಕೆ, ಗೌರಿ ಗಣೇಶ ಹಬ್ಬದಂದೇ ಭರ್ಜರಿಯಾಗಿ ತೆರೆಗೆ ಬಂದಿದೆ. ಲಂಕೆ, ನೈಜ ಘಟನೆ ಆಧಾರಿ ಚಿತ್ರವಾಗಿದೆ. ಲಂಕೆಯ ಶೀರ್ಷಿಕೆಯಲ್ಲಿಯೇ ಕಥೆಯ ಸುಳಿವಿದೆ.

ಚಿತ್ರದ ಶೀರ್ಷಿಕೆ ಕೇಳಿದರೆ ಇದು ಪೌರಾಣಿಕ ಕಥೆಯ ಚಿತ್ರವೇ ಇರಬೇಕು ಎಂದೆನಿಸುತ್ತದೆ. ಆದರೆ ಲಂಕೆ  ಪ್ರಸ್ತುತತೆಯ ಕಥೆ ಹೇಳುತ್ತದೆ. ಇಂದಿಗೂ ಸಮಾಜ ದಲ್ಲಿರುವ ಲಂಕಾಸುರರ ಕಥೆಯನ್ನು ತೆರೆಯಲ್ಲಿ ತೆರೆದಿಡುತ್ತದೆ. ಚಿತ್ರದಲ್ಲಿ ಲೂಸ್ ಮಾದ ಯೋಗಿ ನಾಯಕನಾಗಿ ನಟಿಸಿದ್ದಾರೆ. ಕೃಷಿ ತಾಪಂಡ ಹಾಗೂ ಕಾವ್ಯಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ. ವಿಶೇಷ ಎಂದರೆ ಕಾವ್ಯಾ ಶೆಟ್ಟಿ ಈ ಚಿತ್ರದಲ್ಲಿ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಅದು ಡಬ್ಬಲ್ ಶೆಡ್‌ನಲ್ಲಿ ಎಂಬುದು ಮತ್ತೂ ವಿಶೇಷ. ಈ ಹಿಂದಿನ ಚಿತ್ರಗಳಲ್ಲಿ ಗ್ಲಾಮರಸ್ ಲುಕ್‌ನಲ್ಲಿ ಕಂಗೊಳಿಸಿದ್ದ ಕಾವ್ಯಾ ಶೆಟ್ಟಿ ಈ ಚಿತ್ರದಲ್ಲಿ ಖಳ ನಟಿಯ ಪಾತ್ರದಲ್ಲಿ ನಟಿಸಿದ್ದಾರೆ ಎಂದರೆ ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚುವುದು ಸಹಜ. ಅಷ್ಟಕ್ಕೂ ಕಾವ್ಯಾ ಅವರ ಪಾತ್ರ ಏನು ಎಂಬ ಗುಟ್ಟನ್ನು ಚಿತ್ರತಂಡ ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಚಿತ್ರದಲ್ಲಿ ಕಾವ್ಯಾ ಶೆಟ್ಟಿ ಮಂದಾರಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಯೋಗಿಗೆ ವಿರುದ್ಧವಾದ ಪಾತ್ರದಲ್ಲಿ. ಚಿತ್ರದುದ್ದಕ್ಕೂ ಕಾವ್ಯಾ ಹಾಗೂ ಯೋಗಿ ಹಾವು ಮುಂಗೂಸಿ ಯಂತೆ ಒಬ್ಬರನ್ನೊಬ್ಬರು ದ್ವೇಷಿಸುತ್ತಾರೆ.

ಬಯಸದೆ ಬಂದ ಪಾತ್ರ 
ನಿರ್ದೇಶಕರು ಲಂಕೆಯ ಕಥೆ ಹೇಳಿದಾಗಲೇ ಕಾವ್ಯಾ ಶೆಟ್ಟಿಯ ಪಾತ್ರವನ್ನು ತಿಳಿದ್ದರಂತೆ. ನೆಗೆಟಿವ್ ಪಾತ್ರವಿದು ಎಂದು ತಿಳಿದ ಕಾವ್ಯಾ ಶೆಟ್ಟಿ ಅಚ್ಚರಿಪಟ್ಟಿದ್ದಾರೆ. ಈ ಪಾತ್ರವನ್ನು ನಿರ್ವಹಿಸಲು ಸಾಧ್ಯವೆ ಎಂದು ಅಂದುಕೊಂಡಿದ್ದಾರೆ. ಆದರೆ ಪಾತ್ರದ ಪ್ರಾಮುಖ್ಯತೆ ಅರಿತು ಚಿತ್ರದಲ್ಲಿ ನಟಿಸಲು ಸಂತಸದಿಂದಲೇ ಸಮ್ಮತಿಸಿ ದ್ದಾರೆ.

ಭರ್ಜರಿ ತಯಾರಿ
ಇದೇ ಮೊದಲ ಬಾರಿಗೆ ನೆಗೆಟಿವ್ ರೋಲ್‌ನಲ್ಲಿ ಬಣ್ಣ ಹಚ್ಚುತ್ತಿರುವ ಕಾವ್ಯಾ, ಎರಡು ವಾರಗಳ ಕಾಲ ತಮ್ಮ ಪಾತ್ರಕ್ಕಾಗಿ ತಯಾರಿ ನಡೆಸಿದ್ದಾರೆ. ಅದಕ್ಕಾಗಿ ನೆಗೆಟಿವ್ ಶೇಡ್‌ನ ಹಲವು ಚಿತ್ರಗಳನ್ನು ವೀಕ್ಷಿಸಿದ್ದಾರೆ. ಅಂತು ಅಂದುಕೊಂಡಂತೆ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಖಳ ನಟಿ ಪಾತ್ರಕ್ಕೆ ತಕ್ಕಂತೆ ಧ್ವನಿ ಇದ್ದಾಗ ಮಾತ್ರ ಅದಕ್ಕೆ ಆ ಪಾತ್ರಕ್ಕೆ ಮಹತ್ವವಿರುತ್ತದೆ. ಆದರೆ ಕಾವ್ಯಾ ಶೆಟ್ಟಿ ದನಿ ಸಾಪ್ಟಾಗಿದ್ದು, ಮಂದಾರ ಪಾತ್ರಕ್ಕೆ ಬೇರೆ ಕಲಾವಿದೆಯೊಬ್ಬರು ಡಬ್ಬಿಂಗ್ ಮಾಡಿದ್ದಾರೆ.

ವಿಭಿನ್ನ ಪಾತ್ರದಲ್ಲಿ ನಟಿಸಬೇಕು ಎಂಬ ಬಯಕೆ ಬಹು ದಿನಗಳಿಂದಲೂ ಇತ್ತು. ಅದಕ್ಕೆ ಪೂರಕವಾಗುವಂತಹ ಪಾತ್ರ ಲಂಕೆಯಲ್ಲಿ ಸಿಕ್ಕಿತು. ಇಷ್ಟಪಟ್ಟೆ ಈ ಪಾತ್ರ ದಲ್ಲಿ ನಟಿಸಿದ್ದೇನೆ. ಲಂಕೆ ಚಿತ್ರದ ಬಗ್ಗೆ ಬಹಳ ನಿರೀಕ್ಷೆಯಿದೆ. ಲಂಕೆ ಕಾಮಿಡಿ, ಆಕ್ಷನ್, ಸೆಮಟಿಮೆಂಟ್‌ಗೆ ಸೀಮಿತವಾಗಿಲ್ಲ, ಇದೊಂದು ಕೌಟುಂಬಿಕ ಕಥೆಯ ಚಿತ್ರವಾಗಿದೆ ಹಾಗಾಗಿ ಪ್ರೇಕ್ಷಕರು ಖಂಡಿತಾ ಚಿತ್ರದ ಕೈಹಿಡಿಯುತ್ತಾರೆ ಎನ್ನುತ್ತಾರೆ ಕಾವ್ಯಾ ಶೆಟ್ಟಿ.

ರೆಟ್ರೋ ಲುಕ್‌ನಲ್ಲಿ ಸಂಚಾರಿ ವಿಜಯ್
ಇತ್ತಿಚೆಗೆ ನಮ್ಮನ್ನಗಲಿದ ಅದ್ಭುತ ನಟ ಸಂಚಾರಿ ವಿಜಯ್ ಲಂಕೆಯಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಈ ಹಿಂದೆಯೇ ಚಿತ್ರತಂಡ ವಿಜಯ್ ಪಾತ್ರದ ಫಸ್ಟ್ ಲುಕ್ ರಿಲೀಸ್ ಮಾಡಿತ್ತು. ಕುದುರೆ ಹಿಡಿದು ನಿಂತಿರುವ ವಿಜಯ್ ಲುಕ್ ಕಂಡು ಪ್ರೇಕ್ಷಕರು ಸಂತಸಪಟ್ಟಿದ್ದರು. ಆದರೆ ವಿಜಯ್ ನಮ್ಮೊಂದಿಲ್ಲ ಎಂದು ದುಃಖ ಪಟ್ಟಿದ್ದರು. ಲಂಕೆಯಲ್ಲಿ ಸಂಚಾರಿ ವಿಜಯ್ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕರೇ ಹೇಳುವಂತೆ ಯೋಗಿ ಚಿತ್ರದ ಜೀವವಾದರೆ, ವಿಜಯ್ ಜೀವಾಳವಾಗಿದ್ದಾರೆ. ರಾಮನ ತೇಜಸ್ಸು ಹಾಗೂ ರಾವಣ ವರ್ಚಸ್ಸನ್ನು ಚಿತ್ರದಲ್ಲಿ ಕಾಣಬಹುದಾಗಿದೆ.

Leave a Reply

Your email address will not be published. Required fields are marked *