Saturday, 17th May 2025

ಅಪ್ಪು ಸ್ಮರಣೆ ಗೀತ ನಮನ ಸಲ್ಲಿಸಿದ ಶಿವಣ್ಣ

ಪುನೀತ್ ರಾಜ್‌ಕುಮಾರ್ ತನ್ನ ಅದ್ಭುತ ವ್ಯಕ್ತಿತ್ವ, ಸರಳತೆ ಹಾಗೂ ವಿನಯವಂತಿಕೆಯಿಂದ ಕರುನಾಡನ್ನೆ ತನ್ನತ್ತ ಸೆಳೆದವರು. ಕನ್ನಡಿಗರ ಹೃದಯದಲ್ಲಿ ರಾಜರತ್ನನಾಗಿ ರಾರಾಜಿಸುತ್ತಿರುವವರು. ಅಪ್ಪು ಎಂದೆಂದಿಗೂ ಅಮರ. ರಾಜಕುಮಾರನಂತೆಯೇ ಇದ್ದ ಪುನೀತ್, ಎಲ್ಲರಿಗೂ ಅಚ್ವಮೆಚ್ಚು.

ಸಿನಿಮಾರಂಗದಲ್ಲಿ, ಸಮಾಜ ಸೇವೆಯಲ್ಲಿ ಅಪ್ಪು ಕೈಗೊಂಡ ಕಾರ್ಯ ಶ್ಲಾಘನೀಯ. ಕಿರಿಯ ವಯಸ್ಸಿನಲ್ಲಿಯೇ ಅಪ್ಪು ನೂರು ವರ್ಷದ ಸಾಧನೆ ಮಾಡಿದ್ದಾರೆ. ಆ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ೪೬ ವರ್ಷಗಳ ಸಾರ್ಥಕ ಜೀವನದ ಪಯಣವನ್ನು ಜೀ ಕನ್ನಡ ವಾಹಿನಿ ಕರುನಾಡ ರತ್ನ ಕಾರ್ಯಕ್ರಮದ ಮೂಲಕ ಸ್ಮರಿಸಿದೆ. ಅರ್ಥಪೂರ್ಣವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಸೇರಿದಂತೆ ದೊಡ್ಮನೆಯ ಕುಟುಂಬದವರು ಪಾಲ್ಗೊಂಡಿದ್ದರು. ಚಿತ್ರರಂಗದ ಹಿರಿ ಕಿರಿಯ ಕಲಾವಿದರು ಭಾಗಿಯಾಗಿದ್ದರು.

ಭಾವುಕರಾದ ಶಿವಣ್ಣ: ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಿವಣ್ಣ ಅಪ್ಪು ನೆನೆದು ಕಂಬನಿ ಮಿಡಿದರು. ಅಪ್ಪು ಬಾಲ ನಟರಾಗಿ ಅಭಿನಯಿಸಿದ್ದ, ಬಾನ ದಾರಿಯಲ್ಲಿ.. ಹಾಡನ್ನು ಹಾಡಿದರು. ಅಲ್ಲದೆ ಪುನೀತ್ ಇಷ್ಟ ಪಟ್ಟು ಹಾಡುತ್ತಿದ್ದ ಬಾಬಿ ಸಿನಿಮಾದ ಮೇ ಶಾಯರ್ ತೋ ನಹಿ.. ಗೀತೆಯ ಮೂಲಕ ಗೀತ ನಮನ ಸಲ್ಲಿದರು.

ನಟ ರವಿಚಂದ್ರನ್ ಅಪ್ಪುಗಾಗಿ ಪ್ರೀತಿಂದ ಹಾಡೊಂದನ್ನು ರಚಿಸಿದ್ದರು. ಈ ಹಾಡು ಪುನೀತ್ ರಾಜಕುಮಾರ್ ಜೀವನದ ಮೌಲ್ಯಗಳು, ಸಾಧನೆ, ಅಪೂರ್ವ ಸಂದೇಶದ ಜತೆಗೆ ಅವರ ಅಮೂಲ್ಯ ನೆನಪುಗಳನ್ನು ಅನಾವರಣಗೊಳಿಸಿತು. ಹಿರಿಯ ಸಂಗೀತ ನಿರ್ದೇಶಕ ಹಂಸ ಲೇಖ ಕೂಡ ಈ ಕಾರ್ಯ ಕ್ರಮಕ್ಕಾಗಿ ಹಾಡೊಂದನ್ನು ಬರೆದಿದ್ದರು.

ಆ ಹಾಡಿಗೂ ಕರುನಾಡ ರತ್ನ ವೇದಿಕೆ ಸಾಕ್ಷಿ ಯಾಯಿತು. ಸರಿಗಮಪ ಸ್ಪರ್ಧಿ ಕಂಬದ ರಂಗಯ್ಯ ಹಂಸಲೇಖ ಅವರು ಸಂಯೋಜಿಸಿದ ಹಾಡಿಗೆ ದನಿಯಾದರು. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಸಿನಿಮಾ ಜರ್ನಿಯನ್ನು ಮೆಲುಕು ಹಾಕಲು, ಅವರ ನೆನಪುಗಳನ್ನು ಶ್ರೀಮಂತವಾಗಿಸಲು ಕರುನಾಡ ರತ್ನ ಕಾರ್ಯಕ್ರಮ ಸಾಕ್ಷಿಯಾಯಿತು. ಇದೇ ಶನಿವಾರ ಮತ್ತು ಭಾನುವಾರ ಕರುನಾಡ ರತ್ನ ಕಾರ್ಯಕ್ರಮ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.