Wednesday, 14th May 2025

Apple ಹೊಸ ಸಾಹಸ

ಟೆಕ್‌ ಫ್ಯೂಚರ್‌

ವಸಂತ ಗ ಭಟ್‌

ವಿವಿಧ ರೀತಿಯ ದುಬಾರಿ ಎನಿಸುವ, ಆದರೆ ಉತ್ತಮ ಗುಣಮಟ್ಟದ ಗೆಜೆಟ್ ಗಳನ್ನು ಉತ್ಪಾದಿಸಿ ಯಶಸ್ವಿಯಾಗಿರುವ ಆ್ಯಪಲ್ ಸಂಸ್ಥೆಯು, ಈಗ ವಿದ್ಯುತ್ ಚಾಲಿತ ಐಷಾರಾಮಿ ಕಾರನ್ನು ತಯಾರಿಸುವತ್ತ ತನ್ನ ಗಮನ ಹರಿಸಿದೆ. ಮುಂದಿನ ವರ್ಷಗಳಲ್ಲಿ ಪರಿಸರ ಸ್ನೇಹಿ ವಿದ್ಯುತ್ ಚಾಲಿತ ವಾಹನಗಳಿಗೆ ದೊರೆಯಲಿರುವ ಪ್ರಾಮುಖ್ಯತೆಯನ್ನು ತನ್ನ ವ್ಯಾಪಾರ ಕ್ಕಾಗಿ ಬಳಸಿಕೊಳ್ಳಬಯಸುವ ಆ್ಯಪಲ್ ಯ ಈ ಯೋಜನೆ ಯಶಸ್ಸು ಪಡೆಯುವುದೇ?

ವಿಶ್ವದ ಶ್ರೀಮಂತ ವ್ಯಾಪಾರೀ ಸಂಸ್ಥೆಗಳಲ್ಲಿ ಒಂದಾಗಿರುವ ಆ್ಯಪಲ್‌ನ ಈಗಿನ ಮೌಲ್ಯ ಎರಡು ಟ್ರಿಲಿಯನ್ ಅಮೆರಿಕನ್ ಡಾಲರ್.
2021 ರ ಇನ್ನೇನು ಮುಗಿಯಲಿರುವ ಮೊದಲ ತ್ರೈಮಾಸಿಕ ಅವಧಿಯಲ್ಲಿ ಐಫೋನ್ ಮಾರಾಟದಿಂದ ಆ್ಯಪಲ್ ಸಂಸ್ಥೆ ಗಳಿಸಿರುವ ನಿವ್ವಳ ಲಾಭ ಸುಮಾರು 112 ಬಿಲಿಯನ್ ಡಾಲರ್.

ಐ ವಾಚ್, ಆ್ಯಪಲ್ ಟಿವಿ, ಆ್ಯಪಲ್ ಕೇರ್ ಇವೆಲ್ಲ ಸೇರಿದರೆ ಸಂಸ್ಥೆಯ ಲಾಭ ಇನ್ನಷ್ಟು ಹೆಚ್ಚಳವಾಗಲಿದೆ. 2007 ರಲ್ಲಿ ಐಫೋನ್ ಬಿಡುಗಡೆಯಾದ ದಿನದಿಂದಲೂ ಆ್ಯಪಲ್ ಆರ್ಥಿಕವಾಗಿ ಬೆಳೆಯುತ್ತಲೇ ಸಾಗಿದೆ. ಇಷ್ಟು ಲಾಭ ಹೊಂದಿರುವ ಯಾವುದೇ ಸಂಸ್ಥೆ ಯಾದರೂ ಇತರ ಉದ್ಯಮಗಳಲ್ಲಿ ಹೂಡಿಕೆ ಮಾಡುವ ಯೋಚನೆ ಮಾಡುವುದು ಸಾಮಾನ್ಯ. ಸದ್ಯ ಆ್ಯಪಲ್ ಐ ಕಾರ್ ಅಥವಾ ಆ್ಯಪಲ್ ಕಾರ್ ಎನ್ನುವ ಕಾರು ಉತ್ಪಾದಕ ಸಂಸ್ಥೆಯನ್ನು ಆರಂಭಿಸುತ್ತಿರುವುದಾಗಿ ಘೋಷಿಸಿದೆ.

ಚಾಲಕ ರಹಿತವಾದ ಕಾರು ಇದಾಗಿದ್ದು ಸಂಪೂರ್ಣ ವಿದ್ಯುತ್ ಚಾಲಿತ ವಾಹನವಾಗಿರಲಿದೆ. ಕಾರು ಯಾವಾಗ ಮಾರುಕಟ್ಟೆ ಯಲ್ಲಿ ಲಭ್ಯವಾಗಲಿದೆ ಮತ್ತು ಏನೇನು ಸೌಕರ್ಯವಿರಲಿದೆ ಎಂಬುದನ್ನೂ ಆ್ಯಪಲ್ ಇನ್ನಷ್ಟೇ ಬಹಿರಂಗಪಡಿಸ ಬೇಕಿದೆ. ಸಾಕಷ್ಟು ಸ್ಪರ್ಧೆ ಇರುವ ಕಾರು ಮಾರುಕಟ್ಟೆಯನ್ನು ಪ್ರವೇಶಿಸಲು ಆ್ಯಪಲ್ ಏನೇನು ತಯಾರಿ ಮಾಡುತ್ತಿದೆ? ಆ್ಯಪಲ್ ಸಂಸ್ಥೆ ಕಾರು ಉತ್ಪಾದಿಸಬೇಕೆಂದು ನಿರ್ಣಯಿಸಿ ಅದಾಗಲೇ ಒಂದು ದಶಕಕ್ಕಿಂತ ಹೆಚ್ಚು ಕಾಲವಾಗಿದೆ ಎಂದರೆ ನಿಮಗೆ ಅಚ್ಚರಿ ಯಾಗ ಬಹುದು.

2007 ರಲ್ಲಿ ಐಫೋನ್ ಅನ್ನು ಬಿಡುಗಡೆ ಮಾಡುವ ಸಮಯಕ್ಕೆ ಆ್ಯಪಲ್ ಸಂಸ್ಥೆಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ಒಂದು ಕಾರು ಉತ್ಪಾದಕ ಸಂಸ್ಥೆಯನ್ನು ಕಟ್ಟಬೇಕು ಎನ್ನುವ ಆಶಯವನ್ನು ಹೊಂದಿದ್ದರು. ಆದರೆ ಆ ವರ್ಷ ಜನರಲ್ ಮೋಟರ್ಸ್ ಮತ್ತು ಫೋರ್ಡ್ ಸಂಸ್ಥೆಗಳು ನಷ್ಟ ಅನುಭವಿಸಿ ಸಂಸ್ಥೆಯನ್ನು ಮುಚ್ಚುವ ಹಂತಕ್ಕೆ ತಲುಪಿದ ಕಾರಣ ಹೊಸ ಕಾರು ಉದ್ಯಮ ಆರಂಭಿ ಸಲು ಇದು ಸೂಕ್ತ ಸಮಯವಲ್ಲವೆಂದು ಆ್ಯಪಲ್ ಕಾರು ಉತ್ಪಾದನೆಯನ್ನು ಆರಂಭಿಸಲಿಲ್ಲ.

ಟಿಮ್ ಕುಕ್ ಮುಖ್ಯ ಕಾರ್ಯ ನಿರ್ವಾಹಕರಾಗಿ ನೇಮಕಗೊಂಡ ನಂತರ ಆ್ಯಪಲ್ ಕಾರು ರಸ್ತೆಗಿಳಿಯಲಿದೆ ಎಂದು ಎಲ್ಲರೂ ನೀರಿಕ್ಷಿಸಿದ್ದರು. ಆದರೆ ಟೈಟನ್ ಎನ್ನುವ ಒಂದು ರಹಸ್ಯ ಪ್ರಾಜೆಕ್ಟ್ ‌‌ಅನ್ನು ಶುರು ಮಾಡಿದ ಕುಕ್, ಚಾಲಕ ರಹಿತ ಸಂಪೂರ್ಣ ವಿದ್ಯುತ್ ಚಾಲಿತ ಕಾರನ್ನು ತಯಾರಿಸುವ ನಿಟ್ಟಿನಲ್ಲಿ ಪ್ರಾಜೆಕ್ಟ್‌ ಟೈಟನ್ ಕಾರ್ಯನಿರ್ವಹಿಸುವಂತೆ ನೋಡಿಕೊಂಡರು. ಟೆಸ್ಲಾ, ಹುಂಡೈ ತರಹದ ಸಂಸ್ಥೆಗಳಿಂದ ಉನ್ನತ ಅಧಿಕಾರಿಗಳನ್ನು ಇದೇ ಉದ್ದೇಶಕ್ಕಾಗಿ ನೇಮಿಸಿಕೊಂಡರು.

ಸದ್ಯ ಸುಮಾರು 16,000 ಕಿಲೋಮೀಟರ್ ನಷ್ಟು ದೂರ ಚಾಲಕ ರಹಿತವಾಗಿ ಆ್ಯಪಲ್ ಪ್ರಾಯೋಗಿಕ ಕಾರು ಸಂಚಾರ ಮಾಡಿದ್ದು, ಸಂಪೂರ್ಣ ಚಾಲಕ ರಹಿತವಾಗುವುದಕ್ಕೆ ಸಿದ್ಧಗೊಳ್ಳುತ್ತಿದೆ. 2024 ರಲ್ಲಿ ಆ್ಯಪಲ್ ಕಾರು ರಸ್ತೆಗಿಳಿಯದೆ ಎನ್ನುವ ನಿರೀಕ್ಷೆಗಳು, ಊಹೆಗಳು ಇವೆ. ಆದರೆ ಆ್ಯಪಲ್ ಸಂಸ್ಥೆ ಇಲ್ಲಿಯವರೆಗೂ ಈ ಕುರಿತು ಯಾವುದೇ ಸ್ಪಷ್ಟ ಮಾಹಿತಿಯನ್ನು ನೀಡಿಲ್ಲ.

ಆ್ಯಪಲ್‌ಗೆ ಏಕೆ ಬೇಕು ಕಾರು ಮಾರುಕಟ್ಟೆ?

ವಿಶ್ವದ ಕಾರು ಮರುಕಟ್ಟೆ ಸುಮಾರು 10 ಟ್ರಿಲಿಯನ್ ಡಾಲರ್‌ಗಿಂತಲೂ ಅಧಿಕವಾಗಿದೆ. ಅದಕ್ಕೆ ಹೋಲಿಸಿದರೆ ಮೊಬೈಲ್ ಮಾರುಕಟ್ಟೆ ಕೇವಲ 715 ಬಿಲಿಯನ್ ಡಾಲರ್. ಅದಾಗಲೇ ಟಿವಿ ಮತ್ತು ಲ್ಯಾಪ್‌ಟಾಪ್ ಮಾರುಕಟ್ಟೆ ತಟಸ್ಥತೆಯನ್ನು ಮುಟ್ಟಿಯಾಗಿದೆ. ಮೊಬೈಲ್ ಮಾರುಕಟ್ಟೆಯು ಇನ್ನೊಂದು 5 ವರ್ಷಗಳಲ್ಲಿ ತಟಸ್ಥವಾಗುವ ಎಲ್ಲ ಸಾಧ್ಯತೆಯಿದೆ. ಅಂತಹ ಸಮಯದಲ್ಲಿ ಆ್ಯಪಲ್ ಸಂಸ್ಥೆ ಮುಂದಿನ 50 ವರ್ಷದ ಅವಧಿಯಲ್ಲಿ ಲಾಭಗಳಿಸಬೇಕಾದಂತಹ ಒಂದು ಹೊಸ ಮಾರುಕಟ್ಟೆ ಯನ್ನು ಹುಡುಕಿಕೊಳ್ಳುವುದು ಅನಿವಾರ್ಯ.

ಹಾಗಾಗಿ ಆ್ಯಪಲ್ ಕಾರು ಉದ್ಯಮವನ್ನು ಆಯ್ದುಕೊಂಡಿದೆ. ಅಷ್ಟೇ ಅಲ್ಲದೆ ಇತ್ತೀಚೆಗೆ ಆರಂಭವಾದ ಟೆಸ್ಲಾ ಸಂಸ್ಥೆ ಜಾಗತಿಕ ವಾಗಿ ಅಸ್ತಿತ್ವದಲ್ಲಿದ್ದ ಎಲ್ಲ ಕಾರು ತಯಾರಕಾ ಸಂಸ್ಥೆಗಳಿಗಿಂತ ಹೆಚ್ಚಿನ ಲಾಭವನ್ನು ಗಳಿಸಿದ್ದರಿಂದ ಹೊಸಬರು ಸಹ ಈ ಕ್ಷೇತ್ರದಲ್ಲಿ ಲಾಭಗಳಿಸಬಹುದು ಎಂಬುದು ಆ್ಯಪಲ್ ಗೆ ಮನವರಿಕೆಯಾಗಿದೆ.

ಅದಾಗಲೇ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಸಾಕಷ್ಟು ಅನುಭವವಿರುವ ಆ್ಯಪಲ್, ಆ ಹಿನ್ನೆಲೆಯನ್ನು, ಅನುಭವವನ್ನು ಕಾರು ತಯಾರಿಕೆಯಲ್ಲೂ ಬಳಸುವ ಯೋಜನೆಯನ್ನು ಹಾಕಿಕೊಂಡಿದೆ. ಜತೆಗೆ ಮೊಬೈಲ್ ಮತ್ತು ಕಾರುಗಳನ್ನು ವಿಶಿಷ್ಟ ರೀತಿಯಲ್ಲಿ ಬೆಸೆದು ಆ್ಯಪಲ್ ಮೊಬೈಲ್ ಮತ್ತು ಕಾರು ಎರಡೂ ಗ್ರಾಹಕ ಸ್ನೇಹಿ ಮಾಡುವ ಗುರಿಯನ್ನು ಹೊಂದಿದೆ.

ಏನೇನು ಸವಾಲುಗಳಿವೆ
ಎಲ್ಲರಿಗೂ ಗೊತ್ತಿರುವಂತೆ ಆ್ಯಪಲ್‌ನ ಹೆಚ್ಚಿನ ಮೊಬೈಲ್, ಟಿವಿ, ವಾಚ್‌ನ ಬಿಡಿ ಭಾಗಗಳು ಜೋಡಣೆಗೊಳ್ಳುವುದು ಚೀನಾ ದೇಶದಲ್ಲಿ. ಬಿಡಿಭಾಗಗಳ ಉತ್ಪಾದನೆ ಕೂಡ ಹೆಚ್ಚಾಗಿ ಚೀನಾದಲ್ಲೇ ನಡೆಯುತ್ತದೆ, ಆ್ಯಪಲ್ ಕೇವಲ ವಿನ್ಯಾಸವನ್ನು
ಸಿದ್ಧಪಡಿಸುತ್ತದೆ. ಹೀಗೆ ಕಡಿಮೆ ವೆಚ್ಚದಲ್ಲಿ, ದೂರದ ಚೀನಾದಲ್ಲಿ ಮೊಬೈಲ್ ಸಿದ್ಧಪಡಿಸಿ ಹೆಚ್ಚಿನ ಬೆಲೆಗೆ ಮಾರುವುದು ಆ್ಯಪಲ್‌ಗೆ ಸಾಕಷ್ಟು ಲಾಭದಾಯಕ. ಆದರೆ ಕಾರು ಉತ್ಪಾದನೆ ಹಾಗಲ್ಲ, ಯಾವುದೇ ಒಂದು ಸಂಸ್ಥೆ ಆ್ಯಪಲ್‌ಗಾಗಿ ಕಾರು ತಯಾರಿಸಿ ಕೊಡುವುದು ಸಾಧ್ಯವಿಲ್ಲ.

ಕಾರಣ, ಮೊಬೈಲ್‌ಗೆ ಹೊಲಿಸಿದರೆ ಕಾರು ಉತ್ಪಾದನಾ ಘಟಕವನ್ನು ಸ್ಥಾಪಿಸುವುದು ಅತ್ಯಂತ ದುಬಾರಿ. ಹಾಗಾಗಿ ಆ್ಯಪಲ್ ಕಾರು ತಯಾರಿಸ ಬೇಕೆಂದರೆ ವಿಶ್ವಾದ್ಯಂತ ಕಾರು ಉತ್ಪಾದನಾ ಘಟಕವನ್ನು ಸಂಸ್ಥೆಯೇ ತೆರೆಯಬೇಕು. ಅಷ್ಟೇ ಅಲ್ಲ ಕಾರಿನ ಸರ್ವೀಸ್, ಹಂಚಿಕೆಗಾಗಿ ಡೀಲರ್‌ಗಳನ್ನು ಹುಡುಕಬೇಕು. ಮೊಬೈಲ್‌ಗೆ ಹೊಲಿಸಿದರೆ ವ್ಯವಸ್ಥಿತವಾಗಿ ಕಾರು ಮಾರಾಟ ಜಾಲವನ್ನು ನಿರ್ಮಿಸಲು ಹೇರಳ ಹಣ ಖರ್ಚುಮಾಡಬೇಕಾಗುತ್ತದೆ.

ಇನ್ನು ಟೆಸ್ಲಾ ವಿಚಾರಕ್ಕೆ ಬರುವುದಾದರೆ 1960ರಲ್ಲಿ ಮಾರುಕಟ್ಟೆ ಪ್ರವೇಶಮಾಡಿದ ಹುಂಡೈ ಆದ ಮೇಲೆ, ಜಾಗತಿಕವಾಗಿ ಕಾರು ಮಾರಾಟದಲ್ಲಿ ಯಶಸ್ಸು ಕಂಡ ಏಕೈಕ ಸಂಸ್ಥೆ ಟೆಸ್ಲಾ. ಈ ಯಶಸ್ಸನ್ನು ತಲುಪಲು ಅದಕ್ಕೆ 16 ವರ್ಷಗಳ ಸಮಯ ಬೇಕಾಯಿತು. ಆ್ಯಪಲ್ ಸಹ ಕಾರು ಉದ್ಯಮಕ್ಕೆ ಕಾಲಿಟ್ಟರೆ ಇದೇ ರೀತಿ ಆರಂಭಿಕ ನಷ್ಟಕ್ಕೆ ಸಿದ್ಧವಿದ್ದು, ಸಾಕಷ್ಟು ವರ್ಷ ಕಾಯಲು ತಯಾರಿರ ಬೇಕು. ಜೊತೆಗೆ ಟೆಸ್ಲಾ ಯಶಸ್ವಿಯಾದ ಮಾತ್ರಕ್ಕೆ ಮುಂದಿನ ಕಾರು ತಯಾರಿಕಾ ಸಂಸ್ಥೆಗಳು ಸಹ ಯಶಸ್ಸು ಗಳಿಸಬೇಕೆಂದಿಲ್ಲ. ಕಾರಣ ಟೆಸ್ಲಾ ಪೂರ್ಣ ಪ್ರಮಾಣದ ವಿದ್ಯುತ್ ಚಾಲಿತ ಸೌಲಭುಯ ಹೊಂದಿದ್ದ ಮೊದಲ ಕಾರಾಗಿತ್ತು. ಆ್ಯಪಲ್ ವಿದ್ಯುತ್ ಚಾಲಿತ ಕಾರನ್ನೇ ಉತ್ಪಾದನೆ ಮಾಡಿದರೆ ಅದು ಟೆಸ್ಲಾ ಮಾಡಿದಂತೆ ಮೋಡಿ ಮಾಡಲಾಗದು. ಇದರ ಜತೆಯಲ್ಲೇ, ಇನ್ನಷ್ಟು ಪ್ರಮುಖ ಮತ್ತು ಮಹತ್ವದ ವಿಚಾರವೆಂದರೆ ಬೆಲೆ.

ಆ್ಯಪಲ್ ಯಾವಾಗಲೂ ತನ್ನ ದುಬಾರಿ ಉತ್ಪಾನಗಳಿಂದಾಗಿ ಖ್ಯಾತಿ ಪಡೆದುಕೊಂಡ ಸಂಸ್ಥೆ. ಆ ದುಬಾರಿತನ ಮತ್ತು ಗುಣ ಮಟ್ಟವು ಆ್ಯಪಲ್‌ನ್ನು ಪ್ರತಿಷ್ಠಿತ ಸಂಸ್ಥೆಗಳ ಸಾಲಿಗೆ ಸೇರಿಸಿದೆ. ಹಾಗಿದ್ದರೂ, ದುಬಾರಿ ಎನಿಸುವ ಆ್ಯಪಲ್ ಉತ್ಪನ್ನಗಳನ್ನು ಖರೀದಲೆಂದೇ ವಿಶ್ವದಾದ್ಯಂತ ಲಕ್ಷಾಂತರ ಸಂತೃಪ್ತ ಗ್ರಾಹಕರು ಕಾಯುತ್ತಲೇ ಇರುತ್ತಾರೆ.

ಆ್ಯಪಲ್ ತಯಾರಿಸಿದ ಉತ್ಪನ್ನಗಳನ್ನು ಹೊಂದುವುದರ ಮೂಲಕ ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನವನ್ನು ಸಹ ಪಡೆಯಬಹುದು. ಸಹಜವಾಗಿಯೇ, ಇತರ ಉತ್ಪನ್ನಗಳ ರೀತಿ ತನ್ನ ಹೊಸ ಕಾರಿನ ಮೌಲ್ಯವನ್ನು ಸಹ ಸಹಜವಾಗಿ ಆ್ಯಪಲ್ ದುಬಾರಿಯಾಗಿಯೇ ಇಡಲಿದೆ. ಶ್ರೀಮಂತ ವರ್ಗ ಖರೀದಿಸುವ ಐಷಾರಾಮಿ ಕಾರನ್ನು ಆ್ಯಪಲ್ ಉತ್ಪಾದಿಸುವುದೆಂಬ ನಿರೀಕ್ಷೆ ಇದೆ. ಆದರೆ ಮಾರುಕಟ್ಟೆ ಪಂಡಿತರ ಪ್ರಕಾರ, ಈ ಕಾರು ಮಧ್ಯಮ ವರ್ಗದವರ ಕೈಗೆ ಏಟುಕದಿದ್ದರೆ, ಕಾರಿನ ಮಾರಾಟ ಕಡಿಮೆಯಾಗಿ ಆ್ಯಪಲ್ ನಷ್ಟ ಅನುಭವಿಸಬಹುದು.

ಏನೇ ಸವಾಲುಗಳಿರಲಿ, 2007 ರಲ್ಲಿ ಆ್ಯಪಲ್ ಐಫೋನ್ ಅನ್ನು ಬಿಡುಗಡೆ ಮಾಡಿದಾಗಲೂ ಸ್ಮಾರ್ಟ್‌ಫೋನ್‌ಅನ್ನು ಉತ್ಪಾದಿ ಸುವ ಹಲವು ಸಂಸ್ಥೆಗಳಿದ್ದವು, ಅವುಗಳನ್ನೆಲ್ಲ ಮೀರಿ, ಆ್ಯಪಲ್ ಲಾಭಗಳಿಸಲಿಲ್ಲವೇ? ಹಾಗೆಯೇ ಕಾರು ಮಾರುಕಟ್ಟೆ ಯಲ್ಲೂ ಈ ಸಂಸ್ಥೆ ಯಶಸ್ಸು ಸಾಧಿಸಬಹುದು. ಆ್ಯಪಲ್ ಕೈಹಾಕಿದರೆ ಯಾವುದೂ ಅಸಾಧ್ಯವಲ್ಲ.

Leave a Reply

Your email address will not be published. Required fields are marked *