Wednesday, 14th May 2025

ಮೊಬೈಲ್‌ಗಳಿಗೆ ಏರ್‌ ಚಾರ್ಜಿಂಗ್‌ !

ಟೆಕ್‌ ಫ್ಯೂಚರ್‌

ವಸಂತ ಗ ಭಟ್‌

ಗಾಳಿಯ ಮೂಲಕ ಮೊಬೈಲ್ ಚಾರ್ಜ್ ಮಾಡುವ ಹೊಸ ತಂತ್ರಜ್ಞಾನ ಜನಪ್ರಿಯವಾಗಲಿದೆ! ಭವಿಷ್ಯದಲ್ಲಿ ಬ್ಯಾಟರಿಯೇ ಇಲ್ಲದ ಮೊಬೈಲ್‌ಗಳು ಬರುವುದಕ್ಕೆ ಇದು ಉತ್ತಮ ಆರಂಭ.

ಕಳೆದೊಂದು ದಶಕದಿಂದ ಆಗಾಗ ಮುನ್ನೆೆಲೆಗೆ ಬರುತ್ತಿರುವ ತಂತ್ರಜ್ಞಾನಗಳಲ್ಲಿ ಏರ್ ಚಾರ್ಜಿಂಗ್ ಸಹ ಒಂದು. ಮೊಬೈಲ್ ಅಥವಾ ಇತರ ಎಲೆಕ್ಟ್ರೋನಿಕ್ ಉಪಕರಣಗಳನ್ನು ಯಾವುದೇ ತಂತಿಯ ಸಹಾಯವಿಲ್ಲದೆ ಚಾರ್ಜ್ ಮಾಡುವ ಪ್ರಕ್ರಿಯೆಯನ್ನು ಏರ್ ಚಾರ್ಜಿಂಗ್ ಎಂದು ಕರೆಯುತ್ತಾರೆ.

ಸ್ಯಾಮ್ಸಂಗ್, ಆ್ಯಪಲ್ ನಂತಹ ಸಂಸ್ಥೆಗಳು ಈ ನಿಟ್ಟಿನಲ್ಲಿ ಆಗಲೇ ಕಾರ್ಯಪ್ರವ್ರತ್ತವಾಗಿದ್ದು ಏರ್ ಚಾರ್ಜಿಂಗ್ ಅಲ್ಲದಿದ್ದರೂ ತಂತಿ ರಹಿತ ಚಾರ್ಜಿಂಗ್ ಸೌಲಭ್ಯವನ್ನು ಅದಾಗಲೇ ನೀಡಿವೆ. ಅವರು ಕೊಡುವ ಚಾರ್ಜಿಂಗ್ ಉಪಕರಣದ ಮೇಲೆ ನಿಮ್ಮ ಮೊಬೈಲ್ ಅನ್ನು ಇಡುವ ಮೂಲಕ ನಿಮ್ಮ ಮೊಬೈಲ್ ಅನ್ನು ಚಾರ್ಜ್ ಮಾಡಬಹುದಾಗಿದೆ. ಸದ್ಯ ಅಂತರ್ಜಾಲದಲ್ಲಿ ಖ್ಯಾತಿ ಗಳಿಸಿರುವ ಸುದ್ಧಿ ಎಂಐ ನ ಏರ್ ಚಾರ್ಜಿಂಗ್. ಯಾವುದೇ ತಂತಿಯ ಸಂಪರ್ಕವಿಲ್ಲದೆ ಒಂದು ಕೋಣೆಯಲ್ಲಿರುವ ಎಲ್ಲ
ಎಲೆಕ್ಟ್ರೋನಿಕ್ ಉಪಕರಣಗಳನ್ನು ಚಾರ್ಜ್ ಮಾಡುವ ಉಪಕರಣವನ್ನು ಎಂಐ ಸಿದ್ಧಪಡಿಸಿದೆ. ಮೊಬೈಲ್ ಚಾರ್ಜಿಂಗ್ ಕ್ಷೇತ್ರದಲ್ಲಿ ಇದು ಹೊಸ ಕ್ರಾಂತಿ ಮಾಡಲಿದೆಯೇ?

ಏನಿದು ಏರ್ ಚಾರ್ಜಿಂಗ್ ?
ಈ ಪ್ರಶ್ನೆ ಎಲ್ಲರ ತಲೆಯಲ್ಲೂ ಮೂಡುವುದು ಸಹಜ, ಎಲ್ಲರಿಗೂ ಗೊತ್ತಿರುವಂತೆ ವಿದ್ಯುತ್ ಅತ್ಯಂತ ವೇಗವಾಗಿ ಒಂದೆಡೆಯಿಂದ ಇನ್ನೊಂದೆಡೆಗೆ ಹರಿಯುತ್ತದೆ, ಎಲ್ಲಾದರು ತಂತಿ ಸ್ವಲ್ಪ ತುಂಡಾಗಿ ಮನುಷ್ಯರು ಅದರ ಸಂಪರ್ಕಕ್ಕೆ ಬಂದರೆ ಶಾಕ್ ಹೊಡೆಯು ವುದು ಸಾಮಾನ್ಯ. ಅಂತಹುದರಲ್ಲಿ ವಿದ್ಯುತ್ ಗಾಳಿಯಲ್ಲಿ ಸಂಚರಿಸಿ ಅದರ ಸಂಪರ್ಕಕ್ಕೆ ಬಂದರೆ ಜನರಿಗೆ ಕರೆಂಟ್ ಶಾಕ್ ಹೊಡಯದೆ ಇರುತ್ತಾ ? ಆದರೆ ಏರ್ ಚಾರ್ಜಿಂಗ್ ಅಂದರೆ ಗಾಳಿಯಲ್ಲಿ ವಿದ್ಯುತ್ ಅನ್ನು ನೇರವಾಗಿ ಸಾಗಿಸುವುದಲ್ಲ, ಬದಲಾಗಿ ವಿದ್ಯುತ್ ಅನ್ನು ಬೆಳಕಿನ ಮೂಲಕ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವುದು. ಆ ಬೆಳಕನ್ನು ಹೀರಿಕೊಳ್ಳುವ ಮೊಬೈಲ್ ಅದನ್ನು ವಿದ್ಯುತ್ ಆಗಿ ಪರಿವರ್ತಿಸಿ ಮೊಬೈಲ್ ಅನ್ನು ಚಾರ್ಜ್ ಮಾಡುತ್ತದೆ.

ಇದೇ ಮೊದಲಲ್ಲ
ಎಂಐಏರ್ ಚಾರ್ಜ್ ಮಾಡಬಹುದಾದಂತಹ ಉಪಕರಣವನ್ನು ಸಿದ್ಧಪಡಿಸಿದ ಮೊದಲ ಸಂಸ್ಥೆಯಲ್ಲ. 2017 ರಲ್ಲಿ ಮದರ್ ಬಾಕ್ಸ್‌ ಎನ್ನುವ ಸಂಸ್ಥೆ ಸಿಸಿಟಿವಿ ಕ್ಯಾಮೆರಾ ತರಹದ ವಿನ್ಯಾಸ ಹೊಂದಿದ ಉಪಕರಣವನ್ನು ಕಂಡು ಹಿಡಿದಿತ್ತು, ಆ ಉಪಕರಣದ 5 ಅಡಿ ದೂರದಲ್ಲಿರುವ ಎಲ್ಲ ಉಪಕರಣಗಳನ್ನು ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿತ್ತು. ನಂತರ ಮಾರುಕಟ್ಟೆಗೆ ಬಂದಿದ್ದು ವೈ ಚಾರ್ಜ್.

ಅದು ಹೆಚ್ಚು ಕಡಿಮೆ ಎಂಐ ಏರ್ ಚಾರ್ಜ್ ರೀತಿಯಲ್ಲಿಯೇ ಕಾರ್ಯ ನಿರ್ವಹಿಸುವ ಉಪಕರಣ. ಆದರೆ ಮಾರುಕಟ್ಟೆಯಲ್ಲಿ ಈ ಎರಡು ಉಪಕರಣಗಳು ಯಶಸ್ಸು ಗಳಿಸಲಿಲ್ಲ. ಇವೆರಡೂ ವಿನೂತನ ಉಪಕರಣಗಳಾಗಿದ್ದರೂ, ಮಾರುಕಟ್ಟೆಯಲ್ಲಿ ಸೋಲಲು ಹಲವು ಕಾರಣಗಳಿದ್ದವು. ಮೊದಲನೆಯದಾಗಿ ಈ ರೀತಿಯ ಹೊಸ ಉಪಕರಣಗಳು ದುಬಾರಿಯಾಗಿರುತ್ತವೆ. ಈ ಮಾತು ಎಂ ಐ ನ ಏರ್ ಚಾರ್ಜಿಂಗ್ ಉಪಕರಣಕ್ಕೂ ಅನ್ವಯಿಸುತ್ತದೆ. ಎರಡೆನೆಯದು ಇವುಗಳ ಕಡಿಮೆ ಸಾಮರ್ಥ್ಯ, ಎಂಐ ಹೇಳಿಕೊಳ್ಳುವ ಪ್ರಕಾರ ಏರ್ ಚಾರ್ಜಿಂಗ್ ಕೇವಲ 5 ವಾಟ್ ಸಾಮರ್ಥ್ಯದಲ್ಲಿ ಮೊಬೈಲ್ ಅನ್ನು ಚಾರ್ಜ್ ಮಾಡುತ್ತದೆ.

ಸದ್ಯ ಮಾರುಕಟ್ಟೆಯಲ್ಲಿರುವ ಸಾಮಾನ್ಯ ಚಾರ್ಜ್ 125 ವಾಟ್‌ನ ಆಸುಪಾಸಿನಲ್ಲಿದೆ. ಅದಕ್ಕೆ ಹೊಲಿಸಿದರೆ ಏರ್ ಚಾರ್ಜಿಂಗ್ ನ ಸಾಮರ್ಥ್ಯ ಅತ್ಯಂತ ಕಡಿಮೆ ಮತ್ತು ಎಂ ಐ ನ ಏರ್ ಚಾರ್ಜಿಂಗ್ ಉಪಕರಣದಿಂದ ಹೋರಟ ಬೆಳಕನ್ನು ಮೊಬೈಲ್ ನಲ್ಲಿ ಹಿಡಿಯಲು ಮತ್ತು ಹತ್ತಿರದಲ್ಲಿರುವ ಚಾರ್ಜಿಂಗ್ ಅನ್ನು ಗುರುತಿಸಲು ವಿಶೇಷವಾದ ಆಂಟೆನಾದ ಅವಶ್ಯಕತೆ ಇರುತ್ತದೆ.

ಹಾಗಾಗಿ ಎಂಐ ಏರ್ ಚಾರ್ಜಿಂಗ್ ಈಗ ಪ್ರಚಲಿತದಲ್ಲಿರುವ ಯಾವುದೇ ಮೊಬೈಲ್‌ನಲ್ಲೂ ಬಳಸಲು ಸಾಧ್ಯವಿಲ್ಲ ಮತ್ತು ಎಂಐ ತನ್ನ ಸಂಸ್ಥೆಯ ಉಪಕರಣಗಳನ್ನು ಮಾತ್ರ ಏರ್ ಚಾರ್ಜಿಂಗ್ ಉಪಕರಣದ ಮೂಲಕ ಚಾರ್ಜ್ ಮಾಡಲಿದೆ. ಅಷ್ಟೇ ಅಲ್ಲದೆ ಏರ್ ಚಾರ್ಜಿಂಗ್‌ಗೆ ದೂರದ ಮಿತಿಯಿದೆ. ಎಂಐ ಏರ್ ಚಾರ್ಜಿಂಗ್ ಉಪಕರಣದ ಮೂಲಕ ಮೊಬೈಲ್ ಚಾರ್ಜ್ ಆಗಬೇಕೆಂದರೆ, ಮೊಬೈಲ್ ಆ ಉಪಕರಣದಿಂದ ಐದು ಮೀಟರ್ ಸುತ್ತಳತೆಯ ಒಳಗಿರಬೇಕು. ಹಾಗಾಗಿ ಇದನ್ನು ವ್ಯಾವಹಾರಿಕವಾಗಿ ಕಚೇರಿ
ಮತ್ತಿತರ ಜನ ಸಂದಣಿಯ ಸ್ಥಳಗಳಲ್ಲಿ ಬಳಸಬೇಕೆಂದರೆ ಹಲವಾರು ಏರ್ ಚಾರ್ಜಿಂಗ್ ಉಪಕರಣಗಳು ಬೇಕಾಗಬಹುದು.

ಕೊನೆಯದಾಗಿ ಏರ್ ಚಾರ್ಜಿಂಗ್ ಉಪಕರಣವನ್ನು ಪತ್ತೆ ಹಚ್ಚಲು ಮತ್ತು ಬೆಳಕಿನಿಂದ ವಿದ್ಯುತ್ ಆಗಿ ರೂಪಾಂತರಿಸಲು ಮೊಬೈಲ್‌ನ ಬಹಳಷ್ಟು ಚಾರ್ಜ್ ವ್ಯವವಾಗುತ್ತದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಎಂಐ ಏರ್ ಚಾರ್ಜಿಂಗ್ ಕ್ಷೇತ್ರಕ್ಕೆ  ಕಾಲಿಟ್ಟಿರುವುದು ಒಳ್ಳೆಯ ವಿಚಾರ. ಏಕೆಂದರೆ ವಿಶ್ವದಲ್ಲೇ ಹೆಸರಾದ ಮೊಬೈಲ್ ಉತ್ಪಾದಕ ಸಂಸ್ಥೆಯಾದ ಎಂಐ ಬಳಿ ಮೇಲೆ ಹೆಸರಿಸಿದ ಎಲ್ಲ ಸಮಸ್ಯೆಗಳನ್ನು ಸರಿಪಡಿಸಿ ಉತ್ತಮ ಏರ್ ಚಾರ್ಜಿಂಗ್ ಉಪಕರಣವನ್ನು ಸಿದ್ಧಪಡಿಸಲು ಅವಶ್ಯಕವಾದ ಪರಿಣತ ಉದ್ಯೋಗಿಗಳು ಮತ್ತು ಅವಶ್ಯವಾದ ಆರ್ಥಿಕ ಶಕ್ತಿಯಿದೆ.

5 ವಾಟ್ ಚಾರ್ಜ್ ಸಾಮರ್ಥ್ಯ ಮೊದಲ ನೋಟಕ್ಕೆ ಅತ್ಯಂತ ಕಡಿಮೆ ಎನಿಸಿದರೂ, ಮೊಬೈಲ್ ತನ್ನಷ್ಟಕ್ಕೆ ತಾನೇ ಚಾರ್ಜ್ ಆಗುವುದರಿಂದ, ಎಲ್ಲರೂ ಈ ಉಪಕರಣಕ್ಕೆ ಹೊಂದಿಕೊಂಡರೆ ಯಾವುದೇ ವ್ಯತ್ಯಾಸ ಗೋಚರಿಸುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಯಾವಾಗ ಮೊಬೈಲ್ ಸದಾ ಚಾರ್ಜ್ ಆಗುತ್ತಲೇ ಇರುತ್ತದೋ ಆಗ ಬಳಕೆ ಮಾಡುವ ಬ್ಯಾಟರಿ ಸಾಮರ್ಥ್ಯವನ್ನು ಉತ್ಪಾದಕರು ಕಡಿಮೆ ಮಾಡಬಹುದಾಗಿದೆ.

4000, 5000 ಎಂಹೆಚ್ ಸಾಮರ್ಥ್ಯದ ಬ್ಯಾಟರಿ ಬದಲು 1000 – 2000 ಎಂಹೆಚ್ ಸಾಮರ್ಥ್ಯದ ಬ್ಯಾಟರಿ ಸಾಕಾಗಬಹುದು. ಇದರಿಂದ ನಾವು ಕೇವಲ ಬ್ಯಾಟರಿ ಸಾಮರ್ಥ್ಯವನ್ನು ಕಡಿಮೆ ಮಾಡುವುದಿಲ್ಲ, ಬದಲಾಗಿ ಬ್ಯಾಟರಿಯಲ್ಲಿ ಬಳಕೆಯಾಗುವ ಲಿಥಿಯಮ್ ನಂತಹ ಅಪಾಯಕಾರಿ ಮೂಲವಸ್ತುಗಳ ಗಣಿಗಾರಿಕೆ ಸಹ ಕಡಿಮೆಯಾಗುತ್ತದೆ. ಭವಿಷ್ಯದಲ್ಲಿ ಬ್ಯಾಟರಿಯೇ ಇಲ್ಲದ
ಮೊಬೈಲ್ ಗಳು ಬರುವುದಕ್ಕೆ ಇದು ಉತ್ತಮ ಆರಂಭ.

ಗಾಳಿಯ ಮೂಲಕವೇ ಚಾರ್ಜ್ ಮಾಡುವ ಈ ಉಪಕರಣವನ್ನು ಯಾವಾಗ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದೆಂದು ಎಂ ಐ ಇನ್ನೂ ಬಹಿರಂಗಪಡಿಸಿಲ್ಲ. ಎಂಐ ನ ಈ ಏರ್ ಚಾರ್ಜಿಂಗ್ ವ್ಯವಸ್ಥೆ ಕ್ರಾಂತಿಕಾರಿ ಎಂಬುದರಲ್ಲಿ ಸಂಶಯವಿಲ್ಲ.

Leave a Reply

Your email address will not be published. Required fields are marked *