ಒಂದೊಳ್ಳೆ ಮಾತು

ರೂಪಾ ಗುರುರಾಜ್
ಒಂದು ಸಲ ಭಗವಂತನಿಗೆ, ತಾನು ಇಷ್ಟೊಂದು ಸುಂದರವಾದ ಪ್ರಕೃತಿಯನ್ನು ಸೃಷ್ಟಿ ಮಾಡಿದ್ದೇನೆ, ಅದನ್ನು ಒಂದು ಸಲ ನೋಡಿ ಬರಬೇಕೆಂದೆನಿಸಿ, ಹಾಗೇ ಅಲ್ಲಿರುವ ಪಕ್ಷಿ, ಪ್ರಾಣಿಗಳ ಅನಿಸಿಕೆಯನ್ನು ತಿಳಿಯಬೇಕೆನಿಸಿತು. ಅದಕ್ಕಾಗಿ ಭಗವಂತ ಭೂಮಿಗೆ ಬಂದ.
ಭಗವಂತ ಮೊಟ್ಟ ಮೊದಲು ಒಂದು ದುಂಬಿಯನ್ನು ಭೇಟಿಯಾಗಿ, ‘ನಾನು ಸೃಷ್ಟಿ ಮಾಡಿದ್ದರ ಬಗ್ಗೆ ನಿನಗೇನು
ಅನಿಸುತ್ತದೆ?’ ಎಂದು ಕೇಳಿದ. ಆಗ ಅದು ‘ತುಂಬಾ ಚೆನ್ನಾಗಿದೆ ಭಗವಂತ ಎಷ್ಟೊಂದು ಹೂವುಗಳನ್ನು ಸೃಷ್ಟಿ
ಮಾಡಿರುವೆ. ಅವುಗಳಿಂದ ಮಕರಂದ ಹೀರುವುದೇ ನನ್ನ ಕೆಲಸ ಹೂವಿನಿಂದ ಹೂವಿಗೆ ಹಾರುವುದೇ ನನಗೆ ಬಹಳ
ಸಂತೋಷವನ್ನು ತರುತ್ತದೆ. ಇದನ್ನು ಸೃಷ್ಟಿ ಮಾಡಿದ ನಿನಗೆ ಹೇಗೆ ಕೃತಜ್ಞತೆ ಅರ್ಪಿಸಬೇಕೆಂದು ನನಗೆ ತಿಳಿಯದು ದೇವಾ ಎಂದು ಹೇಳಿತು’. ಭಗವಂತನಿಗೆ ಬಹಳ ಸಂತೋಷವಾಯಿತು.
ನಂತರ ಅವನು ಒಂದು ಪಕ್ಷಿಯನ್ನು ಭೇಟಿಯಾಗಿ ಇದೇ ಪ್ರಶ್ನೆಯನ್ನು ಅದಕ್ಕೂ ಕೇಳಿದ. ‘ನಿನ್ನ ಸೃಷ್ಟಿಯ
ಬಗ್ಗೆ ಮಾತನಾಡಲು ನಾನೊಂದು ಹಕ್ಕಿಯಷ್ಟೇ. ನೀನು ಎಷ್ಟೊಂದು ವಿಧವಿಧವಾದ ಗಿಡಮರಗಳನ್ನ ಸೃಷ್ಟಿ
ಮಾಡಿದ್ದೀಯಾ. ನಾನು ಎಲ್ಲ ಕಡೆಯೂ ಹಾರುತ್ತಾ ಹೋಗಿ ನನಗೆ ಬೇಕಾದ ಹಣ್ಣುಗಳನ್ನು ತಿನ್ನುತ್ತೇನೆ.
ಎಷ್ಟೊಂದು ನದಿ ಸರೋವರಗಳನ್ನು ಸೃಷ್ಟಿ ಮಾಡಿದ್ದೀಯಾ, ನನಗೆ ಬಾಯಾರಿಕೆಯಾದಾಗ ಅಲ್ಲಿಗೆ ಹಾರಿ ಹೋಗಿ ನೀರು ಕುಡಿಯುತ್ತೇನೆ.
ನಿನ್ನ ಸೃಷ್ಟಿಯ ಬಗ್ಗೆ ವಿವರಣೆ ನೀಡಲು ನಾನು ಬಹಳ ಚಿಕ್ಕವನು. ಒಂದು ಹಾಡಿನ ಮೂಲಕ ನಿನಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಇಂಪಾಗಿ ಚಿಲಿ ಪಿಲಿ ಎನ್ನುತ್ತಾ ಅದರ ಹಾಡನ್ನು ಹಾಡಿತು. ನಂತರ ಒಂದು ಕಪ್ಪೆಯ ಬಳಿಗೆ ಹೋಗಿ ಇದೇ ಪ್ರಶ್ನೆಯನ್ನು ಭಗವಂತ ಕೇಳಿದ. ‘ಕಲ್ಲಲ್ಲೂ ಹುಟ್ಟಿ ಕೂಗುವ ನಮಗೆ ಅಲ್ಲಲ್ಲಿಗೆ ಆಹಾರ ಒದಗಿಸಿದ ನಿನ್ನ ಬಗ್ಗೆ ಮಾತನಾಡಲು ನನ್ನ ಬಳಿ ಶಬ್ದಗಳೇ ಇಲ್ಲ ಪರಮಾತ್ಮ,’ ಎಂದು ವಂದಿಸಿತು ಕಪ್ಪೆ. ಭಗವಂತ ಈಗ ಬಹಳ ಸಂತುಷ್ಟನಾಗಿ ನಂತರ ಮನುಷ್ಯನ ಬಳಿಗೆ ಹೋಗಿ, ‘ನನ್ನ ಸೃಷ್ಟಿಯ ಬಗ್ಗೆ ನಿನಗೇನು ಅನ್ನಿಸುತ್ತದೆ’ ಎಂದು ಕೇಳಿದ.
‘ನೀನು ಏನು ಮಹಾ ಮಾಡಿರುವೆ? ಒಂದನ್ನಾದರೂ ಸರಿಯಾಗಿ ಸೃಷ್ಟಿಸಿರುವಿಯಾ? ಸಿಹಿ ನೀರು ಇರುವ ನದಿ,
ಕೊಳಗಳನ್ನು ಚಿಕ್ಕದು ಮಾಡಿರುವೆ, ಸಮುದ್ರದ ನೀರನ್ನು ಕುಡಿಯಲಾರದಂತೆ ಉಪ್ಪು ಮಾಡಿಟ್ಟಿರುವೆ, ಪರ್ವತ ಗಳೊಂದಕ್ಕೂ ಆಕಾರವೇ ಇಲ್ಲ. ಕೆಲವು ಜನರನ್ನು ಕೆಂಪಗೆ, ಕೆಲವರನ್ನು ಬೆಳ್ಳಗೆ, ಇನ್ನೂ ಕೆಲವರನ್ನು ಕಪ್ಪಗೆ ಸೃಷ್ಟಿಸಿದ್ದೀಯ. ಅವರ ಹಾಗೆ ನಾವು ಆಗಬೇಕೆಂದು, ಇವರೆಲ್ಲ ಬಣ್ಣ ಬಳಿದುಕೊಳ್ಳುತ್ತಾರೆ. ಹೊಟ್ಟೆಗೆ ಅನ್ನವಿಲ್ಲ ವೆಂದು ಕೆಲವರು ಪರದಾಡುತ್ತಾರೆ, ಇನ್ನೂ ಕೆಲವರು ತಿಂದಿದ್ದು ಜೀರ್ಣವಾಗಲೆಂದು ಕಸರತ್ತು ಮಾಡ್ತಾರೆ. ಹೀಗೆ ಬೇಕಾಬಿಟ್ಟಿ ಸೃಷ್ಟಿ ಮಾಡುವ ಮೊದಲು, ಒಮ್ಮೆಯಾದರೂ ನನ್ನನ್ನು ವಿಚಾರಿಸಬಾರದಿತ್ತೇ, ವಿಚಾರಿಸಿದ್ದರೆ, ನಾನೇ ನಿನಗೆ ಸರಿಯಾದ ಸಲಹೆ ನೀಡುತ್ತಿದ್ದೆ’ ಎಂದ.
ಇವನ ಮಾತು ಕೇಳಿ ಭಗವಂತನಿಗೆ ಕೋಪ ಉಕ್ಕಿ ಬಂದರೂ, ತಾಳ್ಮೆಯಿಂದ ಪಕ್ಕದಲ್ಲಿದ್ದ ಹಕ್ಕಿಯನ್ನು ‘ಇವನು ಏಕೆ ಹೀಗೆ?’ ಎಂದು ಕೇಳಿದ. ಆಗ ಆ ಹಕ್ಕಿ ‘ಅವನ ಹಣೆ ಬರಹವೇ ಅಷ್ಟು. ಅವನ್ಯಾವಾಗಲೂ ಅತೃಪ್ತನೆ, ಅವನನ್ನು ಯಾವುದರಿಂದಲೂ ತೃಪ್ತಿಪಡಿಸಲು ಸಾಧ್ಯವಿಲ್ಲ. ಯಾವಾಗಲೂ ಅತೃಪ್ತಿಯಿಂದ ಇರುವುದೇ ಅವನ ಜಾಯಮಾನ ಪ್ರಭು’ ಎಂದಿತು ಹಕ್ಕಿ. ಇನ್ನೆಂದೂ ತಾನು ಈ ಅತೃಪ್ತ ಮನುಷ್ಯನಿರುವ ಕಡೆಗೆ ತಲೆ ಹಾಕಬಾರದೆಂದು ಭಗವಂತ ತೀರ್ಮಾನಿಸಿದ.
ಕಥೆ ಕಾಲ್ಪನಿಕವಾದರೂ ಮನುಷ್ಯನ ನಡವಳಿಕೆಯಂತೂ ಸದಾ ಈ ರೀತಿಯೇ ಅಲ್ಲವೇ? ಭಗವಂತನ ಸೃಷ್ಟಿ ಯಲ್ಲೂ ಕೂಡ ತಪ್ಪು ಹುಡುಕುವ ಮನುಷ್ಯನನ್ನು ಇನ್ನು ಯಾರ ತೃಪ್ತಿಪಡಿಸಲು ಸಾಧ್ಯ? ನಿಜವಾದ ಜ್ಞಾನಿ ಯಾದವನು ನಿಸರ್ಗ ನೀಡಿದ್ದನ್ನು ಸರಿಯಾಗಿ ಬಳಸಿಕೊಂಡು ಪಶು ಪಕ್ಷಿಗಳ ಹಾಗೆ ನೆಮ್ಮದಿಯಿಂದ ತೃಪ್ತಿಯಿಂದ ಸ್ವಚ್ಛಂದವಾಗಿ ಜೀವನ ನಡೆಸುತ್ತಾನೆ. ಎಲ್ಲ ಇದ್ದು ಕೊರಗುವವರ ಕಾಯಿಲೆಗೆ ಮದ್ದಿಲ್ಲ !
ಇದನ್ನೂ ಓದಿ: #RoopaGururaj