ಒಂದೊಳ್ಳೆ ಮಾತು

ರೂಪಾ ಗುರುರಾಜ್
ಒಬ್ಬ ರಾಜ ತನ್ನ ಮುಂದಿನ ವಾರಸುದಾರನ ಆಯ್ಕೆಗಾಗಿ ಒಂದು ಪರೀಕ್ಷೆ ಇಟ್ಟನು. ಅದು ಅರಮನೆಯ ಮುಖ್ಯ ದ್ವಾರದ ಮೇಲೆ ಒಂದು ಗಣಿತವನ್ನು ಬರೆಸಿದನು. ‘ಈ ಲೆಕ್ಕಕ್ಕೆ ಉತ್ತರ ಕಂಡು ಹಿಡಿದು ಬಾಗಿಲು ಯಾರು ಬಾಗಿಲು ತೆಗೆಯುತ್ತಾರೋ, ಅವರಿಗೆ ರಾಜ್ಯ ಪದವಿ’ ಎಂದಾಗಿತ್ತು. ರಾಜ್ಯದ ಮೂಲೆ ಮೂಲೆಗಳಿಂದ ಅಲ್ಲದೆ ಬೇರೆ ಬೇರೆ ರಾಜ್ಯಗಳಿಂದ, ಬುದ್ಧಿವಂತರಾದ ರಾಜನೀತಿಜ್ಞರು, ಗಣಿತ, ಜ್ಯೋತಿಷ್ಯ, ಹಾಗೂ ವಿಜ್ಞಾನಿಗಳು ಸೇರಿದಂತೆ, ಅನೇಕ ಪಂಡಿತೊತ್ತಮರು ಬಂದರು.
ಆದರೆ ಅವರೆಷ್ಟೇ ಪ್ರಯತ್ನಿಸಿದರೂ ಆ ಲೆಕ್ಕವನ್ನು ಬಿಡಿಸಲು ಸಾಧ್ಯವಾಗಲಿಲ್ಲ ಇದರಿಂದ ಅರಮನೆ ಮುಖ್ಯ ದ್ವಾರ ತೆರೆಯಲಿಲ್ಲ. ಬಂದವರು ಯಾರು ಆಯ್ಕೆಯಾಗಲಿಲ್ಲ ಇನ್ನೇನು ಎನ್ನುವಾಗಲೇ ಇಬ್ಬರು ಮಾತ್ರ ಉಳಿದರು.
ಅವರಲ್ಲಿ ಒಬ್ಬ ಪುಸ್ತಕ ತೆಗೆದುಕೊಂಡು ಅಲ್ಲಿದ್ದ ಲೆಕ್ಕ ನೋಡಿ, ಕೂಡಿ- ಕಳೆದು- ಭಾಗಿಸಿ- ಗುಣಾಕಾರ ಹಾಕಿ ಸಮಸ್ಯೆ ಬಿಡಿಸಲು ನೋಡಿದ. ಆದರೆ ಅವನಿಂದ ಸಾಧ್ಯವಾಗಲಿಲ್ಲ. ಉಳಿದ ಕೊನೆ ಹುಡುಗ ಅಂದುಕೊಂಡ. ಈ ಲೆಕ್ಕ ಬಿಡಿಸಲು, ಎಂತೆಂಥ ಮಹಾನ್ ಮೇಧಾವಿಗಳ ಕೈಯ್ಯಲ್ಲೂ ಆಗಲಿಲ್ಲ.
ನನಗೆ ಬುದ್ಧಿ ತೋರಿದ ಹಾಗೆ ಲೆಕ್ಕ ಬಿಡಿಸಿ ನಂತರ ಈ ದ್ವಾರವನ್ನು ಮೊದಲು ತೆರೆಯಬೇಕು. ಈ ದ್ವಾರ
ತೆಗೆಯಲು ಒಂದು ಸುಲಭವಾದ ಸೂತ್ರ ಇರಲೇಬೇಕು. ಅದು ಕಂಡುಹಿಡಿಯಲು ಆಗುತ್ತಿಲ್ಲ. ಅದು ಯಾವುದಿರಬಹುದು ಎಂದು ಎಲ್ಲವನ್ನು ಮರೆತು ಕಣ್ಣು ಮುಚ್ಚಿ ಕೆಲ ಕಾಲ ಯೋಚಿಸಿದ ಅವನ ಮನಸ್ಸು ಹೇಳಿತು. ಮೊದಲು ನಿನಗೆ ತೋಚಿದ ಹಾಗೆ ಲೆಕ್ಕ ಬಿಡಿಸು ನಂತರ ಬಾಗಿಲನ್ನ ಜೋರಾಗಿ ತಟ್ಟಿ ನೋಡು ಎಂದು. ಆತ ಮನಸ್ಸಿನ ಮಾತು ಕೇಳಿದ, ನನಗೆ ಗೊತ್ತಿದ್ದ ಹಾಗೆ ಲೆಕ್ಕ ಬಿಡಿಸಿ ಬಾಗಿಲು ತಟ್ಟಿದ ಕೂಡಲೇ ಅರಮನೆಯ ಮುಖ್ಯದ್ವಾರ ತೆಗೆಯಿತು. ಅವನನ್ನೆ ರಾಜ್ಯದ ಮುಂದಿನ ರಾಜ ಎಂದು ರಾಜ ಘೋಷಿಸಿದ.
ಎಡೆ ಹರ್ಷೋದ್ಗಾರವಾಯಿತು. ಇದರ ಸೂತ್ರ ಸರಳ. ನಾವು ಸಹ ಕೆಲವೊಮ್ಮೆ ಉಗುರಲ್ಲಿ ಆಗುವ ಕೆಲಸಕ್ಕೆ ಕೊಡಲಿ
ತೆಗೆದುಕೊಂಡರು ಎಂಬಂತೆ ಮಾಡಿಕೊಳ್ಳುತ್ತೇವೆ. ನಮ್ಮ ಜೀವನದಲ್ಲೂ ದೊಡ್ಡ ದೊಡ್ಡ ಸಮಸ್ಯೆಗಳು ಬಂದಿರುತ್ತವೆ. ಪ್ರತಿಯೊಂದು ಬೀಗಕ್ಕೂ ಕೀಲಿ ಕೈ ಇರುವಂತೆ, ಎಲ್ಲಾ ಸಮಸ್ಯೆಗೂ ಒಂದೊಂದು ಪರಿಹಾರ ನಮ್ಮ ಮುಂದೆಯೇ ಇರುತ್ತದೆ. ಆದರೆ ನಮ್ಮಲ್ಲಿ ಯೋಚಿಸುವ ತಾಳ್ಮೆ, ಸೂಕ್ಷ್ಮತೆ, ದೃಷ್ಟಿಕೋನ, ಎಲ್ಲಕ್ಕಿಂತ ಮುಖ್ಯವಾಗಿ ಮಾರ್ಗ ಹುಡುಕುವ ವ್ಯವಧಾನ ಇರುವುದಿಲ್ಲ.
ಹೀಗಾಗಿ ಬಲೆಯಲ್ಲಿ ಸಿಕ್ಕ ಮೀನಿನಂತೆ ಒದ್ದಾಡುತ್ತೇವೆ. ಕೆಲವೊಮ್ಮೆ ನಮ್ಮ ಮುಂದಿರುವ ಸಮಸ್ಯೆಗೆ ಪರಿಹಾರಗಳೇ ಇರುವುದಿಲ್ಲ. ಆಗ ನಾವು ಆ ಸಮಸ್ಯೆಯನ್ನು ಬಿಟ್ಟು ಜೀವನದಲ್ಲಿ ಬೇರೆ ಕಡೆಗೆ ಗಮನಹರಿಸಬೇಕಾಗುತ್ತದೆ.
ಈಗಲೂ ಕೂಡ ಆ ಹುಡುಗನಿಗೆ ಗಣಿತದ ಸಮಸ್ಯೆಗೆ ಪರಿಹಾರ ಸಿಗಲಿಲ್ಲ. ಆದರೆ ಅವನು ಅದರಿಂದ ಧೃತಿಗೆಡಲಿಲ್ಲ. ಬದಲಾಗಿ ತಾನು ರಾಜನ ಉತ್ತರಾಧಿಕಾರಿಯಾಗುವ ಇಚ್ಛೆಯಿಂದ ಬಾಗಿಲನ್ನು ತೆರೆಯುವ ಕಡೆ ಯೋಚಿಸಿದ. ಅಂತೆಯೇ ಜೀವನದಲ್ಲಿ ನಮಗೆ ಕೆಲವೊಮ್ಮೆ ಕಣ್ಣಿಗೆ ಕಾಣುವ ಸಮಸ್ಯೆಗೆ ಪರಿಹಾರ ಸಿಗದೇ ಹೋಗಬಹುದು.
ಆದರೆ ಅದನ್ನು ಹುಡುಕುವ ಪ್ರಯತ್ನದಲ್ಲಿ ಮತ್ತಾವುದೋ ಒಂದು ಹಳೆಯ ಸಮಸ್ಯೆಗೆ ಪರಿಹಾರ ಸಿಕ್ಕಿರುತ್ತದೆ. ಮತ್ತೊಂದು ವಿಷಯ ನಮ್ಮ ಜೀವನದಲ್ಲಿ ಇರುವ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗಲೇಬೇಕು ಎಂದೇನೂ ಇಲ್ಲ.
ಕೆಲವೊಮ್ಮೆ ಪರಿಹಾರ ಇಲ್ಲದಿರುವುದು ಕೂಡ ಆ ಸಮಸ್ಯೆಯ ಗುಣ ಎಂದು ಅರಿತು ಅದನ್ನು ಅಲ್ಲಿಗೆ ಬಿಟ್ಟು ಮುಂದಿನ ಜೀವನದ ಕಡೆ ಗಮನ ಹರಿಸಬೇಕು. ಇಲ್ಲದಿದ್ದರೆ ಅನಗತ್ಯವಾಗಿ ಸಮಯ ಹಾಳು ಮಾಡಿಕೊಳ್ಳುತ್ತೇವೆ. ಎಲ್ಲಕ್ಕಿಂತ ಮುಖ್ಯವಾಗಿ ಸರಳ ಸುಂದರವಾಗಿ ಬದುಕಲು ಜೀವನಕ್ಕೆ ಏನು ಬೇಕು ಅದು ಅಂದಂಧಿಗೆ ಒದಗಿ
ಬರುತ್ತಿದ್ದರೆ, ಹೆಚ್ಚು ತಲೆ ಕೆಡಿಸಿಕೊಳ್ಳಬಾರದು. ಒಂದೊಂದೇ ದಿನವನ್ನು ಚಂದವಾಗಿಸಿಕೊಳ್ಳಿ ಮುಂದೆ ಹಿಂತಿರುಗಿ ನೋಡಿದಾಗ ನಡೆದ ದಾರಿಯೆಲ್ಲ ಚಂದ ವಾಗಿರುತ್ತದೆ.
ಇದನ್ನೂ ಓದಿ: #RoopaGururaj