ಒಂದೊಳ್ಳೆ ಮಾತು

ರೂಪಾ ಗುರುರಾಜ್
ಅಂದು ಗುರುಗಳ ಆಶ್ರಮವಿದ್ದು, ಅಲ್ಲಿ ಅನೇಕ ಶಿಷ್ಯರಿದ್ದರು. ವಿದ್ಯಾರ್ಜನೆ ಮುಗಿಸಿ ಬದುಕು ಕಟ್ಟಿಕೊಳ್ಳಲು ಹೋಗುತ್ತಿದ್ದರು ಮತ್ತೆ ಹೊಸದಾಗಿ ಶಿಷ್ಯರು ಬರುತ್ತಿದ್ದರು . ಹೀಗೆ ಒಬ್ಬ ಶಿಷ್ಯ ತನ್ನ ವಿದ್ಯಾಭ್ಯಾಸ ಮುಗಿಸಿ ಗುರುಗಳ ಅನುಮತಿ ಪಡೆದು ಮನೆಗೆ ಹೊರಟನು. ಹೊರಡುವ ಮುನ್ನ ಗುರುಗಳಿಗೆ ನಮಸ್ಕರಿಸಿ ಗುರುಗಳೇ ಹೊರಗಿನ ಜಗತ್ತಿಗೆ ನಾನು ಹೇಗೆ ನಡೆದುಕೊಳ್ಳಬೇಕು ತಿಳಿಸಿ ಎಂದನು. ಅವನು ಕೇಳಿದ ಪ್ರಶ್ನೆಗೆ ಒಳಗೆ ಹೋದ ಗುರುಗಳು ಮುಷ್ಟಿಯಲ್ಲಿ
ಏನೋ ತಂದು ಅವನಿಗೆ ಕೊಟ್ಟು ಇದರಂತೆ ನಡೆದು ಆದರ್ಶ ಜೀವನ ನಡೆಸು ಎಲ್ಲವೂ ಒಳ್ಳೆಯದಾಗುತ್ತದೆ
ಎಂದರು.
ಗುರುಗಳು ಏನು ಕೊಟ್ಟಿದ್ದಾರೆ ಎಂದು ಶಿಷ್ಯ ಮುಷ್ಟಿಯನ್ನು ಬಿಚ್ಚಿ ನೋಡಿದ ಅದರಲ್ಲಿ ಹತ್ತಿ- ಸೂಜಿ- ದಾರ- ಮೊಂಬತ್ತಿ ಇತ್ತು. ನೋಡಿ ಪೆಚ್ಚಾದ ಶಿಷ್ಯ, ಗುರುಗಳೇ ಇದರಿಂದ ನಾನು ಆದರ್ಶದಿಂದಿರುವುದು ಹೇಗೆ? ಎಂದು ಕೇಳಿದ. ಗುರುಗಳು ಅವನ ಕೈಯಲ್ಲಿದ್ದ ಒಂದೊಂದನ್ನೇ ತೆಗೆದು ತೋರಿಸಿ ಹೇಳಿದರು.
ಹತ್ತಿ: ಹತ್ತಿಯಿಂದ ಬಟ್ಟೆ ಮಾಡುತ್ತಾರೆ. ಬಟ್ಟೆ ಎಲ್ಲರ ಮಾನ ಕಾಪಾಡುತ್ತದೆ. ಬಟ್ಟೆ ಸಮ್ಮಾನಕ್ಕೂ
ಪಾತ್ರವಾಗಿ ರಕ್ಷಣೆಯನ್ನು ಕೊಡುತ್ತದೆ. ನೀನು ಇದರಂತೆ ಇರಬೇಕು. ನೀನು ಸಾಧ್ಯವಾದಷ್ಟು
ಅಸಹಾಯಕರ, ದೀನದಲಿತರ ಮಾನ- ಸಮ್ಮಾನವನ್ನು ಕಾಪಾಡಬೇಕು ಎಂದರು. ಮೊಂಬತ್ತಿ: ಇದು ಉರಿದು, ಬೇರೆಯವರಿಗೆ ಬೆಳಕು ಕೊಟ್ಟು ತಾನು ಕರಗಿ ಹೋಗುತ್ತದೆ. ನಿನ್ನ ಕಷ್ಟಗಳು ಎಷ್ಟೇ ಇರಲಿ, ಅವುಗಳನ್ನು ಬದಿಗಿಟ್ಟು
ಕಷ್ಟದಲ್ಲಿರುವವರ ಬಗ್ಗೆ ಮರುಗಿ ನಿನ್ನ ಕೈಲಾದ ಸಹಾಯ ಮಾಡು ನಿನಗೆ ಸಂತೋಷ ಸಿಗುತ್ತದೆ.
ಸೂಜಿ ದಾರ: ಕತ್ತರಿ ತನಗಿರುವ ಎರಡು ಕಣ್ಣಿನಿಂದ ಬಟ್ಟೆಗಳನ್ನು ಕತ್ತರಿಸುತ್ತದೆ. ಅದು ಕತ್ತರಿಸಿದ ಬಟ್ಟೆಗಳನ್ನ ಒಂದು ಕಣ್ಣಿರುವ ಸೂಜಿ, ಸಣ್ಣ ದಾರದಿಂದ ಹೊಲಿದು ಜೋಡಿಸುತ್ತದೆ. ಕತ್ತರಿಗೆ ಕತ್ತರಿಸುವುದು ಅಷ್ಟೇ ಗೊತ್ತು ಅದನ್ನು ಮರು ಜೋಡಿಸಲು ಸಾಧ್ಯವಿಲ್ಲ. ಕೆಲವರು, ಪ್ರೀತಿಸಿ ಒಂದಾಗಿರುವ ಎರಡು ಮನಸ್ಸುಗಳನ್ನು
ಕತ್ತರಿಸಿ ಬೇರೆ ಬೇರೆ ಮಾಡುತ್ತಾರೆ. ಮೊದಲು ಒಂದಾಗಿದ್ದ ಜೀವಗಳು ದೂರವಾಗಿ ನೋವು ದುಃಖದಿಂದ ಬಳಲುತ್ತವೆ. ಹಾಗೆ ಬೇರೆ ಬೇರೆಯಾದ ಎರಡು ಮನಸ್ಸುಗಳನ್ನು ನೀನು ಒಂದೇ ಕಣ್ಣಿರುವ ಸೂಜಿ ದಾರದ ಸಹಾಯದಿಂದ ಹೊಲಿದು ಸೇರಿಸಿದಂತೆ ಮನಸ್ಸನ್ನು ಜೋಡಿಸಿ, ಅವರ ಮೊಗದಲ್ಲಿ ನಗು ಅರಳುವಂತೆ ಮಾಡಿ ಒಂದು
ಗೂಡಿಸಬೇಕು. ಪ್ರೀತಿಸುವ ಮನಸ್ಸುಗಳನ್ನು ಕತ್ತರಿಯಂತೆ ಕತ್ತರಿಸದೆ, ಸೂಜಿ ದಾರದಿಂದ ಸೇರಿಸಿ
ಜೋಡಿಸಬೇಕು ಎಂದರು.
ಶಿಷ್ಯನಿಗೆ ಗುರುಗಳ ಉಪದೇಶ ಅರ್ಥವಾಗಿ, ಅದರಿಂದ ಪ್ರಭಾವಿತನಾಗಿ, ಗುರುಗಳೇ ನಾನು ಯಾರ ಮನಸ್ಸಿಗೂ ನೋವಾಗದಂತೆ ಇರುತ್ತೇನೆ. ನೋವುಂಡು ಬೇರ್ಪಟ್ಟ ಮನಸ್ಸುಗಳನ್ನು ಸೂಜಿ, ದಾರದಿಂದ ಹೊಲಿದು ಜೋಡಿಸಿದಂತೆ ನಾನು ಮನಸ್ಸುಗಳನ್ನು ಒಂದುಗೂಡಿಸುತ್ತೇನೆ ಎಂದನು. ಇಂತಹ ಸೂಕ್ಷ್ಮಗಳನ್ನ ನಾವು ಮನೆಯಲ್ಲೂ ಕೂಡ ನಮ್ಮ ಮಕ್ಕಳಿಗೆ ಹೇಳಿಕೊಡಬೇಕು. ಮಕ್ಕಳು ಬರಿ ವಿದ್ಯಾಭ್ಯಾಸ ಮಾಡಿದರೆ ಸಾಲದು ಜೊತೆಗೆ
ಬದುಕುವ ಸೂಕ್ಷ್ಮಗಳು ಕೂಡ ಅವರಿಗೆ ಅರಿವಿರಬೇಕು. ಅವರನ್ನು ದೇಶದ ಸತ್ ಪ್ರಜೆಗಳನ್ನಾಗಿಸುವುದು ತಂದೆ ತಾಯಿಯಾಗಿ ನಮ್ಮ ಜವಾಬ್ದಾರಿ ಕೂಡ. ವಿದ್ಯಾಭ್ಯಾಸ ಹೇಳಿಕೊಡುವ ಪ್ರತಿ ಗುರುಕುಲದಲ್ಲೂ ಜೊತೆಯಲ್ಲಿ ಬದುಕುವ ಕಲೆಯನ್ನು, ಸಹಾಯ ಮಾಡುವ ಗುಣವನ್ನೂ, ನೊಂದು ಬೇರ್ಪಟ್ಟ ಜೀವಗಳಿಗೆ ಸಾಂತ್ವಾನ ಮಾಡಿ
ಅವರು ಒಂದಾಗಿ ಬದುಕು ನಡೆಸುವಂತೆ ಮಾಡುವುದು ಕೂಡ ಕಲಿಸುವಂತಾಗಬೇಕು.
ಎಷ್ಟೇ ಅಡ್ಡಿಗಳು ಬರಲಿ ಧರ್ಮ ಮಾರ್ಗದಲ್ಲಿ ನಡೆದೇ ಹೋಗಬೇಕು ಎಂಬ ಸಂಕಲ್ಪವನ್ನು ಶಿಷ್ಯರಲ್ಲಿ ಗಟ್ಟಿ
ಮಾಡುತ್ತಾ ಸಾವಿರಾರು ಶಿಷ್ಯರನ್ನು ತಿದ್ದಿ ತೀಡಬೇಕು. ಸ್ವಚ್ಛವಾದ ಮನಸ್ಸು ಒಳ್ಳೆಯ ಚಿಂತನೆಗಳನ್ನು ಅವರ ಮನದಲ್ಲಿ ಬಿತ್ತಿ ರಾಷ್ಟ್ರಕ್ಕೆ ಸತ್ಪ್ರಜೆಗಳನ್ನು ರೂಪಿಸಿ ಕೊಡುಗೆಯಾಗಿ ನೀಡುವ ಅರ್ಪಣಾ ಮನೋಭಾವ ಗುರುಕುಲದ ಗುರುಗಳಿಗೆ ಇದ್ದಾಗ ನಮ್ಮ ದೇಶ ಸಂಪೂರ್ಣವಾಗಿ ಧಾರ್ಮಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಯಾಗುತ್ತದೆ.
ಇದನ್ನೂ ಓದಿ: #bjp #roopaliganguly