Saturday, 10th May 2025

‌Roopa Gururaj Column: ನಿಜವಾದ ಸಂಗೀತ ಪ್ರೇಮ

ಒಂದೊಳ್ಳೆ ಮಾತು

ರೂಪಾ ಗುರುರಾಜ್

ಒಬ್ಬ ರಾಜನಿದ್ದ. ಅವನಿಗೆ ಸಂಗೀತವೆಂದರೆ ಬಹಳ ಪ್ರೀತಿ. ಸಂಗೀತಗಾರರಿಗೆ ಬಹಳ ವಾಗಿ ಪ್ರೋತ್ಸಾಹಿಸುತ್ತಿದ್ದ. ಸಂಗೀತಗಾರರು ಎಲ್ಲಾ ಇರಲಿ ಅವರನ್ನು ಕರೆಯಿಸಿ ಅವರ ಸಂಗೀತ ಕಛೇರಿಯನ್ನು ಏರ್ಪಡಿಸಿ ಅವರನ್ನು ಸನ್ಮಾನಿಸುತ್ತಿದ್ದ. ರಾಜ ಸಂಗೀತ ಕಛೇರಿಯನ್ನು ಏರ್ಪಡಿಸಿದಾಗ ಅದನ್ನು ಕೇಳಲು ಅನೇಕ ಜನರು ಬರುತ್ತಿದ್ದರು.
ಅವರಲ್ಲಿ ಕೆಲವರು ಸಂಗೀತದಲ್ಲಿ ನಿಜವಾದ ಆಸಕ್ತಿಯುಳ್ಳವರಾಗಿದ್ದರು. ಆದರೆ ಕೆಲವರಿಗೆ ಅದರಲ್ಲಿ ಯಾವ ಆಸಕ್ತಿ ಇಲ್ಲದಿದ್ದರೂ, ತಮಗೂ ಸಂಗೀತ ಚೆನ್ನಾಗಿ ಗೊತ್ತಿದೆ ಎಂದು ನಟಿಸುತ್ತಾ ರಾಜನಿಂದ ಹೊಗಳಿಸಿಕೊಳ್ಳಲು, ಸಂಗೀತ ಕಛೇರಿ ನಡೆಯುವಾಗ ಜೋರಾಗಿ ತಲೆ ಅಡಿಸುತ್ತಾ, ತಪ್ಪು ತಪ್ಪಾಗಿ ತಾಳ ಹಾಕುತ್ತಿದ್ದರು.

ಸಿಂಹಾಸನದ ಮೇಲೆ ಕುಳಿತಿರುತ್ತಿದ್ದ ರಾಜ ಇದನ್ನೆ ಗಮನಿಸುತ್ತಿದ್ದ. ಇವರೆ ನಿಜವಾದ ಸಂಗೀತ ಪ್ರೇಮಿಗಳಲ್ಲ ಎಂದು ಅವನಿಗೆ ಅನ್ನಿಸುತ್ತಿತ್ತು. ನಿಜವಾದ ಅಭಿಮಾನಿಗಳು ಯಾರು ಎಂದು ತಿಳಿಯುವುದೇ ರಾಜನಿಗೆ ಕಷ್ಟವಾಗುತ್ತಿತ್ತು. ದಿನದಿಂದ ದಿನಕ್ಕೆ ಸಂಗೀತ ತಮಗೆ ಚೆನ್ನಾಗಿ ಗೊತ್ತು ಎಂದು ನಟಿಸುವವರ ಸಂಖ್ಯೆಯೇ
ಜಾಸ್ತಿಯಾಯಿತು.

ರಾಜ ಇದಕ್ಕೆ ಒಂದು ಉಪಾಯ ಹೂಡಿದ. ಸಂಗೀತವನ್ನು ಕೇಳಲು ಬಂದವರ್ಯಾರೂ ತಲೆ ಅಡಿಸಬಾರದು ತಾಳ ಹಾಕಬಾರದು, ಹಾಗೇನಾದರೂ ಮಾಡಿದರೆ, ಅವರು ಕಠಿಣ ಶಿಕ್ಷೆಗೆ ಒಳಗಾಗುತ್ತಾರೆ ಎಂದು ಆಜ್ಞೆ ಮಾಡಿದ.
ಒಂದು ಸಲ ರಾಜ ದೊಡ್ಡ ಸಂಗೀತ ವಿದ್ವಾಂಸರನ್ನು ಕರೆಸಿ ಸಂಗೀತ ಕಛೇರಿ ಏರ್ಪಡಿಸಿದ. ಕಛೇರಿಗೆ ರಾಜನ ಪರಿವಾರದವರು ಮಿತ್ರರು ಇನ್ನೂ ಅನೇಕರು ಉಪಸ್ಥಿತರಿದ್ದರು. ಅವರಲ್ಲಿ ಒಬ್ಬ, ಸಾಮಾನ್ಯ ಪ್ರಜೆಯೂ ಸಂಗೀತ ಕೇಳಲೆಂದು ಬಂದಿದ್ದ. ಅವನು ನಿಜವಾದ ಸಂಗೀತ ಅಭಿಮಾನಿಯಾಗಿದ್ದ.

ಸಂಗೀತ ಆರಂಭವಾಯಿತು. ಬಂದಿದ್ದ ಸಂಗೀತ ವಿದ್ವಾಂಸ ಬಹಳ ಅದ್ಭುತವಾಗಿ ಹಾಡುತ್ತಿದ್ದ. ಅವನ ಕಂಠ ಬಹಳ ಸುಶ್ರಾವ್ಯವಾಗಿತ್ತು. ಎಲ್ಲರೂ ರಾಜನ ಆಜ್ಞೆಯಂತೆ ನಿಶಬ್ದದಿಂದ ಕುಳಿತು ಸಂಗೀತವನ್ನು ಕೇಳುತ್ತಿದ್ದರೆ, ಈ ಸಾಮಾನ್ಯ ಮನುಷ್ಯನಿಗೆ ಮಾತ್ರ, ಸಂಗೀತವನ್ನು ಕೇಳಿ ತಲೆದೂಗದೇ ಇರಲಾಗಲಿಲ್ಲ. ತಾಳ ಹಾಕ ತೊಡಗಿದ. ಎಲ್ಲರೂ ಇವನ ಕಡೆ ನೋಡ ತೊಡಗಿದರು. ಆಗ ಈ ಮನುಷ್ಯ ಎಚ್ಚೆತ್ತುಕೊಂಡು, ಎದ್ದು ನಿಂತು, ‘ಪ್ರಭೂ, ನನ್ನನ್ನು ಕ್ಷಮಿಸಿ, ನಾನು ನಿಮ್ಮ ಆಜ್ಞೆಯನ್ನು ಮೀರಿ ವರ್ತಿಸಿದೆ,ನೀವು ನನಗೆ ಕಠಿಣ ಶಿಕ್ಷೆ ಕೊಟ್ಟರೂ ಪರವಾಗಿಲ್ಲ, ಈ ಸಂಗೀತ ವಿದ್ವಾಂಸನ ಅದ್ಭುತ ಗಾಯನಕ್ಕೆ ತಲೆದೂಗದೆ ಇರಲು ತಾಳ ಹಾಕದೇ ಇರಲು ನನ್ನಿಂದ ಸಾಧ್ಯವಾಗುತ್ತಿಲ್ಲ ಇವರ ಸಂಗೀತ ಅಷ್ಟು ಇಂಪಾಗಿದೆ. ಇದರಿಂದ ನನಗೆ ಬಹಳ ಆನಂದವಾಗಿದೆ, ನೀವು ಏನೇ ಶಿಕ್ಷೆ ಕೊಟ್ಟರೂ
ಅದನ್ನು ಸ್ವೀಕರಿಸಲು ನಾನು ತಯಾರಿದ್ದೇನೆ’ ಎಂದು ಹೇಳಿದ.

ಈಗ ರಾಜನಿಗೆ ನಿಜವಾಗಿಯೂ ಬಹಳ ಸಂತೋಷವಾಯಿತು. ತಾನು ಹುಡುಕುತ್ತಿದ್ದ ನಿಜವಾದ ಸಂಗೀತಾಭಿಮಾನಿ ಸಿಕ್ಕನಲ್ಲ ಎಂದು ಸಂತೋಷದಿಂದ ಸಿಂಹಾಸನದಿಂದ ಕೆಳಗೆ ಇಳಿದು ಬಂದು ಅವನನ್ನು ತಬ್ಬಿಕೊಂಡನು. ಅವನನ್ನು ತನ್ನ ಆಪ್ತ ಗೆಳೆಯನನ್ನಾಗಿ ಮಾಡಿಕೊಂಡನು. ರಾಜನನ್ನು ತೃಪ್ತಿಗೊಳಿಸಲು ಅವನ ಮುಂದೆ,
ಮಹಾ ಸಂಗೀತ ಪ್ರೇಮಿಗಳಂತೆ ನಟಿಸುತ್ತಿದ್ದವರಿ ಗೆಲ್ಲ ಅಲ್ಲಿರಲು ನಾಚಿಕೆಯಾಯಿತು. ಅವರೆಲ್ಲ ಅಲ್ಲಿಂದ ಎದ್ದು ಹೊರಟು ಹೋದರು.

ಸಂಗೀತವನ್ನು ಸುಶ್ರಾವ್ಯವಾಗಿ ಹಾಡುವುದರಷ್ಟೇ ಅದನ್ನು ಆಸ್ವಾದಿಸಿ ಕೇಳುವುದು ಕೂಡಾ ಒಂದು ದೊಡ್ಡ ಕಲೆಯೇ. ಅದನ್ನು ಕೇಳಲು ಕೂಡಾ ಆಸಕ್ತಿ ಇರಬೇಕು. ಎಲ್ಲರಲ್ಲೂ ಈ ರೀತಿಯ ಆಸಕ್ತಿ ಇರುವುದಿಲ್ಲ. ಇಂತಹ ಕಲಾಭಿಮಾನಿ ಗಳಿಂದಲೇ ಕಲಾವಿದರಿಗೆ ಇನ್ನಷ್ಟು ಸ್ಪೂರ್ತಿ ದೊರೆಯುವುದು.

ನಿಮ್ಮ ಊರಿನಲ್ಲಿ ಸಭಾಂಗಣದಲ್ಲಿ ಸಂಗೀತ ಸಂಜೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ವರಂತ್ಯದಲ್ಲಿ ನಡೆಯುತ್ತಿರುತ್ತವೆ. ಸಾಧ್ಯವಾದರೆ ಮಕ್ಕಳೊಂದಿಗೆ ಹೋಗಿ ಕಾರ್ಯಕ್ರಮ ನೋಡಿ ಕಲಾವಿದರನ್ನು ಪ್ರೋತ್ಸಾಹಿಸಿ. ವಾರಕ್ಕೊಮ್ಮೆಯಾದರೂ ಮೊಬೈಲ, ಟಿವಿ ಎಲ್ಲ ಮರೆತು ನಮ್ಮ ಮಕ್ಕಳಿಗೆ ಇಂತಹ ಸಾಂಸ್ಕೃತಿಕ ಸಂಗೀತ ಕಾರ್ಯ
ಕ್ರಮಗಳ ರುಚಿ ಇದರಿಂದ ಕಲಾವಿದರಿಗೆ ಪ್ರೋತ್ಸಾಹ ದೊರೆಯುತ್ತದೆ ಜೊತೆಗೆ ನಮ್ಮ ಮಕ್ಕಳಿಗೂ ಕೂಡ ಸಂಗೀತ, ಕಲೆಯ ಬಗ್ಗೆ ಅರಿವು ಮೂಡುತ್ತದೆ. ಬರಿ ವಿದ್ಯೆ ಒಂದೇ ಅಲ್ಲ ಅದರ ಜೊತೆಗೆ ಎಲ್ಲ ರೀತಿಯ ಕಲೆಯ ರುಚಿ ಕೂಡ ನಮ್ಮ ಮಕ್ಕಳಿಗೆ ಇದ್ದಾಗ ಅವರ ಸರ್ವತೋಮುಖ ಬೆಳವಣಿಗೆ ಸಾಧ್ಯ.

ಇದನ್ನೂ ಓದಿ: #RoopaGururaj