ಒಂದೊಳ್ಳೆ ಮಾತು

ರೂಪಾ ಗುರುರಾಜ್
ವೆಂಕಟಾಚಲ ಅವಧೂತ ಗುರುಗಳ ಮನೆಗೆ ಶ್ರೀಮಂತ ದಂಪತಿಗಳು ಕಾರಿನಲ್ಲಿ ಬಂದು, ಗುರುಗಳಿಗೆ ನಮಸ್ಕರಿಸಿ ಕುಳಿತುಕೊಂಡರು. ಆಗ ಗುರುಗಳ ಮುಂದೆ ಕುಳಿತಿದ್ದ ಭಕ್ತರಿಗೆ ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾ ದಂಪತಿಗಳ ಕಡೆಗೆ ಕಣ್ಣು ಹಾಯಿಸಿ ‘ಯಾರು ನೀವು ಏನು
ಬಂದಿರುವುದು ಎಂದರು?’ ಆಗ ದಂಪತಿಗಳು ಗುರುಗಳಿಗೆ ನಮಸ್ಕರಿಸಿ ‘ದೇವರು ಕೊಟ್ಟ ಹಾಗೆ ನಮಗೆ ಯಾವ ತೊಂದರೆಯೂ ಇಲ್ಲ ಗುರುಗಳೇ. ಮನೆ ಬಂಗ್ಲೆ, ಕಾರು, ಸೆಕ್ಯೂರಿಟಿ ಎಲ್ಲ ಇದೆ.
ಆದರೆ ಮನೆಯಲ್ಲಿ ಯಾಕೋ ನೆಮ್ಮದಿಯೇ ಇಲ್ಲ’ ಎಂದರು, ಆಗ ಗುರು ಮಹಾರಾಜರು ‘ಎಲ್ಲ ಇದ್ದಮೇಲೆ ಇನ್ನೇನು ಯೋಚನೆ?’ ಎಂದಾಗ
ಅವರು ‘ಇಲ್ಲ ಗುರುಗಳೇ, ಯಾಕೋ ನೆಮ್ಮದಿಯೇ ಇಲ್ಲ ಅದಕ್ಕೆ ನಿಮ್ಮ ಬಳಿಗೆ ಪರಿಹಾರಕ್ಕಾಗಿ ಬಂದಿದ್ದೇವೆ’ ಎಂದರು. ಆಗ ಗುರುಗಳು ನಿಮ್ಮ ಮನೆಯಲ್ಲಿ ಅಮೂಲ್ಯವಾದ ಒಂದು ವಸ್ತು ಕಳೆದು ಹೋಗಿದೆ ಅದನ್ನು ಹುಡುಕಿಕೊಳ್ಳಿ ನಿಮಗೆ ನೆಮ್ಮದಿ ಸಿಗುತ್ತದೆ ಎಂದರು. ಆಗ ದಂಪತಿ ಗಳಿಬ್ಬರೂ ಒಬ್ಬರಿಗೊಬ್ಬರು ನಮ್ಮ ಮನೆಯಲ್ಲಿ ಯಾವುದಾದರೂ ಒಡವೆ ವಸ್ತು ಕಳುವಾಗಿದೆಯೇ ಇಲ್ಲ!
ಯಾವುದೇ ವಸ್ತು ಕಳುವಾಗಿಲ್ಲ ಎಂದು ತೀರ್ಮಾನಕ್ಕೆ ಬಂದು ನಂತರ ಗುರುಗಳಿಗೆ ‘ಗುರುಗಳೇ ನಮ್ಮ ಮನೆಯಲ್ಲಿ ಕಳುವಾಗಿರಲಿಕ್ಕೆ ಸಾಧ್ಯತೆಗಳು ಇಲ್ಲ. ನಮ್ಮ ಮನೆಯಲ್ಲಿ ಸೆಕ್ಯೂರಿಟಿ ಗಾರ್ಡ್, ಸಿಸಿಟಿವಿ ಎಲ್ಲ ಉಂಟು ಯಾವುದು ಕಳುವಾಗಿಲ್ಲ ಗುರುಗಳೇ’ ಎಂದರು. ಆಗ ಗುರುಗಳು ಇಲ್ಲಪ್ಪ ‘ನಿಮ್ಮ ಮನೆಯಲ್ಲಿ ಅತ್ಯ ಅಮೂಲ್ಯವಾದ ವಸ್ತುವೊಂದು ಕಳುವಾಗಿದೆ ಜ್ಞಾಪಿಸಿಕೊಳ್ಳಿ’ ಎಂದರು. ಆಗ ದಂಪತಿಗಳಿಬ್ಬರೂ ‘ಖಂಡಿತ ಯಾವುದು ಕಳುವಾಗಿಲ್ಲ ಗುರುಗಳೇ’ ಎಂದು ನಿಖರವಾಗಿ ಹೇಳಿದರು. ಆಗ ಕೋಪಗೊಂಡ ಗುರುಗಳು ‘ನಿಮ್ಮ ತಾಯಿಯನ್ನು ಬೇರೆ ಮನೆ ಮಾಡಿ ಇಟ್ಟಿದ್ದೀರಲ್ಲ ಆ ಮಾತೃ ಹೃದಯ ಕಣ್ಣೀರು ಹಾಕುತ್ತಿದೆ. ಭಗವಂತ ನಿಮಗೆ ಇಷ್ಟೆಲ್ಲ ಕೊಟ್ಟಿದ್ದು ನೀವು ಏಕೆ ಆ ಮಾತೃ ಹೃದಯವನ್ನು ನೋಯಿಸುತ್ತಿದ್ದೀರಿ’ ಎಂದಾಗ ಆ ದಂಪತಿಗಳಿಗೆ ತಮ್ಮ ತಪ್ಪಿನ ಅರಿವಾಯಿತು. ‘ನಿಮ್ಮ ಈ ದುಸ್ಥಿತಿಗೆ ಕಾರಣ ನಿಮ್ಮ ತಾಯಿಯನ್ನು ದೂರ ಮಾಡಿಕೊಂಡಿರುವುದು ಮೊದಲು ಹೋಗಿ ನಿಮ್ಮ ತಾಯಿ ಯನ್ನು ಮನೆಗೆ ಕರೆದುಕೊಂಡು ಬನ್ನಿ’ ಎಂದರು.
ದಂಪತಿಗಳಿಬ್ಬರು ಗುರುಗಳಿಗೆ ನಮಸ್ಕರಿಸಲು ಹೋದಾಗ ಗುರುಗಳು ‘ನಿಮ್ಮ ನಮಸ್ಕಾರ ತಾಯಿಯನ್ನು ಕರೆದುಕೊಂಡು ಬಂದ ಮೇಲೆ
ಸ್ವೀಕರಿಸುವೆ’ ಖಡಾಖಂಡಿತವಾಗಿ ಹೇಳಿ ಬಿಟ್ಟರು. ಆಮೇಲೆ ನೋಡೋಣ ಎಂದರು.
ಆಗ ದಂಪತಿಗಳಿಬ್ಬರು ತಮ್ಮ ಕಾರಿನಲ್ಲಿ ಊರಿಗೆ ಹೋಗಿ ತಮ್ಮ ತಾಯಿಯನ್ನು ಮರಳಿ ಮನೆಗೆ ಕರೆ ತಂದು ನಂತರ ಗುರುಗಳ ಮನೆಗೆ ಬಂದರು, ಆಗ ಆ ತಾಯಿಯು ಗುರುಗಳ ಪಾದಕ್ಕೆ ಬಿದ್ದು ಅಳುತ್ತಾ ನಿಂತರು. ಆಕೆಯನ್ನು ಕಂಡ ಗುರುಗಳು ‘ಯಾಕೆ ತಾಯಿ ಅಳುತ್ತೀಯಾ ನೆನ್ನೆ ಇದೇ ಸಮಯಕ್ಕೆ ನನ್ನ ಫೋಟೋ ಮುಂದೆ ನಿಂತು ಕಣ್ಣೀರು ಹಾಕುತ್ತಾ ಹೇಗಾದರೂ ಮಾಡಿ ನನ್ನ ಮಕ್ಕಳ ಜೊತೆಗೆ ನನ್ನನ್ನು ಸೇರಿಸಿ ಗುರುಗಳೇ ಎಂದು ಕೇಳುತ್ತಿzಯಲ್ಲ ನೋಡು ಕೇವಲ 24 ಗಂಟೆಗಳಲ್ಲಿ ನಿನ್ನ ಮಕ್ಕಳಿಗೆ ತಪ್ಪನ್ನು ಅರಿವು ಮಾಡಿಸಿ ನಿನ್ನೊಂದಿಗೆ ನಿನ್ನ ಮಕ್ಕಳನ್ನು ಸೇರಿಸಿದ್ದೇನೆ.
ಖುಷಿಯಾಯಿತೇ?’ ಎಂದು ಆಕೆಯನ್ನು ಕೇಳಿದರು. ಆಗ ಆ ತಾಯಿ ಸಮಾಧಾನದಿಂದ ಹೌದು ಎಂದು ತಲೆಯಾಡಿಸಿದರು. ಗುರುಗಳು ಆ
ದಂಪತಿಗಳನ್ನು ಕುರಿತು ಇನ್ನು ಮುಂದೆ ನಿಮ್ಮ ತಾಯಿಗೆ ಕಣ್ಣೀರು ಹಾಕಿಸುವುದಿಲ್ಲ ಎಂದು ಪ್ರಮಾಣ ಮಾಡಿ ಎಂದರು. ದಂಪತಿಗಳಿಬ್ಬರು
ತಪ್ಪಿಗಾಗಿ ಕ್ಷಮೆ ಕೇಳಿ ತಾಯಿಗೆ ನಮಸ್ಕರಿಸಿ, ಗುರುಗಳ ಕಾಲಿಗೆ ನಮಸ್ಕರಿಸಿ ನಿಂತರು.
ಗುರುಗಳು ಇನ್ನು ಮುಂದೆ ನಿಮಗೆ ಖಂಡಿತ ಒಳ್ಳೆಯದಾಗುತ್ತದೆ. ಪ್ರಪಂಚದಲ್ಲಿ ತಂದೆ ತಾಯಿಗಳು ನಿಟ್ಟಿಸಿರು ಬಿಡುವಂತೆ ಮಾಡಿದ
ಯಾವ ಮಕ್ಕಳು ಸುಖವಾಗಿರಲು ಸಾಧ್ಯವಿಲ್ಲ. ತಂದೆ ತಾಯಿಯನ್ನು ನೋಯಿಸಿದಾಗ ನಿಮ್ಮ ಯಾವ ಆಸ್ತಿ ಅಂತಸ್ತು ಕೂಡ ನಿಮಗೆ ಸುಖವನ್ನು
ಕೊಡಲಾಗದು ನೆನಪಿಟ್ಟುಕೊಳ್ಳಿ ಎಂದರು. ಈ ಮಾತು ನಮಗೆಲ್ಲ ಅನ್ವಯಿಸುತ್ತದೆ ಅಲ್ಲವೇ?
ಇದನ್ನೂ ಓದಿ: #RoopaGururaj