Saturday, 10th May 2025

‌Roopa Gururaj Column: ಸಾರ್ಥಕ್ಯ ಕಂಡುಕೊಂಡ ಬಿದಿರಿನ ಬದುಕು

ಒಂದೊಳ್ಳೆ ಮಾತು

ರೂಪಾ ಗುರುರಾಜ್

ಬಿದಿರು ಗಿಡಕ್ಕೆ ಒಮ್ಮೆ ಬಹಳ ಬೇಸರವಾಯಿತು. ನಾನೊಂದು ನತದೃಷ್ಟ ಮರ; ನನ್ನನ್ನು ಬ್ರಹ್ಮನು ಏಕೆ ಸೃಷ್ಟಿ ಮಾಡಿದನೋ ಗೊತ್ತಿಲ್ಲ? ಒಂದು ಹೂವಿಲ್ಲ, ಕಾಯಿಲ್ಲ, ಹಣ್ಣಿಲ್ಲ, ಬಂದವರಿಗೆ ನೆರಳು ಕೊಡಲು ನನ್ನ ಎಲೆಗಳಲ್ಲಿ ನೀರಿನ ಪಸೆ ಇಲ್ಲ, ಒಲೆಗೆ ಕಟ್ಟಿಗೆ ಉರಿಸಲು ಅಪಶಕುನ ಎನ್ನುವರು. ಕೆಲವರು ನನ್ನನ್ನು ಏಣಿ ಮಾಡಿಕೊಳ್ಳುತ್ತಾರೆ.

ನನ್ನ ಏಣಿ ಹತ್ತಿ ಮೇಲೆ ಏರಿದವರು ನನ್ನನ್ನೇ ಮರೆಯುತ್ತಾರೆ. ಕಟ್ಟ ಕಡೆಗೆ ಹೆಣಕ್ಕೆ ಚಟ್ಟವಾಗಿ ಹೆಣದೊಂದಿಗೆ ಸುಟ್ಟು ಹೋಗುವೆ. ಥೂ ನನ್ನದೂ ಒಂದು ಬದುಕೇ? ನನ್ನ ಹುಟ್ಟಿಗೆ ಏನು ಅರ್ಥ’ ಎಂದು ಕೊನೆಗೆ ತಡೆಯದೆ ನೇರವಾಗಿ ಬ್ರಹ್ಮನಲ್ಲಿ ಹೋಗಿ ಕೇಳಿತು. ಬ್ರಹ್ಮದೇವ ‘ನಿನ್ನ ಸೃಷ್ಟಿಯಲ್ಲಿ ನನ್ನನ್ನು ಏಕೆ ಸೃಷ್ಟಿಸಿದೆ. ಇದು ಶಾಪವಲ್ಲವೇ?’ ಎಂದು ಕೇಳಿತು. ನಸುನಕ್ಕು ಬ್ರಹ್ಮ ಹೇಳಿದ ‘ನಾನು ಯಾರಿಗೂ ವರವನ್ನಾಗಲಿ- ಶಾಪವನ್ನಾ ಗಲಿ ಕೊಡುವುದಿಲ್ಲ. ನನ್ನ ಸೃಷ್ಟಿಯೊಳಗೆ ಎಲ್ಲಕ್ಕೂ ಅದರದೇ ಆದ ಪ್ರಾಮುಖ್ಯತೆ, ಪಾತ್ರ, ಮೌಲ್ಯ , ಉಪಯೋಗ ಒಂದು ಸ್ವರೂಪ ಎಲ್ಲವೂ ಇದೆ. ಕತ್ತಲೆಯಲ್ಲಿ ಬೀದಿ ದೀಪ ಬೆಳಕು ಕೊಡುವುದಿಲ್ಲವೇ? ಹಾಗೆ ಎಲ್ಲೋ ಬಿದ್ದಿರುವ ಬಂಡೆ ಉಳಿಪೆಟ್ಟು ತಿಂದು ಶಿಲೆಯಾಗಿ, ಗುಡಿಯಲ್ಲಿ ದೇವರಾಗುವುದಿಲ್ಲವೇ? ಪುಟ್ಟ ಇರುವೆ ಎಷ್ಟು ದೂರದ ಹಾದಿ ಸವೆಸುವುದಿಲ್ಲವೇ ? ಹಾಗೆ ನಿನ್ನಲ್ಲೂ ಶಕ್ತಿ ಇದೆ ಪ್ರಯತ್ನಿಸಬೇಕು. ಮುಗಿಲೆತ್ತರಕ್ಕೆ ಬೆಳೆ’ ಎಂದನು. ಈ ಮಾತನ್ನು ಕೇಳಿದ ಬಿದಿರು, ಹಠಕ್ಕೆ ಬಿದ್ದಂತೆ ಬೆಳೆಯಿತು. ಬೆಳೆದು, ಬಿದಿರು ಮೆಳೆಯಾಗಿ ಕೋಟೆಯಂತೆ ಸುತ್ತ ಹರಡಿತು.

ದುಂಬಿಯೊಂದು ಬಂದು ಬಿದಿರಿನ ಗಳಗಳನ್ನು ಕೊರೆದು ಕೆಲವು ರಂಧ್ರಗಳನ್ನು ಮಾಡಿತು. ಕೊರೆಯುತ್ತಿದ್ದಾಗ ಬಿದಿರಿಗೆ ಬಹಳ ವೇದನೆ ಆಗುತ್ತಿತ್ತು. ರಂಧ್ರಗಳೊಳಗೆ ತಣ್ಣನೆ ಗಾಳಿ ಬಂದು, ಇದುವರೆಗೂ ಮಡುಗಟ್ಟಿ ತುಂಬಿದ್ದ ದುಃಖವೆಲ್ಲ ಒಮ್ಮೆಲೆ ಕರಗಿ ಹಗುರವಾದಂತೆ
ಎನಿಸಿತು.

ದುಂಬಿ, ರಂಧ್ರ ಕೊರೆದಿದ್ದ ಆ ಬಿದಿರು ಕೋಲು ಕೆಲವು ದಿನಗಳಲ್ಲಿ ಉದುರಿ ಕೆಳಗೆ ಬಿದ್ದಿತು. ಒಮ್ಮೆ ಆ ಮಾರ್ಗದಲ್ಲಿ ದಾರಿಹೋಕನೊಬ್ಬ ಹೋಗುತ್ತಿದ್ದ. ಆತನ ಕಾಲಿಗೆ ಬಿದಿರು ಸಿಕ್ಕು ಎಡವಿದ. ಆತ ಮುಂದೆ ಹೋಗದೆ ಆ ಬಿದಿರನ್ನು ಕೈಗೆತ್ತಿಕೊಂಡ. ತನ್ನ ಪೂರ್ಣ ದೃಷ್ಟಿಯನ್ನು ಅದರ ಮೇಲೆ ಹರಿಸಿದ. ಕೈಯ್ಯಳತೆಯ ಬಿದಿರನ್ನು ಮುರಿದು ಹಿಂದೆ ಮುಂದೆ ತಿರುಗಿಸಿ ನೋಡಿ ಅದನ್ನು ತನ್ನ ಮುಖದ ಹತ್ತಿರ ತೆಗೆದುಕೊಂಡು ಹೋಗಿ ತನ್ನ ತುಟಿಗಳಿಗೆ ಹಿಡಿದು, ಒಂದು ರಂದ್ರದ ಮೇಲೆ ತನ್ನ ತುಟಿಯೊತ್ತಿದ. ಬಿದಿರಿನ ಮೈ ಪುಳಕ ಗೊಂಡಿತು; ಎಂಥದೊ ಮಧುರಭಾವ ಅದರಲ್ಲಿ ಮೂಡಿತು.

ಆ ವ್ಯಕ್ತಿಯು ತನ್ನ ಪ್ರಾಣದ ಉಸಿರನ್ನು ಬೆರೆಸಿ ಅದಕ್ಕೊಂದು ಹದ ಸಿಗುವಂತೆ ಮಾಡಿ, ಸ್ವಲ್ಪ ಸ್ವಲ್ಪವಾಗಿ ಉಸಿರನ್ನು ಹೊರ ಚೆಲ್ಲುತ್ತಾ ಬಂದನು.
ಅದು ಗಾಳಿಯಲ್ಲಿ ಅಲೆಯಾಗಿ ಹರಿದು ಮಧುರನಾದ ಎಲ್ಲೆಡೆ ಬೀರಿತು. ಅದೇ ‘ಹರಿಬಿಟ್ಟ ನಾದ’ವಾಗಿ ಅದರ ಸೂತ್ರದಾರನೇ ಶ್ರೀಕೃಷ್ಣ ನಾದನು.
ಬಿದಿರು ಕೃಷ್ಣನ ಕೈಯಲ್ಲಿ ಪ್ರಿಯವಾದ ಕೊಳಲಾಯಿತು.

ಮಗುವಿಗೆ ತೊಟ್ಟಿಲಾಯಿತು. ಬಡವರಿಗೆ ನೆರಳಾಯಿತು. ಸೀಯರಿಗೆ ಧಾನ್ಯಗಳ ಕೇರುವ ಹಾಗೂ ಮುತ್ತೈದೆಯರ ಬಾಗಿನದ ಮೊರವಾಯಿತು.
ಅಂಬಿಗನ ಹುಟ್ಟಾಯಿತು. ಹತ್ತಲು ಏಣಿಯಾಯಿತು, ಪೀಠೋಪಕರಣಗಳಾಯಿತು, ಪೂಜೆ ಹೂವಿನ ಬುಟ್ಟಿಯಾಯಿತು, ಮಕ್ಕಳಿಗೆ ಆಡಲು ಪೆಟ್ಲಾಯ್ತು ಹಿರಿಯರಿಗೆ ಮಡಿ ಕೋಲು, ಬಟ್ಟೆ ಹರಡಲು ಗಳವಾಯಿತು, ಅಜ್ಜನಿಗೆ ನಡೆಯಲು ಊರು ಗೋಲಾಯಿತು, ಮನೆಟ್ಟುವ ದಬ್ಬೆಯಾಯಿತು, ಧಾನ್ಯ ತುಂಬುವ ಕಣಜವಾಯಿತು, ಬಿದಿರು ಅಕ್ಕಿ ಆರೋಗ್ಯದ ಊಟವಾಯಿತು, ದೀಪದ ಕಂಬವಾಯಿತು, ಕಾಗದ-
ಬಟ್ಟೆಗಳ ತಯಾರಿಕೆಗೆ ಕಚ್ಚಾ ಸರಕಾಯಿತು, ಆನೆಗಳ ಆಹಾರವಾಯಿತು, ಜಾತ್ರೆ ಉತ್ಸವಗಳಲ್ಲಿ ನಂದಿ ಕೋಲಾಯಿತು. ಬಿದಿರಿನ ದೀಪಾವಳಿ ಹಬ್ಬದ ಆಕಾಶ ಬುಟ್ಟಿಯಿಂದ ಹಿಡಿದು, ಸಣ್ಣ ದೊಡ್ಡ ಬುಟ್ಟಿಗಳು ಹಣ್ಣು ಹೂವುಗಳನ್ನು ತುಂಬಲು, ಗೊಬ್ಬರ- ಸಗಣಿ- ದರಗು ತುಂಬವ ಹೆಡೆಗೆ, ಪಾತ್ರೆ – ಪಗಡಿ – ಬಟ್ಟೆ -ಬರೆ ಸರಂಜಾಮು, ತುಂಬುವ, ಪ್ರಯಾಣಿಕ್ಕೆ, ಬಹುಪಯೋಗಿಯಾಯಿತು. ಭಗವಂತನೊಲಿದರೆ ಎಲ್ಲರ ಜೀವನಕ್ಕೂ ಸಾರ್ಥಕ್ಯ ಸಿಗುತ್ತದೆ; ಕಾಯುವ ತಾಳ್ಮೆ ಭರವಸೆ ನಮಗಿರಬೇಕು.

ಇದನ್ನೂ ಓದಿ: roopaGururaj