ಒಂದೊಳ್ಳೆ ಮಾತು

ರೂಪಾ ಗುರುರಾಜ್
ದಕ್ಷಯಜ್ಞದಲ್ಲಿ ಬಲಿಯಾದ ಶಿವನ ‘ಸತಿ’ ಮರುಜನ್ಮದಲ್ಲಿ ಪರ್ವತ ರಾಜನ ಮಗಳು ಪಾರ್ವತಿಯಾಗಿ ಜನಿಸಿದಳು. ಪಾರ್ವತಿ ಬೆಳೆದಂತೆ ಅವಳ ಸೌಂದರ್ಯ ಅಗಾಧವಾದ, ಶಕ್ತಿ -ಧೈರ್ಯ- ಬುದ್ಧಿಮತ್ತೆಯಲ್ಲಿ ಅವಳನ್ನು ಮೀರಿಸುವವರು ಯಾರೂ ಇರಲಿಲ್ಲ. ಇನ್ನು ಬಾಲಕಿಯಾಗಿದ್ದಾಗಲೇ ಪಾರ್ವತಿ ಶಿವನನ್ನು ಮನದಲ್ಲಿ ವರಿಸಿದ್ದಳು. ವಿವಾಹವಾಗುವುದಾದರೆ ಶಿವನನ್ನೇ ಎಂದು ಸಂಕಲ್ಪ ಮಾಡಿದಳು. ಶಿವನನ್ನು ಒಲಿಸಿಕೊಳ್ಳಲು ಪರ್ವತಕ್ಕೆ ಹೋಗಿ ಕಠಿಣ ತಪಸ್ಸು ಮಾಡಿದಳು. ಆ ದೀರ್ಘ ತಪಸ್ಸಿನ ಅವಧಿಯಲ್ಲಿ ಆಹಾರ ತ್ಯಜಿಸಿದಳು ಆಮೇಲೆ ಹಣ್ಣು ಕೆಲವು ದಿನಗಳಾದ ಮೇಲೆ ಅದನ್ನೂ ಬಿಟ್ಟು ಕೇವಲ ಎಲೆಗಳನ್ನು ತಿಂದಳು.
ಬಿಸಿಲಲ್ಲಿ ಬೆಂಕಿಯ ಮೇಲೆ, ಚಳಿಗಾಲದಲ್ಲಿ ನೀರಿನ ಮೇಲೆ ನಿಂತು ತಪಸ್ಸು ಮಾಡುತ್ತಿದ್ದಳು. ಅವಳ ಕಠಿಣ ತಪಸ್ಸಿನಿಂದ ಅವಳ ಮುಖದಲ್ಲಿ ಕಾಂತಿ ಮತ್ತು ಸೌಂದರ್ಯದ ಪ್ರಭೆ ಹೆಚ್ಚಿ ಆ ಪ್ರಭಾವ ಸುತ್ತಲೂ ಹರಡಿತ್ತು. ಅದೆಷ್ಟು ಎಂದರೆ ಸಮುದ್ರ ರಾಜನ ದೃಷ್ಟಿ ಆಕೆಯ ಸೌಂದದ ಮೇಲೆ ಬಿದ್ದು ಅವಳಲ್ಲಿ ಆಕರ್ಷಿತನಾಗಿ ವಿವಾಹವಾಗಲು ಆಸೆ ಪಟ್ಟನು. ಪಾರ್ವತಿಯ ತಪಸ್ಸು ಮುಗಿಯುವ ತನಕ ಕಾದಿದ್ದ ಸಮುದ್ರ ರಾಜ. ತಪಸ್ಸು ಮುಗಿಯುತ್ತಿದ್ದಂತೆ ಅವಳ ಮುಂದೆ ಬಂದು, ತಾನು ಅವಳನ್ನು ವಿವಾಹವಾಗುವ ಪ್ರಸ್ತಾಪವನ್ನು ಮುಂದಿಟ್ಟನು. ಪಾರ್ವತಿ ಸಹಜವಾಗಿ ಹೇಳಿದಳು ‘ಸಮುದ್ರರಾಜ ನಾನು ಶಿವನ ವಿನಃ ಬೇರೆ ಯಾರನ್ನೂ ವಿವಾಹವಾಗಲಾರೆ.
ಶಿವನನ್ನೇ ನನ್ನ ಪತಿ ಎಂದು ನಿರ್ಧರಿಸಿದ್ದೇನೆ’ ಎಂದಳು. ಈ ಮಾತನ್ನು ಕೇಳಿ ಸಮುದ್ರರಾಜ ತನ್ನ ಘನತೆ ಗೌರವಕ್ಕೆ ಅವಮಾನವಾಗುವಂತೆ ಈ ಮಾತು ಹೇಳಿದ್ದಾಳೆ ಎಂದು ತಪ್ಪಾಗಿ ಭಾವಿಸಿದನು. ಹಾಗೆ ಪಾರ್ವತಿಯನ್ನು ಮೆಚ್ಚಿಸಲು ತನ್ನನ್ನು ಹೊಗಳಿಕೊಳ್ಳುತ್ತಾ, ‘ಪಾರ್ವತಿ ನನ್ನಲ್ಲಿ ಬೇಕಾದಷ್ಟು ಸಂಪತ್ತು ಇದೆ. ಮುತ್ತು, ರತ್ನ, ಹವಳ, ತುಂಬಿದ ಬೆಟ್ಟ ಗಳು ಅಡಗಿದೆ ಶಾಶ್ವತವಾಗಿರುವಂತಹ ಸಿಹಿ ನೀರು ನನ್ನೊಳಗಿದೆ. ಬಾಯಾರಿದವರಿಗೆ, ಜಲಚರಗಳಿಗೆ, ಪಶು ಪಕ್ಷಿಗಳಿಗೆ ನೀರುಣಿ ಸುತ್ತೇನೆ. ಭೂಮಂಡಲಕ್ಕೆ ನಾನೆಂದರ ತುಂಬಾ ಇಷ್ಟ. ನನ್ನೊಳಗೆ ಜಗತ್ತಿನಲ್ಲಿರುವ
ಸಣ್ಣ ಗಾತ್ರ ಮೀನಿನಿಂದ ತಿಮಿಂಗಲದಂತ ದೊಡ್ಡ ಗಾತ್ರದ ಜಲಚರಗಳೂ ಇವೆ. ನಾನು ಅಳತೆಗೂ ಸಿಗದಂತೆ ವಿಶಾಲವಾಗಿದ್ದೇನೆ.
ನನ್ನ ಆಳ ಅಗಲ ಯಾರೂ ಅಳೆಯಲಾರರು. ಇಂಥ ಸಮುದ್ರ ರಾಜ ನಾನು ನೀನು ನನ್ನನ್ನು ವಿವಾಹವಾದರೆ ಈ ಸಂಪತ್ತು ಎಲ್ಲವೂ ನಿನ್ನದೇ ಆಗುತ್ತದೆ’ ಎಂದನು. ‘ನೀನು ವಿವಾಹವಾಗುವ ಶಿವನಲ್ಲಿ ಏನಿದೆ? ಅವನಿಗೇನು ಮನೆಯೇ, ಮಠವೇ, ವಸವೇ, ಆಭರಣವೇ, ಅಂದವಿಲ್ಲ, ಅಲಂಕಾರವಿಲ್ಲ ಸತ್ತವರ ಮಧ್ಯ ಸ್ಮಶಾನದಲ್ಲಿ ಅವನ ವಾಸ, ಮೈತುಂಬ ಬೂದಿ ಬಳಿದುಕೊಂಡಿರುತ್ತಾನೆ. ಪ್ರೀತಿ- ಪ್ರೇಮ- ರಸಿಕತೆ ಎಂದರೇನು ಗೊತ್ತಿಲ್ಲ. ಎಲ್ಲರಿಗಿಂತ ಹಿರಿಯ ಅವನಿಗೆ ಏನೂ ಬೇಡ ಯಾವಾಗಲೂ ಧ್ಯಾನದಲ್ಲಿ ಮಗ್ನನಾಗಿರುತ್ತಾನೆ. ನನ್ನನ್ನು ವಿವಾಹವಾಗು ಈ ಭೂಮಂಡಲದ ಒಡತಿ ನೀನಾಗುವೆ.
ನನ್ನೊಂದಿಗೆ ಸುಖದಿಂದ ಇರುವೆ’ ಎಂದು ಶಿವನನ್ನು ಹೀಯಾಳಿಸಿದನು. ಸಮುದ್ರ ರಾಜನ ಅಹಂಕಾರದ ಮಾತುಗಳು, ಶಿವನಿಂದನೆ ಕೇಳಿದ
ಪಾರ್ವತಿಗೆ ಕೋಪ ಬಂದಿತು. ಶಿವನಿಗೆ ಅವಮಾನ ಮಾಡುತ್ತಿದ್ದ ಸಮುದ್ರ ರಾಜನನ್ನು ಶಪಿಸಲು ಮುಂದಾದಳು ಸಮುದ್ರ ರಾಜ ಕೇಳು, ಗೊತ್ತು
ಗುರಿಯಿಲ್ಲದೆ ನಿನ್ನನ್ನು ಹೊಗಳಿಕೊಳ್ಳುತ್ತಾ ನನ್ನ ಪತಿಯನ್ನು ಅವಮಾನ ಮಾಡಿರುವೆ. ನನಗೆ ನೋವು ದುಃಖ ಮಾಡಿದ ನಿನ್ನೊಳಗಿರುವ ಸಿಹಿ ನೀರು ಯಾರಿಗೂ ಕುಡಿಯಲು ಬರದಂತೆ ಈ ಕ್ಷಣದಿಂದಲೇ ಉಪ್ಪಾಗಲಿ ಎಂದು ಶಪಿಸಿದಳು. ಆಗಿನಿಂದ ಸಮುದ್ರದ ನೀರು ಉಪ್ಪಾಯಿತು.
ಸಮುದ್ರ ರಾಜನಲ್ಲಿ ಸಂಪತ್ತು ಎಷ್ಟಿದ್ದರೇನು? ತನ್ನ ಅಹಂಕಾರದ ಮಾತಿನಿಂದ ಶಿವನನ್ನು ನಿಂದಿಸಿದ ಕಾರಣ ಪಾರ್ವತಿಯ ಶಾಪಕ್ಕೆ ಗುರಿಯಾಗಿ
ಅಗಾದವಾದ ಸಾಗರದ ಸಿಹಿ ನೀರು ಉಪ್ಪಾಗಿ ಯಾರೂ ಕುಡಿಯದಂತಾಯಿತು. ನಾವು ಎಷ್ಟೇ ಗುಣ ಸಂಪನ್ನರಾಗಿದ್ದರೂ ಅಹಂಕಾರ ಒಂದಿದ್ದರೆ ಎಲ್ಲ ಗುಣಗಳೂ ಗೌಣವಾಗುತ್ತವೆ. ಅಹಂಕಾರ ನಮ್ಮನ್ನೇ ನಿರ್ನಾಮ ಮಾಡುತ್ತದೆ.
ಇದನ್ನೂ ಓದಿ: Roopa Gururaj Column: ಹೃದಯ ಶ್ರೀಮಂತಿಕೆ ಮೆರೆದ ಬಡವ ಸುಧಾಸ