ಮುಂಬೈ: ಕಳೆದ ಕೆಲ ದಿನಗಳ ಹಿಂದೆ ಮಹಾರಾಷ್ಟ್ರ(Maharashtra) ದ ಹಂಗಾಮಿ(Caretaker) ಸಿಎಂ(Chief Minister) ಏಕನಾಥ್ ಶಿಂಧೆ(Eknath Shinde)ಯವರ ಆರೋಗ್ಯದಲ್ಲಿ ಹಠಾತ್ ಏರುಪೇರು ಕಾಣಿಸಿಕೊಂಡಿದ್ದು ಅವರನ್ನು ಸಮೀಪದ ಸತಾರಾದಲ್ಲಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ ಇದೀಗ ಚೇತರಿಕೆ ಕಾಣದ ಹಿನ್ನಲೆಯಲ್ಲಿ ಅವರನ್ನು ಮಹಾರಾಷ್ಟ್ರದ((Maharashtra)) ಥಾಣೆ(Thane) ಆಸ್ಪತ್ರೆಗೆ(hospital) ದಾಖಲು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಶಿಂಧೆ ಅವರು, ಶುಕ್ರವಾರದಂದು (ನ. 29) ಸತಾರಾ ಜಿಲ್ಲೆಯಲ್ಲಿರುವ ತಮ್ಮ ಹಳ್ಳಿಯಾದ ದಾರೆ ತಂಬ್‌ಗೆ ತೆರಳಿದ್ದರು. ಅಲ್ಲಿ, 30ರಂದು ಸಂಜೆ ಹೊತ್ತಿಗೆ ಅವರಲ್ಲಿ ಉಸಿರಾಟದಲ್ಲಿ ಏರುಪೇರು ಕಾಣಿಸಿಕೊಂಡಿದ್ದು, ಅವರನ್ನು ಸತಾರಾ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಅಲ್ಲಿ ಅವರನ್ನು ಪ್ರಾಥಮಿಕ ತಪಾಸಣೆಗೊಳಪಡಿಸಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು.
ಸಿಎಂ ಆರೋಗ್ಯದ ಬಗ್ಗೆ ವಿವರಣೆ ನೀಡಿದ್ದ ಸತಾರಾ ಜಿಲ್ಲಾ ಸರ್ಜನ್ ಡಾ. ಯುವರಾಜ್ ಕಾರ್ಪೆ, “ಸಿಎಂ ಶಿಂಧೆಯವರಿಗೆ ಗಂಟಲು ಹಾಗೂ ಶ್ವಾಸಕೋಶದ ಸೋಂಕು ತಗುಲಿದೆ. ಅದರಿಂದಾಗಿ ಅವರಿಗೆ ಕೊಂಚ ಉಸಿರಾಟದ ಸಮಸ್ಯೆ ಹಾಗೂ ಗಂಟಲಿನಲ್ಲಿ ಕೆರೆತ ಉಂಟಾಗಿತ್ತು. ಉಸಿರಾಟದ ಸಮಸ್ಯೆಯಿದ್ದಿದ್ದರಿಂದ ಅವರ ಕುಟುಂಬಸ್ಥರು ತಡ ಮಾಡದೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಾಥಮಿಕ ಪರೀಕ್ಷೆಗಳಲ್ಲಿ ಸೋಂಕು ಪತ್ತೆಯಾಗಿದೆ. ಅವರ ರಕ್ತ ಪರೀಕ್ಷೆ ನಡೆಸಲಾಗಿದ್ದು ಡೆಂಗ್ಯು ಅಥವಾ ಮಲೇರಿಯಾ ಪತ್ತೆಯಾಗಿಲ್ಲ. ಶನಿವಾರ ಸಂಜೆಯೇ ಅವರಿಗೆ ಕೆಲವು ಚುಚ್ಚುಮದ್ದುಗಳನ್ನು ನೀಡಿದ್ದೇವೆ. ಅವರ ಆರೋಗ್ಯ ಸ್ಥಿರವಾಗಿದೆ’’ ಎಂದು ಹೇಳಿದ್ದರು.
ಅವರ ಅಸ್ವಸ್ಥತೆಯ ಹಿಂದಿನ ಕಾರಣದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಡಾ. ಕಾರ್ಪೆ, “ಕಳೆದ ತಿಂಗಳು ಚುನಾವಣೆ ಹಿನ್ನೆಲೆಯಲ್ಲಿ ಅವರು ತುಂಬಾ ಸುತ್ತಾಡಿದ್ದಾರೆ. ದೇಹಕ್ಕೆ ಶ್ರಮ ಜಾಸ್ತಿಯಾಗಿದೆ. ಸರಿಯಾಗಿ ವಿಶ್ರಾಂತಿ ಪಡೆದಿಲ್ಲ. ಹಾಗಾಗಿ, ದೇಹ ಸೊರಗಿತ್ತು. ಅವರು ಬೇಗನೇ ಸೋಂಕಿಗೆ ತುತ್ತಾಗಿದ್ದಾರೆ. ಶುಕ್ರವಾರ ರಾತ್ರಿಯಿಂದಲೇ ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಆದರೆ, ಶನಿವಾರ ಬೆಳಗ್ಗೆ ಸ್ವಲ್ಪ ಚೇತರಿಸಿಕೊಂಡಿದ್ದಕ್ಕೆ ಸುಮ್ಮನಾಗಿದ್ದರು. ಆದರೆ, ಸಂಜೆ ವೇಳೆ ಪುನಃ ಅಸ್ವಸ್ಥತೆ ಕಾಡಿದೆ. ಇನ್ನೆರಡು ದಿನ ರೆಸ್ಟ್ ಮಾಡಲು ಹೇಳಿದ್ದೇವೆ’’ ಎಂದು ತಿಳಿಸಿದ್ದರು.
#WATCH | Thane: On being asked about his health condition, Maharashtra Caretaker CM Eknath Shinde says "Badhiya hai." pic.twitter.com/EvejRPRkbP
— ANI (@ANI) December 3, 2024
ಆದರೆ ವಾರ ಕಳೆದರೂ ಶಿಂಧೆ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣದ ಪರಿಣಾಮ ಇಂದು ಹೆಚ್ಚಿನ ಚಿಕಿತ್ಸೆಗಾಗಿ ಮಹಾರಾಷ್ಟ್ರದ ಥಾಣೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಇತ್ತೀಚೆಗೆ ಮಹಾರಾಷ್ಟ್ರ ಚುನಾವಣೆಯಲ್ಲಿ ಅಲ್ಲಿ ಅಧಿಕಾರದಲ್ಲಿರುವ ಬಿಜೆಪಿ – ಶಿವಸೇನೆ (ಶಿಂಧೆ ಬಣ) – ಎನ್ ಸಿಪಿ (ಅಜಿತ್ ಪವಾರ್ ಬಣ) ನೇತೃತ್ವದ ‘ಮಹಾಯತಿ’ ಒಕ್ಕೂಟ ಗೆದ್ದು ಮತ್ತೆ ಅಧಿಕಾರಕ್ಕೆ ಬಂದಿತ್ತು. ಆದರೆ, ಮುಂದಿನ ಮುಖ್ಯಮಂತ್ರಿ ಯಾರು ಎಂಬುದು ಇನ್ನೂ ಸಸ್ಪೆನ್ಸ್ ನಲ್ಲಿ ಇಡಲಾಗಿದೆ. ನವದೆಹಲಿಯಲ್ಲಿ ಮಹಾಯತಿ ಮೈತ್ರಿ ಪಕ್ಷಗಳ ನಾಯಕರ ಸರಣಿ ಸಭೆಗಳು ನಡೆಯುತ್ತಿವೆ.
ಇನ್ನು ಡಿಸೆಂಬರ್ 5 ರಂದು ಪ್ರಮಾಣ ವಚನ ಸ್ವೀಕರಿಸಲಿರುವ ಸರ್ಕಾರದಲ್ಲಿ ಯಾರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬುದನ್ನು ಮಹಾಯುತಿ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ಶನಿವಾರದಂದು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, ಮಹಾರಾಷ್ಟ್ರ ಬಿಜೆಪಿ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಚಂದ್ರಶೇಖರ ಬವಾಂಕುಲೆ ಅವರು ಪ್ರಧಾನಿ ನರೇಂದ್ರ ಮೋದಿಯವರ ಉಪಸ್ಥಿತಿಯಲ್ಲಿ ದಕ್ಷಿಣ ಮುಂಬೈನ ಆಜಾದ್ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ : Sheikh Hasina: ಬಾಂಗ್ಲಾದೇಶ ಹತ್ಯಾಕಾಂಡದ ಹಿಂದಿರುವ ಮಾಸ್ಟರ್‌ಮೈಂಡ್ ಮೊಹಮ್ಮದ್ ಯೂನಸ್?