Sunday, 11th May 2025

ಪಾಲಿಕೆಯಿಂದ ಗಾರೆನರಸಯ್ಯನ ಕಟ್ಟೆ ಒತ್ತುವರಿ: ಭೂಗಳ್ಳರಿಗೆ ಬಡಾವಣೆ ನಿರ್ಮಾಣ 

ತುಮಕೂರು: ನಗರದ ೩೦ನೇ ವಾರ್ಡಿನ ಸಪ್ತಗಿರಿ ಬಡಾವಣೆಯ ಗಾರೆನರಸಯ್ಯನ ಕಟ್ಟೆ ಅಂಗಳದ ಪೂರ್ವ ಭಾಗದ ಸರ್ಕಾರಿ ಖರಾಬು ಜಾಗದಲ್ಲಿ ಭೂಗಳ್ಳರಿಗೆ ಬಡಾವಣೆ ನಿರ್ಮಿಸಲು ಅನುಕೂಲವಾಗುವಂತೆ ಕಟ್ಟೆಯ ಅಂಗಳದಲ್ಲಿ ಚೈನ್ ಲಿಂಕ್ ಪೆನ್ಸಿಂಗ್  ನೆಪದಲ್ಲಿ ಸುಮಾರು ಒಂದು ಎಕರೆ ಕಟ್ಟೆ ಅಂಗಳವನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಒತ್ತುವರಿ ಮಾಡಿದ್ದಾರೆ.
೧೯.೧ ಎಕರೆ ವಿಸ್ತೀರ್ಣದ ಗಾರೆ ನರಸಯ್ಯನ ಕಟ್ಟೆಯ ಪೂರ್ವ ಭಾಗದಲ್ಲಿ ಚೈನ್ ಲಿಂಕ್ ಪೆನ್ಸಿಂಗ್ ಕಾಮಗಾರಿ,ಲೆಕ್ಕಶಿರ್ಷಿಕೆ-೨೦೧೩-೧೪ನೇ ಸಾಲಿನಲ್ಲಿ ವಿಶೇಷ ಅನುದಾನ ಅಂದಾಜು ಮೊತ್ತ ೬೦ ಲಕ್ಷ ಹಣದಲ್ಲಿ ೯೧೫ ಮೀ ಉದ್ದದ ಚೈನ್ ಲಿಂಕ್ ಪೆನ್ಸಿಂಗ್‌ನ್ನು ಮಹಾನಗರ ಪಾಲಿಕೆಯವರು ಕಟ್ಟೆಯ ಅಂಗಳದಲ್ಲಿ ಕಾಮಗಾರಿ  ಮಾಡಿದ್ದಾರೆ.ಇದರಿಂದ ಕಟ್ಟೆಯ ಪೂರ್ವ ಭಾಗದ ಎರಡು ಎಕರೆ ಸರ್ಕಾರಿ ಖರಾಬು ಜಾಗದಲ್ಲಿ ಭೂಗಳ್ಳರು ಬಡಾವಣೆ ಮಾಡಲು ಮಹಾನಗರ ಪಾಲಿಕೆ ಹಾಗೂ ೩೦ ನೇ ವಾರ್ಡಿನ ಹಿಂದಿನ ಕೌನ್ಸಿಲರ್‌ಗಳು ಸುಗಮಕಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ೨೦೧೫ ರಿಂದಲೂ ಈ ಭಾಗದ ನಾಗರಿಕರು ಕೌನ್ಸಿಲರ್ ಮತ್ತು ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಜಾಣ ಕುರುಡರಂತೆ ಅವಧಿ ಮುಗಿಸಿಕೊಂಡು ಹೋಗಿದ್ದಾರೆ.
ಈಗಾಗಲೇ ಎರಡು ಎಕರೆ ಸರ್ಕಾರಿ ಖರಾಬು ಜಾಗದಲ್ಲಿ ಲೇಔಟ್ ಮಾಡಿ ಸೈಟ್‌ಗಳನ್ನು ಮಾರಾಟ ಮಾಡಿದ್ದಾರೆ. ಸರ್ಕಾರಿ ಸುಬರ್ದಿನಲ್ಲಿರುವ ಸರ್ಕಾರಿ ಖರಾಬು ಜಾಗದಲ್ಲಿ ಲೇಔಟ್ ಮಾಡಲು ತುಮಕೂರು ಟೂಡಾ ದವರು ಹಾಗೂ ಪಾಲಿಕೆಯವರು ನ್ಯಾಯಲಯದ ಎಲ್ಲಾ ಕಾಯ್ದೆಗಳನ್ನು ಗಾಳಿಗೆ ತೂರಿದ್ದಾರೆ. ನ್ಯಾಯಲದ ಆದೇಶದ ಪ್ರಕಾರ ಕೆರೆ,ಕಟ್ಟೆಗಳ  ಅಂಗಳದಿAದ ೩೦ಮೀ  ಒಳಗೆ ಯಾವುದೇ ಕಟ್ಟಡ ನಿರ್ಮಾಣ ಅಥವಾ ಅಭಿವೃದ್ದಿ ಕಾರ್ಯಗಳಿಗೆ ಪರವಾನಗಿ ಕೊಡಬಾರದೆಂಬ ಕಾನೂನಿದ್ದರೂ ಮಹಾನಗರಪಾಲಿಕೆಯ ಅಧಿಕಾರಿಗಳು ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ.
ಪಾಲಿಕೆಯ ಆಯುಕ್ತರು ಕಟ್ಟೆಯ ಅಂಗಳದಲ್ಲಿ ಹಾಕಿರುವ ಚೈನ್ ಲಿಂಕ್ ಪೆನ್ಸಿಂಗ್ ತೆರವುಗೊಳಿಸಿ ಆ ಜಾಗದಲ್ಲಿ ಪಾರ್ಕ್ ನಿರ್ಮಾಣ ಮಾಡಬೇಕು ಅಲ್ಲದೆ ಸರ್ಕಾರಿ ಖರಾಬು ಜಾಗದಲ್ಲಿ ಲೇಔಟ್ ಮಾಡಲು ಕೊಟ್ಟಿ ರುವ ಪರವಾನಗಿ ರದ್ದುಗೊಳಿಸಿ ಜಿಲ್ಲಾ ಕೆರೆ ಜಾಗೃತಿ ಮಾಹಿತಿ ಕೇಂದ್ರ ಸ್ಥಾಪಿಸಬೇಕು. ಕೋಡಿ ಹತ್ತಿರ ಒತ್ತುವರಿಯಾಗಿರುವ ರಾಜಕಾಲುವೆ ತೆರವುಗೊಳಿಸಿ ಈ ಪ್ರದೇಶದಲ್ಲಿ ಘನತ್ಯಾಜ್ಯ ಸುರಿಯುವುದನ್ನು ನಿಷೇಧಿಸಿ ಕಟ್ಟೆಯನ್ನು ಸಂರಕ್ಷಿಸಬೇಕೆಂದು ನಿಸರ್ಗ ಸಂಸ್ಥೆಯ ಅಧ್ಯಕ್ಷ ಬಿ.ವಿ.ಗುಂಡಪ್ಪ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *