ಯಶೋ ಬೆಳಗು
ಯಶೋಮತಿ ಬೆಳಗೆರೆ
ಕ್ರೇಜಿ ಸ್ಟಾರ್, ರಿಯಲ್ ಸ್ಟಾರ್, ಸೂಪರ್ ಸ್ಟಾರ್, ಪವರ್ ಸ್ಟಾರ್, ರಾಕಿಂಗ್ ಸ್ಟಾರ್, ಗೋಲ್ಡನ್ ಸ್ಟಾರ್, ಡೈಮಂಡ್ ಸ್ಟಾರ್, ಮಿನುಗು ತಾರೆ, ಮೋಹಕ ತಾರೆ ಅಂತೆಲ್ಲ ಅಭಿಮಾನಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುವ ಬೆಳ್ಳಿತೆರೆಯ ಮೇಲೆ ಮಿಂಚುವ ನಟ-ನಟಿಯರಲ್ಲಿ, ಹಾಗೂ ಸ್ಟಾರ್ ಪ್ಲಸ್, ಸ್ಟಾರ್ ಸುವರ್ಣ, ಹಾಟ್ ಸ್ಟಾರ್, ಡಿಸ್ನಿ ಸ್ಟಾರ್ ಅನ್ನುವ ದೂರದರ್ಶನ ವಾಹಿನಿಯ ಚಾನೆಲ್ಗಳಲ್ಲೂ ನಾವು ಸಾಕಷ್ಟು ಸ್ಟಾರ್ಗಳನ್ನು ಕಾಣಬಹುದು.
ಎಪ್ಪತ್ತರ ದಶಕದಲ್ಲಿ ಬಾಲಿವುಡ್ಡಿನ ನಟ, ನಿರ್ಮಾಪಕ ಹಾಗೂ ರಾಜಕಾರಣಿಯೂ ಆಗಿ ‘ಮೇರೆ ಸಪನೋಂಕಿ ರಾಣಿ ಕಬ್ ಆಯೇಗಿ ತೂ’ ಎಂದು ಹಾಡುತ್ತ ಹೆಂಗಳೆಯರ ಮನಸು ಕದ್ದು dream boy ಆಗಿದ್ದ ಚೆಲುವ ಚೆನ್ನಿಗ ರಾಜೇಶ್ ಖನ್ನಾ ಸತತವಾಗಿ ಹದಿನೈದು ಯಶಸ್ವೀ ಚಿತ್ರಗಳನ್ನು ನೀಡುತ್ತ, ಸೋಲೆಂಬುದನ್ನೇ ಕಾಣದೆ ನಿರಂತರ ವಾಗಿ ಗೆಲುವಿನ ಹಾದಿಯಲ್ಲಿ ಮೆರೆಯುತ್ತ ಯಶಸ್ಸಿನ ಉತ್ತುಂಗಕ್ಕೇರಿ ನಿಂತು ಮೊತ್ತ ಮೊದಲ ಸೂಪರ್ ಸ್ಟಾರ್ ಎನ್ನಿಸಿಕೊಂಡವರು.
ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ rhyms ಹೇಳುತ್ತ ಎಲ್ಲರಿಂದ ಮುದ್ದಿಸಿಕೊಳ್ಳುವ ಪುಟಾಣಿಗಳು, ತಾರೆಗಳ ತೋಟದಿಂದ ಚಂದಿರ ಬಂದ ಎನ್ನುತ್ತ ಶಾಲೆಯ ವಾರ್ಷಿಕೋತ್ಸವದಲ್ಲಿ ಕುಣಿಯುತ್ತ ಮೆಚ್ಚುಗೆ ಗಳಿಸುವ ವಿದ್ಯಾರ್ಥಿಗಳು, ಆಕಾಶದಲ್ಲಿ ಹೊಳೆಯುವ ನಕ್ಷತ್ರವನ್ನು ತೋರುತ್ತ ಅದೇ ನೋಡು ಧ್ರುವ ನಕ್ಷತ್ರ!
ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ’ ಎಂದು ನಿರೂಪಿಸಿ ನಕ್ಷತ್ರಗಳ ರಾಶಿಯ ನಡುವೆ ಹೆಚ್ಚು ಪ್ರಕಾಶ ಮಾನದಿಂದ ಹೊಳೆಯುವ ನಕ್ಷತ್ರವಾದ ಧ್ರುವನ ನೀತಿ ಕತೆಯನ್ನು ಕೇಳುತ್ತ ಕನಸಿಗೆ ಜಾರುವ ಕಂದಮ್ಮಗಳು, ಹರೆಯದ ಹುಡುಗಿಯರ ಹೊಳೆಯುವ ಕಣ್ಣುಗಳನ್ನು ನಕ್ಷತ್ರಗಳಿಗೆ ಹೋಲಿಸುತ್ತ ಬುಟ್ಟಿಗೆ ಹಾಕಿ ಕೊಳ್ಳುವ ಜಾಣ ಹುಡುಗರು, ಬೇಸಿಗೆ ರಜೆಯಲ್ಲಿ ಅಜ್ಜಿಮನೆಯ ತಾರಸಿಯ ಮೇಲೆ ಬೆಳದಿಂಗಳ ರಾತ್ರಿಗಳಲ್ಲಿ ಕೈತುತ್ತು ತಿನ್ನುತ್ತ, ಮೋಡ ವಿಲ್ಲದ ನಿರಭ್ರ ಆಕಾಶದಲ್ಲಿ ಕಳೆದುಕೊಂಡವರನ್ನು ನಕ್ಷತ್ರಗಳಲ್ಲಿ ಹುಡುಕುತ್ತ ಅಲ್ಲಿಂದ ನನ್ನನ್ನೇ ನೋಡ್ತಿದ್ದಾರೆ ನೋಡು’ ಎಂದು ಖುಷಿಯಲ್ಲಿ ಅದರೆಡೆಗೆ ಕೈಬೀಸುತ್ತ ಸಂಭ್ರಮಿಸುವ ಪುಟ್ಟ ಮಕ್ಕಳು, ಬೀಳುತ್ತಿರುವ ನಕ್ಷತ್ರವನ್ನು ಕಂಡಾಗ ತಮ್ಮ ಕಣ್ಣರೆಪ್ಪೆಯನ್ನು ಕಿತ್ತು ಅಂಗೈಯಲ್ಲಿ ಮುಚ್ಚಿಟ್ಟು ಕೊಂಡು ತಮ್ಮ ಕೋರಿಕೆಯನ್ನು ಈಡೇರಿಸುವಂತೆ ಬೇಡಿಕೊಳ್ಳುವ ಸುಂದರ ನಂಬಿಕೆಗಳು, ನಡುಮಧ್ಯಾಹ್ನದ ಸುಡು ಸುಡುವ ಬಿಸಿಲಿನಲ್ಲೂ ನವ ವಧು-ವರರಿಗೆ ರೋಹಿಣಿ ನಕ್ಷತ್ರದ ದರ್ಶನ ಮಾಡಿಸುವ ಸಂಪ್ರದಾಯಗಳು…. ನೋಡುತ್ತ ಹೋದರೆ ಕೈಗೆ ನಿಲುಕದೆ ಕತ್ತಲಾವರಿ ಸಿಕೊಂಡ ಕೂಡಲೇ ಜಿಗಿಜಿಗಿ ಮಿನುಗುತ್ತಾ ಎಣಿಸಲಾಗದ ಅಪ್ಪನ ದುಡ್ಡಿನಂತೆ ತೆರೆದುಕೊಳ್ಳುವ ನಕ್ಷತ್ರ ಲೋಕ ಅದೆಷ್ಟೊಂದು ನಮ್ಮ ಕನಸು, ಕಾಂಕ್ಷೆ, ಭಾವನೆಗಳಿಗೆ ಕಥೆ- ಕವಿತೆಗಳ ಮೂಲಕ ತಳುಕು ಹಾಕಿಕೊಂಡಿವೆ ಅನ್ನಿಸಿದಾಗ ನಮ್ಮ ಬಿ. ಆರ್. ಲಕ್ಷ್ಮಣ ರಾವ್ ಅವರ ‘ಸುಬ್ಬಾಭಟ್ಟರ ಮಗಳೇ’ ಕವಿತೆಯ ಈ ಸಾಲುಗಳನ್ನು ಯಾರಾದರೂ, ಎಂದಿಗಾದರೂ ಮರೆಯಲಾದೀತೇ? ‘ರಾತ್ರಿ ತೆರೆಯುವುದು ಅದೂ ನನ್ನದೇ ಜಿಗಿಜಿಗಿ ಒಡವೆ ದುಕಾನು ಆರಿಸಿಕೋ ಬೇಕೇನು ಚಿಕ್ಕೆ ಮೂಗುತಿಗೆ ಚಂದ್ರ ಪದಕಕ್ಕೆ ನೀಹಾರಿಕೆ ಹಾರ ನನ್ನ ಸಂಪತ್ತೆಷ್ಟು ಅಪಾರ….’ ಆಹಾ! ಎಂತಹ ಸುಂದರ ಕಲ್ಪನೆ. ಕವಿಗೆ ಕವಿಯೇ ಸಾಟಿ.
ಕೇವಲ ರಾತ್ರಿಯಷ್ಟೆ ಅಲ್ಲ, ಹಕ್ಕಿಗಳ ಕಲರವ ದೊಂದಿಗೆ ಬಿಚ್ಚಿಕೊಳ್ಳುವ ಬೆಳಕೆಂಬ ಬೆಳಗನ್ನು ಹೊತ್ತು ತರುವ ಸೂರ್ಯ ಕೂಡ ಒಂದು ದೊಡ್ಡ ನಕ್ಷತ್ರವೇ! ಬೆಳಕು-ಬಿಸಿಲುಗಳ ಮೂಲಕ ಅನೇಕ ಜೀವರಾಶಿಗಳ ಬೆಳವಣಿಗೆಗೆ ಹಾಗೂ ನಮ್ಮ ಅಸ್ತಿತ್ವಕ್ಕೆ ಮೂಲ ಆಧಾರವಾಗಿರುವ ಈ ಸೂರ್ಯನನ್ನು ಪ್ರದಕ್ಷಿಣೆ ಹಾಕುವ ಒಂಭತ್ತು ಗ್ರಹಗಳಲ್ಲಿ (ಈಗ ಅಷ್ಟಗ್ರಹಗಳಷ್ಟೇ ಉಳಿದಿವೆ) ನಮ್ಮ ಭೂಮಿ ಕೂಡ ಒಂದು. ಈ ನವಗ್ರಹಗಳಿಗೆ ಜೊತೆಯಾಗುವ ಇಪ್ಪತ್ತೇಳು (ಅಶ್ವಿನಿ, ಭರಣಿ, ಕೃತಿಕಾ, ರೋಹಿಣಿ, ಮೃಗಶಿರ, ಆರಿದ್ರಾ, ಪುನರ್ವಸು, ಪುಷ್ಯಾ, ಆಶ್ಲೇಷ, ಮಖ, ಪೂರ್ವ ಫಲ್ಗುಣಿ, ಉತ್ತರ ಫಲ್ಗುಣಿ, ಹಸ್ತಾ, ಚೈತ್ರ, ಸ್ವಾತಿ, ವಿಶಾಖ, ಅನುರಾಧಾ, ಜ್ಯೇಷ್ಠ, ಮೂಲ, ಪೂರ್ವಾಷಾಢ, ಉತ್ತರಾ ಷಾಢ, ಶ್ರವಣ, ಧನಿಷ್ಠ, ಶತಭಿಷ, ಪೂರ್ವಭಾದ್ರ, ಉತ್ತರಭಾದ್ರ, ರೇವತಿ) ನಕ್ಷತ್ರಗಳಲ್ಲಿ ಚಂದ್ರನ ನಡೆಯನ್ನು ಆಧರಿಸಿ ಉದ್ಭವವಾದ ಹನ್ನೆರಡು ರಾಶಿಗಳು ಪ್ರತಿ ಹುಟ್ಟಿನೊಂದಿಗೆ ಜಾತಕದಲ್ಲಿ ಲೆಕ್ಕಾಚಾರವಾಗಿ ನಮ್ಮ ನಡೆ- ನುಡಿ ಭವಿಷ್ಯವನ್ನು ಪ್ರತಿನಿಧಿಸುತ್ತವೆ.
ನಮ್ಮ ಏಳು-ಬೀಳುಗಳ ಸಮಯದಲ್ಲಿ ನಮ್ಮ ರಕ್ಷಣೆಗೆ ಮುಂದಾಗುತ್ತವೆ. ಪ್ರತಿಯೊಂದು ನಕ್ಷತ್ರಕ್ಕೂ ಅದರದೇ ಆದ ವಿಶೇಷ ಗುಣಗಳಿವೆ. ಇವುಗಳಲ್ಲಿ ಮೃಗಶಿರಾ, ಮಖ, ಸ್ವಾತಿ ಹಾಗೂ ಅನುರಾಧ ನಕ್ಷತ್ರಗಳು ಮಹಾನಕ್ಷತ್ರಗಳೆಂದು ಪರಿಗಣಿಸಲ್ಪಡುತ್ತವೆ. ಈ ಮಹಾನಕ್ಷತ್ರಗಳಲ್ಲಿ ಜನಿಸಿದವರು ಕೆಲ ವಿಶೇಷ ಗುಣಗಳನ್ನು ಜನ್ಮದತ್ತವಾಗಿಯೇ ಪಡೆದುಕೊಂಡು ಬಂದಿರುತ್ತಾರೆ. ಅವಕಾಶ ದೊರೆತಾಗ ಇವರಿಗಿರುವ ಪ್ರತಿಭೆಯು ಪ್ರಕಟಗೊಂಡು ಸರ್ವಮಾನ್ಯತೆ ಯನ್ನು ಪಡೆಯುತ್ತಾರೆ ಎನ್ನುವ ನಂಬಿಕೆಯಿದೆ.
ಒಂದು ಪೌರಾಣಿಕ ಕಥೆಯ ಪ್ರಕಾರ ಬ್ರಹ್ಮನ ಮಗನಾದ ದಕ್ಷನ ಇಪ್ಪತ್ತೇಳು ಕುವರಿಯರನ್ನು ಚಂದ್ರನಿಗೆ ಕೊಟ್ಟು ಮದುವೆ ಮಾಡಿದರೂ ಅವರೆಲ್ಲರಲ್ಲಿ ಚಂದಿರನಿಗೆ ಅತ್ಯಂ ತ ಪ್ರಿಯಳಾದವಳು ರೋಹಿಣಿ. ಹೀಗಾಗಿ ಅವಳು ಸದಾ ಚಂದಿರನ ಸಮೀಪದಲ್ಲಿಯೇ ಇರುತ್ತಾಳೆ. ಇದರಿಂದಾಗಿ ಕ್ರುದ್ಧಗೊಂಡ ಉಳಿ
ದ ೨೬ ಜನ ಸಹೋದರಿಯರು ದಕ್ಷನ ಬಳಿ ತಮ್ಮ ಅಳಲನ್ನು ತೋಡಿಕೊಂಡಾಗ ಚಂದ್ರನಿಗೆ ದಿನೇದಿನೆ ಕ್ಷೀಣಿಸಿಹೋಗುವಂತೆ ಶಾಪ ಕೊಟ್ಟು ಬಿಡುತ್ತಾನೆ ದಕ್ಷ. ಆದರೆ ದೇವಾನು ದೇವತೆಗಳೆಲ್ಲರೂ ಚಂದ್ರನ ಪರವಾಗಿ ರಾಜೀ ಸಂಧಾನಕ್ಕೆ ಬಂದಾಗ ಕೊಟ್ಟ ಶಾಪವನ್ನಂತೂ ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲ ವೆಂದು ತಿಳಿಸಿ ಅದರ ಪರಿಮಾಣವನ್ನು ಕಡಿಮೆ ಮಾಡುತ್ತಾನೆ.
ಹೀಗಾಗಿ ಹುಣ್ಣಿಮೆ ಹತ್ತಿರವಾದಂತೆಲ್ಲ ಹಿಗ್ಗುತ್ತ, ಅಮಾವಾಸ್ಯೆ ಹತ್ತಿರಾದಂತೆಲ್ಲ ಕುಗ್ಗುತ್ತ ಸಾಗುತ್ತಾನೆ. ಅಲ್ಲದೆ ಪ್ರತೀ ತಿಂಗಳೂ ೨೭ ನಕ್ಷತ್ರಗಳನ್ನೂ ಭೇಟಿ ಮಾಡುತ್ತ ಮುಂದುವರಿಯುತ್ತಾನೆ. ಹೀಗೆ ಚಂದ್ರನು ಹಾದು ಹೋಗುವಾಗ ಯಾವ ನಕ್ಷತ್ರದ ಮನೆಯಲ್ಲಿ ರುತ್ತಾನೆ ಎಂಬುದರ ಆಧಾರದ ಮೇಲೆಯೇ
ನಮ್ಮ ಜನ್ಮನಕ್ಷತ್ರ ಯಾವುದು ಹಾಗೂ ಆ ಮಗುವಿನ ಗುಣ, ಲಕ್ಷಣ, ದುರ್ಬಲತೆಗಳೇನು ಎಂಬುದು ನಿರ್ಧಾರವಾಗುವುದು. ಮತ್ತೊಂದು ನಂಬಿಕೆಯ ಪ್ರಕಾರ ವೃಕ್ಷಗಳು ಲಯಕರ್ತನಾದ ಶಿವ ಸ್ವರೂಪಿಗಳು. ಹೇಗೆ ಶಿವನು ಕಾರ್ಕೋಟಕ ವಿಷವನ್ನು ಕುಡಿದು ಅಸಂಖ್ಯ ಜೀವಕಣಗಳಿಗೆ ಅಮೃತವುಣಿಸಿದ ನೋ ಹಾಗೆಯೇ ವೃಕ್ಷಗಳೂ ಸಹ ಜೀವಸಂಕುಲಕ್ಕೆ ಹಾನಿಕಾರಕವಾದ ಕಾರ್ಬನ್ ಡೈ ಆಕ್ಸೈ ಡನ್ನು ಕುಡಿದು ನಮಗೆ ಅಗತ್ಯವಾಗಿ ಬೇಕಾದ ಪ್ರಾಣವಾಯು ವಾದ ಆಮ್ಲಜನಕವನ್ನು ಕೊಡುತ್ತ ರಕ್ಷಿಸುತ್ತಿದೆ. ಅಷ್ಟೇ ಅಲ್ಲದೆ ಮುಗಿಲಿನಿಂದ ಭುವಿಗೆ ಮಳೆಯನ್ನು ತರಿಸುತ್ತದೆ.
ಪ್ರತಿಯೊಂದು ನಕ್ಷತ್ರವನ್ನೂ ಪ್ರತಿನಿಧಿಸುವ ಬೇವು, ಬಿಲ್ವ, ಆಲ, ಅರಳಿ, ಅಂಜೂರ, ಬೆಟ್ಟದ ನೆಲ್ಲಿಯನ್ನೂ ಸೇರಿದಂತೆ ಅನೇಕ ವೃಕ್ಷಗಳಿವೆ. ನಮ್ಮ ಜನ್ಮ ನಕ್ಷತ್ರಗಳಿಗನುಸಾರವಾಗಿ ಆಯಾ ಗಿಡಗಳನ್ನು ನೆಟ್ಟು ಪ್ರತಿನಿತ್ಯ ನೀರೂಡಿಸುವುದರಿಂದ ನಮ್ಮ ದೈಹಿಕ, ಆರ್ಥಿಕ ಹಾಗೂ ಸಾಮಾಜಿಕ ಸಮಸ್ಯೆಗಳು ಪರಿಹಾರವಾಗುತ್ತವೆ ಎಂಬ ನಂಬಿಕೆಯೂ ಇದೆ. ಆದರೆ ಭೂಮಿಯಿಂದ ಕೋಟಿ ಕೋಟಿ ಮೈಲುಗಳ ದೂರದಲ್ಲಿರುವ ಈ ನಕ್ಷತ್ರಗಳು ಹುಟ್ಟಿದ್ದು ಹೇಗೆ? ನಿಜಕ್ಕೂ ನಕ್ಷತ್ರಗಳು ಹೇಗಿವೆ? ಅನ್ನುವ ವಿಷಯ ಬಹಳ ಕುತೂಹಲಕಾರಿಯಾಗಿದೆ.
ನಕ್ಷತ್ರ ಅಂದ ಕೂಡಲೇ ನಮ್ಮೆಲ್ಲರ ಕಲ್ಪನೆಗೆ ಬರುವ ಆಕಾರಕ್ಕೂ ಅಂತರಿಕ್ಷದಲ್ಲಿರುವ ನಕ್ಷತ್ರಗಳ ಆಕಾರಕ್ಕೂ ಯಾವುದೇ ಸಾಮ್ಯತೆಗಳಿಲ್ಲ. ನಕ್ಷತ್ರಗಳೂ ಸಹ ಗ್ರಹಗಳಂತೆಯೇ ಗೋಲಾಕಾರವಾಗಿವೆ. ಹಾಗೆಯೇ ಹಾಟ್ ರ್ಸ್ಟಾ ಅಂದ ಕೂಡಲೇ ಅದು ಕೆಂಪು ಮತ್ತು ಕೇಸರಿ ಮಿಶ್ರಿತ ಬಣ್ಣದ್ದೊಂದು ಅಂದು ಕೊಳ್ಳುತ್ತೇವೆ. ಆದರೆ ನಿಜವಾಗಿಯೂ ಅದರ ಬಣ್ಣ ನೀಲಿ. ಕೂಲರ್ ಸ್ಟಾರ್ ಅಂದ ಕೂಡಲೇ ಬಿಳಿ ಅಥವಾ ನೀಲಿ ಅಂದುಕೊಳ್ಳುತ್ತೇವೆ. ಆದರೆ ಅದರ ನಿಜವಾದ ಬಣ್ಣ ಕೇಸರಿ ಮಿಶ್ರಿತ ಕೆಂಪು!
ಒಂದು ನಕ್ಷತ್ರ ಜನನವಾಗಲು ಅನೇಕ ಲಕ್ಷ ವರ್ಷಗಳೇ ಬೇಕಾಗುತ್ತವೆ. ಇಂದು ಪ್ರಖರವಾಗಿ ಕಾಣುತ್ತಿರುವ ಸೂರ್ಯವೆಂಬ ನಕ್ಷತ್ರ ಕೂಡ ಲಕ್ಷಾಂತರ
ವರ್ಷಗಳ ನಂತರ ತಣ್ಣಗಾಗಿ ಹೋಗುತ್ತದೆ! ಸೂರ್ಯನ ಬಿಸಿಲಿಗೆ ಭೂಮಿಯ ಮೇಲಿನ ತೇವಾಂಶವೆಲ್ಲ ಆವಿಯಾಗಿ ಮೋಡಗಳಲ್ಲಿ ಘನೀಭವಿಸಿ ಮತ್ತೆ ಮಳೆಯಾಗಿ ಭುವಿ ಸೇರುವ ಪ್ರಕ್ರಿಯೆ ನಮಗೆಲ್ಲ ತಿಳಿದೇ ಇದೆ. ಆದರೆ ಅಂತರಿಕ್ಷದಲ್ಲಿ ಅಸಂಖ್ಯ ನಕ್ಷತ್ರಗಳ ನಡುವೆ ಹರಡಿಹೋಗಿರುವ ಅಣು, ಪರಮಾಣು
ಹಾಗೂ ಧೂಳಿನ ಕಣಗಳಿಂದ ಕೂಡಿದ ಮೇಘ ಗಳು ನಕ್ಷತ್ರಗಳ ಗುರುತ್ವಾಕರ್ಷಣ ಬಲದಿಂದ ಸೆಳೆಯಲ್ಪಡುತ್ತವೆ. ಹಾಗೂ ಅಲ್ಲಲ್ಲಿ ಕೆಲವು ಬೃಹತ್ ನಕ್ಷತ್ರಗಳು ಸೂರ್ಪ ನೋವಾಗಳಾಗಿ ಸಿಡಿದಾಗ ಬಿಡುಗಡೆಯಾಗುವ ಸ್ಫೋಟಶಕ್ತಿಯೂ ಇದೇ ದ್ರವ್ಯವನ್ನು ಒತ್ತರಿಸಿ ಒಗ್ಗೂಡಿಸುತ್ತದೆ.
ಈ ರೀತಿಯಾಗಿ ಎರಡೂ ಕಡೆಯ ಒತ್ತಡಗಳಿಂದ ಅಂತರಿಕ್ಷದಲ್ಲಿ ಒಟ್ಟುಗೂಡುವ ಲಕ್ಷಾಂತರ ಕೋಟಿ ಟನ್ ಪ್ರಮಾಣದಲ್ಲಿ ಒಟ್ಟಾಗುವ ಇಂಟರ್ ಸ್ಟೆರ್ ದ್ರವ್ಯ ದಟ್ಟ ಮೋಡಗಳಂತೆ ಸಾಂದ್ರಗೊಳ್ಳುತ್ತವೆ. ಹೈಡ್ರೊಜನ್ನಿಂದ ಕೂಡಿದ ಇಂತಹ ಮೋಡಗಳನ್ನು ಮಾಲಿಕ್ಯುಲರ್ ಕ್ಲೌಡ್ ಗಳೆಂದೇ ಗುರುತಿಸ
ಲಾಗುತ್ತದೆ. ಇಂತಹ ಪ್ರತಿಯೊಂದೂ ದೈತ್ಯ ಮೋಡಗಳು ಕನಿಷ್ಠ ಆರು ದಶಲಕ್ಷ ಸೂರ್ಯ ರಷ್ಟು ದ್ರವ್ಯರಾಶಿಯನ್ನು ಪಡೆದರೂ ಸಹ ಶೀತಲ ಸ್ಥಿತಿ ಯಲ್ಲಿಯೇ ಇರುತ್ತವೆ. ನಮ್ಮ ಅಂತರಿಕ್ಷದ ಮಿಲ್ಕಿ ವೇ ನಲ್ಲಿ ಸರಿಸುಮಾರು ಇಂತಹ ಆರು ಸಾವಿರ ಬೃಹತ್ ಮಾಲಿಕ್ಯುಲರ್ ಕ್ಲೌಡ್ ಗಳನ್ನು ಗುರುತಿಸ ಲಾಗಿದೆ.
ಹೀಗೆ ರೂಪುಗೊಳ್ಳುವ ದೈತ್ಯ ಮಾಲಿಕ್ಯುಲರ್ ಕ್ಲೌಡ್ ಗಳಲ್ಲಿ ನೈಸರ್ಗಿಕ ವಿದ್ಯುನ್ಮಾನವೊಂದು ತಂತಾನೇ ಆರಂಭವಾಗೊಳ್ಳುತ್ತದೆ. ತನ್ನದೇ ಗುರುತ್ವಾ ಕರ್ಷಣೆಯ ಬಲದಿಂದ ಇಡೀ ದ್ರವ್ಯವನ್ನು ನಿರಂತರವಾಗಿ ಕೇಂದ್ರದತ್ತ ಸೆಳೆಯತೊಡಗುತ್ತದೆ. ಇದರ ಪರಿಣಾಮವಾಗಿ ಅಂತಹ ಮೋಡಗಳಲ್ಲಿ
ಲಕ್ಷಾಂತರ ವರ್ಷಗಳ ಅವಧಿಯಲ್ಲಿ ಇಂತಹ ದಟ್ಟ ದ್ರವ್ಯದ ಬ್ರಹ್ಮಾಂಡದಂತಹ ತುಣುಕು ಗಳು ರೂಪುಗೊಳ್ಳುತ್ತ ಹೊಸ ನಕ್ಷತ್ರದ ಸೃಷ್ಟಿಕ್ರಿಯೆ ಆರಂಭ ಗೊಳ್ಳುತ್ತದೆ. ಈ ರೀತಿಯಾಗಿ ಮೂಲ ದ್ರವ್ಯರಾಶಿಯು ಕೇಂದ್ರ ಭಾಗದಿಂದ ಹೊರಹೊಮ್ಮತೊಡಗಿದಾಗ ಶಾಖ ಶಕ್ತಿ ಮೇಲ್ಮೈಯಲ್ಲಿ ಸಾಂದ್ರ ಗೊಂಡು ದ್ರವ್ಯದ ಸ್ವಕುಗ್ಗುವಿಕೆ ಸ್ತಬ್ದವಾಗುತ್ತದೆ. ಆಗ ಸ್ವಯಂ ಪ್ರಭೆಯಿಂದ ಕೂಡಿದ ಒಂದು ಬೃಹತ್ ಕಾಯ ಗೋಚರಿಸುವ ಮೂಲಕ ಹೊಸ ನಕ್ಷತ್ರವೊಂದರ ಜನನವಾಗುತ್ತದೆ.
ಕೆಲವೊಮ್ಮೆ ಇವು ಒಂದೊಂದೇ ಜನಿಸುವುದಿಲ್ಲ ಒಟ್ಟೊಟ್ಟಿಗೇ ಹತ್ತಾರು ಇಲ್ಲವೇ ನೂರಾರು ಸಂಖ್ಯೆಯಲ್ಲಿ ಜನ್ಮತಳೆಯುತ್ತವೆ. ಸರಾಸರಿ ಒಂದು ಲಕ್ಷ ವರ್ಷಗಳಲ್ಲಿ ಸ್ಥಿರ ಸ್ಥಿತಿ ತಲುಪುತ್ತದೆ. ಭೂಮಿಯಂತೆಯೇ ಗುರುತ್ವಾಕರ್ಷಣೆಯ ಬಲವನ್ನು ಹೊಂದಿರುವ ನಕ್ಷತ್ರಗಳು ತನ್ನ ನಿರಂತರವಾದ ಪ್ರಖರ ಶಾಖದಿಂದಾಗಿ ಕೋಟ್ಯಂತರ ವರ್ಷಗಳ ನಂತರ ಕ್ರಮೇಣ ತನ್ನ ಗುರುತ್ವ ಬಲವನ್ನು ಕಳೆದುಕೊಳ್ಳುತ್ತ ಹೋಗುತ್ತದೆ. ಹಾಗೂ ಅತಿಯಾದ ತಾಪದಿಂದ ಹೈಡ್ರೊ ಜನ್ ಅಣುಸಂಖ್ಯೆಯೂ ನಶಿಸುತ್ತಾ ಹೋಗಿ ಕೇವಲ ಹೀಲಿಯಂನಿಂದ ಕೂಡಿದ ವಿಪರೀತ ಶಾಖ ಹೊರಸೂಸುತ್ತ ಕೊನೆಗೊಮ್ಮೆ ಸಿಡಿದು
ಹೋಗಿ ಸೂಪರ್ ನೋವಾಗಳಾಗಿ ಬದಲಾಗುತ್ತದೆ.
ಕೆಲವು ಸಣ್ಣ ಪ್ರಮಾಣದ ನಕ್ಷತ್ರಗಳು ಯಾವುದೇ ರೀತಿಯ ಅನಿಲವನ್ನು ಉತ್ಪಾದಿಸಲು ಅಸಮರ್ಥವಾಗಿ ಕ್ರಮೇಣ ಕಳೆಗುಂದುತ್ತಾ ಕಪ್ಪು ಬಣ್ಣದ ಕುಬ್ಜ ಕಾಯವಾಗಿ ನೈಪತ್ಯಕ್ಕೆ ಸರಿದುಹೋಗುತ್ತದೆ. ನರಕಾಸುರನನ್ನು ಕೊಂದು ಇಡೀ ಜಗತ್ತನ್ನೇ ಬೆಳಕಿನಿಂದ ಜಗಮಗಿಸಿದ ಶ್ರೀಕೃಷ್ಣನ ಜನನವಾಗಿದ್ದು ರೋಹಿಣಿ ನಕ್ಷತ್ರದಲ್ಲಂತೆ. ನಕ್ಷತ್ರಗಳ ಬೆಳಕಿನಲ್ಲಿ ನಕ್ಷತ್ರ ಕಡ್ಡಿ ಹಿಡಿದು ಹಬ್ಬ ಆಚರಿಸುವ ಸಂಭ್ರಮ ನಿಮ್ಮೆಲ್ಲರದಾಗಿರಲಿ.