Monday, 12th May 2025

ಕೃಷಿ ಸಚಿವ ಬಿ.ಸಿ. ಪಾಟೀಲ್ ನಿಜವಾದ ಊಸರವಳ್ಳಿ: ಸಾರಾ ಮಹೇಶ್ ತಿರುಗೇಟು

ಬೆಂಗಳೂರು: ಡ್ರಗ್ಸ್ ಮಾಫಿಯಾ ಬಗ್ಗೆ ಮೊದಲು ಧ್ವನಿ ಎತ್ತಿದ್ದೇ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ. ಈ ಜಾಲದಲ್ಲಿ ಸಿಕ್ಕಿ ಬೀಳುತ್ತಿರುವವರು ಬಿಜೆಪಿಯ ಜೊತೆಗೆ ಅಂತರಂಗ -ಬಹಿರಂಗ ಸಖ್ಯ ಉಳ್ಳವರೇ ಆಗಿರುವುದರಿಂದ ಕನಲಿ ಹೋಗಿರುವ ಕೃಷಿ ಸಚಿವ ಬಿ.ಸಿ .ಟೀಲರು ಬಾಲ ಸುಟ್ಟ ಬೆಕ್ಕಿನಂತೆ ಆಡುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಸಾ.ರಾ.ಮಹೇಶ್ ತಿರುಗೇಟು ನೀಡಿ ದ್ದಾರೆ.

ಕ್ರಿಕೆಟ್ ಬೆಟ್ಟಿಂಗ್, ಡ್ರಗ್ ಮಾಫಿಯಾ ಮಟ್ಟಹಾಕಲು ಕುಮಾರಸ್ವಾಮಿಯವರು ಮಂತ್ರಿಯಾಗಿದ್ದಾಗ ಬಿಸಿ ಮುಟ್ಟಿಸಿದ್ದರಿಂದಲೇ ದೇಶಾಂತರ ಓಡಿಹೋಗಿ ತಲೆಮರೆಸಿಕೊಂಡಿದ್ದವರು ಜಾಮೀನು ಪಡೆದು ಬಂದಿದ್ದು, ಇದಕ್ಕೆ ತೆರೆಮರೆಯಲ್ಲಿ ನಿಂತು ವ್ಯವಸ್ಥೆ ಮಾಡಿದವರು ಯಾರು ಎಂಬುದು ಗುಟ್ಟಾಗಿ ಉಳಿದಿಲ್ಲ ಎಂದು ಕಿಡಿಕಾರಿ ದ್ದಾರೆ.

ಅಧಿಕಾರದ ಆಸೆಗಾಗಿ ಬಣ್ಣ ವೇಷ ಬದಲಿಸುವ ಜಾಯಮಾನ ಕೃಷಿ ಸಚಿವರಿಗೆ ಕರಗತವಾಗಿದೆ. ಉಸರವಳ್ಳಿಯನ್ನು ನಾಚಿಸುವಂತೆ ನಾಲಗೆಯ ಬಣ್ಣವನ್ನೂ ಬದಲಿಸುವ ಇಂತಹ ಬೃಹಸ್ಪತಿಗಳು ಕುಮಾರಸ್ವಾಮಿ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುವು ದನ್ನು ನಿಲ್ಲಿಸಲಿ ಎಂದು ಎಚ್ಚರಿಸಿದ್ದಾರೆ.

ಪೂರ್ವಾಶ್ರಮದಲ್ಲಿ ಪೊಲೀಸ್ ಇಲಾಖೆಯಲ್ಲಿ ಇದ್ದ ಪಾಟೀಲರಿಗೆ ಇಂತಹ ಮಾಫಿಯಾಗಳ ಬಗ್ಗೆ ಅರಿವಿಲ್ಲ ಎಂದರೆ ಅವರು ಪಾಲಿಸಿದ ವೃತ್ತಿನಿಷ್ಠೆ ಏನೆಂಬುದು ನಗೆಪಾಟಲಿನ ಸಂಗತಿ ಅಷ್ಟೇ ಅಲ್ಲ. ಎಂತೆಂತಹ ಊಸರವಳ್ಳಿಗಳು ಪೊಲೀಸ್ ಇಲಾಖೆಯಲ್ಲಿ ಇದ್ದರು ಎಂಬ ಬಗ್ಗೆ ಮರುಕವಿದೆ ಎಂದು ಸಾ.ರಾ ಮಹೇಶ್ ಮಾತಿನ ಮೊನೆಯಲ್ಲಿ ಕುಟುಕಿದ್ದಾರೆ.

ಖಾವಿ ತೊಟ್ಟ ಮಾರ್ಜಾಲ ಸಂನ್ಯಾಸಿಯಂತೆ ಖಾಕಿ ಕಳಚಿ ಖಾದಿ ಧರಿಸಿದ ನಂತರ ಪ್ರತಿಪಕ್ಷಗಳ ಆರೋಪಗಳಿಗೆ ಉತ್ತರಿಸ ಬೇಕಾಗಿಲ್ಲ ಎಂಬ ಉಡಾಫೆಯ ಪ್ರತಿಕ್ರಿಯೆ ನೀಡುತ್ತಿರುವ ಪಾಟೀಲರು ನಿಜವಾದ ಊಸರವಳ್ಳಿ ಎಂದು ಸಾರಾ ಮಹೇಶ್ ತಿರುಗೇಟು ನೀಡಿದ್ದಾರೆ.

ರಾಜ್ಯದ ಕೃಷಿಕರು ಯೂರಿಯಾ ಸೇರಿದಂತೆ ರಸಗೊಬ್ಬರ ಕೊರತೆ ಎದುರಿಸುತ್ತಿರುವುದು ಇಡೀ ರಾಜ್ಯದ ಜನತೆಗೆ ಗೊತ್ತಿದೆ. ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ ಎಂಬುದನ್ನು ತಮ್ಮ ಹೇಳಿಕೆಯಲ್ಲಿ ಒಪ್ಪಿಕೊಂಡಿರುವ ಪಾಟೀಲರು ಎಷ್ಟು ಮಂದಿ ವಿರುದ್ಧ ಕೇಸು ಜಡಿದಿದ್ದಾರೆ? ಎಂಬ ವಿವರವನ್ನು ಜನತೆಯ ಮುಂದಿಡಲಿ ಎಂದು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *