Sunday, 11th May 2025

Rishabh Pant: ನಾನು ಆರ್‌ಸಿಬಿ ಸೇರಲ್ಲ; ಸ್ಪಷ್ಟನೆ ಕೊಟ್ಟ ಪಂತ್‌

Rishabh Pant

ನವದೆಹಲಿ: 18ನೇ ಆವೃತ್ತಿಯ ಐಪಿಎಲ್ (IPL 2025)​ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಆರಂಭಕ್ಕೆ ಇನ್ನೂ 2 ತಿಂಗಳು ಬಾಕಿ ಇದೆ. ಈ ಮಧ್ಯೆ ದಿನಕ್ಕೊಂದು ವಿಚಾರದಲ್ಲಿ ಐಪಿಎಲ್‌ ಕುರಿತ ಚರ್ಚೆಗಳು ನಡೆಯುತ್ತಲೇ ಇದೆ. ಡೆಲ್ಲಿ ಕ್ಯಾಪಿಟಲ್ಸ್​ನ (Delhi Capitals) ನಾಯಕ ರಿಷಭ್​ ಪಂತ್​ ತಮ್ಮ ಮ್ಯಾನೇಜರ್​ ಮೂಲಕ ಆರ್​ಸಿಬಿ(RCB) ಮ್ಯಾನೇಜ್​​ಮೆಂಟ್​ಅನ್ನು ಸಂಪರ್ಕಿಸಿದ್ದಾರೆ. ಅಲ್ಲದೇ ಪಂತ್, ಆರ್​ಸಿಬಿ ತಂಡದ ನಾಯಕರಾಗಲು ಬಯಸಿದ್ದಾರೆ. ಆದರೆ, ವಿರಾಟ್‌ ಕೊಹ್ಲಿಗೆ(Virat Kohli) ಇದು ಇಷ್ಟವಿಲ್ಲ ಎಂಬ ಟ್ವೀಟ್‌ ಒಂದು ಭಾರೀ ಕುತೂಹಲ ಮೂಡಿಸಿತ್ತು. ಇದೀಗ ಈ ನಕಲಿ ಟ್ವಿಟ್‌ಗೆ ಸ್ವತಃ ಪಂತ್‌ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ರಾಜೀವ್ ಎನ್ನುವ ನೆಟ್ಟಿಗ ತನ್ನ ಟ್ವಿಟರ್‌ ಎಕ್ಸ್‌ ಖಾತೆಯಲ್ಲಿ​ ಪಂತ್‌ ಅವರು ಆರ್‌ಸಿಬಿ ತಂಡ ಸೇರಲು ಫ್ರಾಂಚೈಸಿ ಜತೆ ಮಾತುಕತೆ ನಡೆಸಿದ್ದಾರೆ. ಆದರೆ, ವಿರಾಟ್‌ ಕೊಹ್ಲಿಗೆ ಪಂತ್‌ ಅವರನ್ನು ಆರ್‌ಸಿಬಿ ಸೇರಿಸಲು ಇಷ್ಟವಿಲ್ಲ. ಈ ವಿಚಾರವನ್ನು ಕೊಹ್ಲಿ ಫ್ರಾಂಚೈಸಿಗೆ ತಿಳಿಸಿದ್ದಾರೆ ಎಂದು ಬರೆದುಕೊಂಡಿದ್ದರು. ಈ ಟ್ವೀಟ್‌ ವೈರಲ್‌ ಆಗುತ್ತಿದ್ದಂತೆ ಪಂತ್‌ ಪ್ರತಿಕ್ರಿಯೆ ನೀಡಿದ್ದಾರೆ.

ʼಇದು ಶುದ್ಧ ಸುಳ್ಳು. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಸುಳ್ಳು ಸುದ್ದಿಗಳನ್ನು ಯಾಕೆ ಹಬ್ಬಿಸುತ್ತೀರಿ. ಯಾವುದೇ ಕಾರಣಕ್ಕೂ ನಂಬಲಾಗದ ಸುಳ್ಳು ಸುದ್ದಿಗಳನ್ನು ಹಂಚಿಕೊಂಡು ಆಟಗಾರರ ಮಧ್ಯೆ ವೈಮನಸ್ಸು ಉಂಟು ಮಾಡಬೇಡಿ. ಅಭಿಮಾನಿಗಳಿಗೆ ತಪ್ಪು ಮಾಹಿತಿ ನೀಡಬೇಡಿ. ಇನ್ನಾದರೂ ಈ ರೀತಿಯ ತಪ್ಪುಗಳಿಂದ ದೂರ ಇರಿʼ ಎಂದು ಪಂತ್‌ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ IPL 2025 : ಪಂಜಾಬ್ ಕಿಂಗ್ಸ್‌ ಕೋಚಿಂಗ್ ತಂಡ ಸಂಪೂರ್ಣ ಬದಲಾವಣೆ

ಡೆಲ್ಲಿಯಲ್ಲೇ ಉಳಿಯಲಿದ್ದಾರೆ ಪಂತ್‌

ರಿಷಭ್​ ಪಂತ್(Rishabh Pant)​ ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ತಂಡ ತೊರೆದು ಚೆನ್ನೈ ಸೂಪರ್​ ಕಿಂಗ್ಸ್​ಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗಳು ನಡೆದಿತ್ತು. ಆದರೆ, ರಿಷಭ್‌ ಪಂತ್‌ ಅವರನ್ನು ಡೆಲ್ಲಿ ತಂಡದಲ್ಲೇ ಉಳಿಸಿಕೊಳ್ಳುವುದಾಗಿ ಫ್ರಾಂಚೈಸಿ ಸ್ಪಷ್ಟಪಡಿಸಿದೆ. ಇದರಿಂದ ಮುಂದಿನ ಐಪಿಎಲ್‌ನಲ್ಲಿ ಪಂತ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಸೇರಿಕೊಳ್ಳಲಿದ್ದಾರೆ ಎಂಬ ಊಹಾಪೋಹಕ್ಕೆ ತೆರೆ ಬಿದ್ದಿದೆ.

ಬಿಸಿಸಿಐ ಇನ್ನೂ ಆಟಗಾರರನ್ನು ಉಳಿಸಿಕೊಳ್ಳುವ ನಿಯಮವನ್ನು ಪ್ರಕಟಿಸಿಲ್ಲ. ಆದರೆ ರಿಷಭ್‌ ಪಂತ್‌, ಡೆಲ್ಲಿಯಲ್ಲೇ ಉಳಿಯುವ ಆಟಗಾರರ ಯಾದಿಯ ಮುಂಚೂಣಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಪಂತ್‌ ಸದ್ಯ ಪ್ರಚಂಡ ಪಾರ್ಮ್‌ನಲ್ಲಿದ್ದಾರೆ. ಬರೋಬ್ಬರಿ 20 ತಿಂಗಳ ಬಳಿಕ ಟೆಸ್ಟ್‌ಗೆ ಮರಳಿದ್ದ ಪಂತ್‌ ತಮ್ಮ ಹಿಂದಿನ ಶೈಲಿಯಲ್ಲೇ ಬ್ಯಾಟಿಂಗ್‌ ನಡೆಸಿ ಶತಕ ಬಾರಿಸಿ ಮಿಂಚಿದ್ದರು.

ಐಪಿಎಲ್​ 18ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ನವೆಂಬರ್​ 3 ಅಥವಾ 4ನೇ ವಾರದಲ್ಲಿ ನಡೆಯಲಿದೆ. ಈ ಬಾರಿ ಮೆಗಾ ಹರಾಜು ಪ್ರಕ್ರಿಯೆಯನ್ನು ವಿದೇಶಿ ನೆಲದಲ್ಲಿ ಆಯೋಜಿಸುವ ಯೋಜನೆಯನ್ನೂ ಬಿಸಿಸಿಐ ಹಾಕಿಕೊಂಡಿದೆ ಎಂದು ವರದಿಯಾಗಿದೆ. ಕಳೆದ ವರ್ಷ ಮೊದಲ ಬಾರಿಗೆ ಹರಾಜು ಪ್ರಕ್ರಿಯೆ ವಿದೇಶಿ ನೆಲದಲ್ಲಿ ಅಂದರೆ ದುಬೈನಲ್ಲಿ ನಡೆದಿತ್ತು.