Wednesday, 14th May 2025

ಎಂಟು ಕಾಲಿನ ಜೀವಿಯ ಎಂಟೆದೆಯ ಜೀವನಶೈಲಿ

ತಿಳಿರುತೋರಣ

ಶ್ರೀವತ್ಸ ಜೋಶಿ

ಅಕ್ಟೋಪಸ್‌ಗೆ ಎಂಟು ಕಾಲುಗಳಿರುವುದೇನೋ ನಿಜ, ಎಂಟೆದೆ ಕೂಡ? ಇಲ್ಲ. ಎಂಟೆದೆಯಲ್ಲಿ ಎಂಟು ಅಂದರೆ ಸಂಖ್ಯೆಯಲ್ಲ; ಗರ್ವ, ಸೊಕ್ಕು, ಕೊಬ್ಬು, ಹಮ್ಮು ಎಂಬಿತ್ಯಾದಿ ಅರ್ಥಗಳು. ಅಕ್ಟೋಪಸ್‌ಗಳಿಗೆ ಆ ರೀತಿಯ ಹಮ್ಮು – ಬಿಮ್ಮು ಇರುವುದು ಹೌದು. ಅಷ್ಟೇ ಅಲ್ಲ, ಕಡಲಾಳದಲ್ಲಿ ವಾಸಿಸುವ ಜಲಚರಗಳಲ್ಲೇ ಅತ್ಯಂತ ಬುದ್ಧಿವಂತ ಮತ್ತು ರೋಚಕ ಜೀವಿ ಅಕ್ಟೋಪಸ್ ಎಂದು ಜೀವವಿಜ್ಞಾನಿಗಳ ಅಂಬೋಣ.

ಬೌದ್ಧಿಕ ವಿಕಾಸ ಏನೇನೂ ಇಲ್ಲದ ಪೆದ್ದು ಜೀವಿಗಳು ಅವು ಎಂದು ಅರಿಸ್ಟಾಟಲ್ ಕ್ರಿ.ಪೂ 3ನೆಯ ಶತಮಾನದಲ್ಲಿ ಪ್ರತಿಪಾದಿಸಿದ್ದ ನಂತೆ. ಆದರೆ ಆ ಮೇಲಿನ ಸಂಶೋಧನೆಗಳಿಂದ ಗೊತ್ತಾಗಿರುವುದೇನೆಂದರೆ ಅಕ್ಟೋಪಸ್‌ಗಳ ಜೀವನ ಶೈಲಿ ಅವುಗಳ ಬುದ್ಧಿಯು ಆಶ್ಚರ್ಯಕರ ಮಟ್ಟದಲ್ಲಿ ವಿಕಾಸವಾಗಿರುವುದನ್ನು ಸೂಚಿಸುತ್ತದೆ.

ಅವು ತಮ್ಮ ಕೆಲಸಕ್ಕಾಗಿ ಚಿಕ್ಕಪುಟ್ಟ ಉಪಕರಣ(ಟೂಲ್) ಗಳನ್ನು ಬಳಸಬಲ್ಲವು, ಬಾಟಲಿಯ ಮುಚ್ಚಳ ತೆರೆಯಬಲ್ಲವು, ಪುಸ್ತಕದ ಪುಟಗಳನ್ನು ತಿರುವ ಬಲ್ಲವು, ಮನೋರಂಜನೆಗಾಗಿ ಆಟಿಕೆಗಳೊಂದಿಗೆ ಆಡಬಲ್ಲವು, ಪಾಠ ಕಲಿತುಕೊಳ್ಳಬಲ್ಲವು, ಸವಾಲುಗಳನ್ನೆದುರಿಸಿ ಜಯಿಸ ಬಲ್ಲವು; ಕೆಲ ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಸುದ್ದಿಯಾಗಿದ್ದ ‘ಪೌಲ್’ ಅಕ್ಟೋಪಸ್ ಅಂತಾದರೆ ವರ್ಲ್ಡ್‌ಕಪ್ ಫುಟ್‌ಬಾಲ್ ಪಂದ್ಯದಲ್ಲಿ ಯಾವ ತಂಡ ಜಯ ಗಳಿಸುವುದೆಂದು ಭವಿಷ್ಯ ಸಹ ತಿಳಿಸಬಲ್ಲದು! ಎಲ್ಲವೂ ಹುಟ್ಟಿನಿಂದಲೇ ಬಂದ ಕೌಶಲ.

ಅಭಿಜಾತ ಪ್ರತಿಭೆ. ಬೇರೆ ಕೆಲ ಪ್ರಾಣಿಗಳಂತೆ ಮನುಷ್ಯನಿಂದ ಕಲಿತು ಅನುಕರಣೆಯ ರೀತಿಯಲ್ಲಿ ಮಾಡುವಂಥದ್ದಲ್ಲ.
ಅಮೆರಿಕದ ಎಕಾಲಜಿಕಲ್ ಸೊಸೈಟಿಯು ಪ್ರಕಟಿಸುವ ಎಕಾಲಜಿ ಜರ್ನಲ್‌ನಲ್ಲಿ ಇತ್ತೀಚೆಗೆ ಪ್ರಕಟವಾದ ಒಂದು ಸಂಶೋಧನಾ ವರದಿಯ ಪ್ರಕಾರ, ಅಕ್ಟೋಪಸ್ ಅನ್ನು ಮೀನುಗಳ ಜತೆಗೆ ಬಿಟ್ಟರೆ ಮೀನುಗಳನ್ನು ಕೈಯಿಂದ ಗುದ್ದಿಯಾದರೂ ಪಕ್ಕಕ್ಕೆ ಸರಿಸಿ ತನ್ನ ಆಹಾರದ ಗುರಿಯತ್ತ ಸಾಗುತ್ತದಂತೆ. ಪಾಪ ಮೀನಿನ ಗತಿ ಏನಾಗಬೇಡ! ಅಕ್ಟೋಪಸ್‌ನ ಕಾಲುಗಳನ್ನೇ ಕೈಗಳೆಂದು ಪರಿಗಣಿಸಿದರೆ ಒಂದಲ್ಲ, ಎರಡಲ್ಲ, ಎಂಟು!

ಅಷ್ಟಮುಷ್ಟಿ ಪ್ರಹಾರಕ್ಕೆ ಮೀನು ಪಡ್ಚ! ಪೋರ್ಚುಗಲ್ ದೇಶದ ಯುನಿವರ್ಸಿಟಿ ಆಫ್ ಲಿಸ್ಬಲ್‌ನ ಪ್ರೊ. ಎಡ್ವಾರ್ಡೊ ಸಂಪಾಯೊ ತನ್ನದೊಂದು ಪುಟ್ಟ ತಂಡದೊಡನೆ ಕೆಂಪುಸಮುದ್ರದಲ್ಲಿ ಕೈಗೊಂಡ ಪ್ರಯೋಗಗಳಿಂದ ಬೆಳಕಿಗೆ ಬಂದ ಸಂಗತಿ ಯಿದು. ಸಮುದ್ರದ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಒಂದು ಮೀನು ಮತ್ತೊಂದು ಅಕ್ಟೋಪಸ್ ಹೀಗೆ ಜಲಚರ ಜೋಡಿಯನ್ನು ಆಹಾರ ಸಂಗ್ರಹಣೆಗಾಗಿ ಬಿಟ್ಟಾಗ ಮೀನು ಯಾವ ಪ್ರಭೇದದ್ದಿದ್ದರೂ, ಅಂದರೆ ಎಷ್ಟು ಶಕ್ತಿಶಾಲಿ ಆಗಿದ್ದರೂ, ಅಕ್ಟೋಪಸ್ ಅದನ್ನು ಗುದ್ದಿ ಹಿಂದೆ ತಳ್ಳಿ ತಾನು ಮುನ್ನುಗ್ಗುವುದರಲ್ಲಿ ಯಶಸ್ವಿಯಾಗುತ್ತಿತ್ತಂತೆ.

ಜಲಾಂತರ್ಗಾಮಿ ಕ್ಯಾಮೆರಾ ಬಳಸಿ ಈ ರೋಚಕ ದೃಶ್ಯವನ್ನು ಸಂಶೋಧಕರು ಚಿತ್ರೀಕರಿಸಿಕೊಂಡಿದ್ದಾರೆ. ಮತ್ತೂ ಸೂಕ್ಷ್ಮವಾಗಿ
ಗಮನಿಸಿದಾಗ ಆಹಾರವನ್ನು ಕಬಳಿಸಿದ ಮೇಲೂ ಅಕ್ಟೋಪಸ್ ಮೀನುಗಳನ್ನು ಗುದ್ದುತ್ತಿದ್ದದ್ದು ಕಂಡುಬಂತಂತೆ – ಬಹುಶಃ ಮೀನುಗಳ ಮೇಲೆ ತನ್ನ ಆಧಿಪತ್ಯ ಸ್ಥಾಪಿಸಲಿಕ್ಕೆ, ತನ್ನ ಹೆದರಿಕೆ ಅವುಗಳಿಗಿರಲಿ ಎಂದು ಸಾಧಿಸಲಿಕ್ಕೆ.

ಹೊಡೆತ ತಿಂದ ಮೀನುಗಳು ಬಾಯಿರುಚಿ ಕಳೆದುಕೊಳ್ಳುತ್ತವೆ, ಆಹಾರದ ತಂಟೆಗೆ ಬರುವುದಿಲ್ಲ ಎಂದು ಅಕ್ಟೋಪಸ್ ಅಂದಾಜು ಮಾಡುವುದೂ ಇರಬಹುದು. ಒಟ್ಟಿನಲ್ಲಿ ಮೀನುಗಳಿಗಿಂತ ಅಕ್ಟೋಪಸ್ ಇಂಟೆಲಿಜೆಂಟ್ ಮತ್ತು ಸ್ಮಾರ್ಟ್ ಎಂದು ಆ ಸಂಶೋಧಕರು ಬರೆದ ಷರಾ. ಜೀವಶಾಸ್ತ್ರದಲ್ಲಿ ವರ್ಗೀಕರಣದ ಪ್ರಕಾರ ಅಕ್ಟೋಪಸ್ ಮೃದ್ವಂಗಿ. ಎರಡು ಕಣ್ಣುಗಳು ಮತ್ತು ಕೊಕ್ಕಿನಂತಹದೊಂದು ಚೂಪಾದ ಮೂತಿ ಬಿಟ್ಟರೆ, ಪೂರ್ಣವಾಗಿ ರಬ್ಬರ್ ರೀತಿಯ ಮೈ. ಪೆಸಿಫಿಕ್ ಸಾಗರದಲ್ಲಿ ವಾಸಿಸುವ ಕೆಲವು ಅಕ್ಟೋಪಸ್‌ಗಳು 100 ಪೌಂಡ್‌ಗಳಷ್ಟು ತೂಕದ್ದಿರಬಹುದಾದರೂ, ಸಹಜವಾಗಿಯೇ ಗಜಗಾತ್ರ ಎನ್ನುವಷ್ಟು ದೊಡ್ಡದಿರ ಬಹುದಾದರೂ, ನಮ್ಮ ಹೆಬ್ಬೆರಳು ತೂರುವಷ್ಟು ಚಿಕ್ಕ ರಂಧ್ರದ ಮೂಲಕ ನುಸುಳಿಕೊಂಡು ಹೋಗಬಲ್ಲವಂತೆ!

ಬಲೆಯೊಳಗಿಟ್ಟರೆ  ಗಂಟುಗಳನ್ನು ಬಿಚ್ಚುವ, ಕೋಣೆಯೊಳಗೆ ಕೂಡಿಟ್ಟರೆ ಬಾಗಿಲಿನ ಅಗುಳಿ ತೆಗೆಯುವ ಶಾಣ್ಯಾತನವನ್ನೂ ಅವು ಪ್ರದರ್ಶಿಸಿದ್ದಿದೆಯಂತೆ. ಹಾಗಾಗಿಯೇ ಅವುಗಳನ್ನು ಬಂಧನದಲ್ಲಿಡುವುದು ತುಂಬ ಕಷ್ಟ. ‘ಅಕ್ಟೋಪಸ್ ಏಂಡ್ ಸ್ಕ್ವಿಡ್ – ದ ಸಾಫ್ಟ್ ಇಂಟೆಲಿಜೆನ್ಸ್’ ಎಂಬ ಪುಸ್ತಕದಲ್ಲಿ ಜಾಕ್ವೆಸ್ ಕೌಸ್ಟಿಯೊ ಎಂಬಾತ ಬಣ್ಣಿಸಿದ ಚಿತ್ರಣವನ್ನೊಮ್ಮೆ ಊಹಿಸಿಕೊಳ್ಳಿ (ಇದರಲ್ಲಿ ಸ್ವಲ್ಪ ಉತ್ಪ್ರೇಕ್ಷೆಯಿರಬಹುದಾದರೂ ಪೂರ್ಣ ಕಲ್ಪನೆಯಂತೂ ಅಲ್ಲ): ‘ನನ್ನ ಮಿತ್ರ ಒಂದು ಅಕ್ಟೋಪಸ್‌ಅನ್ನು ತಂದು ಅಕ್ವೇರಿಯಂ ನಲ್ಲಿಟ್ಟಿದ್ದ.

ಅಕ್ವೇರಿಯಂ ತೊಟ್ಟಿಗೆ ಸಾಕಷ್ಟು ಭಾರದ ಮುಚ್ಚಳವೂ ಇತ್ತು. ಸ್ವಲ್ಪ ಹೊತ್ತಾದ ಬಳಿಕ ನೋಡುತ್ತಾನೆ, ಅಕ್ವೇರಿಯಂ ಖಾಲಿ! ಅಕ್ಟೋಪಸ್ ಹೊರಬಂದು ಮಿತ್ರನ ಪುಸ್ತಕದ ಕವಾಟಿನಲ್ಲಿ ಒಂದೊಂದೇ ಪುಸ್ತಕವನ್ನು ತೆಗೆದು ತನ್ನ ಅಷ್ಟಬಾಹುಗಳಿಂದ
ಪುಸ್ತಕದ ಪುಟಗಳನ್ನು ತೆರೆದು ನೋಡುತ್ತಿದೆ!’ ಪುಸ್ತಕಗಳನ್ನು ಓದುವಷ್ಟೆಲ್ಲ ಜಾಣ್ಮೆ ಇಲ್ಲವಾದರೂ ಅಕ್ಟೋಪಸ್ ಗಳು ಅಕಶೇರುಕ(ಬೆನ್ನೆಲುಬು ಇಲ್ಲದ ಜೀವಿ)ಗಳ ಪೈಕಿ ಅತಿ ಬುದ್ಧಿವಂತ ಎನ್ನುವುದನ್ನು ವಿಜ್ಞಾನಿಗಳನೇಕರು ಒಪ್ಪುತ್ತಾರೆ.

ಮನುಷ್ಯನ ಚಹರೆಯನ್ನು ಗುರುತಿಸುವುದನ್ನೂ ಅವು ಮಾಡುತ್ತವಂತೆ. ನಮ್ಮಲ್ಲಿ ಹಸು – ಕರು, ಬೆಕ್ಕು, ನಾಯಿ ಮುಂತಾದ ಪ್ರಾಣಿಗಳನ್ನು ಸಾಕಿ ಗೊತ್ತಿರುವವರಿಗೆ ಇದೇನೂ ಅಷ್ಟು ಆಶ್ಚರ್ಯಕರವೆನಿಸಲಿಕ್ಕಿಲ್ಲ. ಆದರೆ ಗಮನಿಸಬೇಕಾದ ಅಂಶವೆಂದರೆ ನಮ್ಮ ಸಾಕುಪ್ರಾಣಿಗಳೆಲ್ಲ ಕಶೇರುಕಗಳು, ಜೀವಶಾಸ್ತ್ರ ಪಿರೇಮಿಡ್‌ನಲ್ಲಿ ಸಾಕಷ್ಟು ಎತ್ತರದ ಸ್ಥಾನವುಳ್ಳವು.

ಹಾಗಲ್ಲದೆಯೂ ಅಕ್ಟೋಪಸ್‌ಗೆ ಬುದ್ಧಿಮತ್ತೆಯಿದೆಯೆಂದರೆ ಅಚ್ಚರಿಯಾಗಬೇಕಾದ್ದೇ. 1990ರಲ್ಲಿ ಜೀವಶಾಸ್ತ್ರಜ್ಞ ರೊಲಾಂಡ್
ಆಂಡರ್‌ಸನ್ ಎಂಬಾತ ಮಾಡಿದ ಒಂದು ಪ್ರಯೋಗ ಇದು: ನೀರು ತುಂಬಿದ ಗಾಜಿನದೊಂದು ದೊಡ್ಡ ತೊಟ್ಟಿಯಲ್ಲಿ ಒಂದಿಷ್ಟು
ಅಕ್ಟೋಪಸ್‌ಗಳನ್ನು ಇಟ್ಟು, ಅದೇ ತೊಟ್ಟಿಯಲ್ಲಿ ಐದಾರು ಖಾಲಿ ಪ್ಲಾಸ್ಟಿಕ್ ಬಾಟ್ಲಿಗಳನ್ನೂ ಮುಚ್ಚಳ ಹಾಕಿ ತೇಲಿಬಿಟ್ಟಿದ್ದನು. ಆ ಬಾಟ್ಲಿಗಳು ತಿನ್ನುವ ವಸ್ತುವಲ್ಲವೆಂದು ಗೊತ್ತಾದ ಮೇಲೆ ಅಕ್ಟೋಪಸ್‌ಗಳಿಗೆ ಅವುಗಳ ಮೇಲೆ ಆಸಕ್ತಿ ಹೊರಟುಹೋಯಿತು.

ಆದರೆ ಒಂದು ಅಕ್ಟೋಪಸ್ ಮಾತ್ರ ಬಾಟ್ಲಿಯನ್ನು ತನ್ನ ಬಾಹುಗಳಿಂದ ತೊಟ್ಟಿಯ ಇನ್ನೊಂದು ತುದಿಯತ್ತ ದೂಡುವುದು, ಅದು ಅಲ್ಲಿಂದ ನೀರಿನ ಪ್ರವಾಹಕ್ಕೆ ಮತ್ತೆ ತನ್ನತ್ತ ಬಂದಾಗ ಮತ್ತೊಮ್ಮೆ ದೂಡುವುದು, ಹೀಗೆ ಬಾಟ್ಲಿಯೊಂದಿಗೆ ಆಟವಾಡಲು ಶುರುವಿಟ್ಟಿತು. ಬೇರೆ ಅಕ್ಟೋಪಸ್‌ಗಳೂ ಸುಮ್ಮನೆ ಬಿದ್ದುಕೊಂಡೇನೂ ಇರಲಿಲ್ಲ. ಅವೂ ಏನೋ ಒಂದು ಆಟ, ಚಲನವಲನ ಮಾಡಿಕೊಂಡೇ ಇದ್ದುವು. ಅಂದರೆ ಅಕ್ಟೋಪಸ್ ಗಳು ಸೋಮಾರಿಯಾಗಿ ಇರಬಯಸುವು ದಿಲ್ಲ, ಅವುಗಳಿಗೆ ಏನಾದರೂ ಒಂದು ಚಟುವಟಿಕೆ ಬೇಕೇಬೇಕು ಎಂದು ರೊಲಾಂಡ್‌ನ ಅಬ್ಸರ್ವೇಷನ್.

ಸಮುದ್ರದಲ್ಲಿ ಆಹಾರಕ್ಕಾಗಿ ಅಲೆಯುತ್ತಲೇ ಇರಬೇಕಾದ್ದರಿಂದ ಅಕ್ಟೋಪಸ್‌ಗಳು ಒಂದೇ ಕಡೆ ಮನೆ ಮಾಡಿಕೊಂಡು ಇರುವು ದಕ್ಕಾಗುವುದಿಲ್ಲ. ವಾರ ಅಥವಾ ಹೆಚ್ಚೆಂದರೆ ಹತ್ತು ದಿನಗಳಿಗೊಮ್ಮೆ ತಮ್ಮ ಬಿಡಾರ ಬದಲಾಯಿಸುತ್ತವೆ. ಬಂಡೆ ಕಲ್ಲುಗಳ ಸಂದುಗಳು, ದೊಡ್ಡ ಗಾತ್ರದ ಚಿಪ್ಪು ಅಥವಾ ಶಂಖದ ಒಳಭಾಗ, ಮುಳುಗಿಹೋದ ಹಡಗುಗಳ ಅವಶೇಷಗಳು – ಇವನ್ನೆಲ್ಲ ಅಕ್ಟೋಪಸ್ ತನ್ನ ಕೋಟೆ ನಿರ್ಮಾಣಕ್ಕೆ ಆಯ್ದು ಕೊಳ್ಳುತ್ತದೆ.

ಒಳಗಿರುವ ಕಸಕಡ್ಡಿಗಳನ್ನೆಲ್ಲ ತನ್ನ ಬಾಹುಗಳನ್ನು ಉಪಯೋಗಿಸಿ ಹೊರಹಾಕುತ್ತದೆ. ಪ್ರವೇಶದ್ವಾರದೆದುರು ಚಿಕ್ಕಪುಟ್ಟ ಕಲ್ಲು ಗಳನ್ನಿಟ್ಟು ಉಪದ್ರವಿ ಜೀವಿಗಳು ಒಳಬರದಂತೆ ರಕ್ಷಣೆ ಹೆಚ್ಚಿಸಿಕೊಳ್ಳುತ್ತದೆ. ಮತ್ತೊಂದಿಷ್ಟು ಚಿಪ್ಪುಗಳನ್ನು ಪೇರಿಸಿ
ಗಾರ್ಡನ್‌ ನಂಥ ರಚನೆಯನ್ನೂ ಮಾಡಿಕೊಳ್ಳಬಹುದು. ಒಟ್ಟಾರೆಯಾಗಿ ಅದರ ಗೃಹಕೃತ್ಯ ಭಾರಿ ಅಚ್ಚುಕಟ್ಟಿನದು. ಪ್ರತಿದಿನವೂ ಮನೆಯನ್ನು ಗುಡಿಸಿ, ಅಳಿದುಳಿದ ಆಹಾರ ಪದಾರ್ಥಗಳಿದ್ದರೆ ಅದನ್ನೂ ಹೊರಚೆಲ್ಲಿ ಮನೆಯೆದುರಿಗೆ ಕಸದ ರಾಶಿ ಹಾಕಿಡುತ್ತದೆ.

ಒಣ ಕಸ ಮತ್ತು ಹಸಿ ಕಸ ಎಂದು ಎರಡು ಪ್ರತ್ಯೇಕ ಬಾಲ್ದಿಗಳಲ್ಲಿಡುವಂತೆ ಸಮುದ್ರದ ಕಾರ್ಪೊರೇಷನ್ ಅವುಗಳಿಗೆ ಅಪ್ಪಣೆ ಮಾಡಿದೆಯೋ ಇಲ್ಲವೋ ಗೊತ್ತಿಲ್ಲವಾದರೂ, ಅಕ್ಟೋಪಸ್‌ಗಳ ಹೌಸ್‌ಕೀಪಿಂಗ್ ಶಿಸ್ತು, ನೈರ್ಮಲ್ಯ ಪ್ರಜ್ಞೆ ಅದ್ಭುತವಾದದ್ದು ಎಂದು ಸಾಗರದಾಳದಲ್ಲಿ ಜೀವಿಗಳ ಅಧ್ಯಯನ ಮಾಡುವ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಕಸದ ರಾಶಿ ಕಂಡುಬಂದರೆ ಅಲ್ಲೇ ಪಕ್ಕ ಅಕ್ಟೋಪಸ್‌ನ ಸುಂದರ ಗೂಡೊಂದು ಇದೆಯೆಂದೇ ಸೂಚನೆ.

ಹೆಣ್ಣು ಅಕ್ಟೋಪಸ್‌ಗಳು ಒಮ್ಮೆಗೆ ಸಾವಿರಗಟ್ಟಲೆ ಮೊಟ್ಟೆಗಳನ್ನಿಡುವಾಗ ಅವುಗಳನ್ನು ಮಾಲೆ ಕಟ್ಟಿದಂತೆ ಗೂಡಿನ ಛಾವಣಿಗೆ ನೇತಾಡಿಸಿ ಇಡುವುದು ಪಾರದರ್ಶಕ ಮಣಿಗಳ ಪರದೆಗಳಂತೆಯೇ ಕಾಣುತ್ತದಂತೆ.ಕಪ್ಪೆಗಳಷ್ಟು ಉಭಯಜೀವಿಗಳಲ್ಲವಾದರೂ, ಅಕ್ಟೋಪಸ್ ಗಳು ಸ್ವಲ್ಪ ಹೊತ್ತಿನ ಮಟ್ಟಿಗೆ ನೆಲದ ಮೇಲೆ ಚಲಿಸಬಲ್ಲವು, ಆಡಿಕೊಂಡು ಇರಬಲ್ಲವು, ಅಗತ್ಯ ಬಿದ್ದರೆ ವೇಗವಾಗಿ ಓಡಬಲ್ಲವು ಕೂಡ. ಮುಖ್ಯವಾಗಿ ತೀರಕ್ಕೆ ಸಮೀಪ ಕಡಿಮೆ ಆಳದ ನೀರಿನಲ್ಲಿ ವಾಸಿಸುವ ಅಕ್ಟೋಪಸ್‌ಗಳು ಆಗಾಗ ಆಹಾರವನ್ನು
ಹುಡುಕುತ್ತ ತೀರಕ್ಕೆ ಬರುತ್ತವೆ. ಬಲಿಷ್ಠವಾಗಿರುವಂಥವು ಸೀ – ಗಲ್‌ನಂಥ ಹಕ್ಕಿಗಳ ಮೇಲೆ ಎರಗುವುದುಂಟು.

ಸೀ-ಗಲ್‌ಗಳೂ ಸುಲಭದಲ್ಲಿ ಶರಣಾಗುವುದಿಲ್ಲ. ಕೆಲವೊಮ್ಮೆ ಅವುಗಳದೇ ಬಲ ಹೆಚ್ಚಾಗಿ ಅಕ್ಟೋಪಸ್ ಅನ್ನು ಎತ್ತಿಕೊಂಡು ಹಾರುತ್ತವೆ. ಅಂಥ ದೃಶ್ಯಗಳು ವನ್ಯಜೀವಿ ಛಾಯಾಚಿತ್ರಕಾರರಿಗೆ ಕ್ಲಿಕ್ಕಿಸಲಿಕ್ಕೆ ಸಿಗುತ್ತವೆ. ಬಹುಮಟ್ಟಿಗೆ ಅಕ್ಟೋಪಸ್‌ಗಳದು ನೀರೊಳಗೇ ವಾಸ. ವೈರಿಗಳಿಂದ ರಕ್ಷಣೆಗಾಗಿ ಮಾಡುವ ಕಸರತ್ತುಗಳು ಒಂದೆರಡಲ್ಲ. ಗೋಸುಂಬೆಗಳಂತೆ ಅಕ್ಟೋಪಸ್‌ಗಳೂ ಕ್ಷಣಾರ್ಧದಲ್ಲಿ ಬಣ್ಣ ಬದಲಿಸಿಕೊಳ್ಳಬಲ್ಲವು. ಒಮ್ಮೆ ಪಾಚಿಗಟ್ಟಿದ ಬಂಡೆ ಗಲ್ಲಿನಂತೆ, ಮತ್ತೊಮ್ಮೆ ಸಮುದ್ರತಳದ ಬಿಳಿ ಮರಳಿನಂತೆ… ಅಷ್ಟಾಗಿ ಸ್ವತಃ ಬಣ್ಣಗಳನ್ನು ಗುರುತಿಸುವ ಶಕ್ತಿ ಅವುಗಳಿಗಿಲ್ಲ.

ಅಷ್ಟಾದ ಮೇಲೂ ವೈರಿಯು ತನ್ನತ್ತಲೇ ಬರುವುದು ಗೊತ್ತಾದಾಗ ಅಕ್ಟೋಪಸ್ ತನ್ನ ಮೈಯಿಂದ ಶಾಯಿಯಂಥ ಬಣ್ಣವನ್ನು ಹೊರಚೆಲ್ಲಿ ಅಲ್ಲೊಂದು ದೊಡ್ಡ ತ್ರೀ-ಡಿ ಚಿತ್ರ ಬಿಡಿಸಿದಂತೆ ವಿನ್ಯಾಸ ಮಾಡುತ್ತದೆ. ತೀವ್ರ ಘಾಟಿನ ಆ ವಿಷಪದಾರ್ಥಕ್ಕೆ ವೈರಿ ಕಣ್ಣುರಿಯಿಂದ ಬಸವಳಿಯುತ್ತದೆ. ಅಷ್ಟುಹೊತ್ತಿಗೆ ಅಕ್ಟೋಪಸ್ ಅಲ್ಲಿಂದ ಪಾರಾಗುತ್ತದೆ. ವೈರಿಯಿಂದ ತಪ್ಪಿಸಿಕೊಳ್ಳುವು ದಕ್ಕಷ್ಟೇ ಅಲ್ಲ, ತನ್ನದೇ ದೇಹದಿಂದ ಹೊರಚೆಲ್ಲಿದ ಆ ವಿಷವರ್ತುಲಕ್ಕೆ ಸಿಕ್ಕಿದರೆ ಸಾವು ನಿಶ್ಚಿತವೆಂದು ಅದಕ್ಕೆ ಗೊತ್ತು. ಕೆಲವು ಜಾತಿಯ ಅಕ್ಟೋಪಸ್‌ಗಳದು ಇನ್ನೊಂದು ವಿಧದ ಸ್ವರಕ್ಷಣೆಯಿದೆ. ವೈರಿ ಬಂದಾಗ ಆ ರೀತಿ ಕಣ್ಮರೆಯಾಗುವ ಬದಲು, ಬೇರೆಯೇ ಒಂದು ದೈತ್ಯಗಾತ್ರದ ಜಲಚರದಂತೆ ತನ್ನ ದೇಹದ ಆಕಾರವನ್ನು ಬದಲಿಸಿಕೊಳ್ಳುವುದು.

ತಾನೇ ಬೇಟೆಯಾಡುವಾಗಲೂ ಅಷ್ಟೇ, ಹಿಡಿದ ಜೀವಿಗೆ ಕಠಿಣ ಕವಚವೇನಾದರೂ ಇದ್ದರೆ, ಎಂಟು ಕೈಗಳ ಬಲ ಸಾಲದಾದರೆ,
ತನ್ನ ಕೊಕ್ಕಿನ ರಚನೆಯಿಂದ ಕವಚಕ್ಕೆ ತೂತು ಕೊರೆಯುತ್ತದೆ. ಒಂದಿಷ್ಟು ವಿಷ ಉಗುಳನ್ನು ಒಳ ತೂರಿಸಿ ಆ ಜೀವಿಯನ್ನು
ಕಂಗಾಲುಗೊಳಿಸುತ್ತದೆ. ಆಮೇಲೆ ಕವಚ ತುಂಡಾಗುವಂತೆ ಮಾಡಿ ಒಳಗಿನ ಮಾಂಸವನ್ನು ಮೆಲ್ಲುತ್ತದೆ. ಮನುಷ್ಯನೊಡನೆ ಮುಖಾಮುಖಿಯಾದರೆ ಅಕ್ಟೋಪಸ್‌ನ ವರ್ತನೆ ಹೇಗಿರುತ್ತದೆ? ಹೆಚ್ಚೆಂದರೆ ಬಾಯ್ತುಂಬ ನೀರು ತುಂಬಿಸಿಕೊಂಡು ಮನುಷ್ಯನ ಮೇಲೆ ಉಗುಳೀತು ಅಷ್ಟೇ. ಆ ಮಟ್ಟಿಗೆ ಅಕ್ಟೋಪಸ್‌ಗಳು ನಿರುಪದ್ರವಿ ಎಂದರಿತ ಕೆಲ ಸಾಹಸಿಗರು ‘ಅಕ್ಟೋಪಸ್ ರೆಸ್ಲಿಂಗ್’ ಅಂದರೆ ಅಕ್ಟೋಪಸ್ ನೊಂದಿಗೆ ಕುಸ್ತಿಪಂದ್ಯಗಳನ್ನು ಏರ್ಪಡಿಸಿದ್ದಿದೆ.

20ನೆಯ ಶತಮಾನದ ಮಧ್ಯಭಾಗದವರೆಗೂ ಅಮೆರಿಕದ ಪಶ್ಚಿಮ ಕರಾವಳಿಯ ಕೆಲ ಪ್ರದೇಶಗಳಲ್ಲಿ ಅದೊಂದು ಮನೋರಂಜ ನೆಯ ಕ್ರೀಡೆಯಾಗಿತ್ತು. ವರ್ಲ್ಡ್ ಅಕ್ಟೋಪಸ್ ರೆಸ್ಲಿಂಗ್ ಚಾಂಪಿಯನ್‌ಶಿಪ್ ಪಂದ್ಯಗಳೂ ನಡೆಯುತ್ತಿದ್ದವು. ಆದರೆ 1976ರಲ್ಲಿ ವಾಷಿಂಗ್ಟನ್ ಸಂಸ್ಥಾನವು ಆ ಕ್ರೀಡೆಗೆ ಬ್ಯಾನ್ ಹಾಕಿತು. ಅಕ್ಟೋಪಸ್‌ಗಳನ್ನು ಹೆದರಿಸುವುದು ಕಾನೂನಿಗೆ ವಿರೋಧವೆಂದು ಸಾರಿತು. 1986ರಲ್ಲಿ ಯುನೈಟೆಡ್ ಕಿಂಗ್‌ಡಮ್ ಸಹ ಒಂದು ಕಾಯ್ದೆಯನ್ನು ಜ್ಯಾರಿಗೊಳಿಸಿತು. ಅದರ ಪ್ರಕಾರ ಅಕ್ಟೋಪಸ್ ‌ಅನ್ನು ಪ್ರಯೋಗಪಶುವಾಗಿ ಉಪಯೋಗಿಸುವಂತಿಲ್ಲ.

ಭಾರತದಲ್ಲಾಗಿದ್ದರೆ ‘ಶಂ ನೋ ಅಸ್ತು ದ್ವಿಪದೇ ಶಂ ಚತುಷ್ಪದೇ…’ ಪುರುಷಸೂಕ್ತ ಮಂತ್ರದಲ್ಲಿ ‘ಶಂ ಅಷ್ಟಪದೇ’ ಎಂಬ ತುಣುಕನ್ನೂ ಸೇರಿಸಿ ಮಂತ್ರಪೂರ್ವಕವಾಗಿ ಅಷ್ಟಪದಿಗಳ ಕ್ಷೇಮಾಭ್ಯುದಯ ಕೋರಬಹುದಿತ್ತು. ಕೊರಿಯಾ, ಸ್ಪೈನ್, ಗ್ರೀಸ್ ಮುಂತಾದ ದೇಶಗಳ ಜನರು ಅಕ್ಟೋಪಸ್ ತಿನ್ನುತ್ತಾರೆ. ಮುಖ್ಯವಾಗಿ ಆಫ್ರಿಕಾ ಖಂಡದ ಉತ್ತರ ಮತ್ತು ಪಶ್ಚಿಮ ಭಾಗಗಳಿಂದ ಆ ದೇಶಗಳಿಗೆ ಆಹಾರಸಾಮಗ್ರಿಯಾಗಿ ಅಕ್ಟೋಪಸ್ ಗಳು ರಫ್ತಾಗುತ್ತವೆ.

ಈ ಲೇಖನದ ಆರಂಭದಲ್ಲಿ ಅಕ್ಟೋಪಸ್‌ಗೆ ಎಂಟೆದೆ ಎಂದು ಪದವಿನೋದ ಮಾಡಿದ್ದೆನಷ್ಟೆ? ಎಂಟು ಸಂಖ್ಯೆಯ ಎದೆಗಳಲ್ಲ
ವಾದರೂ ಅಕ್ಟೋಪಸ್‌ಗೆ ಒಟ್ಟು ಮೂರು ಹೃದಯಗಳು ಇರುತ್ತವಂತೆ. ಎರಡು ಹೃದಯಗಳು ಅದರ ಮುಖ್ಯ ದೇಹಭಾಗಕ್ಕೆ ರಕ್ತಸಂಚಲನೆ ಮಾಡಿದರೆ ಮೂರನೆಯದು ಬಾಹುಗಳಿಗೆ ರಕ್ತಸಂಚಲನ ನೋಡಿಕೊಳ್ಳುತ್ತದೆ. ಮೆದುಳುಗಳು ಮೂರಲ್ಲ
ಒಂಬತ್ತು! ಒಂದೊಂದು ಬಾಹುವಿಗೂ ತನ್ನದೇ ಆದ ಮೆದುಳು ಮತ್ತು ನರಮಂಡಲ; ದೇಹದ ಕೇಂದ್ರಭಾಗದಲ್ಲಿ ಮತ್ತೊಂದು
ಮೆದುಳು. ಅಕ್ಟೋಪಸ್‌ನ ರಕ್ತ ನೀಲಿ ಬಣ್ಣದ್ದು. ಮನುಷ್ಯನೂ ಸೇರಿದಂತೆ ಹೆಚ್ಚಿನ ಪ್ರಾಣಿಗಳೆಲ್ಲದರ ರಕ್ತ ಕಬ್ಬಿಣ ಅಂಶವುಳ್ಳ
ದ್ದಾದರೆ ಅಕ್ಟೋಪಸ್‌ನ ರಕ್ತ ತಾಮ್ರದ ಅಂಶದಿಂದ ಆದದ್ದು.

ಸಮುದ್ರತಳದಲ್ಲಿ ಕಡಿಮೆ ತಾಪಮಾನದಲ್ಲಿ ಆಮ್ಲಜನಕದ ಕೊರತೆಯಿರುವಲ್ಲಿ ನೀಲಿ ರಕ್ತ ಸಹಕಾರಿಯಾಗುತ್ತದೆ. ಅಕ್ಟೋಪಸ್
ಗಳ ಸಂತಾನೋತ್ಪತ್ತಿ ವಿಚಾರವೂ ಬಲು ವಿಚಿತ್ರ ವಾದದ್ದು. ಗಂಡು ಅಕ್ಟೋಪಸ್ ಮತ್ತು ಹೆಣ್ಣು ಅಕ್ಟೋಪಸ್ ಕೈಕೈ ಹಿಡಿದು (ಅಲ್ಲ, ಕೈ ಕೈ ಕೈ ಕೈ ಕೈ ಕೈ ಕೈ ಕೈ… ಹಿಡಿದು?) ಪ್ರಣಯದಾಟ ಆಡಿ ಸೇರಿದ ಮೇಲೆ ಗಂಡು ಒಂದೋ ಶಕ್ತಿಹೀನವಾಗಿ ಸತ್ತು ಹೋಗು ತ್ತದೆ, ಅಥವಾ ಕೆಲವೊಮ್ಮೆ ಹೆಣ್ಣೇ ಅದನ್ನು ಕೊಂದುಬಿಡುತ್ತದೆ (ಈ ಕ್ರಮ ಕೆಲವು ಕೀಟಗಳಲ್ಲಿ, ಜೇಡಗಳಲ್ಲಿ ಇರುತ್ತದೆ). ಹೆಣ್ಣು ಅಕ್ಟೋಪಸ್ ಸಾವಿರಗಟ್ಟಲೆ ಮೊಟ್ಟೆಯಿಟ್ಟು ಮರಿಗಳಾದ ಮೇಲೆ, ಅದರ ಶರೀರದ ಅಂಗಾಂಶಗಳು ನಷ್ಟವಾಗಿ ಸೊರಗುತ್ತ ಬಂದು ಕೊನೆಗೆ ಸತ್ತುಹೋಗುತ್ತದೆ.

ಆಹಾರವನ್ನು ಅರಸಲಿಕ್ಕೆ ಹೋಗದೆ ಮೊಟ್ಟೆಗಳ ಬಳಿ ರಕ್ಷಣೆಗಾಗಿ ಕುಳಿತುಕೊಳ್ಳಬೇಕಾಗಿ ಬರುವುದ ರಿಂದ ಕೆಲವೊಮ್ಮೆ ಕೊನೆಗೆ
ಹಸಿವಿನಿಂದಲೂ ತಾಯಿ – ಅಕ್ಟೋಪಸ್ ಸಾಯುವುದಿದೆ. ಹೀಗೆ ತಂದೆ – ತಾಯಿಗಳಿಂದ ಪೋಷಣೆ ಇಲ್ಲದೆ ಬೆಳೆಯುವುದರಿಂದಲೇ
ಬಹುಶಃ ಅಕ್ಟೋಪಸ್‌ಗಳು ಎಂಟೆದೆಯವು ಆಗಿರುವಂತೆ ಪ್ರಕೃತಿಯ ಏರ್ಪಾಡು. ಆದರೆ ಆಹಾರ ಸಿಗದೇ ಹೋದರೆ ತನ್ನದೇ ಕುಟುಂಬದ ಚಿಕ್ಕ ಸದಸ್ಯರನ್ನು ಗುಳುಂ ಮಾಡಬಹುದು.

ಅದೂ ಸಾಧ್ಯವಾಗದಿದ್ದರೆ ತನ್ನದೇ ಒಂದು ಕಾಲಿನ ಸ್ವಲ್ಪ ಭಾಗವನ್ನು ತಿಂದುಬಿಡಲೂ ಬಹುದು, ಆಮೇಲೆ ಅದು ಹೇಗೂ ಚಿಗುರಿ ಕೊಳ್ಳುತ್ತದಾದ್ದರಿಂದ. ಕೊನೆಯಲ್ಲಿ, ಅಕ್ಟೋಪಸ್ ದಾಂಪತ್ಯಕ್ಕೆ ಸಂಬಂಧಿಸಿದ ಇನ್ನೂ ಒಂದು ಭಲೇ ಸ್ವಾರಸ್ಯಕರ ಸಂಗತಿ ಯನ್ನೂ ಉಲ್ಲೇಖಿಸಿ ಈ ಅಕ್ಟೋಪಸಾಖ್ಯಾನವನ್ನು ಮುಗಿಸುತ್ತೇನೆ. ಇದು ಸ್ವಲ್ಪ ಶೃಂಗಾರ ಮಯವಾದುದು ವಯಸ್ಕರಿಗೆ ಮಾತ್ರ ಅಂತ ಬೇಕಾದರೂ ಅನ್ನಿ. ಏನೆಂದರೆ, ಸಮುದ್ರತಳದಲ್ಲಿ ಕೋಟೆ ಕಟ್ಟಿಕೊಂಡ ಮೇಲೆ ಅಕ್ಟೋಪಸ್‌ಗಳು ಬಹುತೇಕ ಮನೆ ಯೊಳಗೇ ಇರುತ್ತವೆ. ‘ಕೌಚ್ ಪೊಟ್ಯಾಟೊ’ ಎಂಬ ಲೇವಡಿಯ ಮಾತು ಸ್ವಲ್ಪ ಮಟ್ಟಿಗೆ ಅಕ್ಟೋಪಸ್‌ಗಳಿಗೂ ಸಲ್ಲುತ್ತದೆ.

ಹೆಣ್ಣು ಅಕ್ಟೋಪಸ್‌ನದೊಂದು ಮನೆ, ಅಲ್ಲೇ ಪಕ್ಕ ಗಂಡು ಅಕ್ಟೋಪಸ್ ನದೊಂದು ಮನೆ ಎಂಬ ವ್ಯವಸ್ಥೆಯಿರುವುದೂ ಮಾಮೂಲಿ. ಗಂಡು ಅಕ್ಟೋಪಸ್‌ಗೆ ಎಂಟು ಕಾಲುಗಳ ಪೈಕಿ ಒಂದರಲ್ಲಿ ಜನನೇಂದ್ರಿಯವೂ ಇರುತ್ತದೆ. ಅದಕ್ಕೆ ಹೆಕ್ಟೊಕೊಕ್ಟಿ ಲಸ್ ಆರ್ಮ್ ಎಂದು ಹೆಸರು. ಹೆಣ್ಣು ಅಕ್ಟೋಪಸ್‌ಗೂ ಅದೇ ರೀತಿ ಎಂಟು ಕಾಲುಗಳ ಪೈಕಿ ಒಂದರಲ್ಲಿ ಜನನೇಂದ್ರಿಯ ಇರು ತ್ತದೆ. ಹೆಣ್ಣು ಗಂಡು ಅಕ್ಟೋಪಸ್‌ಗಳೆರಡೂ ಒಂದೇ ಗೂಡಿನೊಳಗೆ ಇರಬೇಕೆಂದಿಲ್ಲ.

ಬೇರೆ ಅನೇಕ ಜೀವಿಗಳಂತೆ ಒಂದರ ಮೇಲೊಂದು ಏರಿ ಸೇರಬೇಕೆಂದಿಲ್ಲ. ಕ್ವಾರೆಂಟೈನ್‌ನಲ್ಲಿ ಇವೆಯೋ ಎಂಬಂತೆ, ಹೆಣ್ಣು – ಗಂಡು ಅಕ್ಟೋಪಸ್‌ಗಳು ತಂತಮ್ಮ ಗೂಡಿನಲ್ಲೇ ಇದ್ದು, ಆ ಬಾಹುವನ್ನಷ್ಟೇ ಬಾಗಿಲಿನಿಂದ ಹೊರಚಾಚಿ ಮಿಲನ ಮಹೋತ್ಸವ ನಡೆಸುವುದೂ ಇದೆಯಂತೆ! ವಿಜ್ಞಾನಿಗಳು ಇದನ್ನು ಡಿಸ್ಟೇನ್ಸ್ ಪೊಸಿಷನ್ ಆಫ್ ಮೇಟಿಂಗ್ ಎಂದು ಗುರುತಿಸುತ್ತಾರೆ. ವಾತ್ಸ್ಯಾ ಯನನಾಗಿದ್ದರೆ ಇದಕ್ಕೆ ಏನು ಹೆಸರಿಡುತ್ತಿದ್ದನೋ. ಅದೇನೇ ಇರಲಿ, ದೇವರೇ ನಿನ್ನ ಸೃಷ್ಟಿಯಲ್ಲಿರುವ ವೈಚಿತ್ರ್ಯಗಳು ಒಂದೇ ಎರಡೇ! ಏನು ಸೋಜಿಗ ಈ ಜಗ!

Leave a Reply

Your email address will not be published. Required fields are marked *