Sunday, 18th May 2025

ಪ್ರತಿಷ್ಠೆಗೆ ಬಿದ್ದ ಸಂಗೀತಗಾರರು, ಬೀದಿಗೆ ಬಂದ ನಾಡಗೀತೆ

ವಿಶ್ವವಾಣಿ ಕಾಳಜಿ, ನಾಡಗೀತೆ ನಲಿಯಲಿ

ವಿಶೇಷ ವರದಿ: ರಂಜಿತ್ ಎಚ್.ಅಶ್ವತ್ಥ ಬೆಂಗಳೂರು

ಸಂಗೀತ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಲು ಹೋ(ಹಾ)ರಾಟ

ವಿವಾದದ ಹಿಂದೆ ಕಾಣದ ಕಂಠಗಳ ಕಿರುಚಾಟ

ಕಳೆದೊಂದು ತಿಂಗಳಿನಿಂದ ರಾಜ್ಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿರುವ ನಾಡಗೀತೆ ವಿವಾದ ಕೇವಲ ನಾಡಗೀತೆಯ ಧಾಟಿಯನ್ನು ನಿರ್ಧರಿಸುವುದಕ್ಕೆ ಮಾತ್ರ ಸೀಮಿತವಾಗದೇ, ಇದರ ಹಿಂದೆ ಕಾಣದ ಕೈಗಳ ಹೋರಾಟ ಗುಪ್ತಗಾಮಿನಿಯಂತೆ
ನಡೆಯುತ್ತಿದೆ.

ಹೌದು, ಮೈಸೂರು ಅನಂತಸ್ವಾಮಿ ಹಾಗೂ ಅಶ್ವತ್ಥ್ ಅವರ ಬಣದ ನಡುವೆ ನಡೆಯು ತ್ತಿರುವ ಈ ಹೋರಾಟದಲ್ಲಿ ಅಶ್ವತ್ಥ್ ಬಣದವರು, ‘ಮೈಸೂರು ಅನಂತಸ್ವಾಮಿ ಅವರ ಧಾಟಿಯಾದರೆ ಒಂದು ಪಲ್ಲವಿ ಹಾಗೂ ಎರಡು ಚರಣ ವನ್ನು ಅಳವಡಿಸಿ ಕೊಳ್ಳಿ. ಪೂರ್ಣ ಸಾಹಿತ್ಯವಾದರೆ ಅಶ್ವತ್ಥ್ ಅವರ ಸಂಯೋಜನೆ ಯನ್ನು ಬಳಸಿ’ ಎನ್ನುವ ಮಾತನ್ನು ಹೇಳುತ್ತಿದ್ದರೆ, ಅನಂತ ಸ್ವಾಮಿ ಬಣದವರು ಮಾತ್ರ ‘ಅನಂತಸ್ವಾಮಿ ಅವರ ಧಾಟಿಯನ್ನೇ ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ’ ಎನ್ನುವ ಮಾತನ್ನು ಹೇಳುತ್ತಿದ್ದಾರೆ.

ಆದರೆ ಈ ರೀತಿ ಹಠಕ್ಕೆ ಬೀಳುವುದರ ಹಿಂದಿರುವ ಕಾರಣ ವೇನು? ಎನ್ನುವುದು ಮಾತ್ರ ಯಕ್ಷ ಪ್ರಶ್ನೆಯಾಗಿದೆ. ಸುಗಮ ಸಂಗೀತ ದಲ್ಲಿರುವ ಕೆಲವರ ಪ್ರಕಾರ, ಈಗಾಗಲೇ ರೈತಗೀತೆ ಅಶ್ವತ್ಥ್ ಅವರ ಸಂಯೋಜನೆ ಯದ್ದಾಗಿರುವುದರಿಂದ, ಮೈಸೂರು ಅನಂತ ಸ್ವಾಮಿ ಅವರ ಸಂಯೋಜನೆಯ ನಾಡಗೀತೆಗೆ ಅವಕಾಶ ನೀಡಬೇಕು ಎನ್ನುವುದಾಗಿದೆ.

ಆದರೆ ಅದನ್ನು ಮೀರಿ, ಕಾಣದ ಕೈಗಳು ಈ ಹೋರಾಟವನ್ನು ನಿರ್ವಹಣೆ ಮಾಡುತ್ತಿವೆ ಎನ್ನುವ ಮಾತುಗಳು ಕೇಳಿಬಂದಿವೆ. ಅದರಲ್ಲಿಯೂ ಅನಂತಸ್ವಾಮಿ ಅವರ ಗರಡಿಯಲ್ಲಿ ಬೆಳೆದ ಕೆಲವರು, ಅನಂತಸ್ವಾಮಿ ಅವರ ಧಾಟಿಯನ್ನೇ ಅಂತಿಮಗೊಳಿಸುವ ಮೂಲಕ, ಗೆದ್ದು ಬೀಗುವ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಕಾಪಿರೈಟ್ ರಾಯಲ್ಟಿ ಹೋರಾಟ?
ಯಾವ ಧಾಟಿಯಲ್ಲಿ ನಾಡಗೀತೆ ಹಾಡಬೇಕು? ಎನ್ನುವುದನ್ನು ನಿರ್ಧರಿಸಿ ಅಶ್ವತ್ಥ್ ಅಥವಾ ಮೈಸೂರು ಅನಂತಸ್ವಾಮಿ ಅವರ ಹೆಸರನ್ನು ಅಂತಿಮಗೊಳಿಸಿದರೆ, ಸರಕಾರ ಯಾರ ಧಾಟಿಯನ್ನು ಅಂತಿಮಗೊಳಿಸುವುದೋ ಅವರಿಗೆ ಕಾಪಿರೈಟ್‌ನ ಗೌರವಧನ ವನ್ನು ನೀಡಬೇಕಾಗುತ್ತದೆ. ಇದೀಗ ಇಬ್ಬರು ಸಂಗೀತಗಾರರು ಇಲ್ಲದಿದ್ದರೂ, ಅವರ ಕುಟುಂಬ ಸದಸ್ಯರಿಗೆ ಈ ಗೌರವಧನ
ಸಂದಾಯವಾಗಲಿದೆ. ಈ ಕಾರಣಕ್ಕಾಗಿ ಕೆಲವರು ಈ ಹೋರಾಟವನ್ನು ತೀವ್ರಗೊಳಿಸುತ್ತಿದ್ದಾರೆ ಎನ್ನುವ ಮಾತು ಕೇಳಿಬಂದಿದೆ.
ಈ ವಿಷಯದಲ್ಲಿ ಅನಂತಸ್ವಾಮಿ ಅವರ ಕುಟುಂಬ ಸದಸ್ಯರಾಗಲಿ ಅಶ್ವತ್ಥ್ ಕುಟುಂಬ ಸದಸ್ಯರಾಗಲಿ ನೇರವಾಗಿ ಕಾಣಿಸಿ ಕೊಂಡಿಲ್ಲ. ಆದರೆ ಇಬ್ಬರ ಶಿಷ್ಯಂದಿರು ಜಿದ್ದಿಗೆ ಬಿದ್ದು ಹೋರಾಡುತ್ತಿದ್ದಾರೆ. ಆ ಮೂಲಕ ತಮ್ಮ ಗುರುಗಳಿಗೆ ‘ಗುರುಕಾಣಿಕೆ’ ನೀಡುವ ಲೆಕ್ಕಾಚಾರದಲ್ಲಿದ್ದಾರೆ ಎನ್ನುವುದು ತಟಸ್ಥ ಬಣದ ಮಾತಾಗಿದೆ.

ಕೆಲವರನ್ನು ಸೈಡ್‌ಲೈನ್ ಮಾಡುವ ಯತ್ನ?

ಸಿ.ಅಶ್ವತ್ಥ್ ಅವರ ಮರಣದ ಬಳಿಕ ಸುಗಮ ಸಂಗೀತ ಕ್ಷೇತ್ರ ಹರಿದು ಹಂಚಿ ಹೋಗಿದೆ. ಸಂಘಟನೆಯ ವಿಷಯದಲ್ಲಿ ಎಲ್ಲರನ್ನೂ
ಒಂದಾಗಿ ತೆಗೆದುಕೊಂಡು ಹೋಗುವ ನಾಯಕತ್ವದ ಕೊರತೆಯಿತ್ತು. ಪ್ರಮುಖವಾಗಿ ಕಿಕ್ಕೇರಿ ಕೃಷ್ಣಮೂರ್ತಿ ಸೇರಿದಂತೆ ಅಶ್ವತ್ಥ್
ಅವರೊಂದಿಗೆ ಗುರುತಿಸಿಕೊಂಡಿದ್ದ ಕೆಲವರು ಸುಗಮ ಸಂಗೀತ ಕ್ಷೇತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಆದ್ದರಿಂದ ಇದೀಗ
ಅವರನ್ನು ಸೈಡ್‌ಲೈನ್ ಮಾಡುವ ಪ್ರಯತ್ನಕ್ಕೆ ಕೆಲವರು ನಾಡಗೀತೆಯ ವಿವಾದವನ್ನು ಬಳಸಿಕೊಂಡಿರುವ ಸಾಧ್ಯತೆಯಿದೆ. ಈ
ಮೂಲಕವೇ ನಾಡಗೀತೆಯ ಧಾಟಿ ಅಂತಿಮವಾಗಿ ಎನ್ನುವ ಸಂದೇಶ ರವಾನೆಯಾಗಲಿ ಎನ್ನುವುದು ಕೆಲವರ ಲೆಕ್ಕಾಚಾರವಾಗಿದೆ
ಎನ್ನುವ ಮಾತುಗಳು ಸುಗಮ ಸಂಗೀತ ಕ್ಷೇತ್ರದಲ್ಲಿ ಕೇಳಿಬಂದಿದೆ.

ಅಶ್ವತ್ಥ್ ಧಾಟಿಗೆ 85 ಸಾವಿರ ಕಂಠಗಳು
ಈ ನಡುವೆ ರಾಜ್ಯಾದ್ಯಂತ ಗುರುವಾರ ನಡೆಯುತ್ತಿರುವ 5 ಲಕ್ಷ ಜನರ ಗೀತಗಾಯನ ಕಾರ್ಯಕ್ರಮದಲ್ಲಿ ಸಿ.ಅಶ್ವತ್ಥ್ ಅವರು ಸ್ವರಸಂಯೋಜನೆ ಮಾಡಿರುವ ನಾಡಗೀತೆಯನ್ನು 85 ಸಾವಿರಕ್ಕೂ ಹೆಚ್ಚು ಮಂದಿ ಹಾಡಲಿದ್ದಾರೆ. ಅದನ್ನು ವಿಡಿಯೊ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಿದ್ದಾರೆ. ಈ ಮೂಲಕ ಅಶ್ವತ್ಥ್ ಅವರ ನಾಡಗೀತೆಯ ಪ್ರಸಿದ್ಧಿಯನ್ನು ಸರಕಾರಕ್ಕೆ
ತಿಳಿಸುವ ಪ್ರಯತ್ನ ಮಾಡಲು ನಿರ್ಧರಿಸಲಾಗಿದೆ.

Leave a Reply

Your email address will not be published. Required fields are marked *