Saturday, 10th May 2025

MUDA Scam: ಇಂದು ಹೈಕೋರ್ಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅರ್ಜಿ ಮತ್ತೆ ವಿಚಾರಣೆ

muda scam cm siddaramaiah

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ (MUDA Scam) ತನಿಖೆಗೆ ತಮ್ಮ ವಿರುದ್ಧ ರಾಜ್ಯಪಾಲರು (Governor Thawar Chand Gehlot) ನೀಡಿರುವ ಪ್ರಾಸಿಕ್ಯೂಷನ್ ಅನುಮತಿ ಪ್ರಶ್ನಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಅರ್ಜಿಯ ವಿಚಾರಣೆ ಇಂದು ಮತ್ತೆ ಹೈಕೋರ್ಟ್‌ (High Court) ಮುಂದೆ ಬರಲಿದೆ. ಕಳೆದ ಸೋಮವಾರ ಈ ಕುರಿತು ವಿಚಾರಣೆ ನಡೆದಿತ್ತು.

ಇದುವರೆಗೂ ನಾಲ್ಕು ದಿನ ಈ ಅರ್ಜಿಯ ವಿಚಾರಣೆ ನಡೆದಿದೆ. ಸಿಎಂ ಪರ ವಕೀಲರಾದ ಅಭಿಷೇಕ್ ಮನು ಸಿಂಘ್ವಿ, ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗಳ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ದಾರೆ. ಸೋಮವಾರ ದೂರುದಾರ ಸ್ನೇಹಮಯಿ ಕೃಷ್ಣ ಅವರ ಪರ ವಕೀಲ ರಾಘವನ್‌ ವಾದ ಮಂಡಿಸಿದ್ದರು. ದೂರುದಾರರ ಪರ ವಕೀಲರು ವಾದ ಅಂತ್ಯಗೊಳಿಸಿದ್ದಾರೆ. ಇದೀಗ ಇಂದು ಮತ್ತೆ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರುತ್ತಿದ್ದು, ಸಿಎಂ ಆತಂಕ ಹೆಚ್ಚಿಸಿದೆ.

ಇಂದು ಮಧ್ಯಾಹ್ನ 3.30ಕ್ಕೆ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಮುಡಾ ಕೇಸ್ ಅರ್ಜಿ ವಿಚಾರಣೆ ನಡೆಯಲಿದೆ. ಸರ್ಕಾರದ ಪರ ಅಡ್ವೊಕೆಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಲಿದ್ದಾರೆ. ರಾಜ್ಯಪಾಲರ ಶೋಕಾಸ್ ನೋಟಿಸ್ ಹಿಂಪಡೆಯುವಂತೆ ಸಚಿವ ಸಂಪುಟ ಅಡ್ವೊಕೆಟ್ ಜನರಲ್‌ ಅಭಿಪ್ರಾಯ ಆಧರಿಸಿ ಶಿಫಾರಸು ಮಾಡಿತ್ತು. ಅಡ್ವೊಕೆಟ್ ಜನರಲ್ ನೀಡಿದ್ದ ಅಭಿಪ್ರಾಯದಂತೆ 91 ಪುಟಗಳ ಪ್ರತಿಕ್ರಿಯೆ ನೀಡಿತ್ತು. ಆದರೆ, ಶಿಫಾರಸು ಮಾಡುವಾಗ ಸಚಿವ ಸಂಪುಟ ತನ್ನ ವಿವೇಚನೆ ಬಳಸಿಲ್ಲ. ಅಡ್ವೊಕೆಟ್ ಜನರಲ್ ಅಭಿಪ್ರಾಯವನ್ನೇ ಯಥಾವತ್ ರಾಜ್ಯಪಾಲರಿಗೆ ಶಿಫಾರಸು ಮಾಡಲಾಗಿದೆ. ಕಾಮಾ, ಫುಲ್ ಸ್ಟಾಪ್ ಕೂಡಾ ಬದಲಿಸಿಲ್ಲ ಎಂದು ತುಷಾರ್ ಮೆಹ್ತಾ ವಾದಿಸಿದ್ದಾರೆ. ಈ ವಾದಕ್ಕೆ ಅಡ್ವೊಕೆಟ್ ಜನರಲ್ ನೀಡಿದ್ದ ಕಾನೂನು ಅಭಿಪ್ರಾಯದ ಕುರಿತು ಇಂದು ವಾದ ನಡೆಯಲಿದೆ. ಶಶಿಕಿರಣ್ ಶೆಟ್ಟಿ ಸರ್ಕಾರದ ಕ್ರಮ ಮತ್ತು ತಮ್ಮ ಲೀಗಲ್ ಒಪಿನಿಯನ್ ಸಮರ್ಥಿಸಿಕೊಳ್ಳಲಿದ್ದಾರೆ.

ಕಳೆದ ಬಾರಿ, ಸಿದ್ದರಾಮಯ್ಯ ಅವರ ಪರ ವಕೀಲರಾದ ಅಭಿಷೇಕ್‌ ಮನು ಸಿಂಘ್ವಿ ಕಾನ್ಫರೆನ್ಸ್‌ ಕಾಲ್‌ನಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಮತ್ತಷ್ಟು ವಾದ ಮಂಡಿಸಲು ಸೋಮವಾರದವರೆಗೆ ಅಡ್ವೋಕೇಟ್ ಜನರಲ್ ಸಮಯ ಕೇಳಿದ್ದರು. ಎಜಿ ಬಳಿಕ ನಾನು ವಾದ ಮಂಡಿಸುತ್ತೇನೆ ಎಂದು ಸಿಂಘ್ವಿ ತಿಳಿಸಿದ್ದರು. ಹೀಗಾಗಿ ಮುಂದಿನ ವಾದಗಳ ದಿನಾಂಕವನ್ನು ಸೆಪ್ಟೆಂಬರ್‌ 9 ಹಾಗೂ 12ರಂದು ನ್ಯಾಯಾಧೀಶರು ನಿಗದಿಪಡಿಸಿದ್ದರು.

ಕರ್ನಾಟಕದ ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 17-ಎ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್-2023ರ ಸೆಕ್ಷನ್ 218ರ ಅಡಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣದ ವಿಚಾರಣೆಗೆ ಅನುಮತಿ ನೀಡಿದ್ದಾರೆ. ಇದನ್ನು ರದ್ದುಪಡಿಸಬೇಕು ಎಂದು ಸಿದ್ದರಾಮಯ್ಯ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸುತ್ತಿದ್ದಾರೆ.

ಈ ಸುದ್ದಿ ಓದಿ: Muda Scam: ಮುಡಾದಲ್ಲಿ ಮತ್ತೊಂದು ಹಗರಣ; ವೃದ್ಧ ದಂಪತಿಗೆ ವಂಚಿಸಿ 5.14 ಎಕರೆ ಭೂಮಿ ಸ್ವಾಧೀನ!

Leave a Reply

Your email address will not be published. Required fields are marked *