Monday, 12th May 2025

ಮೋದಿ ವಿರುದ್ಧ ‘ಆಕ್ಷೇಪಾರ್ಹ ಘೋಷಣೆ’: ಎಂಟು ಜನರ ಬಂಧನ

ಅಹಮದಾಬಾದ್: ಗುಜರಾತಿನ ಅಹಮದಾಬಾದಿನಲ್ಲಿ ಸಾರ್ವಜನಿಕ ಸ್ಥಳಗಳು ಮತ್ತು ಸರ್ಕಾರಿ ಆಸ್ತಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ‘ಆಕ್ಷೇಪಾರ್ಹ ಘೋಷಣೆ’ ಹಾಕಿದ್ದಕ್ಕಾಗಿ ಎಂಟು ಜನರನ್ನು ಬಂಧಿಸ ಲಾಗಿದೆ.

ನಗರದ ವಿವಿಧ ಭಾಗಗಳಲ್ಲಿ ‘ಮೋದಿ ಹಟಾವೋ ದೇಶ್ ಬಚಾವೋ’ ಎಂಬ ಘೋಷಣೆಗಳನ್ನು ‘ಅನಧಿಕೃತವಾಗಿ’ ಹಾಕಲಾಗಿದೆ ಎಂದು ಅಹಮದಾ ಬಾದ್ ಅಪರಾಧ ವಿಭಾಗ ಹೇಳಿದೆ. ಈ ಘಟನೆಗಳ ತನಿಖೆಯ ವೇಳೆ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ನಟವರ್ಭಾಯ್ ಪೋಪಟ್ಭಾಯ್, ಜತಿನ್ಭಾಯ್ ಚಂದ್ರಕಾಂತ್ ಭಾಯಿ ಪಟೇಲ್, ಕುಲದೀಪ್ ಶರದ್ಕುಮಾರ್ ಭಟ್, ಬಿಪಿನ್ ರವೀಂದ್ರಭಾಯಿ ಶರ್ಮಾ, ಅಜಯ್ ಸುರೇಶಭಾಯಿ ಚೌಹಾಣ್, ಅರವಿಂದ್ ಗೊರ್ಜಿಭಾಯಿ ಚೌಹಾಣ್, ಜೀವನ್ಭಾಯ್ ವಸುಭಾಯಿ ಮಹೇಶ್ವರಿ ಮತ್ತು ಪರೇಶ್ ವಾಸುದೇವಭಾಯ್ ತುಳಸಿಯಾ ಎಂದು ಗುರುತಿಸಲಾಗಿದೆ.

ಬಿಜೆಪಿಯ ಸರ್ವಾಧಿಕಾರ ನೋಡಿ!, ಮೋದಿ ಹಠಾವೋ ದೇಶ್ ಬಚಾವೋ ಎಂಬ ಪೋಸ್ಟರ್ಗಳಿಗೆ ಸಂಬಂಧಿಸಿ ದಂತೆ ಗುಜರಾತ್ನಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರನ್ನು ಐಪಿಸಿಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಜೈಲಿಗೆ ಹಾಕಲಾಗಿದೆ.

ಎಎಪಿಯ ರಾಜ್ಯ ಸಂಚಾಲಕ ಗೋಪಾಲ್ ರೈ, ಪ್ರಧಾನಿ ನರೇಂದ್ರ ಮೋದಿ ಅವರು ಶಿಕ್ಷಣ-ಆರೋಗ್ಯ ವ್ಯವಸ್ಥೆಯನ್ನು ಸರಿಪಡಿಸುವ ಮತ್ತು ನಿರುದ್ಯೋಗ ಹೋಗಲಾಡಿಸುವ ಬದಲು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಕೊನೆಗೊಳಿಸುವಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು. ದೇಶದಾದ್ಯಂತ 22 ರಾಜ್ಯಗಳಲ್ಲಿ ಹಿಂದಿ, ಇಂಗ್ಲಿಷ್ ಮತ್ತು ಇತರ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಪೋಸ್ಟರ್ಗಳನ್ನು ಹಾಕಲಾಗುತ್ತಿದೆ.