Wednesday, 14th May 2025

ಪ್ರೇಮಾಂಕುರಕ್ಕೆ ಇಲ್ಲ ಸಂಕೋಲೆ

ರಮೇಶ ಇಟಗೋಣಿ

ಪರಸ್ಪರ ಪ್ರೀತಿ ಹುಟ್ಟುವ ಪರಿಯನ್ನು ಅಕ್ಷರಗಳಲ್ಲಿ ವಿವರಿಸುವುದು ಕಷ್ಟ. ಹುಡುಗ ಹುಡುಗಿಯ ನಡುವೆ ಮೂಡುವ ಅಂತಹ ಪ್ರೀತಿಯ ಬಾಂಧವ್ಯಕ್ಕೆ ಪೋಷಣೆ ನೀಡುವ ಕುಟುಂಬದವರು ನಿಜವಾದ ರಕ್ಷಕರು, ಪೋಷಕರು.

ಜೀವನದಲ್ಲಿ ಪ್ರೀತಿ ತನ್ನ ಛಾಪು ಮೂಡಿಸುವುದು ನಿಜವಾದರೂ, ಅದರಲ್ಲಿ ಒಬ್ಬೊಬ್ಬರದು ಒಂದೊಂದು ಅನುಭವ! ನನ್ನ ಕೆಲಸ ಆಯಿತು ನಾನಾಯಿತು ಅಂತ ನನ್ನ ಪಾಡಿಗೆ ನಾನಿದ್ದೆ. ಆದರೆ ನನ್ನ ಜೀವನದಲ್ಲಿ ಮೊದಲ ಪ್ರೀತಿ ಮೊಳಕೆಯೊಡೆಯಲು ಕಾರಣ ಇರುಳಲ್ಲಿ ದೀಪ ಹಿಡಿದು ದಾರಿ ತೋರಿದ ಹೇರ್ ಸ್ಟೈಲ್ ಹುಡುಗಿ, ಅವಳೇ ನನ್ನ ಮೊದಲ ಪ್ರೀತಿ ಮೊದಲ ಕ್ರಷ್.

ನನ್ನ ಹೃದಯ ದೇಗುಲದಲ್ಲಿ ನೀ ಹಚ್ಚಿದ ಪ್ರೀತಿಯ ಹಣತೆ ಸದಾಕಾಲ ಉರಿಯುತ್ತಲೇ ಇರುತ್ತದೆ. ಪ್ರೀತಿ ಎಂದರೆ ಹೀಗೆಲ್ಲಾ ಇರುತ್ತದೆ ಅಂತ ಗೊತ್ತೇ ಇರಲಿಲ್ಲ! ನನ್ನದೇ ಆದ ಲೋಕದಲ್ಲಿ ವಿಹರಿಸುತ್ತಿದ್ದೆ. ಅದು ಹೇಗೊ ನಿನ್ನ ಬಳಿ ಸೆಳೆದೆಯೋ ನಾ ಕಾಣೆ, ನಿನ್ನ ಮನದಲ್ಲಿ ನನಗೊಂದು ಸ್ಥಾನ ಸಿಕ್ಕು ನಮ್ಮಿಬ್ಬರ ಪ್ರೀತಿ ಮಧುರವಾದ ಲೋಕದಲ್ಲಿ ವಿಹರಿಸತೊಡಗಿತು.

ಸ್ವಲ್ಪ ದಿನಗಳ ನಂತರ ನಮ್ಮ ಪ್ರೀತಿಯನ್ನು ಗಟ್ಟಿಗೊಳಿಸಲು ಹೃದಯಗಳ ಸಮ್ಮಿಲನದ ಮದುವೆ ಎಂಬ ಹಬ್ಬ ಬಂದೇ ಬಿಟ್ಟಿತು. ಮದುವೆ ಎಂದರೆ ಸಿನಿಮಾಗಳಲ್ಲಿ ಕಂಡಷ್ಟು ಪುಸ್ತಕದಲ್ಲಿ ಓದಿದಷ್ಟು ಸುಲಭವಲ್ಲ, ಅದರಲ್ಲೂ ನಮ್ಮದು ಪ್ರೇಮ ವಿವಾಹ! ವಿಭಿನ್ನ ಹಿನ್ನೆಲೆಯ ಕುಟುಂಬಗಳ ಹೊಂದಾಣಿಕೆಯ ಸಮಸ್ಯೆ ಬಂದರೂ ಕೂಡಾ ನಮ್ಮ ಎರಡೂ ಕುಟುಂಬದವರು ಪ್ರೇಮಿಗಳನ್ನು ಒಂದಾಗಿಸಲು ಸಮ್ಮತಿ ತೋರಿದರು.

ನಮ್ಮಲ್ಲಿ ಹೃದಯ ಶ್ರೀಮಂತಿಕೆ ಸಾಗರದಷ್ಟಿದೆ ಎಂದು ಹೆಮ್ಮೆಯಿಂದ ಎದೆ ತಟ್ಟಿ ಹೇಳಿಕೊಳ್ಳುತ್ತೇವೆ. ಎರಡೂ ಕುಟುಂಬಗಳು ಸಂಪೂರ್ಣ ವಿಭಿನ್ನ ವಾತಾವರಣದಲ್ಲಿ ಬೆಳೆದರೂ ಕೂಡಾ ಹೃದಯದಲ್ಲಿನ ಪ್ರೀತಿಯ ಮುಂದೆ ಎಲ್ಲರೂ ಒಂದಾದೆವು. ನಮ್ಮಿಬ್ಬರ ಮನಸ್ಸು ಆತ್ಮಗಳ ಮಿಲನದಿಂದ ಪ್ರೀತಿಸಿ ಗುರು-ಹಿರಿಯರ ಆಶೀರ್ವಾದ ಪಡೆದು ಮದುವೆಯಾದೆವು.

ಅವಳೇ ನನ್ನ ಬಾಳ ಬೆಳಕು, ಆತ್ಮೀಯ ಸಂಗಾತಿ ಭಾಗ್ಯಶ್ರೀ ನಾವಿಬ್ಬರೂ ಬರಿ ಗಂಡ-ಹೆಂಡತಿ ಅಲ್ಲಾ ನಾವಿಬ್ಬರೂ ಆತ್ಮ ಸಂಗಾತಿ ಗಳು, ಬಾಳೆಂಬ ಪಯಣದ ಸಹಚರರು. ನನಗಂತೂ ಪ್ರತಿ ಕ್ಷಣದಲ್ಲೂ ಅವಳದೇ ನೆನಪು, ಪ್ರತಿ ಭಾವದಲ್ಲಿಯೂ ಅವಳದೇ ಹಂಬಲ! ಏನೇ ಇರಲಿ ರಮೇಶ ಜೊತೆ ಭಾಗ್ಯಶ್ರೀ ಎಂಬ ಈ ಮಧುರ ಬಾಂಧವ್ಯಕ್ಕೆ ಕೊನೆಯೇ ಇಲ್ಲ. ಲವ್ ಮ್ಯಾರೇಜ್ ಅಥವಾ ಅರೇಂಜ್ಡ್ ಮ್ಯಾರೇಜ್ ಯಾವುದೇ ಇರಲಿ, ಕುಟುಂಬಗಳ ಹಿನ್ನೆಲೆ ಯಾವುದೇ ಇರಲಿ, ಸಂಬಂಧಿಕರು ಏನೇ ಅನ್ನಲಿ ನಮ್ಮ ನಡುವೆ ಪ್ರೀತಿ ಮತ್ತು ಹೊಂದಾಣಿಕೆ ಇದ್ದಾಗ ಮಾತ್ರ ನಮ್ಮ ಬದುಕು ಬಂಗಾರವಾಗುತ್ತದೆ.

ನಮ್ಮ ಪ್ರೀತಿಯ ಹಣತೆಗೆ ಬೆಳಕು ನೀಡಿ, ಅದಕ್ಕೆ ಸೂಕ್ತ ರಕ್ಷಣೆ ಒದಗಿಸಿ, ನಮ್ಮಿಬ್ಬರ ಮನಸ್ಸಿನಲ್ಲಿ ಒಲವ ಜ್ಯೋತಿ ಬೆಳಗಿಸಿ, ನಮ್ಮಿಬ್ಬರನ್ನು ಒಂದು ಮಾಡಿದ ನಮ್ಮ ಕುಟುಂಬದ ಹಿರಿಯರಿಗೆ ಅನಂತಕೋಟಿ ನಮಸ್ಕಾರಗಳು.

Leave a Reply

Your email address will not be published. Required fields are marked *