Sunday, 11th May 2025

138 ಜೋಡಿಗಳ ವಿಚ್ಛೇದನ ತಡೆದ ವಕೀಲನಿಗೆ ಪತ್ನಿ ಶಾಕ್..!

ಹಮದಾಬಾದ್ : ಒಂದೇ ಒಂದು ಪೈಸೆ ಹಣ ತೆಗೆದುಕೊಳ್ಳದೆ ರಾಜಿ ಸಂಧಾನದ ಮೂಲಕವೇ 138 ಜೋಡಿಗಳ ವಿಚ್ಛೇದನವನ್ನು ತಡೆದು ಅವರನ್ನು ಒಂದುಗೂಡಿಸಿದ್ದ ವಕೀಲನಿಗೆ ತನ್ನ ಪತ್ನಿ ವಿಚ್ಛೇದನ ನೀಡಿದ್ದಾಳೆ.

16 ವರ್ಷಕ್ಕೂ ಅಧಿಕ ವೃತ್ತಿ ಅನುಭವ ಹೊಂದಿರುವ ಹಿರಿಯ ವಕೀಲ, ತಮ್ಮ ವೃತ್ತಿ ಜೀವನದಲ್ಲಿ ಅನೇಕ ಪ್ರಕರಣಗಳನ್ನು ನಿಭಾಯಿಸಿದ್ದಾರೆ.

ವಿಚ್ಛೇದನ ಪ್ರಕರಣಗಳಿಗೆ ಅವರು ಹೆಸರುವಾಸಿ. ಏಕೆಂದರೆ ವಿಚ್ಛೇದನಕ್ಕಾಗಿ ಬರುವ ದಂಪತಿಯನ್ನು ಒಟ್ಟಿಗೆ ಕೂರಿಸಿ ಆಪ್ತಸಮಾಲೋಚನೆ ನಡೆಸು ತ್ತಾರೆ. ಅವರ ನಡುವೆ ಉಂಟಾದ ಭಿನ್ನಾಭಿಪ್ರಾಯ, ಮನಸ್ತಾಪಗಳಿಗೆ ಕಾರಣವನ್ನು ಅವರೆದುರೇ ಚರ್ಚಿಸಿ ಪರಿಹಾರವನ್ನೂ ಸೂಚಿಸುತ್ತಾರೆ. ಅವರ ದೂರಾಗದಂತೆ ಮನವೊಲಿಸುತ್ತಾರೆ. ಕೋರ್ಟ್‌ ಬದಲು ಅವರನ್ನು ಮನೆಗೆ ಕಳುಹಿಸುತ್ತಾರೆ. ಹೀಗೆ ಅವರು ಕುಟುಂಬಗಳು ಒಡೆಯದಂತೆ ತಡೆಯುವುದರಲ್ಲಿಯೇ ಸಂತೋಷ ಕಾಣುತ್ತಾರೆ. ಇಷ್ಟಕ್ಕೂ ಅವರು ಒಂದು ರೂಪಾಯಿ ಶುಲ್ಕ ಪಡೆದವರಲ್ಲ. ಹೀಗೆ ಜೋಡಿಗಳನ್ನು ಮತ್ತೆ ಒಂದು ಮಾಡುವ ಖುಷಿಯಲ್ಲಿದ್ದ ಅವರಿಗೆ ಪತ್ನಿಯಿಂದಲೇ ಆಘಾತ ಎದುರಾಗಿದೆ.

ಗುಜರಾತ್‌ನ ಅಹಮಬಾದಾಬ್ ಹೈಕೋರ್ಟ್‌ನಲ್ಲಿ ಕೆಲಸ ಮಾಡುತ್ತಿರುವ ವಕೀಲರ ಹೆಸರನ್ನು ಬಹಿರಂಗಪಡಿಸಿಲ್ಲ. ತಮ್ಮ 16 ವರ್ಷಗಳ ವೃತ್ತಿ ಬದುಕಿನಲ್ಲಿ ಅವರು, ಸಾಂಸಾರಿಕ ಜೀವನ ಸಾಕೆನಿಸಿ ದೂರವಾಗಲು ವಿಚ್ಛೇದನಕ್ಕಾಗಿ ಬಂದಿದ್ದ 138 ಜೋಡಿಗಳ ಬೇರ್ಪಡುವಿಕೆಯನ್ನು ತಡೆದಿದ್ದಾರೆ. ಆ ಜೋಡಿಗಳು ಈಗ ಸಂತಸದಿಂದ ಜತೆಯಾಗಿ ಜೀವನ ಸಾಗಿಸುತ್ತಿದ್ದಾರೆ.

ವಿಚ್ಛೇದನ ಪಡೆಯಲು ನ್ಯಾಯವಾದಿಯ ಪತ್ನಿ ನೀಡಿರುವ ಕಾರಣವೂ ಅವರ ಈ ಸಮಾಜ ಸೇವೆ. ತಮ್ಮ ಬಳಿ ಬರುವ ದಂಪತಿಗೆ ಬುದ್ಧಿಮಾತು ಹೇಳುವ ವಕೀಲ, ಅವರಿಂದ ಹಣ ಪಡೆಯುತ್ತಿಲ್ಲ. ಬೇರೆಯವರ ಜೀವನ ಹಾಳಾದರೇನಂತೆ, ತನ್ನ ಬದುಕು ಚೆನ್ನಾಗಿರಬೇಕು ಎಂದು ಹಣ ಮಾಡುವವರ ನಡುವೆ ಗಂಡನ ಈ ವರ್ತನೆ ಹೆಂಡತಿಗೆ ಅಸಹನೀಯ ಎನಿಸಿದೆ. ಹೆಸರಾಂತ ವಕೀಲರಾದರೂ ಹಣ ಇಲ್ಲದಿದ್ದರೆ ಸಂಸಾರ ನಡೆಸುವುದು ಹೇಗೆ? ಹಣಕಾಸಿನ ಮುಗ್ಗಟ್ಟು ಈ ವಕೀಲನ ಕುಟುಂಬವನ್ನು ಕಾಡಿದೆ. ಇದೇ ವಿಚಾರವಾಗಿ ಮನೆಯಲ್ಲಿ ನಿರಂತರ ಜಗಳಗಳು ನಡೆದಿವೆ.

ಈ ದಂಪತಿಗೆ ಮಗಳಿದ್ದಾಳೆ. ಮನಸ್ತಾಪದ ಕಾರಣ ಗಂಡ-ಹೆಂಡತಿ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಮಗಳು ಕೂಡ ವಕೀಲಿಕೆ ಅಭ್ಯಾಸ ಮಾಡುತ್ತಿದ್ದಾಳೆ. ತಾಯಿಯ ಜತೆಗೆ ವಾಸಿಸುತ್ತಿರುವ ಆಕೆ, ಡಿವೋರ್ಸ್ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಅಮ್ಮನೊಟ್ಟಿಗೆ ಇರುವುದಾಗಿ ಹೇಳಿದ್ದಾಳೆ. ಅಪ್ಪ-ಅಮ್ಮನ ವಿಚ್ಛೇದನ ಅಧಿಕೃತಗೊಂಡ ನಂತರ ಅಪ್ಪನ ಜತೆ ನೆಲೆಸುವುದಾಗಿ ಆಕೆ ತಿಳಿಸಿದ್ದಾಳೆ. ತಂದೆಯೇ ತನಗೆ ರೋಲ್ ಮಾಡೆಲ್ ಎಂದು ಮಗಳು ಹೇಳಿಕೊಂಡಿದ್ದಾಳೆ. ಆಕೆಯ ಬಯಕೆಯನ್ನು ಕೋರ್ಟ್ ಕೂಡ ಮಾನ್ಯ ಮಾಡಿದೆ.