Sunday, 18th May 2025

ಕುರೂಪಿ ಔಷಧದ ರೋಚಕ ಚರಿತ್ರೆ

ವೈದ್ಯ ವೈವಿಧ್ಯ

ಡಾ.ಎಚ್.ಎಸ್.ಮೋಹನ್

drhsmohan@gmail.com

ಕಳೆದ 2-3 ವಾರಗಳಲ್ಲಿ ಕೈ ಕಾಲು ಮುರುಟಿ ಹುಟ್ಟಿದ ಫೋಕೋಮೀಲಿಯ ಮಕ್ಕಳ ಬಗ್ಗೆ ಪ್ರಸ್ತಾಪಿಸಿದ್ದೆ. ಫೋಕೋಮೀಲಿಯ ಮಗು ಎಂದರೆ ನಮಗೆ ನೆನಪಾಗುವುದು ಈ ರೀತಿಯ ಮಕ್ಕಳ ಜನನಕ್ಕೆ ಹಿಂದೆ 1960 ರ ದಶಕದಲ್ಲಿ ಕಾರಣವಾಗಿದ್ದ ಥ್ಯಾಲಿಡೋ ಮೈಡ್ ಔಷಧ.

ಥ್ಯಾಲಿಡೋಮೈಡ್ ಒಂದು ಮತ್ತು ಬರಿಸಿ ಸಮ್ಮೋಹನಗೊಳಿಸುವ ಔಷಧ. ಇದನ್ನು ಸೇವಿಸುವವರಿಗೆ ಜಗತ್ತಿನ ಯಾವ ಅಪಾಯ ಗಳನ್ನೂ ಎದುರಿಸಬಲ್ಲೆನೆಂಬ ಭ್ರಮೆ ಉಂಟಾಗುತ್ತಿತ್ತು. ಪಾಶ್ಚಾತ್ಯ ಹೆಂಗಸರಲ್ಲಿ ಬಸುರಾಗುವುದೆಂದರೇ ಭಯದ ವಿಷಯವಾಗಿ ದ್ದಾಗ ಅಲ್ಲಿನ ಔಷಧ ಕಂಪನಿಗಳು, ಈ ಔಷಧ ಆತಂಕಕ್ಕೊಂದು ರಾಮ ಬಾಣ ಎಂದು ಪ್ರಚಾರ ಮಾಡತೊಡಗಿದವು.

ಥ್ಯಾಲಿಡೋಮೈಡ್ ಸೇವಿಸಿ ಬಸುರಿನ ಬಾಧೆಗಳನ್ನು ಆ ಕ್ಷಣಕ್ಕೆ ಮರೆಯಲು ಆ ಮಹಿಳೆ ಯರು ಪ್ರಯತ್ನಿಸಿದರು. ಆದರೆ ಈ ಔಷಧ ಸೇವಿಸಿದ ಮಹಿಳೆಯರಿಗೆ ಹುಟ್ಟಿದ ಬಹು ಪಾಲು ಮಕ್ಕಳು ಅಂಗಹೀನವಾಗಿ ಹುಟ್ಟತೊಡಗಿದವು. ಅದರಲ್ಲೂ ಫೋಕೋಮೀಲಿಯ (ಮುರುಟಿದ ಕೈಕಾಲು ಗಳು) ಮಕ್ಕಳೇ ಹೆಚ್ಚು. ಕಾಲರಾ, ಪ್ಲೇಗು ಹರಡಿದಂತೆ ಈ ಮಕ್ಕಳು ಅಪಾರ ಸಂಖ್ಯೆಯಲ್ಲಿ ಹುಟ್ಟುವುದನ್ನು ಕಂಡಾಗ ಜನತೆ ಎಚ್ಚೆತ್ತುಕೊಂಡಿತು.

ಖದೀಮ ಔಷಧವನ್ನು ಗುರುತಿಸಿದರು. ಕಾನೂನಿನ ಕಣ್ಣು ಕಟ್ಟು ಬಿಚ್ಚಿದರು. 1954 ರಲ್ಲಿ ಕೆಲವು ಉತ್ಸಾಹಿ ಜರ್ಮನಿಯ ತಜ್ಞರು ಥ್ಯಾಲಿಡೋಮೈಡ್ ಎಂಬ ಔಷಧವನ್ನು ಮೊದಲ ಬಾರಿಗೆ ಕಂಡು ಹಿಡಿದರು. ಅದು ಮನಸ್ಸನ್ನು ಶಾಂತಗೊಳಿಸುವ ಮತ್ತು ನಿದ್ದೆ ತರುವ ಔಷಧ. ವಿವಿಧ ಪ್ರಾಣಿಗಳ ಮೇಲೆ 3 ವರ್ಷ ಗಳ ಪ್ರಯೋಗಗಳನ್ನು ನಡೆಸಿದ ನಂತರ ಅದು ಎಲ್ಲಾ ವಿಧ ದಲ್ಲಿ ಅಪಾಯಕಾರಿಯಲ್ಲದ ಔಷಧ ಎಂದು ಮನಗೊಂಡು, ಅದನ್ನು ವೈದ್ಯರ ಸಲಹಾ ಚೀಟಿಯಲ್ಲದೆ ಎಲ್ಲರಿಗೆ ಲಭ್ಯವಾಗುವಂತಹ ಔಷಧ – Over the counter drug  ಎಂದು ಶಿಫಾರಸು ಮಾಡಿ ಜರ್ಮನಿಯಲ್ಲಿ ಮಾರಾಟ ಮಾಡಲು ಪರವಾನಿಗೆ ಕೊಡಲಾಯಿ ತು.

1960 ರ ಹೊತ್ತಿಗೆ ಜರ್ಮನಿಯಲ್ಲದೇ 24 ಉಳಿದ ದೇಶಗಳಲ್ಲಿ 50 ವಿವಿಧ ಬ್ರಾಂಡ್‌ಗಳಲ್ಲಿ ಲಭ್ಯವಾಗುವಷ್ಟು ಜನಪ್ರಿಯ ವಾಯಿತು. 160 ರಲ್ಲಿ ಮೆರೆಲ್ ಫಾರ್ಮಾಸಿಟಿಕಲ್ಸ್ ಕಂಪನಿ ಅಮೆರಿಕದಲ್ಲಿ ಅಲ್ಲಿನ ಮಾರ್ಕೆಟ್ ನಲ್ಲಿ ಮಾರಲು ಅಲ್ಲಿನ Food and Drug Administration (FDA) ಅನುಮತಿ ಕೇಳಿತು. ಎಫ್ಡಿಏ ದ ಅಧಿಕಾರಿ ಡಾ.ಫ್ರಾನ್ಸಿಸ್ ಓ ಕೆಲ್ಸಿ ಎಂಬ ಮಹಿಳೆ ಈ  ರ್ಜಿಯನ್ನು ಕೂಲಂಕಷವಾಗಿ ಪರಿಶೀಲಿಸಿ 60 ದಿನಗಳ ಒಳಗೆ ತೀರ್ಮಾನ ಹೇಳಬೇಕಿತ್ತು. ಆಕೆ ಕಂಪನಿಯ ಅಧಿಕಾರಿಗಳನ್ನು ಆ ಔಷಧದ ಬಗ್ಗೆ ಹೆಚ್ಚಿನ ವಿವರಣೆ ಕೇಳಿದಳು. ಆಕೆಗೆ ಥ್ಯಾಲಿಡೋಮೈಡ್ ಔಷಧ ಮನುಷ್ಯರಲ್ಲಿ ಮತ್ತು ಪ್ರಾಣಿಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಕೆಲಸ ಮಾಡುತ್ತದೆ ಎಂಬ ಸಂಶಯ ಬಂದಿತು. ಮಾನವರಲ್ಲಿ ನಿದ್ದೆ ತರುವ ರೀತಿಯ ಪರಿಣಾಮ ಹೊಂದಿದ ಈ ಔಷಧ, ಪ್ರಾಣಿ ಗಳಲ್ಲಿ ಆ ರೀತಿಯ ಪರಿಣಾಮವನ್ನೇ ತೋರಿಸುತ್ತಿರಲಿಲ್ಲ. ಶ್ರೀಮತಿ ಕೆಲ್ಸಿಯ ಈ ಕ್ರಿಯೆ ಮೆರಿಲ್ ಕಂಪನಿಯ ಅಧಿಕಾರಿಗಳಿಗೆ ತೀವ್ರ ಅಸಂತೋಷ ಉಂಟು ಮಾಡಿತು. ಅವರು ತಮ್ಮ ಉನ್ನತ ಅಧಿಕಾರಿಗಳನ್ನು ವಾಷಿಂಗ್ಟನ್ ಗೆ ಕಳುಹಿಸಿ ಎಫ್ಡಿಎದ ಉನ್ನತ ಅಧಿಕಾರಿಗಳಿಗೆ ಡಾ.ಕೆಲ್ಸಿಯ ಬಗ್ಗೆ ದೂರಿದರು. ಆದರೆ ಡಾ.ಕೆಲ್ಸಿ ಈ ಚರ್ಯೆಗಳಿಗೆ ಸೊಪ್ಪು ಹಾಕಲಿಲ್ಲ. ಹಾಗೂ ಎಫ್ಡಿಏ ದ ಸೂಪರ್ ವೈಸರ್ ಗಳೂ ಸಹಿತ ಆಕೆಯ ಪರವಾಗಿಯೇ ವಾದ ಮಾಡಿದರು.

ಇದೇ ಸಂದರ್ಭದಲ್ಲಿ ಪ್ರತಿಷ್ಠಿತ ಬ್ರಿಟಿಷ್ ಮೆಡಿಕಲ್ ಜರ್ನಲ್‌ನಲ್ಲಿ ಒಂದು ವರದಿ ಪ್ರಕಟವಾಯಿತು. ಥ್ಯಾಲಿಡೋಮೈಡ್ ಬಹಳ ದಿನಗಳ ವರೆಗೆ ಉಪಯೋಗಿಸಿದ ಕೆಲವರ ಕೈ ಕಾಲುಗಳ ನರಗಳಿಗೆ ತೊಂದರೆ ಅಥವಾ ಹಾನಿಯಾಗಿದೆ ಎಂದು ವರದಿಯಲ್ಲಿತ್ತು. ಆಗ ಎಚ್ಚೆತ್ತ ಮೆರಿಲ್ ಕಂಪನಿ , ಈ ರೀತಿಯ ಹಾನಿಯ ಬಗ್ಗೆ ಔಷಧದ ಮೇಲೆ ಎಚ್ಚರಿಕೆಯ ಸಂದೇಶವಾಗಿ ಪ್ರಕಟಿಸುವುದಾಗಿ ಹೇಳಿತು. ಆದರೆ ಡಾ.ಕೆಲ್ಸಿ ಈ ಕ್ರಮವನ್ನು ಒಪ್ಪದೇ-ಗರ್ಭಿಣಿ ಮಹಿಳೆಯರು ಈ ಔಷಧವನ್ನು ತೆಗೆದುಕೊಂಡರೆ ಗರ್ಭದಲ್ಲಿರುವ ಮಗುವಿಗೆ ಏನೂ ಹಾನಿಯಾಗುವುದಿಲ್ಲ – ಎಂಬ ಅಂಶವನ್ನು ಸಾಬೀತು ಪಡಿಸಬೇಕು ಎಂದು ಪಟ್ಟು ಹಿಡಿದರು.

ಬೇರೆ ಕಂಪನಿಯವರು ಅಮೆರಿಕದಂತಹ ಒಳ್ಳೆಯ ಮಾರುಕಟ್ಟೆ ಪ್ರವೇಶಿಸುವ ಮೊದಲೇ ತಾವು ಅಲ್ಲಿ ಥ್ಯಾಲಿಡೋಮೈಡ್ ವ್ಯಾಪಾರ ಮಾಡಿ ಕೋಟ್ಯಾಂತರ ಡಾಲರುಗಳನ್ನು ದೋಚಿಕೊಳ್ಳುವ ಹುನ್ನಾರದಲ್ಲಿದ್ದ ಮೆರಿಲ್ ಕಂಪನಿಯ ವರಿಗೆ ಈ ಜಿಗುಟು ಅಧಿಕಾರಿ ನುಂಗಲಾರದ ತುತ್ತಾಗಿ ಪರಿಣಮಿಸಿದರು. ಆದರೆ ಡಾ.ಕೆಲ್ಸಿ ಮಾತ್ರ ಯಾವ ಆಮಿಷಕ್ಕೂ ಮಣಿಯಲಿಲ್ಲ. ಅಂತೆಯೇ ಅವರ ಮೇಲಿನ ಅಧಿಕಾರಿಗಳು ಸಹಿತ ಈ ವಿಷಯದಲ್ಲಿ ಬಿಗಿ ನೀತಿಯನ್ನೇ ಅನುಸರಿಸಿದರು.

ಆಗ ಅನಿವಾರ್ಯವಾಗಿ ಆ ಕಂಪನಿಯವರು ಅದಕ್ಕೆ ಸಂಬಂಧಪಟ್ಟ ಪ್ರಯೋಗಗಳನ್ನು ಮಾಡತೊಡಗಿದರು. ಅದೇ ಸಂದರ್ಭ ದಲ್ಲಿ ಅಂದರೆ 1961 ರಲ್ಲಿ ಜರ್ಮನಿಯಲ್ಲಿ ಕೈ ಕಾಲುಗಳು ಸರಿಯಾಗಿ ಬೆಳವಣಿಗೆಯಾಗದೆ ವಿಚಿತ್ರ ರೀತಿಯಲ್ಲಿ ವಿಕಾರ ರೂಪದ ಮಕ್ಕಳು ಜನಿಸುತ್ತಿರುವ ಬಗ್ಗೆ ವರದಿಯಾಗತೊಡಗಿತು. ನವೆಂಬರ್ 1961 ರಲ್ಲಿ ಡಾ.ವಿಡುಕಿಂಗ್ ಜರ್ಮನಿಯಲ್ಲಿ ಹಾಗೂ
ಡಾ.ಡಬ್ಲು.ಜಿ ಮೆಕ್ ಬ್ರೈಡ್ ಆಸ್ಟ್ರೇಲಿಯಾದಲ್ಲಿ – ಸುಮಾರು ಒಂದೇ ಸಮಯದಲ್ಲಿ – ಹೀಗೆ ವಿಚಿತ್ರ ರೀತಿಯಲ್ಲಿ ಹುಟ್ಟುತ್ತಿರುವ ಮಕ್ಕಳ ತಾಯಂದಿರು ಥ್ಯಾಲಿಡೋಮೈಡ್ ಔಷಧ ಸೇವಿಸಿದ್ದಾರೆಂದು ತಮ್ಮ ಸಂಶೋಧನೆಯನ್ನು ಹೊರಗೆಡವಿದರು.

ಆಗ ಪ್ರಪಂಚ ಈ ಔಷಧದ ಬಗ್ಗೆ ಒಂದು ರೀತಿಯಲ್ಲಿ ಆಘಾತಗೊಂಡಿತು ಮತ್ತು ಎಚ್ಚರಗೊಂಡಿತು. ಸೆಪ್ಟೆಂಬರ್ 196 ರ ಹೊತ್ತಿಗೆ ಪಶ್ಚಿಮ ಜರ್ಮನಿಯಲ್ಲಿ ಥ್ಯಾಲಿಡೋಮೈಡ್ ಅವಗಡದ ಬಗ್ಗೆ ದೃಢಪಟ್ಟಿತು. 1957 ರಿಂದ ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿದ್ದ ಇದು ಪಶ್ಚಿಮ ಜರ್ಮನಿಯಲ್ಲಿ 10000 ಕ್ಕೂ ಹೆಚ್ಚು ಮಕ್ಕಳಲ್ಲಿ ವಿವಿಧ ರೀತಿಯ ಕೈಕಾಲುಗಳ ಊನಕ್ಕೆ ಕಾರಣವಾಗಿತ್ತು. ಇಂಗ್ಲೆಂಡಿನಲ್ಲಿ 1000 ಕ್ಕೂ ಹೆಚ್ಚು ಮಕ್ಕಳು ಹುಟ್ಟಿದ್ದು ವರದಿಯಾಯಿತು. ಆದರೆ ಅದೃಷ್ಟವಶಾತ್  ಲಿಡೋಮೈಡ್ ಮಾರಾಟ ಗೊಂಡ ಇನ್ನಿತರ 46 ದೇಶಗಳು – ಎಲ್ಲಿಯೂ ವಿಕೃತ ಮಕ್ಕಳು ಹುಟ್ಟಿದ ಬಗ್ಗೆ ದೊಡ್ಡ ಪ್ರಮಾಣದ ವರದಿಯಾಗಲಿಲ್ಲ.

ಥ್ಯಾಲಿಡೋಮೈಡ್‌ನಿಂದ ವಿಕೃತ ಮಕ್ಕಳು ಹುಟ್ಟಿದ ಬಗ್ಗೆ ಅಮೆರಿಕದ ಪ್ರತಿಷ್ಠಿತ ವೈಜ್ಞಾನಿಕ ನಿಯತಕಾಲಿಕ ಸೈನ್ಸ್ ನಲ್ಲಿ ಮೇ 1962 ರಲ್ಲಿಯೂ ಹಾಗೂ ಅಮೆರಿಕದ ಜನಪ್ರಿಯ ದೈನಿಕ ನ್ಯೂಯಾರ್ಕ್ ಟೈಮ್ಸ್ ನಲ್ಲಿ ಏಪ್ರಿಲ್ 62 ರಲ್ಲಿ ಸಣ್ಣ ಪ್ರಮಾಣದ ವರದಿ ಪ್ರಕಟವಾಗಿದ್ದರೂ, ಅವು ಅಷ್ಟಾಗಿ ಜನರ ಗಮನ ಸೆಳೆಯಲಿಲ್ಲ. ಆದರೆ ಜುಲೈನಲ್ಲಿ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯು ಈ
ಬಗ್ಗೆ ವಿಸ್ತೃತ ವರದಿಯನ್ನು ತನ್ನ ಪತ್ರಿಕೆಯ ಮುಖಪುಟದಲ್ಲಿ ಪ್ರಕಟಿಸಿದುದು ಜನರ ಗಮನ ವನ್ನು ಬಹಳವಾಗಿ ಸೆಳೆಯಿತು. ಡಾ.ಕೆಲ್ಸಿಯೊಬ್ಬ ರೇ ಏಕಾಂಗಿಯಾಗಿ ಕಂಪನಿಯ ಆಮಿಷಗಳಿಗೆ ಒಳಗಾಗದೇ ಅಮೆರಿಕದಲ್ಲಿನ ಉಂಟಾಗಬಹುದಾದ ಬಹು ದೊಡ್ಡ ಅನಾಹುತವನ್ನು ಹೇಗೆ ತಡೆಗಟ್ಟಿದರು – ಎಂದು ಅದರಲ್ಲಿ ವಿಷದವಾಗಿ ತಿಳಿಸಲಾಗಿತ್ತು. ಅದಾಗ್ಯೂ ಮೆರಿಲ್ ಕಂಪನಿ ಯವರು ಎಫ್ಡಿಏ ದ ಅನುಮತಿಗೆ ಅರ್ಜಿ ಸಲ್ಲಿಸುತ್ತಿದ್ದಂತೆಯೇ ಥ್ಯಾಲಿಡೋಮೈಡ್ ಔಷಧವನ್ನು ಅಲ್ಲಿನ ಕೆಲವು ವೈದ್ಯರಿಗೆ ಉಚಿತವಾಗಿ ನೀಡಿದ್ದರು.

ಆ ಔಷಧಿಗಳಿಂದ 17 ಮಕ್ಕಳು ಕೈಕಾಲುಗಳ ವಿವಿಧ ಊನಗಳಿಂದ ಅಮೆರಿಕದಲ್ಲಿಯೂ ಹುಟ್ಟಿದ್ದರು ಎಂಬ ವಿಚಾರ ನಂತರ
ತಿಳಿಯಿತು. ಡಾ.ಕೆಲ್ಸಿಯವರ ಈ ಹೋರಾಟ ಮತ್ತು ಥ್ಯಾಲಿಡೋಮೈಡ್‌ನ ರೋಚಕ ಕತೆ ಅಮೆರಿಕದಲ್ಲಿ ಜನಜನಿತವಾಯಿತು. ಆಗ ಈ ಎಲ್ಲಾ ವರದಿಗಳಿಂದ ಪ್ರಭಾವಿತರಾದ ಆಗಿನ ಅಧ್ಯಕ್ಷ ಕೆನಡಿಯವರು ಡಾ.ಕೆಲ್ಸಿಯವರಿಗೆ ಅತ್ಯುತ್ಕೃಷ್ಟ ಸಾರ್ವಜನಿಕ ಸೇವೆಯ ವಿಶೇಷ ಮೆಡಲ್ ಕೊಟ್ಟು ಸನ್ಮಾನಿಸಿದರು.

ಹೊಸ ಕಾನೂನಿನ ಉದಯ : ಅಲ್ಲಗೇ ಕತೆ ಕೊನೆಗೊಳ್ಳಲಿಲ್ಲ. ಇದು ಮುಂದಿನ ಒಳ್ಳೆಯ ಘಟನೆಗಳಿಗೆ ನಾಂದಿಯಾಯಿತು. ಅಮೆರಿಕದ ಜನಪ್ರತಿನಿಧಿ ಸಭೆ ಕಾಂಗ್ರೆಸ್ ಕೇಫರ್ – ಹ್ಯಾರಿಸ್ ಔಷಧ ಕಾನೂನು ಎಂಬ ಹೊಸ ಕಾನೂನನ್ನು 1962 ರಲ್ಲಿ ಒಪ್ಪಿ ಜಾರಿಗೆ ತಂದಿತು. 1906 ರಿಂದ ಅಮೆರಿಕದಲ್ಲಿ ಜಾರಿಯಲ್ಲಿದ್ದ ಔಷಧಗಳ ಕಾನೂನಿನ ಪ್ರಕಾರ – ಯಾವುದೇ ಔಷಧವು ರಾಸಾ ಯನಿಕವಾಗಿ ಕಲಬೆರಕೆ ಇಲ್ಲದೆ ಶುದ್ಧವಾಗಿದ್ದರೆ ಸಾಕಿತ್ತು.

ಉಳಿದ ಯಾವ ಸಂಗತಿಯೂ ಆ ಔಷಧದ ಮಾರಾಟಕ್ಕೆ ಅಡ್ಡಿ ಎನಿಸುತಿರಲಿಲ್ಲ. ಹೊಸ ಕಾನೂನಿನ ಪ್ರಕಾರ – ಎಫ್ಡಿಎ ಸಂಸ್ಥೆಗೆ ಹೊಸ ಔಷಧಗಳ ಸುರಕ್ಷತೆ ಮತ್ತು ಪರಿಣಾಮಗಳ ಬಗ್ಗೆ ಕೈಗೊಳ್ಳಬೇಕಾದ ನಿರ್ದಿಷ್ಟ ಪರೀಕ್ಷೆ ಮತ್ತು ವಿಶೇಷ ಕ್ರಮಗಳ ಬಗ್ಗೆ –
ಆ ಸಂಸ್ಥೆಗೆ ಸ್ಪಷ್ಟ ನಿರ್ದೇಶನಕೊಟ್ಟು, ಅದಕ್ಕೆ ವಿಶೇಷ ಅಧಿಕಾರವನ್ನೂ ಕೊಟ್ಟಿತು. ಥ್ಯಾಲಿಡೋಮೈಡ್‌ನ ಈ ಅವಘಡದ ನಂತರ ಇನ್ನೂ ಹಲವಾರು ವಿಶಾಲ ಬೆಳವಣಿಗೆಗಳು ಜರುಗತೊಡಗಿದವು. ಅಲ್ಲಿಯವರೆಗೆ ಹೊಸ ಔಷಧಗಳು ಅಥವಾ ರಾಸಾಯ ನಿಕಗಳು ಕ್ಯಾನ್ಸರ್ ನಂತಹ ಕಾಯಿಲೆ ಉಂಟು ಮಾಡಬಹುದು ಎಂಬ ಬಗ್ಗೆ ಅಮೆರಿಕದಲ್ಲಿ ಭಯ, ಭೀತಿ, ಸಂಶಯ ಇತ್ತು.

ಆದರೆ ಹುಟ್ಟುವ ಮೊದಲೇ ಅಂಗಾಂಗ ಊನ ಮತ್ತು ಹುಟ್ಟಿನಿಂದಲೇ ವಂಶವಾಹಿಯ ಬದಲಾವಣೆ ಈ ರೀತಿಯ ಭೀಕರ ಪರಿಣಾಮಗಳ ಬಗ್ಗೆ ಜನರಿಗೆ ಅರಿವಿರಲಿಲ್ಲ. ಥ್ಯಾಲಿಡೋಮೈಡ್ ಈ ಎರಡರ ಬಗ್ಗೆ ಜನರಿಗೆ ತಿಳುವಳಿಕೆ ಹೇಳಿ, ಪಾಠ ಕಲಿಸಿದ ಹಾಗೆ ಆಯಿತು. ಅಲ್ಲಿಯವರೆಗೆ ಯಾವುದೇ ಹೊಸ ಔಷಧವನ್ನು ಉಪಯೋಗಿಸಲು ಬಹಳವಾಗಿ ಹಪಹಪಿಸುತ್ತಿದ್ದ ಅಮೆರಿ ಕನ್ನರು ಯಾವುದೇ ಕಾಯಿಲೆಯ ಬಗ್ಗೆ ಹೊಸ ಔಷಧ ಉಪಯೋಗಿಸುವ ವಿಚಾರದಲ್ಲಿ ಉತ್ಸುಕತೆ ಕಳೆದುಕೊಳ್ಳಲಾ ರಂಭಿಸಿದರು. ಅಲ್ಲದೆ ಯಾವುದೇ ಔಷಧ ಉಂಟು ಮಾಡುವ ಸಣ್ಣ ಪ್ರಮಾಣದ ಅವಗುಣದ ಬಗ್ಗೆಯೂ ಗೌರವ ಕೊಡಲಾರಂಭಿಸಿದರು, ಗಂಭೀರವಾಗಿ ಯೋಚಿಸಲಾರಂಭಿಸಿದರು.

ಇದರ ನಂತರ ಒಳ್ಳೆಯ ಬೆಳವಣಿಗೆಗಳು ಎಂದರೆ – ವಿವಿಧ ಕಾರ್ಮಿಕರು ದುಡಿಯುವ ಫ್ಯಾಕ್ಟರಿಗಳು ಹಾಗೂ ಉದ್ಯಮದಲ್ಲಿ ಅವರ ಕೆಲಸದ ವೇಳೆ ವಿವಿಧ ರಾಸಾಯನಿಕ ಹಾಗೂ ಔಷಧಗಳ ಜತೆಗೆ ಕೆಲಸ ಮಾಡುವಾಗ ಅವರ ಆರೋಗ್ಯಕ್ಕೆ ತೀವ್ರ ಹಾನಿಯಾಗು ತ್ತದೆ ಎಂಬ ಅಂಶ ಮನದಟ್ಟಾಗತೊಡಗಿತು. ಎಲ್ಲರೂ ಊಹಿಸುವಂತೆ ಈ ಕಾಳಜಿ ಕೇವಲ ಕ್ಯಾನ್ಸರ್ ಬಗೆಗೆ ಇದ್ದುದು, ಥ್ಯಾಲಿ ಡೋಮೈಡ್ ಹಗರಣದ ನಂತರ, ವಂಶವಾಹಿಯಿಂದ ಉಂಟಾಗಬಹುದಾದ ಊನಗಳ ಬಗ್ಗೆಯೂ ಎಚ್ಚರ, ಕಾಳಜಿ, ಅರಿವು
ಮೂಡಿತು.

ಕೆಲಸದ ಈ ವಾತಾವರಣದಲ್ಲಿ ಮಹಿಳೆಯರಲ್ಲಿ ಉಂಟಾಗಬಹುದಾದ ಬದಲಾಗವಣೆಗಳಿಗೆ ಸೀಮಿತಗೊಂಡಿದ್ದ ತಿಳುವಳಿಕೆ ಕ್ರಮೇಣ ಗಂಡಸರಲ್ಲಿಯೂ ವಿವಿಧ ರೀತಿಯ ತೊಂದರೆಗಳು ಬರಬಹುದು ಎಂಬ ಬಗ್ಗೆಯೂ ಅರಿವಾಗತೊಡಗಿತು. ಹೀಗೆ ಥ್ಯಾಲಿ ಡೋಮೈಡ್ ವಿವಿಧ ರೀತಿಯಲ್ಲಿ ಜನರಿಗೆ ಎಚ್ಚರಿಕೆ ಕೊಡುವಲ್ಲಿ ತನ್ನದೇ ರೀತಿಯ ಸೇವೆ ಮಾಡಿತು.

ಹಾನಿಪೀಡಿತರಿಗೆ ಪರಿಹಾರ ಮತ್ತು ಅದಕ್ಕಾಗಿ ಹೋರಾಟ : 1961 ರಲ್ಲಿ ಥ್ಯಾಲಿಡೋಮೈಡ್ ನಿಷೇಧಿಸಿದ ನಂತರ ಅದರ ಕೆಟ್ಟ ಪರಿಣಾಮದಿಂದ ತೊಂದರೆಗೆ ಒಳಗಾದವರು ಔಷಧ ಕಂಪನಿಗಳಿಂದ ಪರಿಹಾರಕ್ಕಾಗಿ ಹೋರಾಡತೊಡಗಿದರು. ಸುದೀರ್ಘ ಅವಧಿಗೆ ತೊಡಗಿದ ಈ ಹೋರಾಟ 1968 ರಲ್ಲಿ ಕೋರ್ಟಿನ ಹೊರಗಿನ ಒಪ್ಪಂದದಲ್ಲಿ ಪರ್ಯಾವಸಾನಗೊಂಡಿತು. ಜಗತ್ತಿ ನಾದ್ಯಂತ 46 ದೇಶಗಳಲ್ಲಿ ಸುಮಾರು 20000 ಥ್ಯಾಲಿಡೋಮೈಡ್ ಪೀಡಿತರಿದ್ದಾರೆಂದು ಒಂದು ಅಂದಾಜು.

ಬ್ರಿಟನ್‌ನಲ್ಲಿ 455 ಈ ರೀತಿಯ ಜನರು ಇದ್ದಾರೆ. ನಂತರ ಆ ಔಷಧದ ಅಧಿಕೃತ ವಿತರಕರಾದ ಡಿಸ್ಟಿಲರ್ಸ್ ಕಂಪನಿ ಪ್ರತಿಯೊಬ್ಬ ರಿಗೆ 13, 14000 ಪೌಂಡ್‌ಗಳ ಪರಿಹಾರ ಕೊಡುತ್ತಿದೆ. ಇದು 1968 ರಲ್ಲಿ ಆದ ಒಪ್ಪಿದ ಮೊತ್ತ. ಈಗ ಅದನ್ನು ಕಾಲಕ್ಕೆ ತಕ್ಕ ಹಾಗೆ ಬದಲಿಸಬೇಕೆಂಬ ಥ್ಯಾಲಿಡೋಮೈಡ್ ಪೀಡಿತರ ಮೊರೆಯನ್ನು ಆ ಕಂಪನಿ ಒಪ್ಪಿದೆ. ಈ ಮೊತ್ತ 2022 ರ ಹೊತ್ತಿಗೆ ಈಗಿನಕ್ಕಿಂತ ದುಪ್ಪಟ್ಟು ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಪರಿಹಾರಕ್ಕಾಗಿಯೇ ಒಂದು ಟ್ರಸ್ಟ್ ಸ್ಥಾಪಿಸಲಾಗಿದೆ.

ಔಷಧ ಕಂಪನಿಯವರು ಈ ಟ್ರಸ್ಟ್ ಗೆ ಹಣ ಸಂದಾಯ ಮಾಡುತ್ತಾರೆ. ಅವರು ಈ ಔಷಧದಿಂದ ಹಾನಿಯಾದವರಿಗೆ ಹಂಚುತ್ತಾರೆ.
ಹಾನಿಯಾದವರ ನಷ್ಟವನ್ನು ಶಾಶ್ವತವಾಗಿ ತುಂಬಲು ಸಾಧ್ಯವಿಲ್ಲದಿದ್ದರೂ ಈ ರೀತಿಯ ಪರಿಹಾರದ ವ್ಯವಸ್ಥೆ 1960 ರ ದಶಕ ಗಳಷ್ಟು ಹಿಂದೆಯೇ ಪಾಶ್ಚಿಮಾತ್ಯ ದೇಶಗಳಲ್ಲಿದ್ದವು ಎಂಬುದು ಸ್ವಲ್ಪ ಸಮಾಧಾನದ ಅಂಶ. ನಮ್ಮ ದೇಶದಲ್ಲಿ ಆಗ ಅಂತಹು ದನ್ನು ಯೋಚಿಸಲೂ ಸಾಧ್ಯವಿರಲಿಲ್ಲ. ಥ್ಯಾಲಿಡೋಮೈಡ್ ಆಗ ನಮ್ಮ ದೇಶ ಪ್ರವೇಶಿಸಲಿಲ್ಲ ಎಂಬುದು ತುಂಬಾ ಸಮಾಧಾ ನಕರ ವಿಚಾರ.

Leave a Reply

Your email address will not be published. Required fields are marked *