Sunday, 11th May 2025

ಶಿರಾದಲ್ಲಿ ಕಮಲ ಅರಳಲಿದೆ: ಸಿ ಟಿ ರವಿ ವಿಶ್ವಾಸ

ಶಿರಾ: ಪೊಲೀಸ್ ಹಾಗೂ ಗುಪ್ತಚರ ಇಲಾಖೆಯ ಮಾಹಿತಿ ಆಧಾರದ ಮೇಲೆ ಈ ಬಾರಿ ಉಪಚುನಾವಣೆಯಲ್ಲಿ ಶಿರಾ ಕ್ಷೇತ್ರದಲ್ಲಿ ಕಮಲ ಅರಳಲಿದೆ ಎಂದು ರಾಷ್ಟ್ರೀಯ ಭಾ.ಜ.ಪಾ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಅವರು ಶಿರಾ ನಗರದ ಬಿ.ಜೆ.ಪಿ. ಪಕ್ಷದ ಚುನಾವಣಾ ಕಛೇರಿ ಸೇವಾಸದನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ ಕಳೆದ 40 ವರ್ಷದಿಂದ ಅಧಿಕಾರದಲ್ಲಿದ್ದ ಮಾಜಿ ಶಾಸಕರು ಅಂದು ಹಿಂದುಳಿದ ವರ್ಗಕ್ಕೆ ಅಭಿವೃದ್ದಿ ಯೋಜನೆಯನ್ನು ಯಾಕೆ ರೂಪಿಸಲಿಲ್ಲ. ನಮ್ಮ ಪಕ್ಷ ಕಾಡುಗೊಲ್ಲ ಸಮಾಜಕ್ಕೆ ಅಭಿವೃದ್ದಿ ನಿಗಮ ಮಾಡಿದೆ. ಈ ಬಗ್ಗೆ ಟೀಕೆ ಏಕೆ? ಈ ದೇಶದಲ್ಲಿ ದಲಿತ ಮತ್ತು ಹಿಂದುಳಿದ ವರ್ಗದ ಸಂಸದರು ಆಯ್ಕೆಯಾಗಿರುವುದು ಭಾರತೀಯ ಜನತಾ ಪಾರ್ಟಿಯಿಂದ. ದಲಿತ ಹಿಂದುಳಿದ ವರ್ಗದ ಅಭಿವೃದ್ದಿಗೆ ಒಂದು ನಿರ್ದಿಷ್ಟ ಯೋಜನೆ ಹಮ್ಮಿಕೊಂಡಿದೆ.
ರೈತಾಪಿ ವರ್ಗಕ್ಕೆ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಹತ್ತು ಸಾವಿರ ನೀಡಲಾಗಿದೆ. ದೇಶಕ್ಕೆ ಬಂದಿರುವ ಕೊರೋನಾ ವಿಪತ್ತಿನ ಸಂದರ್ಭದಲ್ಲಿ ಗರೀಬ್ ಕಲ್ಯಾಣ ಯೋಜನೆಯಡಿಯಲ್ಲಿ ಕಳೆದ ಏಳು ತಿಂಗಳಿAದ ಪಡಿತರ ವಿತರಿಸಲಾಗಿದೆ. ನಮ್ಮ ಪಕ್ಷದ ಯೋಜನೆಗಳು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಶಿರಾ ಮಾಜಿ ಶಾಸಕರೊಬ್ಬರು ಅಭಿವೃದ್ದಿ ಮಾಡಿದ್ದೇನೆಂದು ಬಡಾಯಿ ಕೊಚ್ಚಿಕೊಳ್ಳುವ ಅವರನ್ನು ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ 11 ಸಾವಿರ ಲೀಡ್‌ಗಳಲ್ಲಿ ಯಾಕೆ ಸೋಲಿಸಿದ್ದರು. ನಮ್ಮ ಯಡಿಯೂರಪ್ಪ ಸರ್ಕಾರ ಮಾತುಕೊಟ್ಟಂತೆ ನಡೆದ ಸರ್ಕಾರ. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಬಹುದೊಡ್ಡ ಕೆರೆ ಮದಲೂರು ಕೆರೆಗೆ ನೀರನ್ನು ಹರಿಸಲಾಗುವುದು.
ಇದರಲ್ಲಿ ಯಾವುದೇ ಅನುಮಾನ ಬೇಡ. ಸಂಸತ್ ಚುನಾವಣೆ ಸಂದರ್ಭದಲ್ಲಿ ಶಿರಾ ತಾಲ್ಲೂಕಿನಲ್ಲಿ ಅತಿ ಹೆಚ್ಚು 82 ಸಾವಿರ ಮತ ನೀಡಿದ ಮತದಾರರಿದ್ದಾರೆ. ಅವರು ಈ ಬಾರಿ ಬಿ.ಜೆ.ಪಿ.ಕೈ ಹಿಡಿಯಲಿದ್ದಾರೆ. ಆ ಭರವಸೆ ನನಗೆ ಸಿಕ್ಕಿದೆ. ನಮ್ಮ ಸರ್ಕಾರದ ಮೇಲೆ ವಿರೋಧ ಪಕ್ಷ ಕಾಂಗ್ರೆಸ್ ಹತಾಷವಾಗಿ ಟೀಕೆ ಮಾಡುತ್ತಿದೆ. ಶಿರಾದಲ್ಲಿ ಬಿ.ಜೆ.ಪಿ ಗೆದ್ದರೆ ನಮಗೆ ಉಳಿಗಾಲವಿಲ್ಲವೆಂದು ಕಾಂಗ್ರೆಸ್ ಚಿಂತಿಸುತ್ತಿದೆ. ಮುಂದಿನ ದಿನದಲ್ಲಿ ಶಿರಾ ಕೋಟೆ ಬಿ.ಜೆ.ಪಿ.ಯ ಭದ್ರಕೊಟೆಯಾಗಲಿದೆ. ತಾಲ್ಲೂಕಿನ ಸಮೀಕ್ಷೆ ಪ್ರಕಾರ ಜೆ.ಡಿ.ಎಸ್. ನವರು ಕಾಂಗ್ರೆಸ್‌ನ ಸೋಲಿಸಬೇಕಂತ, ಕಾಂಗ್ರೆಸ್‌ನವರು ಜೆ.ಡಿ.ಎಸ್ ಅಧಿಕಾರಕ್ಕೆ ಬರಬಾರದು ಎಂದು ಪಣತೊಟ್ಟಿರುವದರಿಂದ ನಮ್ಮ ಪಕ್ಷಕ್ಕೆ ವಿರೋಧಿಗಳೇ ಇಲ್ಲ ಎಂಬಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿ.ಜೆ.ಪಿ.ಅಧ್ಯಕ್ಷ ಸುರೇಶ್‌ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ.ಮಂಜುನಾಥ್, ತುಮುಲ್ ನಿರ್ದೇಶಕ ಎಸ್.ಆರ್.ಗೌಡ, ಮಾಜಿ ಅಧ್ಯಕ್ಷರುಗಳಾದ ಮಾಲಿಮರಿಯಪ್ಪ, ಬಸವರಾಜು ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *