Sunday, 11th May 2025

Aaj Ki Raat: ಕ್ಲಾಸ್‌ರೂಂ ಆಯ್ತು, ಈಗ ಕೋಚಿಂಗ್‌ ಸೆಂಟರ್‌ನಲ್ಲೂ ʼಆಜ್ ಕಿ ರಾತ್ʼ ಹವಾ!

Viral Video

ಬೆಂಗಳೂರು: ‘ಸ್ತ್ರೀ 2’ ಚಿತ್ರದಲ್ಲಿ ನಟಿ ತಮನ್ನಾ ಭಾಟಿಯಾ ನೃತ್ಯ ಮಾಡಿದ ‘ಆಜ್ ಕಿ ರಾತ್’ (Aaj Ki Raat) ಹಾಡು ರಿಲೀಸ್ ಆದಾಗಿನಿಂದ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟ್ರೆಂಡಿಂಗ್‌ನಲ್ಲಿದೆ. ಮೆಟ್ರೋ, ಕ್ಲಾಸ್‌ ರೂಮ್‌ಗಳು, ರೈಲ್ವೆ ಪ್ಲಾಟ್ಫಾರ್ಮ್‌ಗಳು ಮತ್ತು ಇತರ ಸ್ಥಳಗಳಲ್ಲಿ ಜನರು ಈ ಹಾಡಿಗೆ ನೃತ್ಯ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇತ್ತೀಚೆಗೆ ಕೋಟಾದ ಅಲೆನ್ ಇನ್ಸ್ಟಿಟ್ಯೂಟ್‍ನ ಇಬ್ಬರು ವಿದ್ಯಾರ್ಥಿನಿಯರು ಕೋಚಿಂಗ್ ತರಗತಿಯೊಳಗೆ ಈ ಹಾಡಿಗೆ ನೃತ್ಯ ಮಾಡಿದ್ದು, ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೈರಲ್ ವಿಡಿಯೊದಲ್ಲಿ ಹುಡುಗಿಯರು ಈ ಹಾಡಿಗೆ ನೃತ್ಯ ಮಾಡಿದ್ದಾರೆ. ಕಪ್ಪು ಪ್ಯಾಂಟ್ (ಅಲೆನ್ ಇನ್ಸ್ಟಿಟ್ಯೂಟ್ ಒದಗಿಸಿದ ಸಮವಸ್ತ್ರ) ನೊಂದಿಗೆ ಹಸಿರು ಟೀಶರ್ಟ್‌ಗಳನ್ನು ಧರಿಸಿದ ಇಬ್ಬರು ವಿದ್ಯಾರ್ಥಿಗಳು ವಿದ್ಯಾರ್ಥಿಗಳಿಂದ ತುಂಬಿದ ತರಗತಿಯೊಳಗೆ ಹಾಡಿನ ತಾಳಕ್ಕೆ ಕುಣಿದಿದ್ದಾರೆ. ಸೆಪ್ಟೆಂಬರ್ 10 ರಂದು ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಾಗಿನಿಂದ, ಈ ಪೋಸ್ಟ್ ಈಗಾಗಲೇ 11 ಕೆ ಲೈಕ್‍ಗಳು ಮತ್ತು 936 ಕೆ ವೀವ್ಸ್ ಗಳಿಸಿದೆ. X ಬಳಕೆದಾರರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ವ್ಯಕ್ತಪಡಿಸಿದ್ದಾರೆ. ಕೆಲವರು ಅವರ ಆತ್ಮವಿಶ್ವಾಸ ಮತ್ತು ನೃತ್ಯ ಕೌಶಲ್ಯವನ್ನು ಹೊಗಳಿದರೆ, ಇತರರು ವಿದ್ಯಾರ್ಥಿಗಳು ದುಬಾರಿ ಶುಲ್ಕವನ್ನು ನೀಡಿ ಇಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ಟೀಕೆ ಮಾಡಿದ್ದಾರೆ. ಕೆಲವು ಬಳಕೆದಾರರು ಪೋಷಕರು ತಮ್ಮ ಮಕ್ಕಳ ಮೇಲೆ ಕಣ್ಣಿಡಬೇಕೆಂದು ಸಲಹೆ ನೀಡಿದ್ದಾರೆ.

ಬಳಕೆದಾರರೊಬ್ಬರು ವಿದ್ಯಾರ್ಥಿಗಳು ಫ್ರೀ ಸಮಯವನ್ನು ಆನಂದಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಅವರನ್ನು ಬೆಂಬಲಿಸಿದ್ದಾರೆ. ಶೈಕ್ಷಣಿಕ ಒತ್ತಡದಿಂದಾಗಿ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಯತ್ನಿಸುವ ಬಗ್ಗೆ ಗಮನಸೆಳೆದ ಬಳಕೆದಾರರೊಬ್ಬರು, “ಇದು ಸಹ ಮುಖ್ಯವಾಗಿದೆ, ಯಾಕೆಂದರೆ ಕನಿಷ್ಠ ಮಕ್ಕಳು ಕೆಲವು ಸಂತೋಷದ ಕ್ಷಣಗಳನ್ನು ಆನಂದಿಸಬೇಕು, ಇಲ್ಲದಿದ್ದರೆ ತಮ್ಮ ಅಧ್ಯಯನದ ಬಗ್ಗೆ ಒತ್ತಡಕ್ಕೆ ಸಿಲುಕಿ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ” ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:ಸಹಪಾಠಿ ಹುಟ್ಟುಹಬ್ಬಕ್ಕೆ ಕ್ಲಾಸ್‌ರೂಂನಲ್ಲೇ ವಿದ್ಯಾರ್ಥಿನಿಯರಿಂದ ಎಣ್ಣೆ ಪಾರ್ಟಿ!

ಕಳೆದ ವರ್ಷ ನೀಟ್ ಕೋಚಿಂಗ್ ಸೆಂಟರ್ ನ ವಿಡಿಯೊ ಒಂದು ವೈರಲ್ ಆಗಿತ್ತು. ವಿಡಿಯೊದಲ್ಲಿ, ಅಲೆನ್ ಇನ್ಸ್ಟಿಟ್ಯೂಟ್ ನ ಮಾಜಿ ವಿದ್ಯಾರ್ಥಿ ಎಂದು ಹೇಳಿಕೊಳ್ಳುವ ಹುಡುಗಿ ನೀಟ್ ಕೋಚಿಂಗ್‍ಗಾಗಿ ಮೇಕಪ್ ಮತ್ತು ಆ ದಿನದ ಸಮವಸ್ತ್ರವನ್ನು ಧರಿಸಿರುವುದು ಕಂಡುಬಂದಿದೆ. ಈ ವಿಡಿಯೊಗೆ 180 ಕೆ ವೀವ್ಸ್ ಬಂದಿವೆ ಮತ್ತು 18.3 ಕೆ ಕಾಮೆಂಟ್‍ಗಳನ್ನು ಗಳಿಸಿದೆ.

Leave a Reply

Your email address will not be published. Required fields are marked *