ಅಭಿಮತ
ನಂ.ಶ್ರೀಕಂಠ ಕುಮಾರ್
ಇತ್ತೀಚಿನ ವರ್ಷಗಳಲ್ಲಿ ದಾನಗಳಲ್ಲೇ ಶ್ರೇಷ್ಠದಾನ ಮತದಾನ ಎಂಬ ನಾಣ್ನುಡಿಯು ಹೆಚ್ಚಾಗಿ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ರಾಜಕಾರಣಿಗಳ ಘೋಷ ವಾಕ್ಯವಾಗಿದೆ.
ಆದರೆ ಇದು ಪ್ರಜೆಗಳು ಮತದಾನದಲ್ಲಿ ಭಾಗಿಯಾಗಲು ಪ್ರಚೋದನೆಗಷ್ಟೇ, ರಾಜಕಾರಣಿಗಳ ಆಚರಣೆಗಲ್ಲ ಎಂಬಂತಾಗಿದೆ. ಚುನಾವಣಾ ಆಯೋಗವು ಸಹ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ನೀಡಿರುವ ಹಕ್ಕು ಎಂಬುದಾಗಿ ಸಾರ್ವಜನಿಕರಿಗೆ ತಿಳಿವಳಿಕೆ ನೀಡಿ ಮತದಾನದಲ್ಲಿ ಭಾಗಿಯಾಗುವಂತೆ ವಿವಿಧ ರೀತಿಯ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡು ಜಾಗೃತಗೊಳಿಸಲೆಂದೇ ಕೋಟ್ಯಂತರ ಹಣವನ್ನು ನಿಯೋಗ ಮಾಡುತ್ತದೆ.
ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ಸಾರ್ವತ್ರಿಕ ಚುನಾವಣೆಗಳ ಮತದಾನದಲ್ಲಿ ಶೇಕಡವಾರು ಹೆಚ್ಚುವರಿಯಾಗಿದೆ. ಇನ್ನು ಪ್ರತಿಯೊಂದು ಸಂಘ – ಸಂಸ್ಥೆಗಳು, ಸಹಕಾರಿ ಕ್ಷೇತ್ರ ಹಾಗೂ ಖಾಸಗಿ ಮತ್ತು ಸರಕಾರಿ ಆಡಳಿತಾತ್ಮಕ ಸಂಘಟನಾ ವ್ಯವಸ್ಥೆ ಗಳಲ್ಲೂ ಸಹ ಮತದಾನದ ಮೂಲಕ ಸದಸ್ಯರುಗಳು ತಮ್ಮ ನೇತಾರರನ್ನು ಆಯ್ಕೆ ಮಾಡಿಕೊಳ್ಳುವುದು ಪ್ರಜಾಪ್ರಭುತ್ವದ ಒಂದು ಭಾಗ. ಆದರೆ ಕೆಲವು ಸಂಘ ಸಂಸ್ಥೆಗಳು ಇದಕ್ಕೆ ಅಪವಾದ ಎನ್ನಬಹುದು.
ಅವರದ್ದು ಪ್ರಜಾಪ್ರಭುತ್ವಕ್ಕೆ ಮಾರಕವಾದ ಹಿಟ್ಲರ್ ಸಿದ್ಧಾಂತ. ವಿಶ್ವದಲ್ಲೇ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರಗಳಲ್ಲಿ ಒಂದಾದ ಭಾರತದಲ್ಲಿಯೂ ಸಹ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಟ್ಟು ಕಾಲಕಾಲಕ್ಕೆ ಸಕ್ರಿಯವಾಗಿ ಚುನಾವಣೆ ಗಳನ್ನು ನಡೆಸುವ ಮೂಲಕ ಸಂವಿಧಾನ ದತ್ತವಾದ ಪ್ರಜಾಪ್ರಭುತ್ವವನ್ನು ಚುನಾವಣಾ ಆಯೋಗವು ಎತ್ತಿ ಹಿಡಿದಿದೆ. ಆದರೆ ಈಗ ತಾನೇ ನಡೆದ ಮೈಸೂರು ಮಹಾನಗರ ಪಾಲಿಕೆಯ ಮಹಾಪೌರ ಹಾಗೂ ಉಪಮಹಾಪೌರರ ಆಯ್ಕೆಯ ಚುನಾವಣಾ ಪ್ರಕ್ರಿಯೆಯಲ್ಲಿ ಮೈಸೂರು ನಗರದ ಪ್ರಜೆಗಳಿಂದ ಚುನಾಯಿತಗೊಂಡವರಲ್ಲಿ ಪಾಲಿಕೆ ಸದಸ್ಯರು, ವಿಧಾನಸಭಾ ಸದಸ್ಯರು, ವಿಧಾನಪರಿಷತ್ ಸದಸ್ಯರು ಹಾಗೂ ಲೋಕಸಭಾ ಸದಸ್ಯರು ಪ್ರಮುಖ ಮತದಾನದ ಹಕ್ಕು ಇರುವ ಜನಪ್ರತಿನಿಧಿ ಮತದಾರ ರಾಗಿರುತ್ತಾರೆ.
ಇವರೆಲ್ಲರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿನ ಮತದಾರರಿಂದ ಆಯ್ಕೆಗೊಂಡವರೇ ಆಗಿದ್ದಾರೆ. ಪವಿತ್ರ ಮತದಾನದ ಕರ್ತವ್ಯ ಹಾಗೂ ಹಕ್ಕನ್ನು ಮರೆತು ಮಹಾಪೌರ ಹಾಗೂ ಉಪಮಹಾಪೌರ ಆಯ್ಕೆಯ ಪ್ರಕ್ರಿಯೆಯಲ್ಲಿ ಭಾಗವಹಿಸದೆ ಕೆಲವರು ಗೈರು ಹಾಜರಾಗಿ
ಉಳಿದಿದ್ದು ತಮ್ಮನ್ನು ಆಯ್ಕೆ ಮಾಡಿದ ಕ್ಷೇತ್ರದ ಮತದಾರರಿಗೆ ಮಾಡಿದ ಅನ್ಯಾಯವಲ್ಲವೇ? ಇವರು ಪಾಲಿಕೆಯಲ್ಲಿನ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿ ನೀಡುವ ಮತಕ್ಕೆ ಮೌಲ್ಯವಿಲ್ಲವೇ? ಅಭ್ಯರ್ಥಿಯು ತಮಗೆ ಇಷ್ಟವಾಗದಿದ್ದಲ್ಲಿ ನೋಟಾ ಮತದಾನ ಮಾಡಲು ಅವಕಾಶವಿಲ್ಲವೇ? ಇವರ ನಡೆ ಪುರಾಣ ಕೇಳೋಕೆ, ಬದನೆ ಕಾಯಿ ತಿನ್ನೋಕೆ ಎಂಬಂತಾಗಿದೆ.
ಇವರನ್ನು ಆಯ್ಕೆ ಮಾಡಿದ ಮತದಾರ ಪ್ರಭುಗಳೂ ಸಹ ಇವರ ನೀತಿಯನ್ನೇ ಅನುಸರಿಸಿದರೆ ದೇಶದ ಪ್ರಜಾಪ್ರಭುತ್ವದ
ಗತಿಯೇನು. ಈ ನಿಟ್ಟಿನಲ್ಲಿ ಸಂವಿಧಾನ ರಕ್ಷಕರಾದ ಗೌರವಾನ್ವಿತ ರಾಜ್ಯಪಾಲರು ಚುನಾಯಿತ ಜನಪ್ರತಿನಿಧಿಗಳಿಗೆ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಗಳಲ್ಲಿ ಭಾಗವಹಿಸುವಂತೆ ಸೂಕ್ತ ಮಾರ್ಗದರ್ಶನ ನೀಡಿ ಪ್ರಜಾಪ್ರಭುತ್ವದ ಘನತೆಯನ್ನು ಹೆಚ್ಚಿಸಲಿ.