Sunday, 11th May 2025

ಮಂದಿರದ ವಿಚಾರದಲ್ಲಿ ಬಾಲಿಶ ಹೇಳಿಕೆಗಳು ಸಲ್ಲದು

ಅಭಿಮತ

ಆದರ್ಶ್‌ ಶೆಟ್ಟಿ

ಇತ್ತೀಚೆಗೆ ಮಂಗಳೂರಿನ ಉಳ್ಳಾಲದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಂಸ್ಥಾಪನಾ ದಿನಾಚರಣೆಯಂದು ನಡೆದ ಯುನಿಟಿ ಮಾರ್ಚ್‌ನ ಅಂಗವಾಗಿ ಹಮ್ಮಿಕೊಂಡ ಸಭಾ ಕಾರ್ಯಕ್ರಮದಲ್ಲಿ ಪಿಎಫ್‌ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನೀಸ್ ಅಹಮದ್ ಎಂಬವರು ತಮ್ಮ ಭಾಷಣದಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವುದು ರಾಮನ ಮಂದಿರ ವಲ್ಲ ಅದು ಆರ್‌ಎಸ್ ಎಸ್ ಮಂದಿರ, ಮುಸಲ್ಮಾನರು ಯಾರೂ ಒಂದು ರುಪಾಯಿ ದೇಣಿಗೆ ನೀಡಬೇಡಿ ಎಂಬ ಮಾತಿನ ಜತೆಗೆ ಕೋಮು ಭಾವನೆ ಕೆರಳಿಸುವ ಕೆಲವೊಂದು ಮಾತುಗಳನ್ನು ಆಡಿದ್ದರು.

ಇದಾದ ಕೆಲವೇ ದಿನಗಳ ಬಳಿಕ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ನಿಧಿ ಸಂಗ್ರಹದ ಲೆಕ್ಕ ಕೇಳಿ ವಿವಾದದ ಬೆಂಕಿಗೆ ತುಪ್ಪ ಸುರಿದಿದ್ದರು. ಈ ಸಿದ್ದರಾಮಯ್ಯರ ಲೆಕ್ಕದ ವರಸೆಗೆ ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯಿಸಿ ಹತ್ತು ರುಪಾಯಿ ದೇಣಿಗೆ ಕೊಟ್ಟ ಬಡಕೂಲಿ ಕಾರ್ಮಿಕ ದೇಣಿಗೆಯ ಲೆಕ್ಕ ಕೇಳಲಿ ಲೆಕ್ಕ ಕೇಳೋಕೆ ಸಿದ್ದರಾಮಯ್ಯ ಯಾರು ಎಂದು
ಖಾರವಾಗಿ ಪ್ರತಿಕ್ರಿಯಿಸಿದ್ದರು.

ಇನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಂತೂ ಒಂದು ಹೆಜ್ಜೆ ಮುಂದೆ ಹೋಗಿ ನಿಧಿ ಸಂಗ್ರಹಕರನ್ನು ಪುಂಡ ಪೋಕರಿಗಳಿಗೆ ಹೋಲಿಸಿದ್ದರು. ಸುಮಾರು 500 ವರ್ಷಗಳ ಹೋರಾಟ, ಹಲವಾರು ಮಂದಿಯ ತ್ಯಾಗ, ಪ್ರಾಣಹಾನಿ, ಶತಮಾನದ ಪರಿಶ್ರಮದ ದ್ಯೋತಕವಾಗಿ ನ್ಯಾಯಾಲಯದ ತೀರ್ಪಿನಂತೆಯೇ ರಾಮನ ಜನ್ಮಸ್ಥಾನ ಅಯೋಧ್ಯೆಯೇ ಎಂಬ ತೀರ್ಮಾನ ವಿವಾದವು ತಾರ್ಕಿಕ ಅಂತ್ಯ ಕಂಡು ಎಲ್ಲವೂ ಸುಸೂತ್ರವಾಗಿ ನೆರವೇರುವ ಹೊತ್ತಿನಲ್ಲಿ ಎಲ್ಲಾ ವರ್ಗದ ಜನರ ಆಶಯದಂತೆ ಈ ದೇಶದ ಅಸ್ಮಿತೆಯಾದ ರಾಮಮಂದಿರ ನಿರ್ಮಾಣವು ಪ್ರತಿಯೊಬ್ಬ ರಾಮಭಕ್ತನ ಮತ್ತು ಪ್ರಜೆಯ ಕನಸು. ಇದಕ್ಕೊಂದು ಟ್ರಸ್ಟ್ ರಚಿಸಿ ಭವ್ಯ ರಾಮಮಂದಿರ ಕಾರ್ಯದಲ್ಲಿ ಪ್ರತಿಯೊಬ್ಬ ಭಕ್ತನ ಕಿಂಚಿತ್ ಸಹಾಯ, ಸಹಕಾರದ ಹಿನ್ನೆಲೆ ಯಲ್ಲಿ ದೇಣಿಗೆ ಸಂಗ್ರಹ ಕಾರ್ಯವು ಭರಪೂರ ಯಶಸ್ವಿಯಾಗಿ ನಡೆಯುತ್ತಿದ್ದು, ಜಾತಿ, ಧರ್ಮ, ಬೇಧ, ಭಾವ ಮರೆತು ಈ ಮಹತ್ಕಾರ್ಯಕ್ಕೆ ಬೆಂಬಲ ವ್ಯಕ್ತವಾಗಿ ನಿರೀಕ್ಷೆಗೂ ಮೀರಿ ದೇಣಿಗೆ ಸಂಗ್ರಹವಾಗಿದೆ.

ರಾಮನ ಮಂದಿರ ನಿರ್ಮಾಣ ವಿಚಾರ ಮತ್ತು ರಾಮನ ಜನ್ಮಸ್ಥಾನದ ಬಗ್ಗೆ ಅನಾದಿ ಕಾಲದಿಂದಲೂ ವಿವಾದ ಭುಗಿಲೇಳಲು ಮುಖ್ಯ ಕಾರಣ ನಮ್ಮ ದೇಶದ ರಾಜಕಾರಣ ವ್ಯವಸ್ಥೆ. ತಮ್ಮ ರಾಜಕೀಯ ಲಾಭಕ್ಕಾಗಿ, ಯಾರನ್ನೋ ಮೆಚ್ಚಿಸುವ ಸಲುವಾಗಿ ರಾಮನ ಬಗ್ಗೆ ತುಚ್ಛವಾಗಿ ಮಾತನಾಡಿದ ರಾಜಕಾರಣಿಗಳಿzರೆ. ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದವರಿದ್ದಾರೆ. ಆದರೆ ಈ ರೀತಿ ಲಘುವಾಗಿ ಮಾತನಾಡಿದವರಾರು ಸಾರ್ವಜನಿಕ ಜೀವನವಿರಬಹುದು ಅಥವಾ ರಾಜಕಾರಣದಲ್ಲಿರಬಹುದು ಮೇಲೆ ಬರಲಾರದೆ ತಮ್ಮ ರಾಜಕೀಯ ಅಸ್ತಿತ್ವವನ್ನೇ ಕಳೆದುಕೊಂಡದ್ದು ವಿಪರ್ಯಾಸ.

ಇದೀಗ ಎಲ್ಲವೂ ಅಂದುಕೊಂಡಂತೆ ಸರಾಗವಾಗಿ ಸಾಗುತ್ತಿರಬೇಕಾದರೆ ಮತ್ತೆ ಇದೇ ವಿಚಾರದಲ್ಲಿ ಕಿಡಿ ಹೊತ್ತಿಸುತ್ತಿರುವುದು ರಾಜಕಾರಣಿಗಳ ಘನತೆಗೆ ತಕ್ಕುದಾದ ನಡೆಯಲ್ಲ. ಇಂತಹ ವಿವಾದದ ಕಿಡಿ ಹೊತ್ತಿಸುವವರಿಗೆ ಅಸಲಿಗೆ ಬೇಕಾಗಿರುವುದು
ವಿವಾದದ ಇತ್ಯರ್ಥವಲ್ಲ. ಬದಲಾಗಿ ವಿವಾದವನ್ನೇ ಜೀವಂತವಾಗಿಸಿ ಶಾಂತಿ ಸಾಮರಸ್ಯ ಕದಡಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು. ಇಲ್ಲಿ ರಾಜಕಾರಣಿಗಳಿಗೆ ದೇಣಿಗೆ ನೀಡಲು ಇಷ್ಟವಿಲ್ಲದಿದ್ದರೆ ತಮ್ಮ ಪಾಡಿಗೆ ಸುಮ್ಮನಿರುವುದು ಬಿಟ್ಟು ಕೋತಿ ತಾನು ಕೆಡುವುದಲ್ಲದೆ ಇಡೀ ವನವನ್ನೇ ಕೆಡಿಸಿತೆಂಬ ಗಾದೆ ಮಾತಿನಂತೆ ಸಮಾಜದ ಸ್ವಾಸ್ಥ್ಯವನ್ನು ಕದಡುವ ರಾಜಕೀಯ ನಾಯಕರ ಹೇಳಿಕೆಗಳು ಪ್ರಜ್ಞಾವಂತ ಸಮಾಜದ ದೃಷ್ಟಿಯಲ್ಲಿ ಶೋಭೆ ತರುವಂಥದ್ದಲ್ಲ.

Leave a Reply

Your email address will not be published. Required fields are marked *