Monday, 12th May 2025

ಪೊಲೀಸ್‌ ವರ್ಗಾವಣೆಗೆ ಬೇಕಿದೆ ಕಡಿವಾಣ

ಅಭಿಮತ

ಆದರ್ಶ್‌ ಶೆಟ್ಟಿ, ಉಪ್ಪಿನಂಗಡಿ

ಪೊಲೀಸ್ ಇಲಾಖೆಯೆಂದರೆ ಅದೊಂದು ಸವಾಲಿನ ಕೆಲಸ. ಸಾಮಾನ್ಯ ಕಾನ್ ಸ್ಟೇಬಲ್‌ನಿಂದ ಹಿಡಿದು ಸಬ್ ಇನ್ಸ್‌ಪೆಕ್ಟರ್, ಸರ್ಕಲ್ ಇನ್ಸ್‌ಪೆಕ್ಟರ್, ಡಿವೈಎಸ್‌ಪಿ, ಡಿಸಿಪಿ, ಎಸಿಪಿ, ಕಮಿಷನರ್, ಎಸ್.ಪಿ, ಐಜಿಯವರೆಗೂ ಯಾವುದೇ ಪ್ರಕರಣದ ಜಾಡು ಹಿಡಿಯುವಲ್ಲಿ ಇವರೆಲ್ಲರೂ ಹೊಣೆಗಾರರೇ ಸರಿ.

ಇಲ್ಲಿ ತನಿಖೆಯಲ್ಲಿ ಕೊಂಚ ಎಡವಟ್ಟಾದರೂ ಸಂಘಸಂಸ್ಥೆಗಳು, ಸಾರ್ವಜನಿಕರು, ರಾಜಕಾರಣಿಗಳು ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳವರೆಗೂ ಎಚ್ಚರಿಸುವ, ಕಿವಿ ಹಿಂಡುವ ಕೆಲಸ ಮಾಡುತ್ತಾರೆ. ಒಂದು ಠಾಣಾ ವ್ಯಾಪ್ತಿಯಲ್ಲಿ ಸರಣಿ ಹತ್ಯೆ,
ದರೋಡೆ ಪ್ರಕರಣಗಳು ಸಂಭವಿಸಿದರಂತೂ ಆ ಠಾಣಾಧಿಕಾರಿ, ವೃತ್ತ ನಿರೀಕ್ಷಕ ನಿದ್ದೆಯಿಲ್ಲದೆ ಕರ್ತವ್ಯ ನಿರ್ವಹಿಸ
ಬೇಕಾಗುತ್ತದೆ.

ಅದು ತಮ್ಮ ಖಾಸಗಿ, ವೈಯಕ್ತಿಕ ಕಾರ್ಯಕ್ರಮಗಳನ್ನು ಬದಿಗೊತ್ತಿಯಾದರೂ ಸರಿಯೇ. ಇಲ್ಲಿ ಕೆಲವೊಂದು ಬಾರಿ ಮೇಲಾಧಿಕಾರಿ ಮಾಡಿದ ತಪ್ಪಿಗೋ, ಅಥವಾ ಇನ್ನಾವುದೋ ಕಾರಣಕ್ಕೋ ಕೆಳ ದರ್ಜೆಯ ಅಧಿಕಾರಿಯ ತಲೆಗೆ ಕಟ್ಟಿ ತಲೆದಂಡ ಮಾಡುವ, ಮುಂಬಡ್ತಿಗೆ ಕಡಿವಾಣ ಹಾಕುವ ಕಾರ್ಯಗಳೂ ನಡೆಯುತ್ತವೆ. ಬದಲಾದ ದಿನಗಳಲ್ಲಿ ಪೊಲೀಸ್ ವ್ಯವಸ್ಥೆಯಲ್ಲೂ ಸಾಕಷ್ಟು ಬದಲಾವಣೆ, ಸುಧಾರಣೆಗಳು ನಡೆದಿರುವುದು ಅಧಿಕಾರಿಗಳಿಗೆ ಕೊಂಚ ನೆಮ್ಮದಿ ತರಿಸಿದೆ. ರಾಜಕಾರಣಿಗಳು ಕೂಡ ಅತಿ ಹೆಚ್ಚು ಹಸ್ತಕ್ಷೇಪ ನಡೆಸುವ ಇಲಾಖೆಯೊಂದಿದ್ದರೆ ಅದು ಗೃಹ ಇಲಾಖೆಯೆಂಬುವುದು ಗಮನಾರ್ಹ.

ಕೆಲ ವರ್ಷಗಳ ಹಿಂದೆ ಮಂಗಳೂರಿನಲ್ಲಿ ಓರ್ವ ದಕ್ಷ ಪ್ರಾಮಾಣಿಕ ಸರ್ಕಲ್ ಇನ್ಸ್‌ಪೆಕ್ಟರ್ ಒಬ್ಬರು ಕೊಲೆಯತ್ನ ಸೇರಿದಂತೆ ಗಾಂಜಾ ಪ್ರಕರಣದ ಮೋಸ್ಟ್ ವಾಂಟೆಡ್ ಆಗಿದ್ದ ರೌಡಿ ಶೀಟರ್ ಓರ್ವನನ್ನು ಎತ್ತಿಕೊಂಡು ಬಂದು ಕೇಸ್ ಜಡಿದು ಕಸ್ಟಡಿಗೆ ಪಡೆದು ಸೆಲ್ ನಲ್ಲಿ ಕೂರಿಸಿದ್ದರು. ಇಷ್ಟಾದ ಕೆಲವೇ ಹೊತ್ತಿನಲ್ಲಿ ಆರೋಪಿ ಪರ ಜಿಯ ರಾಜಕಾರಣಿಗಳ ಒತ್ತಡದ ಮೇಲೆ ಒತ್ತಡ ಬಿದ್ದು ಆರೋಪಿಯನ್ನು ಬಿಟ್ಟು ಬಿಡುವಂತೆ ತಿಳಿಸಿದಾಗ ಆ ಪೊಲೀಸ್ ಅಧಿಕಾರಿ ಕ್ಯಾರೇ ಅನ್ನದಾಗ ಕೆಲವೇ ನಿಮಿಷಗಳಲ್ಲಿ ಆ
ಅಧಿಕಾರಿಗೆ ವರ್ಗಾವಣೆ ಆದೇಶವಾಗುತ್ತದೆ.

ಇದು ಮಂಗಳೂರು ಪೊಲೀಸರ ಸ್ವಾಭಿಮಾನಕ್ಕೆ ಸಾಕಷ್ಟು ಧಕ್ಕೆಯುಂಟಾಗಿ ಮಂಗಳೂರಿನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಎಲ್ಲಾ ಠಾಣೆಯ ಪೊಲೀಸರು ಆ ಅಧಿಕಾರಿಯ ಪರ ಠಾಣೆ ಎದುರು ಧರಣಿ ಕೂತರು. ವರ್ಗಾಯಿಸದಂತೆ ಪ್ರತಿಭಟಿಸಿದರು. ಈ ಹೋರಾಟದ ಮುಂದೆ ಯಾವ ರಾಜಕಾರಣಿಯ ಒತ್ತಡವೂ ನಡೆಯಲಿಲ್ಲ. ಇದಾದ ಒಂದು ತಿಂಗಳ ಬಳಿಕ ಅಧಿಕಾರಿಯನ್ನು ದೂರದ ಊರಿಗೆ ವರ್ಗಾಯಿಸಲಾಯಿತು ಅದು ಬೇರೆ ವಿಚಾರ. ಇಂತಹ ಸಾವಿರಾರು ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳು ಇಂದು ಇಲಾಖೆಯಲ್ಲಿ ಪಾರದರ್ಶಕತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಆದರೆ ರಾಜಕಾರಣಿಗಳ ಮಾತಿಗೆ ಒಪ್ಪದೇ ಇದ್ದಾಗ ತಾವು ಮಾಡದ ತಪ್ಪಿಗೆ ಒಂದು ಊರಿನಿಂದ ಪರವೂರಿಗೆ ವರ್ಗಾವಣೆಯ ಶಿಕ್ಷೆಯನ್ನು ಅನುಭವಿಸುವ, ತಮ್ಮ ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ತಮ್ಮ ಖಾಸಗಿ ವಿಚಾರದಲ್ಲೂ ಕಿರುಕುಳ ಅನುಭವಿಸ ಬೇಕಾಗುತ್ತದೆ. ಕಳೆದ ಕೆಲ ದಿನಗಳ ಹಿಂದೆ ಪೊಲೀಸ್ ಅಽಕಾರಿಯೋರ್ವರ ಜತೆ ಮಾತನಾಡಿದಾಗ ಅವರು ಹೇಳಿದ ಮಾತೆಂದರೆ ಇಲಾಖೆಯಲ್ಲಿ ಓರ್ವ ಸಬ್ ಇನ್ಸ್‌ಪೆಕ್ಟರ್, ಸರ್ಕಲ್ ಇನ್ಸ್‌ಪೆಕ್ಟರ್‌ನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾಯಿಸ ಬೇಕೆಂದರೆ ಕನಿಷ್ಠ ೨೫ ರಿಂದ ೩೦ ಲಕ್ಷ ರುಪಾಯಿಗಳ ವರೆಗೆ ಲಂಚ ನೀಡಬೇಕಾದ ಸ್ಥಿತಿಯಿದೆ, ಆ ಹಣವನ್ನು ಆ ಅಽಕಾರಿ ರಿಕವರಿ ಮಾಡಬೇಕಾದರೆ ಕಳ್ಳರ, ಡಕಾಯಿತರ, ಕೊಲೆಗಡುಕರ, ಧೋ ನಂಬರ್ ದಂಧೆಕೋರರ ಜತೆ ಶಾಮೀಲಾಗಿ
ಭ್ರಷ್ಟನಾಗಬೇಕಾಗುತ್ತದೆ.

ಇದು ತೀರಾ ಒಂದು ತಿಂಗಳ ಹಿಂದಿನ ನನ್ನ ಬ್ಯಾಚ್ ಮೇಟ್‌ಗಳ ಕಥೆ ಅಂದರು. ಇನ್ನೂ ಮಾತು ಮುಂದುವರಿಸಿದ ಆ ಅಧಿಕಾರಿ ಆಯಕಟ್ಟಿನ ಜಾಗ, ಆದಾಯ ಹೆಚ್ಚು ಬರುವ ಠಾಣೆಗಳಾದರೆ ಇನ್ನೂ ಹೆಚ್ಚಿನ ಬೇಡಿಕೆಯಿದೆ ಜತೆಗೆ ಪರ್ಸೆಂಟೇಜ್ ನೀಡಬೇಕಾದ ಅನಿವಾರ್ಯತೆಯೂ ಇದೆ ಅಂದರು. ಇಂತಹ ನೋವು ನೂರಾರು ಪೊಲೀಸ್ ಅಧಿಕಾರಿಗಳಲ್ಲಿ ಮನೆ ಮಾಡಿರುವುದಂತೂ ಸುಳ್ಳಲ್ಲ. ಆದರೆ ಹೊರಗಡೆ ಹೇಳಿಕೊಳ್ಳುವಂತಿಲ್ಲ.

ತೀರಾ ಇತ್ತೀಚೆಗೆ ನಮ್ಮೂರಿನಲ್ಲಿ ಅಡಕೆ ವ್ಯಾಪಾರಿಯೋರ್ವರನ್ನು ಗಾಂಜಾ ವ್ಯಸನಿಗಳು ದಾರಿ ಮದ್ಯೆ ಚೂರಿಯಿಂದ ತಿವಿದು ದೊಡ್ಡ ಮೊತ್ತವನ್ನು ದರೋಡೆಗೈದಿದ್ದರು. ಈ ಪ್ರಕರಣ ಪೊಲೀಸರಿಗೂ ತಲೆ ನೋವಾಗಿತ್ತು. ಠಾಣಾಧಿಕಾರಿ ಮತ್ತು ಪೊಲೀಸರ ಸಮಯಪ್ರಜ್ಞೆಯಿಂದ ಕೆಲವೇ ದಿನಗಳಲ್ಲಿ ಆರೋಪಿಗಳನ್ನು ದಸ್ತಗಿರಿ ಮಾಡಿದ್ದರು. ಈ ಕಾರ್ಯಕ್ಕೆ ಊರವರೇ ಪೊಲಿಸ್ ಇಲಾಖೆಯನ್ನು ಸನ್ಮಾನಿಸಿದ್ದರು. ಈ ಘಟನೆ ಪೊಲಿಸ್ ಇಲಾಖೆ ಜನಸ್ನೇಹಿಯಾಗಿರುವುದಕ್ಕೆ ಸಾಕ್ಷೀಕರಿಸಿತ್ತು. ರಾಜಕಾರಣಿಗಳು ಪ್ರಮುಖವಾಗಿ ಪ್ರಾಮಾಣಿಕ ಅಧಿಕಾರಿಗಳಿಗೆ ಸೂಕ್ತ ಠಾಣೆಯನ್ನು ಒದಗಿಸಿ ಸ್ವತಂತ್ರವಾಗಿ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಬೇಕಿದೆ. ವಾಮಮಾರ್ಗದ ಅಧಿಕಾರಿಗಳನ್ನು ಕಿವಿ ಹಿಂಡುವ ಕಾರ್ಯವನ್ನು ರಾಜಕಾರಣಿಗಳು ಮಾಡಬೇಕಿದೆ. ಆದರೆ ಇಲಾಖೆಯ ಅಧಿಕಾರಿಗಳ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸವನ್ನು ರಾಜಕಾರಣಿಗಳು ಮಾಡಬಾರದು.

Leave a Reply

Your email address will not be published. Required fields are marked *