ಅಭಿಮತ
ಆದರ್ಶ್ ಶೆಟ್ಟಿ, ಉಪ್ಪಿನಂಗಡಿ
ತಪ್ಪುಗಳು ಎಂಬುವುದು ಮನುಷ್ಯನ ಜೀವನದಲ್ಲಿ ಸಹಜವಾಗಿ ಘಟಿಸುತ್ತದೆ. ಉದ್ದೇಶಪೂರ್ವಕವಾಗಿ ಯಾರೂ ತಪ್ಪು ಮಾಡುವು ದಿಲ್ಲ. ಕೆಲವೊಂದು ಬಾರಿ ತಿಳಿಯದೆ ಅಚಾನಕ್ ಆಗಿ ತಪ್ಪುಗಳು ಸಂಭವಿಸುತ್ತದೆ. ಆದರೆ ಮಾಡಿದ ತಪ್ಪುಗಳನ್ನು ಮತ್ತೆ ಮತ್ತೆ ಮಾಡಿದರೆ ಅದು ಅಕ್ಷಮ್ಯ ಅಪರಾಧ.
ಯಾರಾದರೊಬ್ಬನಿಂದ ತಪ್ಪು ನಡೆದು ಹೋದರೆ ಅದಕ್ಕೊಂದು ಕ್ಷಮೆ ಎಂಬುವುದಿರುತ್ತದೆ. ಆತ ಕ್ಷಮೆ ಯಾಚಿಸಿದ ಬಳಿಕ ಎಲ್ಲಾ ಮುಗಿಯಿತೆಂದುಕೊಳ್ಳಬೇಕು. ಕೆಲವೊಂದು ಬಾರಿ ಎಲುಬಿಲ್ಲದ ನಾಲಿಗೆಯಿಂದ ತಪ್ಪು ಮಾತುಗಳು ಆಡಿ ಹೋಗುತ್ತವೆ. ಮತ್ತೆ ಕೆಲ ಬಾರಿ ಮಾಡಿದ ಕಾರ್ಯಗಳಲ್ಲಿ ಪ್ರಮಾದ ಗಳು ಉದ್ಭವವಾಗುತ್ತದೆ. ಜತೆಗೆ ತಪ್ಪು ಮಾಡಿದವ ಕ್ಷಮೆ ಯಾಚಿಸಿದಾಗ ಆ ತಪ್ಪನ್ನು ಕ್ಷಮಿಸುವ ಗುಣವು ಮನುಷ್ಯ ನಲ್ಲಿರಬೇಕು.
ಪ್ರಸ್ತುತ ಜಗತ್ತು ವೇಗವಾಗಿ ಸಾಗುತ್ತಿದೆ. ಈ ವೇಗದ ಜತೆ ತಂತ್ರಜ್ಞಾನವು ಕೂಡ ಬೆಳೆಯುತ್ತಿರುವ ಕಾಲಘಟ್ಟ ದಲ್ಲಿ ಸಾಮಾಜಿಕ ಜಾಲತಾಣಗಳು ಮನುಷ್ಯನ ದೈನಂದಿನ ಜೀವನಕ್ಕೆ ಅಂಟಿಕೊಂಡು ಬಿಟ್ಟಿದೆ. ಪ್ರಸ್ತುತ ಸರಕಾರ ಇರಬಹುದು, ಆಡಳಿತ ವ್ಯವಸ್ಥೆ
ಇರಬಹುದು, ಸಾರ್ವಜನಿಕ ಜೀವನದಲ್ಲಿ ಜನಪ್ರತಿನಿಧಿಗಳು, ಆಡಳಿತ ವ್ಯವಸ್ಥೆಗಳು, ಪ್ರಭಾವಿ ವ್ಯಕ್ತಿಗಳಿಂದ ಉಂಟಾದ ತಪ್ಪು ಗಳು, ಅನೈತಿಕ ಹಾದಿಗಳು, ಅವ್ಯವಹಾರ, ಅಕ್ರಮ, ವಿವಾದಿತ ಹೇಳಿಕೆಗಳು ಪ್ರಚಲಿತದಲ್ಲಿರುವ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚಿನಂತೆ ಸಂಚರಿಸಿಬಿಡುತ್ತದೆ. ಈ ಸಂಚಾರದಿಂದ ಕೆಲವೊಂದು ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾದರೆ, ಕೆಲ ಪ್ರಕರಣಗಳಲ್ಲಿ ನಿರ್ದೋಷಿ, ಅಮಾಯಕರ ಮಾನ ಹರಾಜಾದ, ಮಾಡದ ತಪ್ಪಿಗೆ ಸಾರ್ವಜನಿಕ ವಲಯದಲ್ಲಿ ಮುಜುಗರಕ್ಕೀಡಾಗ ಬೇಕಾಗುತ್ತದೆ. ಈ ವಾಟ್ಸಾಪ್ ಬಳಕೆದಾರರಲ್ಲಿ ಹಲವು ರೀತಿಯ ಜನರಿದ್ದಾರೆ.
ಕೆಲವು ಮಂದಿ ಮತ್ತೊಂದು ಗ್ರೂಪ್‌ನಿಂದ ಬಂದ ಸಂದೇಶಗಳನ್ನು ನೋಡಿ ಸುಮ್ಮನಾದರೆ, ಮತ್ತೆ ಕೆಲವು ಮಂದಿ ಹಿಂದು ಮುಂದು ನೋಡದೆ ಸಾಮಾನ್ಯ ಸಂದೇಶಗಳನ್ನು ಇತರ ಗ್ರೂಪ್‌ಗೆ ಹಂಚುವ, ಪ್ರತಿಷ್ಠಿತ, ಗೌರವಾನ್ವಿತ ವ್ಯಕ್ತಿಗಳ ವ್ಯಕ್ತಿತ್ವವನ್ನು ಗಮನಿಸದೆ ಸುಳ್ಳು ಸುದ್ದಿಗಳನ್ನು ಇತರ ಗುಂಪಿಗೆ ಹಂಚಿ ವಿಕೃತ ಆನಂದಪಡೆಯುವವರಿದ್ದಾರೆ. ಇದು ವಾಟ್ಸಾಪ್ ಕಥೆಯಾದರೆ, ಇನ್ನು ಫೇಸ್ ಬುಕ್‌ಗಳಿಗೆ ಈ ವಿಚಾರಗಳನ್ನು ಹಂಚಿದರೆ, ಪ್ರತಿಷ್ಠಿತ ವ್ಯಕ್ತಿಗಳ ಹೇಳಿಕೆಗಳು ಮಾಧ್ಯಮ ವಾಹಿನಿಗಳ ಪಬ್ಲಿಕ್ ಫೇಸ್
ಬುಕ್ ಖಾತೆಯಲ್ಲಿ ಹಂಚಿಕೊಂಡರಂತೂ ಅದಕ್ಕೆ ಬರುವ ಪ್ರತಿಕ್ರಿಯೆಗಳು ಅಸಹ್ಯ ಹುಟ್ಟಿಸುವಂತಿರುತ್ತದೆ.
ಆ ವ್ಯಕ್ತಿಯ ತಾಯಿ, ಹೆಂಡತಿ, ಮನೆಮಂದಿಯನ್ನು ಹೀನಾಮಾನವಾಗಿ ಅವಾಚ್ಯವಾಗಿ ನಿಂದಿಸುವ ಪ್ರತಿಕ್ರಿಯೆಗಳನ್ನು ಕಾಣ ಬಹುದು. ಮತ್ತೆ ಕೆಲ ಬಾರಿ ಅಶ್ಲೀಲವಾಗಿ ಎಡಿಟ್ ಮಾಡಿ ಅದಕ್ಕೊಂದು ತಲೆಬರಹ, ಒಕ್ಕಣೆಗಳನ್ನು ಸೇರಿಸಿ ಟ್ರೋಲ್ ಮಾಡುವ ವಿದ್ಯಮಾನಗಳು ನಡೆಯುತ್ತಿವೆ. ಇತ್ತೀಚೆಗೆ ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಜಾತಿ ಸಂಬಂಧಿಸಿದ ವಿವಾದಾತ್ಮಕ ಹೇಳಿಕೆ ಮತ್ತು ಸಜ್ಜನ ರಾಜಕಾರಣಿಯೋರ್ವರ ಬಗ್ಗೆ ಯುವಕನೋರ್ವ ಫೇಸ್‌ಬುಕ್‌ನಲ್ಲಿ ಅವಾಚ್ಯ ಪದ ಬಳಕೆ ಮಾಡಿ
ಬರೆದಿರುವುದು ಸಾಕಷ್ಟು ಕೋಲಾಹಲ ಮತ್ತು ಆಕ್ರೋಶಕ್ಕೆ ಎಡೆ ಮಾಡಿತ್ತು.
ಪ್ರತಿಷ್ಠಿತ ಸ್ಥಾನದಲ್ಲಿರುವ ವ್ಯಕ್ತಿಯೋರ್ವರ ನಿಂದನೆ ಮತ್ತು ಯಾವುದೇ ಜಾತಿಯ ಬಗ್ಗೆ ನಿಂದನೆ ಸುಂದರ ಸಮಾಜಕ್ಕೆ ಪೂರಕ ವಾದ ಬೆಳವಣಿಗೆಯಲ್ಲ. ಈ ಬಗ್ಗೆ ನಾಲಗೆ ಹರಿಯಬಿಡುವವರು ಮತ್ತು ವಾಚಾಮಗೋಚರವಾಗಿ ಬರೆಯುವವರು ಕೂಡ ಆಲೋಚಿಸಬೇಕಾದುದು ಬಹಳಷ್ಟಿದೆ. ಅಂತೆಯೇ ವಾಟ್ಸಾಪ್ ಫೇಸ್ ಬುಕ್ ನಂಥ ಮಾಧ್ಯಮಗಳಲ್ಲಿ ಸಮಾಜಕ್ಕೆ ನಯಾ ಪೈಸೆಯ ಕೊಡುಗೆ ನೀಡದೆ, ಸೇವೆ ಸಲ್ಲಿಸದೆ, ಸಾರ್ವಜನಿಕ ಜೀವನದಲ್ಲಿ ಕೆಲಸ ನಿರ್ವಹಿಸದ ಸೋಮಾರಿಗಳೇ ಮತ್ತೊಬ್ಬರ ಬಗ್ಗೆ ಕೀಳು ಮಟ್ಟದ ಬರಹ ಬರೆಯಲು ಸಾಧ್ಯ.
ಆತ ನಿಜವಾಗಿಯೂ ಮತ್ತೊಬ್ಬರ ನೋವಿಗೆ ಮಿಡಿದಿದ್ದರೆ, ಸಮಾಜಕ್ಕಾಗಿ ಸೇವೆ ಸಲ್ಲಿಸಿದ್ದರೆ, ಆತನಿಗೆ ಮತ್ತೊಬ್ಬರ ಸ್ಥಾನ, ಮಾನದ ಬಗ್ಗೆ ನಿಜವಾಗಿಯೂ ಅರಿವಿರಲು ಸಾಧ್ಯ. ಎಲ್ಲೋ ಕುಳಿತು ಯಾರದೋ ಬಗ್ಗೆ ಬರೆಯಲು ಸುಲಭ. ಆದರೆ ಬರೆಸಿ ಕೊಂಡಾತನ ಭವಿಷ್ಯದ ಬಗ್ಗೆ ಮನೆಮಂದಿಯ ಬಗ್ಗೆ ಬರೆಯುವವ ನೂರು ಸಲ ಆಲೋಚಿಸುವುದು ಸೂಕ್ತ. ಇಂದು ಸಾಮಾಜಿಕ ತಾಣಗಳ ಬಳಕೆಯಂತೆಯೇ ದುರ್ಬಳಕೆಯೂ ಹೆಚ್ಚಾಗಿದ್ದು, ಇಂತಹ ಬೆಳವಣಿಗೆ ಸರಿಯಲ್ಲ