Monday, 12th May 2025

ಶಿವಪದವೆಂಬ ಪದ-ಪದಾರ್ಥ-ಪರಿಮಳ..!

ಅಭಿಪ್ರಾಯ

ಟಿ.ಗುರುರಾಜ್‌

ವೀರ ಸಿಂಹಾಸನ ಪೀಠದ ಪದತಲದಲ್ಲಿ ಟಿಸಿಲೊಡೆದ ಸುತ್ತೂರು ಶ್ರೀ ಮಠದ, ಸಿರಿಪರಂಪರೆಯ ಮತ್ತೊಂದು ದ್ಯೋತಕ ವೆಂಬಂತೆ ಅರಳಿನಿಂತ ಮಹತ್ಕೃತಿ – ಶಿವಪದ ರತ್ನಕೋಶ !

ಗಾತ್ರವಷ್ಟೇ ಅಲ್ಲ ; ಶ್ರೀ ಮದ್ಘಾಂಭೀರ್ಯವೂ ಇದಕ್ಕಿದೆ. ಹರಿಹರನಿಂದಾರಂಭಿಸಿ ಷಡಕ್ಷರದೇವನವರೆಗೆ ಹತ್ತಿರತ್ತಿರ ನಾಲ್ಕು ನೂರಾ ಐವತ್ತು ವರ್ಷಗಳ ಕಾಲ ಹರಿದುಬಂದ ಶಿವಸಾಹಿತ್ಯ ಮತ್ತು ವಚನ ವ್ಞಾಯದ ಜನಸಾಹಿತ್ಯ ಇಲ್ಲಿ ಮುಪ್ಪರಿ ಗೊಂಡಿದೆ.

ಸಂಸ್ಕೃತ ಭೂಯಿಷ್ಟವಾಗಿ ಶ್ರೀ ಸಾಮಾನ್ಯರ ನಿಲುಕಿಗೂ ಸಿಗದ ಉಪ್ಪರಿಗೆಯ ಬರೆವಣಿಗೆಗಳಿಗೆ ಸಡ್ಡುಹೊಡೆದಂತೆ, ಆಡು ಮಾತನ್ನೇ ಅಧ್ಯಾತ್ಮದ ಶಿಖರಕ್ಕೇರಿಸಿದ ಕಾರುಣ್ಯಪುರುಷರ ಶರಣ ದರ್ಶನಗಳನ್ನೆಲ್ಲ ಮತ್ತಷ್ಟು ಸರಳಗೊಳಿಸುವ ಸುತ್ತೂರು ಶ್ರೀ ಶಿವರಾತ್ರೀ ದೇಶೀಕೇಂದ್ರ ಮಹಾಸ್ವಾಮಿಗಳ ದೂರದೃಷ್ಟಿಯ -ಲವಾಗಿ ಹೊರಬಂದ ಈ ಹೆಬ್ಬೊತ್ತಿಗೆ ಕನ್ನಡ ಸಾಹಿತ್ಯ ಸರಸ್ವತಿಗೆ ಸುತ್ತೂರು ಶ್ರೀಮಠ ಸಲ್ಲಿಸಿದ ಬಹುದೊಡ್ಡ ನುಡಿಗಾಣಿಕೆ.

ಕನ್ನಡ ಸಾಹಿತ್ಯ ಸರಸ್ವತಿ ನಡೆದುಬಂದ ನಾಲ್ಕೂವರೆ ಶತಮಾನಗಳ ಸುದೀರ್ಘ ಹಾದಿಗೆ ಹಚ್ಚಲ್ಪಟ್ಟ ದಿವ್ಯ ದೀವಿಗೆಯಂತೆ ಹೊರಬಂದಿರುವ ಈ ವಿದ್ವತ್ಮಯ ಕೋಶವನ್ನು ಕೇವಲ ‘ವೀರಶೈವ-ಲಿಂಗಾಯತ ಪಾರಿಭಾಷಿಕ ಪದಕೋಶವೆಂದು ಕರೆದಿರು ವುದೇ ಹಿರಿದಾದ ತಪ್ಪು. ಯಾವ ನಿಟ್ಟಿನಿಂದ ನೋಡಿದರೂ,ಇದು ಎಲ್ಲ ಕಾಲಕ್ಕೂ, ಎಲ್ಲ ವರ್ಗಕ್ಕೂ, ಎಲ್ಲ ಕಟ್ಟು-ಪಾಡುಗಳನ್ನು
ಮೀರಿಯೂ ಸಲ್ಲುವ ಹಾಗೂ ಎಂಥ ಸಂದರ್ಭಕ್ಕೂ ಹೊಯ್-ಕಯ್ ಆಗಿ ನಿಲ್ಲುವ ಸಾರ್ವಕಾಲಿಕ ಸಾಹಿತ್ಯ ಆಕರ ಕೃತಿಯೇ ಹೊರತು, ಕೇವಲ ಒಂದು ವರ್ಗಕ್ಕೆ ಸೀಮಿತವಾದುದು ಅಲ್ಲವೇ ಅಲ್ಲ.

ಶ್ರೇಷ್ಠತೆಯ ವ್ಯಸನದಲ್ಲಿಯೇ ಮುಳುಗಿಹೋಗಿದ್ದ ಜನ ಸಾಮಾನ್ಯರಿಗೆ ಅರಿವಿನ ಆಭರಣ ತೊಡಿಸಿ, ಅರಿತವನು ಶರಣ, ಮರೆತವನು ಮಾನವ, ಶರಣ ನುಡಿದುದೇ ಶಿವತತ್ವ ಎಂದು ಸಾರಿ, ಸಾಗಿಹೋದ ಜನವಚನಕಾರರ ನಡೆ-ನುಡಿಗಳ ನಡುವೆ, ಒಂದೇ ಓದಿಗೆ ದಕ್ಕದಂತೆ ಅಡಗಿ ಕುಳಿತ ಸರಿಸುಮಾರು ನಲವತ್ತು ಸಾವಿರ ಶಬ್ದಗಳಿಗೆ ಭಾವಾರ್ಥದ ಜತೆ, ಭಾಷಾ ಪ್ರಯೋಗದ ವಿವರಣೆಯನ್ನೂ ಒದಗಿಸಿ, ಆಸಕ್ತರ ದಾಹ ತಣಿಸುವ ನಿಘಂಟಿನ ಬುಗ್ಗೆಯೊಂದನ್ನು ಹೊರತರಲು ಸುಮಾರು ಒಂದು ದಶಕದಷ್ಟು ಸಮಯ ವ್ಯಯಿಸಿದ ಈ ಕೃತಿಯ ಕಾರ್ಯನಿರ್ವಾಹಕ ಸಂಪಾದಕ ನಂದೀಶ್ ಹಂಚೆ ಅವರ ಶ್ರಮ ಸುಸಂಪನ್ನ ವಾಗಿದೆ.

937 ಪುಟಗಳ ಈ ಶಿವಕೃತಿಯಲ್ಲಿ ಅಥರ್ವ ಶಿಖೋಪನಿಷತ್ತಿನಿಂದ ಆರಂಭಿಸಿ ಆಗಮ, ಸೂತ್ರ,ಶಾಸ, ಕಾವ್ಯ, ಭಾಷ್ಯ, ಕ್ರಿಯಾಸಾರ, ಪ್ರದೀಪಿಕಾ, ಸಂಹಿತಾ, ಕಾಂಡ, ದರ್ಶನ, ದರ್ಪಣಗಳೆಲ್ಲದರ ಸಾರಗಳನ್ನೂ ಜಾಲಾಡಿ, ಸೋಸಿ ತಿಳಿಯನ್ನೆಲ್ಲ ಹೆಕ್ಕಿ ಕೊಡುವ ಕೆಲಸವನ್ನು ಈ ನೆಲದ ಹೆಮ್ಮೆಗಳಂತಿರುವ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ, ಡಾ.ಟಿ.ವಿ.ವೆಂಕಟಾಚಲ ಶಾಸೀ, ಡಾ.ಎನ್.
ಎಸ್.ತಾರಾನಾಥ್, ವಿದ್ವಾನ್ ಡಾ.ಹೆಚ್.ವಿ.ನಾಗರಾಜರಾವ್, ವಿದ್ವಾನ್ ಡಾ.ಸಿ.ಶಿವಕುಮಾರ ಸ್ವಾಮಿ ಹಾಗೂ ಆರ್.ಎಸ್. ಪೂರ್ಣಾನಂದ ಅವರು ಅರಿವಿನ ಎಚ್ಚರದ ಗತಿಯಲ್ಲಿ ಸಿದ್ದಪಡಿಸಿಕೊಟ್ಟಿದ್ದಾರೆ.

ಈ ವಿದ್ವಜ್ಜನರು ಕೊಟ್ಟ ತಿಳಿಗೆ,ಮತ್ತಷ್ಟು ಹೊಳಪು ಕೊಡುವ ಕೆಲಸವನ್ನು ಗೌರವ ಸಂಪಾದಕರಾಗಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಕಾರ್ಯ ನಿರ್ವಾಹಕ ಸಂಪಾದಕರಾಗಿ ನಂದೀಶ್ ಹಂಚೆ ಸಮರ್ಪಕವಾಗಿಸಿದ್ದಾರೆ. ಹೀಗಾಗಿ ಇವರೆಲ್ಲರೂ ಸಾಹಿತ್ಯ ಸರಸತಿಯ ಆಶೀರ್ವಾದಕ್ಕೆ, ಸಾಹಿತ್ಯ ಪರಿಚಾರಕರ ಹಾಗೂ ಸಾಹಿತ್ಯಾಸಕ್ತರ ಅಭಿಮಾನಕ್ಕೆ ಅಹರ್ನಿಶಿ ಅರ್ಹರಾಗಿದ್ದಾರೆ. ಶೈವ ಸಂಪ್ರದಾಯದ ಹೆದ್ದಾರಿಯಲ್ಲಿ ಅರಳಿನಿಂತ ಅನೇಕಾನೇಕ ಮಹತ್ಕೃತಿಗಳ ತಿಳಿವಿಗಾಗಿ ಶಬ್ದಕೋಶ, ಪಾರಿಭಾಷಿಕ
ಪದಕೋಶ, ಪರಿಭಾಷಾಕೋಶಗಳ ಮೂಲಕ ಅರ್ಥ-ಸ್ವರೂಪಗಳನ್ನು ತಿಳಿಸುವ ಯತ್ನ ಕಾಲ-ಕಾಲಕ್ಕೆ, ಅನೇಕಾನೇಕ ವಿದ್ವಜ್ಜನ ರಿಂದ ನಡೆಯುತ್ತಲೇ ಬಂದಿದೆಯಾದರೂ, ಪರಾಮರ್ಶನ, ಆಕರ ಮತ್ತು ಸಾಮಾನ್ಯ ದರ್ಶನದ ನಿಟ್ಟಿನಲ್ಲಿ ‘ಶಿವಪದ ರತ್ನಕೋಶ’ ಅತ್ಯಮೂಲ್ಯ.

ಹಿಡಿದರೆ ಹಿಡಿತುಂಬ, ಬಿಟ್ಟರೆ ಜಗವೆಲ್ಲ ವ್ಯಾಪಿಸಿಕೊಳ್ಳುವ ವಚನಗಳ ಬೆಡಗು-ಬೆರಗನ್ನು ಅರಗಿಸಿಕೊಳ್ಳುವುದಕ್ಕೆ ‘ಶಿವಪದ ರತ್ನಕೋಶ’ ಸರಕು ನೀಡುವಲ್ಲಿ ಸಂಪೂರ್ಣ ಯಶ ಸಾಧಿಸಿದೆ. ಅಂಕುಶದಿಂದ ಷಟ್ ಸ್ಥಲ-ಷಡ್ವಿಕಾರಗಳವರೆಗೆ ಹರವಿ ನಿಂತ ಶಿವ-ಶರಣ ಸಾಹಿತ್ಯದ ಪದಗಳಿಗೆ ಸರಳ,ಸುಲಲಿತ ಅರ್ಥಗಳನ್ನು ನೀಡುವ ಅತಿ ಕಠಿಣ ಕೆಲಸವನ್ನು ಕೈಗೆತ್ತಿಕೊಂಡು, ಸದ್ದು- ಗದ್ದಲ ವಿಲ್ಲದಂತೆ ಮಾಡಿ ಮುಗಿಸಿರುವ ಸುತ್ತೂರು ಶ್ರೀ ಮಠಕ್ಕೆ ನೂರೆಂಟು ಶರಣು.

Leave a Reply

Your email address will not be published. Required fields are marked *