ಅಭಿಮತ
ಪ್ರಹ್ಲಾದ್ ವಾ ಪತ್ತಾರ
ಜೂನ್ ತಿಂಗಳಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುವುದು ಎಂದು ಸಚಿವರು ಘೋಷಣೆ ಮಾಡಿದ್ಧಾರೆ.
ಆದರೆ, ವಾಸ್ತವದಲ್ಲಿ ಪರೀಕ್ಷೆ ಎದುರಿಸಲು ರಾಜ್ಯದಲ್ಲಿರುವ ಸುಮಾರು ಎಂಟು ಲಕ್ಷ ಮಕ್ಕಳು ಮಾನಸಿಕವಾಗಿ ಸಿದ್ಧವಾಗಿದ್ಧಾರಾ? ಪರೀಕ್ಷೆಗೆ ಪೂರಕವಾದ ಎಲ್ಲ ಚಟುವಟಿಕೆಗಳು ಆರಂಭವಾಗಿ, ಸಕಲ ಸಿದ್ಧತೆಗಳು ನಡೆಯುತ್ತಿವೆಯೇ? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡದೇ ಇರಲಾರದು. ಕರೋನಾದಿಂದ ದಿಕ್ಕೆಟ್ಟು, ಕಂಗಾಲಾದ ಬದುಕು ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ.
ಪರಿಸ್ಥಿತಿ ಹೀಗಿರುವಾಗ ಮಕ್ಕಳಿಗೆ ಬೋರ್ಡ್ ಪರೀಕ್ಷೆ ಅನಿವಾರ್ಯವೆ? ಎಂಬ ಆಲೋಚನೆ ಮಾಡಬೇಕಿದೆ. ಈ ಶೈಕ್ಷಣಿಕ ಸಾಲಿನಲ್ಲಿ ಹತ್ತನೇ ತರಗತಿ ಓದುತ್ತಿರುವ ಮಕ್ಕಳು, ಕಳೆದ ವರ್ಷದ 9ನೇ ತರಗತಿಯಲ್ಲಿ ಪರೀಕ್ಷೆ ಬರೆಯದೇ ಪಾಸು – ಫೇಲು ಎಂದು ಮೌಲ್ಯೀ ಕರಣಕ್ಕೆ ಒಳಗಾಗದೇ ನೇರ ಹತ್ತನೇ ತರಗತಿಯ ಕೋಣೆ ಪ್ರವೇಶ ಪಡೆದಿದ್ಧಾರೆ. ಸುಮಾರು ಹತ್ತು ತಿಂಗಳ ನಂತರ ಜನವರಿ 1ನೇ ತಾರೀಖಿನಿಂದ ಈ ಮಕ್ಕಳು ಶಾಲಾ ಆವರಣ ಪ್ರವೇಶ ಪಡೆದಿದ್ಧಾರೆ.
ಇಲಾಖೆ ಹೊರಡಿಸಿದ ಎಸ್‌ಒಪಿ ನಿಯಮಾವಳಿಗಳನ್ನು ಪಾಲಿಸುತ್ತಾ, ತರಗತಿಗಳು ಆರಂಭಿಸಲಾಗಿದೆ. ಹದಿನೈದು – ಇಪ್ಪತ್ತು ಮಕ್ಕಳ ಗುಂಪುಗಳನ್ನು ರಚಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು, ಸುರಕ್ಷತಾ ಕ್ರಮ ಅನುಸರಿಸುತ್ತಾ, ಶಿಕ್ಷಕರು ಮಕ್ಕಳಿಗೆ ಪಾಠ ಶುರು ಮಾಡಿದ್ಧಾರೆ. ಇಲಾಖೆ ನಿಗದಿಪಡಿಸಿದ ವೇಳಾಪಟ್ಟಿಯಂತೆ ತರಗತಿಗಳು ನಡೆಯುತ್ತಿವೆ. ಬೆಳಿಗ್ಗೆ ಮಧ್ಯಾಹ್ನದ ಬ್ಯಾಚ್ ಗಳಲ್ಲಿ ಮಕ್ಕಳು ಕಲಿಕೆಯಲ್ಲಿ ತೊಡಗಿಕೊಂಡಿದ್ಧಾರೆ.
ದೂರದ ಊರಿಂದ ಪ್ರಯಾಣಿಸುವ ಮಕ್ಕಳು ಹರ ಸಾಹಸ ಪಟ್ಟು ಮಧ್ಯಾಹ್ನದ ಊಟ ತಗೆದುಕೊಂಡು ಶಾಲೆಗೆ ಬರುತ್ತಿದ್ಧಾರೆ. ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿರುವ ಶಾಲೆಗಳಲ್ಲಿ ಬ್ಯಾಚ್ ಕಲಿಕೆಯಿಂದ ತೊಂದರೆಯಾಗುತ್ತಿದೆ. ಇದರಿಂದ ಒಂದು ಮಗು ಎರಡು ಮೂರು ದಿನ ಮಾತ್ರ ಶಾಲೆಗೆ ಬರುವಂತಾಗಿದೆ. ಪರಿಣಾಮ, ಮಗು ಪಾಠ ಅರ್ಥೈಸಿಕೊಳ್ಳಲಾಗದೇ ಗೊಂದಲ, ಹಿಂಸೆ ಅನುಭವಿಸು ವಂತಾಗಿದೆ. ಇದರ ಜತೆಗೆ ಬೋರ್ಡ್ ಪರೀಕ್ಷೆಯ ಭೂತ ಮಕ್ಕಳ ಬೆನ್ನು ಹತ್ತಿದೆ.
ಇಲಾಖೆಯು ಶೇಕಡಾ 30ರಷ್ಟು ಪಠ್ಯವನ್ನು ಕಡಿತಗೊಳಿಸಿ, ಆದೇಶ ಹೊರಡಿಸಿದೆ. ಮಕ್ಕಳು ಕೇವಲ ನಾಲ್ಕೆ ದು ತಿಂಗಳಿನಲ್ಲಿ ಪಠ್ಯ ಓದಿ ಅರ್ಥೈಸಿಕೊಳ್ಳಬೇಕಿದೆ. ಅತ್ಯಂತ ಕಡಿಮೆ ಸಮಯದಲ್ಲಿ ಮಕ್ಕಳನ್ನು ಪರೀಕ್ಷೆಗೆ ಸಿದ್ಧಗೊಳಿಸುವುದು ಶಿಕ್ಷಕರಿಗೆ ಒಂದು ಸವಾಲಿನ ಕೆಲಸವಾಗಿದೆ ಹೋಗಿದೆ. ಭಾಷಾ ವಿಷಯಗಳಲ್ಲಿ ನಾಲ್ಕಾರು ಪಾಠ ಕೈಬಿಡಲಾಗಿದೆ. ಕೆಲವು ಪಾಠಗಳ ಮಧ್ಯದಲ್ಲಿರುವ ಪ್ಯಾರಾಗಳನ್ನು ಮೌಲ್ಯ ಮಾಪನದಿಂದ ಕೈಬಿಡಲಾಗಿದೆ ಎನ್ನಲಾಗುತ್ತಿದೆ.
ವಾಸ್ತವದಲ್ಲಿ ತರಗತಿ ಕೋಣೆಯಲ್ಲಿ ಪಾಠ ಮಾಡುವ ಶಿಕ್ಷಕ ತೆಗೆದು ಹಾಕಿದ ಪ್ಯಾರಾಗಳನ್ನು ಬೋಽಸದೆ ಮುಂದೆ ಸಾಗಲು ಸಾಧ್ಯ ವಿಲ್ಲ. ಮಕ್ಕಳಿಗೆ ಇಡೀ ಪಾಠ ಅರ್ಥಗ್ರಹಿಕೆಯಾಗಲು ಮೌಲ್ಯಮಾಪನದಿಂದ ಕೈ ಬಿಟ್ಟ ಪ್ಯಾರಾಗಳನ್ನು ಬೋಧಿಸಲೇ ಬೇಕಾದ ಅನಿವಾರ್ಯತೆ ಶಿಕ್ಷಕರಿಗೆ ಎದುರಾಗಿದೆ. ಹೀಗಾಗಿ ಶಿಕ್ಷಕರಿಗೆ ಪಾಠ ಮಾಡಲು ಮೊದಲಿನಷ್ಟೆ ಸಮಯ ಬೇಕಾಗಿದೆ.
ಸರಕಾರಿ ನಿಯಮಾವಳಿ ಅನ್ವಯ ಪ್ರತಿ ವರ್ಷವೂ ಶಿಕ್ಷಕರಿಗೆ ಬೇಸಿಗೆ ರಜೆ ಇರುವುದು ಕಡ್ಡಾಯ. ಈ ಶೈಕ್ಷಣಿಕ ವರ್ಷದಲ್ಲಿ ಬೇಸಿಗೆ ರಜೆ ನೀಡದೆ ಶಿಕ್ಷಕರನ್ನು ಕರ್ತವ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರೆ ನಿಯಮಾವಳಿ ಬದಲಿಸಬೇಕು. ಇದಕ್ಕೆ ಆಡಳಿತಾತ್ಮಕ ಸಮಸ್ಯೆಗಳು ಹುಟ್ಟುವವು. ರಜೆ ಘೋಷಣೆ ಮಾಡಿದ ಪಕ್ಷದಲ್ಲಿ ಮಕ್ಕಳಿಗೆ ಮತ್ತೆ ಕಲಿಕೆಯಲ್ಲಿ ಗ್ಯಾಪ್ ಹುಟ್ಟುವುದು.
ಇದರಿಂದ ಸಾಕಷ್ಟು ಸಮಸ್ಯೆ ಮಕ್ಕಳು ಎದುರಿಸಬೇಕಾಗುವುದು. ಸದಾ ಎಲ್ಲಾ ಜಿಲ್ಲೆಗಳು ಎಸ್‌ಎಸ್ಎಲ್‌ಸಿ ಫಲಿತಾಂಶವನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳುತ್ತವೆ. ಬಹುತೇಕ ಜಿಗಳು ಪ್ರತಿವರ್ಷವೂ ಎಸ್‌ಎಸ್‌ಎಲ್‌ಸಿ ಓದುವ ಮಕ್ಕಳಿಗೆ ಪರೀಕ್ಷೆ ಬರೆಯಲು ಸಾಕಷ್ಟು ತಯಾರಿ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದವು. ಆದರೆ, ಈ ವರ್ಷ ಸಮಯ ಅತ್ಯಂತ ಕಡಿಮೆ ಇರುವ ಕಾರಣ ತರಾತುರಿಯಲ್ಲಿ ಮಕ್ಕಳನ್ನು ಸಿದ್ಧಗೊಳಿಸುವುದು ಕಷ್ಟ ಕರವಾಗಿದೆ.
ಇದೆಲ್ಲದರ ಪರಿಣಾಮ ಮತ್ತು ಪ್ರಭಾವ ಬೀರಿ ಒತ್ತಡಕ್ಕೆ ಸಿಲುಕುವುದು ಎಂದರೆ, ಶಿಕ್ಷಕರು ಮತ್ತು ಮಕ್ಕಳು ಮಾತ್ರ. ಒಂದು ಶೈಕ್ಷಣಿಕ ವರ್ಷ ಎಂದರೆ, ಪ್ರತಿ ತಿಂಗಳು ತನ್ನದೆಯಾದ ಶೈಕ್ಷಣಿಕ ಚಟುವಟಿಕೆಗಳು ನಿತ್ಯ ನಿರಂತರವಾಗಿ ಸಾಗುತ್ತಿರುತ್ತವೆ. ಏಕಾಏಕಿ 4- 5 ತಿಂಗಳಿಗೆ ಪಠ್ಯವನ್ನು ಬೋಽಸಿ, ಮಕ್ಕಳಿಗೆ ಪರೀಕ್ಷೆಗೆ ಸಿದ್ಧಮಾಡಬೇಕು ಎಂದರೆ, ಶಿಕ್ಷಕರ ಮೇಲೆ ಹೊರೆ ಹೆಚ್ಚಾಗುತ್ತದೆ.
ಮಕ್ಕಳು ಕೇವಲ ಪಠ್ಯ ಪುಸ್ತಕದ ಪಠ್ಯ ಅಭ್ಯಸ ಮಾಡಬೇಕಾದ ಅನಿವಾರ್ಯತೆ ಬಂದೊದಗುತ್ತದೆ. ಇದರಿಂದ ರಾಷ್ಟ್ರೀಯ ಪಠ್ಯಕ್ರಮದ ಆಶಯಗಳನ್ನು ಗಾಳಿಗೆ ತೂರಿದಂತಾಗುವುದು. ಪಬ್ಲಿಕ್ ಪರೀಕ್ಷೆಯು ತನ್ನ ಪಾವಿತ್ರ್ಯತೆಯನ್ನು ಕಳೆದುಕೊಂಡು ಬಿಡುವುದು.