ಅನಿಸಿಕೆ
ವಿಜಯಕುಮಾರ್ ಎಚ್.ಕೆ.
ಜಗತ್ತಿನಾದ್ಯಂತ ಅಂತರ್ಜಾಲದ ಆವಿಷ್ಕಾರ ಮತ್ತು ವೈಯಕ್ತಿಕ ಕಂಪ್ಯೂಟರ್‌ಗಳಲ್ಲಿ ಸಂಪರ್ಕದ ಆಗಮನದಿಂದ, ಎಷ್ಟು ಸದುಪಯೋಗವಾಗುತ್ತಿದೆಯೋ ಅಷ್ಟೇ ದುರುಪಯೋಗವಾಗುತ್ತಿದೆ. ಅಂತರ್ಜಾಲ ಸುಲಭವಾಗಿ ಸಿಗುವುದರಿಂದ ಆನ್‌ಲೈನ್ ಗೇಮಿಂಗ್ ಎಂಬ ಮಹಾಮಾರಿ ವಿಶ್ವದೆಡೆ ಹುಟ್ಟಿಕೊಂಡಿದೆ.
ಆನ್‌ಲೈನ್ ಗೇಮಿಂಗ್ ಮೊದಮೊದಲು ಉಚಿತ ಮತ್ತು ಮನರಂಜನೆಗಾಗಿ ಮಾತ್ರ ಎಂದೇಳಿ ಶುರುವಾಗಿ ಈಗ ದೊಡ್ಡ ಜೂಜಾಟ ಮಾಧ್ಯಮವಾಗಿ ಬದಲಾವಣೆಗೊಂಡಿದೆ. ಆನ್‌ಲೈನ್ ಆಟಗಳು ಶುದ್ಧ ಅದೃಷ್ಟೇ ಅಥವಾ ಕೌಶಲ್ಯವೇ ಎಂಬುದರ ಬಗ್ಗೆ ಚರ್ಚೆಗೆ ಗ್ರಾಸವಾಗಿದ್ದರೂ ಹಣ ಗಳಿಸುವುದೊಂದೇ ದುರುದ್ದೇಶಪೂರಿತವಾಗಿವೆ.
ಆನ್‌ಲೈನ್ ಆಟಗಳಿಗೆ ಹೆಚ್ಚಿನ ವಿರೋಧಿಗಳು ಅಥವಾ ಯಾವುದೇ ನಿಯಮಗಳಿಲ್ಲದ ಕಾರಣ, ಹೆಚ್ಚಿನ ಯುವಕರು ಈ ಆಟಗಳಿಗೆ ದಾಸರಾಗಿದ್ದು ಸಾಕಷ್ಟು ಹಣವನ್ನು ಖರ್ಚು ಮಾಡುತ್ತಿದ್ದಾರೆ. ಆನ್‌ಲೈನ್ ಗೇಮಿಂಗ್ ಎಳೆ ವಯಸ್ಸಿನ ಮಕ್ಕಳು ಸಹ ದಾಸರಾಗಿದ್ದು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಆತ್ಮಹತ್ಯೆಯಂಥ ಘಟನೆಗಳನ್ನು ತಪ್ಪಿಸಲು ಮತ್ತು ಮುಗ್ಧ ಜನರನ್ನು ಆನ್‌ಲೈನ್ ಗೇಮಿಂಗ್‌ನ ದುಷ್ಕೃತ್ಯಗಳಿಂದ ರಕ್ಷಿಸಲು ಆನ್‌ಲೈನ್ ಗೇಮಿಂಗ್ ಅನ್ನು ನಿಷೇಧಿಸಲು ಇಗಾಗಲೇ ಹಲವು ರಾಜ್ಯಗಳು ನಿರ್ಧರಿಸಿವೆ. ಆದರೆ ದುರಾದೃಷ್ಟವಶಾತ್ ನಮ್ಮ ರಾಜ್ಯ ಸರಕಾರ ಇದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.
ಆನ್‌ಲೈನ್ ಗೇಮಿಂಗ್‌ನಲ್ಲಿ ಆಟಗಾರರ ಸಂಖ್ಯೆ ಮತ್ತು ಆಟದಲ್ಲಿ ಮಾಡಬಹುದಾದ ಹೂಡಿಕೆಯನ್ನು ನಿಯಂತ್ರಿಸಲು ಬಹಳ ಕಡಿಮೆ ನಿಯಮಗಳಿವೆ. ಇದರಿಂದಾಗಿ ಸುಲಭವಾಗಿ ದಿನಕ್ಕೊಂದು ಆನ್‌ಲೈನ್ ಗೇಮ್ ಹುಟ್ಟಿಕೊಳ್ಳುತ್ತಿವೆ. ಆನ್‌ಲೈನ್ ಗೇಮ್‌ನಲ್ಲಿ ಮಲ್ಟಿಪ್ಲೇಯರ್ ಕಾರ್ಡ್ ಆಟಗಳಾದ ಮೈ ಸರ್ಕಲ್ ಇಲೆವನ್, ಕೌಂಟರ್ – ಸ್ಟ್ರ ಕ್, ರಮ್ಮಿ, ಬ್ಲ್ಯಾಕ್ಜಾಕ್ ಮತ್ತು ಪೋಕರ್ ಇತ್ಯಾದಿ ಇತ್ಯಾದಿ ಜೂಜಾಟಗಳು ಜಗತ್ತಿನಾದ್ಯಂತ ಇತರ ಆಟಗಾರರೊಂದಿಗೆ ಆಟವಾಡಲು ಮತ್ತು ಆಟವನ್ನು ಪ್ರವೇಶಿಸಲು ಬಳಕೆ ದಾರರು ಹಣವನ್ನು ಸುಲಭವಾಗಿ ಹೂಡಿಕೆ ಮಾಡಬಹುದಾಗಿದೆ. ಇದರಿಂದಾಗಿ ಆನ್‌ಲೈನ್ ಜೂಜಾಟವಾಡುವವರ ಸಂಖ್ಯೆ ದಿನೇ
ದಿನೇ ಹೆಚ್ಚುತ್ತಿದೆ.
ನಮ್ಮ ರಾಜ್ಯದಲ್ಲಿ ಆನ್‌ಲೈನ್ ಜೂಜಾಟ ಅಥವಾ ಬೆಟ್ಟಿಂಗ್ ವಿರೋಧದ ಕೂಗು ಇಲ್ಲಿಯವರೆಗೆ ಕಿಂಚಿತ್ತೂ ಸಹ ಕೇಳಿ ಬಂದಿಲ್ಲ. ತಮಿಳುನಾಡು ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣವನ್ನು ಸೇರಿಕೊಂಡು ಹಲವು ರೀತಿಯ ಆನ್‌ಲೈನ್ ಆಟಗಳನ್ನು ಮತ್ತು ಜೂಜಾಟವನ್ನು ನಿಷೇಧಿಸಿವೆ. ಆನ್‌ಲೈನ್ ಗೇಮಿಂಗ್‌ನಿಂದಾಗಿ ಮುಗ್ಧ ಜನರು, ಮುಖ್ಯವಾಗಿ ಯುವಕರು ಮೋಸ ಹೋಗುವು ದನ್ನು ಮತ್ತು ಆತ್ಮಹತ್ಯೆಯನ್ನು ತಪ್ಪಿಸಲು ರಾಜ್ಯ ಸರಕಾರ ಕೂಡಲೇ ಎಲ್ಲಾ ರೀತಿಯ ಆನ್‌ಲೈನ್ ಜೂಜಾಟವನ್ನು ನಡೆಸುವ ವೆಬ್‌ಸೈಟ್ ಮತ್ತು ಆಪ್‌ಗಳನ್ನು ನಿಷೇಧಿಸಬೇಕಾಗಿದೆ.