ಅನಿಸಿಕೆ
ಡಾ.ಪ್ರಕಾಶ್ ಕೆ.ನಾಡಿಗ್
ಫೆಬ್ರವರಿ 26ರಿಂದ ಹಾವೇರಿಯಲ್ಲಿ ಮೂರುದಿನಗಳ ಕಾಲ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ನಿರ್ಣಯ ಕೈಗೊಂಡಿರುವುದು ಕೇಳಿ ಆಶ್ಚರ್ಯವಾಯಿತು. ಪ್ರಪಂಚ ಕರೋನಾ ಎಂಬ ಕಪಿಮುಷ್ಟಿಯಲ್ಲಿ ಸಿಲುಕಿ ನಲುಗುತ್ತಿರುವ ಇಂಥ ಸಮಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಜಾತ್ರೆ ನಡೆಸಲು ಹೊರಟಿರು ವುದು ಎಷ್ಟು ಸಮಂಜಸ? ಇಂಥ ಸಂಕಷ್ಟದಲ್ಲೂ ಕಸಾಪಗೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಯೋಚನೆ ಬಂದದ್ದೆ ವಿಪರ್ಯಾಸ!
ಕರೋನಾದಿಂದ ಕರ್ನಾಟಕವೂ ಇನ್ನೂ ಹೊರಬಂದಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಸಾಧ್ಯವಾಗಿರುವ ಕಾರಣ ಶಾಲಾ ಕಾಲೇಜುಗಳನ್ನು ನಡೆಸದಿರಲು ಸರಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿರುವಾಗ ಲಕ್ಷಾಂತರ ಜನ ಸೇರುವ ಅಕ್ಷರ ಜಾತ್ರೆ ನಡೆಸಲು ಕಸಾಪ ಮುಂದಾಗುತ್ತಿರುವುದು ಎಷ್ಟು ಸರಿ? ಕರೋನಾ ಕಾಲದಲ್ಲೂ ಸಾಹಿತ್ಯ ಸಮ್ಮೇಳನ ನಡೆಸ ಬೇಕೆಂಬ ಹಠ ಏತಕ್ಕೆ? ಲಕ್ಷಾಂತರ ಸಾಹಿತ್ಯ ಪ್ರೇಮಿಗಳು ಸೇರುವ ಸಾಹಿತ್ಯ ಜಾತ್ರೆಯಿಂದ ಕರೋನಾ ಹರಡುತ್ತದೆಂಬ ಕನಿಷ್ಠ ಕಾಳಜಿಯೂ ಕಸಾಪಕ್ಕೆ ಇಲ್ಲದೇ ಹೋದದ್ದು ಸೋಜಿಗದ ಸಂಗತಿ.
ಸಮ್ಮೇಳನದ ದಿನಾಂಕ ನಿಗದಿಯಾಗಿರುವುದರಿಂದ 2021ರ ಮಾರ್ಚ್ 3ಕ್ಕೆ ಈಗಿನ ಕಾರ್ಯಕಾರಿ ಸಮಿತಿಯ ಅಧಿಕಾರವದಿ ಮುಗಿಯಬೇಕಾಗಿದ್ದರೂ ಸಮ್ಮೇಳನದ ಲೆಕ್ಕಪತ್ರ ಮತ್ತಿತರ ಆಡಾಳಿತಾತ್ಮಕ ನಿರ್ವಹಣೆ ಮಾಡಬೇಕಾಗಿರುವುದರಿಂದ ಕಸಾಪದ ಈಗಿನ ಕಾರ್ಯಕಾರಿ ಅವಧಿ ಸೆಪ್ಟೆಂಬರ್ 3ರವರೆಗೂ ಮುಂದುವರಿಯಲು ಕಸಾಪ ನಿಬಂಧನೆ 18(ಈ)ನಲ್ಲಿ ಇದಕ್ಕೆ ಅವಕಾಶ ವಿದೆ.
ಈ ಮೂಲಕ ಅಧಿಕಾರವಧಿಯನ್ನು ಹೆಚ್ಚಿಸಿಕೊಳ್ಳುವ ಹುನ್ನಾರವೇ? ಇಂಥ ಆರ್ಥಿಕ ಸಂಕಷ್ಟದ ಕಾಲದಲ್ಲೂ ಕನ್ನಡ ಜಾತ್ರೆ ಮಾಡಲೇ ಬೇಕೇ? ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಭಾರತದಲ್ಲಿ ಕರೋನಾದ ಎರಡನೇ ಅಲೆ ಪ್ರಾರಂಭವಾಗಿದೆ ಯೆಂದು ಹೇಳುತ್ತಿದೆ. ಇದಕ್ಕೆ ಪೂರಕವೆಂಬಂತೆ ಭಾರತದಲ್ಲಿ ಹಬ್ಬಗಳ ಸಾಲು ಮುಗಿಯುತ್ತಿದ್ದಂತೆಯೇ ಉತ್ತರ ಭಾರತದಲ್ಲಿ ಕರೋನಾ ಹಾವಳಿ ಹೆಚ್ಚಾಗಿದೆ. ಎರಡು ಹಾಗೂ ಮೂರನೆ ಕೋವಿಡ್ ಅಲೆಗೆ ಪಂಜಾಬ್, ಹರಿಯಾಣ, ದೆಹಲಿ ಹಾಗೂ ಮಹಾರಾಷ್ಟ್ರ ಸೇರಿದಂತೆ ಎಂಟು ರಾಜ್ಯಗಳು ತತ್ತರಿಸುತ್ತಿರುವ ಚಿತ್ರ ನಮ್ಮ ಕಣ್ಮುಂದೆ ಇದ್ದರೂ ಕಸಾಪ ಕನ್ನಡ ಜಾತ್ರೆ ನಡೆಸಲು ಮುಂದಾಗಿರು ವುದು ಎಷ್ಟು ಸರಿ? ಉತ್ತರದ ರಾಜ್ಯಗಳಲ್ಲಿ ನಿಯಂತ್ರಣಕ್ಕೆ ಬಂದಿದ್ದ ಕರೋನಾ ಸೋಂಕು ಒಮ್ಮೆಲೆ ಹೆಚ್ಚಾದ ಹಿನ್ನೆಲೆಯಲ್ಲಿ
ಕೇಂದ್ರ ಸರಕಾರವೂ ಕೂಡ ಕಳವಳ ವ್ಯಕ್ತ ಪಡಿಸಿದೆ.
ಈ ಕುರಿತು ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ, ಕೇರಳ, ಕರ್ನಾಟಕ, ಉತ್ತರಪ್ರದೇಶ, ರಾಜಸ್ಥಾನದ ಮುಖ್ಯಮಂತ್ರಿ ಗಳೊಂದಿಗೆ ವರ್ಚುಯೆಲ್ ಸಭೆ ನಡೆಸಿ ಪರಿಸ್ಥಿತಿ ಅವಲೋಕಿಸಿರುವ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸರಕಾರ ಜಾಗರೂಕ ರಾಗಿರುವಂತೆ ಸೂಚನೆ ಕೊಟ್ಟಿರುವ ಬೆನ್ನಲ್ಲೇ ಸಾಹಿತ್ಯ ಜಾತ್ರೆ ನಡೆಸಲು ಮುಂದಾಗಿರುವ ಕಸಾಪಗೆ ಸಾಮಾಜಿಕ ಕಳಕಳಿ ಇಲ್ಲವೇ?
ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ಸಮ್ಮೇಳನ ನಡೆಸಲಾಗುವುದು ಎಂದಿರುವ ಕಸಾಪ ಅಧ್ಯಕ್ಷರ ಹೇಳಿಕೆ ಹಾಸ್ಯಸ್ಪದ ವಾಗಿದೆ.
ಲಕ್ಷಾಂತರ ಜನ ಮೂರು ದಿನದಲ್ಲಿ ಬಂದು ಹೋಗುತ್ತಾರೆ. ಇಂತಹ ಸಮಯದಲ್ಲಿ ಕೋವಿಡ್ ಕಾರ್ಯಸೂಚಿಗಳನ್ನು ಪಾಲಿಸು ವುದು ಸಾಧ್ಯವೇ? ಮೂರುದಿನಗಳ ಹಲವಾರು ಕೋಟಿ ಖರ್ಚು ಮಾಡಿ ಸಮ್ಮೇಳನಕ್ಕೆ ಎಷ್ಟು ಜನ ಬಂದಿದ್ದರು ಎಂಬ ಮಾನ ದಂಡವನ್ನು ಇಟ್ಟುಕೊಂಡು ಸಮ್ಮೇಳನದ ಯಶಸ್ಸನ್ನು ಕೋವಿಡ್‌ನಂಥ ಸಂಕಷ್ಟ ಕಾಲದಲ್ಲೂ ಅಳೆಯಲು ಕನ್ನಡ ಜಾತ್ರೆ ಬೇಕೆ? ಪರಭಾಷೆ ಹಾವಳಿಯಿಂದ ಕನ್ನಡ ಭಾಷೆಯನ್ನು ರಕ್ಷಿಸಿಕೊಳ್ಳಬೇಕೆಂಬ ಕಹಳೆ, ಕಳಕಳಿ ಪ್ರತಿವರ್ಷ ಕನ್ನಡ ರಾಜ್ಯೋತ್ಸವ
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂದರ್ಭದಲ್ಲಿ ಮಾತ್ರ ಧ್ವನಿ ಜೋರಾಗಿ ಮೊಳಗುತ್ತದೆ.
ಆದರೆ ಬಹುಭಾಷಿಕರು ಜಾಸ್ತಿಯಾಗುತ್ತಿರುವ ಬೆಂಗಳೂರಿನಲ್ಲಿ ಈ ನೆಲದ ಮಾತೃಭಾಷೆಯನ್ನು ನಿಧಾನವಾಗಿ ದೂರತಳ್ಳುವ
ಚಟುವಟಿಕೆ ಸದ್ದಿಲ್ಲದೆ ನಿಧಾನವಾಗಿ ನಡೆಯುತ್ತಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಅನುದಾನ ಕೊಡಲು ಸರಕಾರದ ಬಳಿ ದುಡ್ದಿಲ್ಲ, ಇಂಥ ಸಮಯದಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರ ಮಾಡಿ ಐವತ್ತು ಕೋಟಿ ಅನುದಾನ ಕೊಟ್ಟಿರುವ ಸರಕಾರದ ನಡೆಯನ್ನು ಕಸಾಪ ಏಕೆ ವಿರೋಧಿಸಿಲ್ಲ? ಇಂಥ ಸಮಯದಲ್ಲಿ ಕನ್ನಡ ಪರ ಹೋರಾಟ ಮಾಡುತ್ತಿರುವವರ ಪರ ನಿಲ್ಲುವುದನ್ನು ಬಿಟ್ಟು ಕರೋನಾ ಸಂಕಷ್ಟದಲ್ಲೂ ಕನ್ನಡ ಜಾತ್ರೆ ಮಾಡಿ ಕಸಾಪ ಏನನ್ನು ಸಾಽಸಲು ಹೊರಟಿದೆ?