ಅನಿಸಿಕೆ
ಆದರ್ಶ್ ಶೆಟ್ಟಿ, ಉಪ್ಪಿನಂಗಡಿ
ಮಾನವೀಯತೆ, ಮನುಷತ್ವಕ್ಕಿಂತ ಮಿಗಿಲಾದ ಧರ್ಮ ಕಾರ್ಯ ಬೇರೊಂದಿಲ್ಲ. ಮತ್ತೊಬ್ಬರ ನೋವಿಗೆ ಸ್ಪಂದಿಸುವ, ಮತ್ತೊಬ್ಬರ ಕಷ್ಟದಲ್ಲಿ ಭಾಗಿಯಾಗುವ ನಿಟ್ಟಿನಲ್ಲಿ ಮನುಷ್ಯ ಚಿಂತಿಸುತ್ತಾನೆಯೇ? ಅಂದರೆ ಸಮಾಜದಲ್ಲಿ ಬೆರಳೆಣಿಕೆಯಷ್ಟು ಜನ, ಸಂಘ ಸಂಸ್ಥೆಗಳನ್ನು ಕಾಣಬಹುದು.
ಒಬ್ಬ ವ್ಯಕ್ತಿಗೆ ಸಹಕರಿಸಬೇಕು ಎಂಬಲ್ಲಿ ಆ ಗುಣ ಆತನ ಅಂತಃಕರಣದಲ್ಲಿ ಅನಾವರಣಗೊಳ್ಳಬೇಕಾದುದು ಅವಶ್ಯ. ತಾನು ಮಾಡುವ ದಾನ ಧರ್ಮಗಳಿಗೆ ಪ್ರಚಾರ ಬೇಕು. ಪ್ರಚಾರದಿಂದ ತೋರ್ಪಡಿಕೆಗೆ ದಾನ ಶೂರ ಕರ್ಣನಾದರೆ ಅದು ಆತನ ಸ್ವಾರ್ಥ ವನ್ನು ಸಮಾಜಕ್ಕೆ ಬಿಂಬಿಸುತ್ತದೆ. ಇನ್ನು ಕೆಲ ಮಂದಿ ತಾನು ಕಷ್ಟದಲ್ಲಿದ್ದರೂ ತಾನು ಸಾಲದ ಸುಳಿಯಲ್ಲಿದ್ದರೂ ಮತ್ತೊಬ್ಬರ ನೋವಿಗೆ ಮಿಡಿಯುವ ವರ್ಗವೂ ಇದೆ.
ಮತ್ತೊಂದಷ್ಟು ಮಂದಿ ತನ್ನ ಬಳಿ ಇಲ್ಲದಿದ್ದರೂ ಮತ್ತೊಬ್ಬರ ಬಳಿ ಕಾಡಿಬೇಡಿಯಾದರೂ ಮತ್ತೊಬ್ಬರಿಗೆ ಆಸರೆಯಾಗುವ ಮಂದಿಯನ್ನು ಕಾಣಬಹುದು. ಮತ್ತೊಂದಷ್ಟು ಮಂದಿ ತನ್ನ ಜತೆಗಿದ್ದವರನ್ನು ತನ್ನ ಅವಶ್ಯಕತೆಗೆ ತಕ್ಕಂತೆ ಉಪಯೋಗಿಸಿ ಅವರ ಕಾರ್ಯ ಸಿದ್ಧಿಸಿದ ಬಳಿಕ ಹತ್ತಿದ ಏಣಿಯನ್ನು ತುಳಿಯುವ ಪ್ರವೃತ್ತಿಯನ್ನು ಕಾಣಬಹುದು. ಒಟ್ಟಾರೆ ಸ್ವಾರ್ಥ ಮತ್ತು ಮಾನವೀ ಯತೆ ಎಂಬುವುದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.
ಮಾನವೀಯತೆಯ ವಿಚಾರಗಳು ಬಂದಾಗಲೆಲ್ಲಾ ನಮ್ಮ ಮನಸ್ಸಿನಲ್ಲಿ ಥಟ್ಟನೆ ಹೊಳೆಯುವುದು ನಾವು ದಿನನಿತ್ಯ ಸಂಚರಿಸುವ ರಸ್ತೆಗಳಲ್ಲಿ ಉಂಟಾಗುವ ಆಕಸ್ಮಿಕ ರಸ್ತೆ ಅಪಘಾತಗಳು, ಬೆಂಕಿ ಅವಘಡ ಇತ್ಯಾದಿ. ಭೀಕರವಾಗಿ ಸಂಭವಿಸಿದ ಅಪಘಾತ ಪ್ರಕರಣ ಗಳಲ್ಲಿ ಗಾಯಾಳು ಜೀವನ್ಮರಣ ಸ್ಥಿತಿಯಲ್ಲಿರಸ್ತೆ ಬದಿಯಲ್ಲಿ ಹೊರಳಾಡುತ್ತಿದ್ದರೂ ಒಂದು ಹನಿ ನೀರು ಮುಖಕ್ಕೆ ಚಿಮುಕಿಸಲು, ಪ್ರಥಮ ಚಿಕಿತ್ಸೆ ನೀಡಲು ಹಿಂದೇಟು ಹಾಕುವಂಥ ಸಂದರ್ಭ ಗಾಯಾಳು ವಿಲ ವಿಲ ಒದ್ದಾಡಿ ಪ್ರಾಣ ಬಿಡುವ ವಿದ್ಯಮಾನಗಳಿವೆ. ಮತ್ತೆ ಕೆಲ ಬಾರಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸನ್ನು ಅವಲಂಬಿಸುವಷ್ಟು ಕಾಲಾವಕಾಶವಿಲ್ಲದಿದ್ದಾಗ ತುರ್ತು ಸಂದರ್ಭ ಖಾಸಗಿ ವಾಹನವನ್ನು ಆಶ್ರಯಿಸಬೇಕಾದಾಗ, ರಕ್ತಸಿಕ್ತ ದೇಹಗಳನ್ನು ತಮ್ಮ ವಾಹನಗಳಲ್ಲಿ ಹೊತ್ತೊಯ್ಯಲು ಕೆಲ ಚಾಲಕರು ಹಿಂದೇಟು ಹಾಕುವ ಪ್ರಸಂಗಗಳಿವೆ.
ಮತ್ತೆ ಕೆಲವು ಬಾರಿ ವಾಹನಗಳು ನುಜ್ಜುಗುಜ್ಜಾಗಿ ಅದರೊಳಗೆ ಗಾಯಾಳುಗಳು ಸಿಲುಕಿಕೊಂಡಿದ್ದರೂ ಅವರನ್ನು ಪಾರು ಮಾಡುವ ಬದಲು ಫೊಟೋ, ವೀಡಿಯೋ ಚಿತ್ರೀಕರಿಸಿ ವಾಟ್ಸಾಪ್‌ಗಳಲ್ಲಿ ಹರಿಬಿಡುವ ಧಾವಂತ, ಹುಚ್ಚು ಸಾಹಸಕ್ಕೆ ಕೈಹಾಕು ವವರಿದ್ದಾರೆ. ಇತ್ತೀಚೆಗೆ ಉಡುಪಿ ಜಿಲ್ಲೆಯ ಬಾರ್ಕೂರಿನಲ್ಲಿ ಕೆರೆಗೆ ಕಾರೊಂದು ಬಿದ್ದು, ಕಾರಿನಲ್ಲಿದ್ದ ಉದ್ಯಮಿಯೋರ್ವರು ಮೃತಪಟ್ಟಿದ್ದರೆ, ಅದೇ ಕಾರಿನಲ್ಲಿ ಗಂಭೀರ ಗಾಯಗೊಂಡಿದ್ದ ಯುವತಿಯೋರ್ವಳನ್ನು ಪ್ರಥಮ ಚಿಕಿತ್ಸೆ ನೀಡಿ ಬ್ರಹ್ಮಾವರದ ವಿದ್ಯಾರ್ಥಿನಿಯೋರ್ವಳು ಬದುಕಿಸಿರುವುದು ವ್ಯಾಪಕ ಶ್ಲಾಘನೀಯ ಕಾರ್ಯವಾಗಿದೆ.
ಇದು ಮಾನವೀಯ ಮುಖವಾದರೆ, ಇನ್ನು ಕೆಲವೆಡೆ ಮದ್ಯ, ಬಿಯರ್ ಬಾಟಲ್‌ಗಳನ್ನು ಹೊತ್ತೊಯ್ಯುವ, ಪೆಟ್ರೋಲ್, ಡೀಸೆಲ್,
ತರಕಾರಿಗಳನ್ನು ಹೊತ್ತೊಯ್ಯುವ ವಾಹನ, ಕೋಳಿಗಳನ್ನು ಹೊತ್ತೊಯ್ಯುವ ಲಾರಿಗಳು ಬಹುದೊಡ್ಡ ಕಂದಕಕ್ಕೆ ಉರುಳಿ ಬಿದ್ದು ಚಾಲಕ ಮೃತಪಟ್ಟಿದ್ದರೆ, ಅಥವಾ ಗಂಭೀರ ಗಾಯಗೊಂಡು ಬಿದ್ದಿದ್ದರೆ, ಆ ಗಾಯಾಳುವನ್ನು ಬಚಾವ್ ಮಾಡುವ ಬದಲು ವಾಹನದಲ್ಲಿನ ಆಹಾರ ವಸ್ತು, ಬಿಯರ್ ಬಾಟಲ್, ಕೋಳಿಗಳನ್ನು ಸ್ಪರ್ಧೆಗೆ ಬಿದ್ದವರಂತೆ ತಮ್ಮ ಮನೆಗೆ ಹೊತ್ತೊಯ್ಯುವು ದರಲ್ಲೇ ನಿರತರಾಗಿರುವ ಅಮಾನವೀಯ ಘಟನೆಗಳು ಸಾಕಷ್ಟು ಕಡೆ ಮರುಕಳಿಸಿವೆ.
ಶ್ರೀಮಂತ, ಬಡವ, ಮೇಲು, ಕೀಳು, ಆ ಧರ್ಮ ಈ ಧರ್ಮ ಅಂತೆಲ್ಲಾ ಕಿತ್ತಾಡುವ ಮಾನವ ಕುಲ, ಮಾನವೀಯತೆ, ಮನುಷತ್ವ,
ಪರೋಪಕಾರಕ್ಕಿಂತ ಮಿಗಿಲಾದ ಬೇರೊಂದು ಬಹುದೊಡ್ಡ ಧರ್ಮವಿಲ್ಲ ಅನ್ನುವುದನ್ನು ಯಾವತ್ತೂ ಮರೆಯಬಾರದು.